ಸೋಮವಾರ, ಜನವರಿ 20, 2020
27 °C

ಅನುಕ್ಷಣ ತಲ್ಲಣ

–ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಅನುಕ್ಷಣ ತಲ್ಲಣ

ಹನ್ನೆರಡು ವರ್ಷದ ಎದೆಯುದ್ದ ಬೆಳೆದ ಮಗಳು ಸುಷ್ಮಾ ಕಣ್ಮರೆಯಾಗಿದ್ದಾಳೆ. ಆಕೆಯ ತಾಯಿ ಜಯಮ್ಮನಿಗೆ ಎದೆ ಒಡೆದ ಅನುಭವ. ಜಯಮ್ಮನಷ್ಟೇ ಅಲ್ಲ,  ಆಕೆ ಕೆಲಸ ಮಾಡುವ ಮನೆಯ ಒಡೆಯ ಸದಾನಂದ್ ಕೂಡ ತೊಳಲಾಡುತ್ತಾರೆ. ಸುಷ್ಮಾ– ಸದಾನಂದ್‌ ಅವರದ್ದು ಅಜ್ಜ ಮೊಮ್ಮಗಳ ಅನುಬಂಧ. ‘ಸತ್ತೋಗಿದ್ದರೂ ಪರವಾಗಿಲ್ಲ ನಾನೇನು ಅಂದುಕೊಳ್ಳುತ್ತಿರಲಿಲ್ಲ. ಎಲ್ಲಿದ್ದಾಳೋ ಏನೋ....’  ಎನ್ನುವುದು ಅಮ್ಮ ಮತ್ತು ಅಜ್ಜನ ಕೊರಗು. ಅಸಹಾಯಕತೆಯಿಂದ ಇಬ್ಬರೂ ಪೊಲೀಸು, ಧರ್ಮಗುರುಗಳು, ಬಾಬಾಗಳ ಮೊರೆ ಹೋಗುತ್ತಾರೆ.ಗಾರ್ಗಿಯದು ಮತ್ತೊಂದು ಬಗೆಯ ಕಥೆ. ‘ಮೊದಲ ಮಗು ಗಂಡೇ ಆಗಬೇಕು...’ಎನ್ನುವುದು ಆಕೆಯ ಗಂಡನ ಮನೆಯವರ ಆಗ್ರಹ. ಈ ಒತ್ತಡದ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಗಾರ್ಗಿಯದು. ಅವಳ ಬೆಂಬಲಕ್ಕೆ ಅಪ್ಪಅಮ್ಮನ ಒತ್ತಾಸೆಯೂ ಇದೆ.ಹೀಗೆ, ಹಲವು ಬಗೆಯ ತಲ್ಲಣಗಳನ್ನು ಒಟ್ಟಿಗೆ ಕಟ್ಟಿಕೊಡುವ ಪ್ರಯತ್ನ ‘ತಲ್ಲಣ’ ಚಿತ್ರದ್ದು. ಸುದರ್ಶನ್ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರ ಕಳೆದ ವರ್ಷ ರಾಷ್ಟ್ರಪ್ರಶಸ್ತಿಗೆ ಪೈಪೋಟಿ ನಡೆಸಿತ್ತು. ಸಿನಿಮಾ ಪೂರ್ಣವಾಗಿ ಒಂದು ವರ್ಷದ ನಂತರ ಇಂದು (ಡಿ. 6) ಬಿಡುಗಡೆಯಾಗುತ್ತಿದೆ. ಕೆ.ಎಸ್‌. ಶ್ರೀಧರ್, ನಿರ್ಮಲಾ, ನಾಗೇಂದ್ರ ಶಾ, ಅನಿಲ್‌ಕುಮಾರ್, ಸುರಭಿ ವಸಿಷ್ಠ ಮತ್ತಿತರರು ‘ತಲ್ಲಣ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ.‘ತಲ್ಲಣ’ ಸಿನಿಮಾದ ಕಥನಗಳು ದೃಶ್ಯಮಾಧ್ಯಮಕ್ಕೆ ಹೊಸ ವಿಷಯಗಳೇನಲ್ಲ. ಆದರೆ, ವರ್ತಮಾನದ ಜ್ವಲಂತ ವಿಷಯವಾದ ಹೆಣ್ಣುಮಕ್ಕಳ ತಲ್ಲಣವನ್ನು ಎಷ್ಟು ಬಗೆಯಲ್ಲಿ ವಿಶ್ಲೇಷಿಸಿದರೂ ಕಡಿಮೆಯೇ. ವಿಚಾರ ಮತ್ತು ಗಾಂಭೀರ್ಯಗಳನ್ನು ಉಳಿಸಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ಸಿನಿಮಾ ನಿರೂಪಿಸುವ ಯತ್ನ ‘ತಲ್ಲಣ’ದಲ್ಲಿ ಇದೆಯಂತೆ. ಶಿಥಿಲವಾಗುತ್ತಿರುವ ಮಾನವ ಸಂಬಂಧಗಳ ಶೋಧ ‘ತಲ್ಲಣ’ದ ಮತ್ತೊಂದು ವಿಶೇಷ.ತಾಯಿಯೊಬ್ಬಳು ಮಗುವನ್ನು ಕಳೆದುಕೊಳ್ಳುವ ವಿಚಾರದಲ್ಲಿ ಸಮಾಜ ಹೇಗೆ ಸ್ಪಂದಿಸುತ್ತದೆ? ಒಬ್ಬ ಸಹೃದಯ ಅದಕ್ಕೆ ಸ್ಪಂದಿಸಲು ಹೊರಟಾಗ ಎದುರಾಗುವ ಸವಾಲು–ಅಡ್ಡಿಗಳು ಯಾವ ಬಗೆಯವು? ಎನ್ನುವ ಅಂಶಗಳನ್ನು ಸಿನಿಮಾ ವಿಶ್ಲೇಷಿಸುತ್ತದಂತೆ. ಕಳೆದು ಹೋಗುವ ಬಹುಪಾಲು ಮಕ್ಕಳು ಎಲ್ಲಿದ್ದಾರೆ ಎನ್ನುವುದು ತಿಳಿಯುವುದಿಲ್ಲ. ಆ ಮಕ್ಕಳ ಸುತ್ತ ರೋಚಕ ಕಥೆಗಳು ಹುಟ್ಟುತ್ತವೆ. ಮಗು ಕಳೆದುಕೊಂಡವರ ತಲ್ಲಣಗಳ ಬಿಸಿ ಆ ಕುಟುಂಬಕ್ಕೆ ಸೀಮಿತವಾಗುತ್ತದೆಯೇ ಹೊರತು ಸಮಾಜಕ್ಕಲ್ಲ. ಈ ಸನ್ನಿವೇಶಕ್ಕೆ ಸಮಾಜ ಸ್ಪಂದಿಸುವ ರೀತಿಯನ್ನು ಸುದರ್ಶನ್‌ ಅನಾವರಣಗೊಳಿಸಿದ್ದಾರೆ.

2001ರಿಂದ ಈಚೆಗೆ ಯುನಿಸೆಫ್ ವರದಿಯಲ್ಲಿ ಭಾರತದಲ್ಲಿ ಮಕ್ಕಳ ಕಣ್ಮರೆಯ ವಿಷಯಕ್ಕೆ ಹೆಚ್ಚು ಒತ್ತು ನೀಡಿರುವುದು ಸುದರ್ಶನ್‌ ಅವರ ಗಮನಸೆಳೆದಿದೆ. ಲಿಂಗಾನುಪಾತವೂ ಚರ್ಚೆಯೂ ಅವರನ್ನು ಕಾಡಿದೆ. ಈ ಅಂಶಗಳನ್ನಿಟ್ಟುಕೊಂಡು ಒಂದೂವರೆ ವರುಷದ ಪೂರ್ವಸಿದ್ಧತೆ ಮಾಡಿಕೊಂಡೇ ಅವರು ಚಿತ್ರ ನಿರ್ಮಾಣಕ್ಕೆ ತೊಡಗಿದರಂತೆ.‘ಮಕ್ಕಳು ಕಳೆದು ಹೋಗಿದ್ದರ ಬಗ್ಗೆ ನಾವು (ಸಮಾಜ) ಎಷ್ಟು ನಿರ್ಲಿಪ್ತವಾಗುತ್ತಿದ್ದೇವೆ ಎನ್ನುವುದನ್ನು ನಾನು ಗಮನಿಸಿರುವೆ. ಸಿನಿಮಾದಲ್ಲಿನ ಪಾತ್ರಗಳು ನಮ್ಮ ಸುತ್ತಲಿನ ಜನರೇ ಎನ್ನುವಷ್ಟು ಆಪ್ತವಾಗುತ್ತವೆ. ಸದಾನಂದ್ ಪಾತ್ರವನ್ನು ನೋಡಿದವರು, ನಮ್ಮ ತಂದೆ, ದೊಡ್ಡಪ್ಪ ಹೀಗಿದ್ದರು, ನಮ್ಮ ಪಕ್ಕದ ಮನೆಯವರೊಬ್ಬರು ಹೀಗೆ ವರ್ತಿಸುತ್ತಿದ್ದರು ಎಂದು ಖಂಡಿತಾ ಹೇಳುತ್ತಾರೆ.ತುಂಬಾ ಮೃದುವಾದ ಸಂಬಂಧಗಳು ವರ್ಗದ ಎಲ್ಲೆ ಮೀರಿರುವುದೇ ಚಿತ್ರದ ಮುಖ್ಯ ವಿಶೇಷ. ಕುಟುಂಬದ (ತವರುಮನೆ) ಬೆಂಬಲ ಇದ್ದರೆ ಯಾವುದೇ ವಿಚಾರದಲ್ಲಿಯೇ ಆದರೂ ಮಹಿಳೆ ಗಟ್ಟಿ ನಿಲುವು ತಳೆಯಲು ಸಾಧ್ಯ ಎನ್ನುವುದನ್ನು ಗಾರ್ಗಿಯ ಪಾತ್ರ ನಿರೂಪಿಸುತ್ತದೆ. ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತಲೂ ಸಿನಿಮಾದ ಒಳತೋಟಿ ಬೇರೆಯದನ್ನೇ ಬಿಚ್ಚಿಡುತ್ತದೆ’ ಎಂದು ಸುದರ್ಶನ್‌ ‘ತಲ್ಲಣ’ದ ಹಿಂದಿನ ತಲ್ಲಣಗಳನ್ನು ಹಂಚಿಕೊಳ್ಳುತ್ತಾರೆ.ನಮ್ಮ ಬದುಕಿನ ವೇಗ–ಆವೇಗ ಹೆಚ್ಚಿದಂತೆ ಸುತ್ತಲಿನ ಸನ್ನಿವೇಶಕ್ಕೆ ಮತ್ತು ಸಂಬಂಧಗಳಿಗೆ ಸ್ಪಂದಿಸುವ ಗುಣ ಕಡಿಮೆಯಾಗುತ್ತದೆ. ಹೊಸ ಬದುಕಿನ ರೀತಿ ನಮ್ಮನ್ನು ಮಾನವೀಯ ಸಂಬಂಧಗಳಿಂದ ದೂರವಿಡುತ್ತದೆ ಎನ್ನುವ ಸುದರ್ಶನ್‌, ಸಾಮಾಜಿಕ ವ್ಯವಸ್ಥೆಯೊಳಗಿನ ವೈರುಧ್ಯಗಳನ್ನು ‘ತಲ್ಲಣ’ದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರಂತೆ. ‘ತಲ್ಲಣ’ವನ್ನು ಕನ್ನಡಿಗೆ ಹೋಲಿಸುವ ಅವರು, ‘ಚಿತ್ರ ನಮ್ಮನ್ನು ನಾವೇ ನೋಡಿಕೊಳ್ಳಲು ನೆರವಾಗುತ್ತದೆ’ ಎನ್ನುತ್ತಾರೆ.‘ನಮ್ಮ ಚಿತ್ರಗಳು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲ. ಮೂರು–ಆರು ವರುಷಗಳ ಕಾಲ ಬದುಕುತ್ತವೆ’ ಎನ್ನುವ ಗಿರೀಶ್ ಕಾಸರವಳ್ಳಿ ಅವರ ಮಾತುಗಳನ್ನು ನೆನಪಿಸಿಕೊಳ್ಳುವ ಸುದರ್ಶನ್– ‘ಹಾಡು, ಡ್ಯಾನ್ಸ್‌ಗಳು ಮಾತ್ರ ಮನರಂಜನೆ ಅಲ್ಲ. ಭಾವತೀವ್ರತೆಯೂ ಮನರಂಜನೆಯೇ. ನನ್ನದು ಸೋಶಿಯಲ್ ಡ್ರಾಮಾ ಶೈಲಿ. ಸಮಕಾಲೀನ ವಸ್ತುವಿನ ಬಗ್ಗೆ ಹೇಳುತ್ತಿದ್ದೇನೆ’ ಎಂದು ಚಿತ್ರಭಾಷೆಯಲ್ಲಿ ತಾವು ಕಂಡುಕೊಂಡಿರುವ ಹಾದಿಯ ಬಗ್ಗೆ ವಿವರಿಸುತ್ತಾರೆ.2005ರಲ್ಲಿ ಕನ್ನಡದಲ್ಲಿ ‘ಮುಖಾಮುಖಿ’ ಚಿತ್ರ ನಿರ್ಮಿಸಿದ್ದ ನಂತರ ಅವರು ದೀರ್ಘಕಾಲ ಚಿತ್ರರಂಗದಿಂದ ದೂರವಿದ್ದರು. ಚಿತ್ರರಂಗದಿಂದ ದೂರವಿದ್ದ ಸಮಯದಲ್ಲಿ ದುಡಿದ ಹಣವನ್ನೇ  ತಲ್ಲಣಕ್ಕೆ ಬಂಡವಾಳ ಹೂಡಿದ್ದಾರಂತೆ. ಸಿಡ್ನಿ ಮತ್ತು ಬೆಂಗಳೂರಿನ ನಡುವಿನ ಸಂಚಾರಿಯಾಗಿರುವ ಅವರಿಗೆ ‘ಈಸ್ಟ್ ವೆಸ್ಟ್’ ಬದುಕು–ಬಾಳಿನ ಸಿನಿಮಾ ಮಾಡಿ ಎಂದವರೂ ಬಹಳ ಮಂದಿಯಂತೆ. ಆದರೆ ಆ ಚಿತ್ರಕ್ಕೆ ಅವರಿಗೆ ಗಟ್ಟಿ ವಸ್ತು ಇಲ್ಲಿಯವರೆಗೂ ಕಾಣಿಸಿಲ್ಲ.ಪ್ರಯೋಗಗಳ ಬೆನ್ನೇರಿ...

ಸಿಡ್ನಿಯಲ್ಲಿ ನೆಲೆ ನಿಂತಿರುವ ಅನಿವಾಸಿ ಭಾರತೀಯ ಸುದರ್ಶನ್ ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ಬಾಲ್ಯದಿಂದಲೇ ಸಖ್ಯ ಬೆಳೆಸಿದವರು. ‘ಬೆನಕ’, ‘ಪ್ರಯೋಗ ರಂಗ’ ರಂಗತಂಡಗಳೊಂದಿಗೆ ಗುರ್ತಿಸಿಕೊಂಡವರು. ‘ಹೆಲ್ಪ್‌’ ಕಿರುಚಿತ್ರ ದೃಶ್ಯ ಮಾಧ್ಯಮದಲ್ಲಿನ ಅವರ ಮೊದಲ ಪ್ರಯೋಗ. 2002ರಲ್ಲಿ ಆಫ್ಘನ್ ಭಾಷೆಯಲ್ಲಿ ಅವರು ನಿರ್ಮಿಸಿದ 33 ನಿಮಿಷಗಳ ‘ಕ್ಲೌಡ್‌ ವೀಪ್‌ ಆನ್ ದ ಗ್ರೀನೆಸ್’ ಸಾಕ್ಷ್ಯಚಿತ್ರ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗುರ್ತಿಸಿಕೊಂಡಿತ್ತು.‘ಮುಖಾಮುಖಿ’ ಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿ ದೊರೆತಿತ್ತು. ಮೂಲತಃ ರಂಗಭೂಮಿಯವರಾದ ಅವರು ಸಾಮಾಜಿಕ ನಾಟಕಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ಹೊಸ ಅಲೆಯ ಚಿತ್ರಗಳ ಪ್ರಯೋಗಶೀಲರಲ್ಲಿ ಒಬ್ಬರಾದ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರು ಸುದರ್ಶನ್ ಅವರ ಸೋದರಮಾವ. ಈ ಚಿತ್ರ ರಾಮಚಂದ್ರ ಅವರಿಗೆ ಅಂಕಿತಗೊಂಡಿದೆ.

ಕಾಡುವ ಪಾತ್ರ

ನನ್ನ ವೃತ್ತಿ ಜೀವನದಲ್ಲಿಯೇ ಹೆಚ್ಚು ಕಾಡಿದ ಮತ್ತು ಕಾಡುತ್ತಿರುವ ಪಾತ್ರ ‘ತಲ್ಲಣ’ ಚಿತ್ರದ್ದು. ಪಾತ್ರವನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಸವಾಲಾಗಿತ್ತು. ಸಿನಿಮಾ ಪೂರ್ಣವಾಗಿ ಸನ್ನಿವೇಶಕ್ಕೆ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ನಾನು ಸದಾನಂದನೇ ಆಗಬೇಕು. ಕಥೆಗೆ ಪೂರಕವಾಗಿ ಪಾತ್ರಗಳು ಸಾಗುತ್ತವೆ. ಒಬ್ಬರು ಕಥೆಯ ಸನ್ನಿವೇಶಕ್ಕೆ ಪ್ರತಿಕ್ರಿಯಿಸುತ್ತಿದ್ದರೆ (ನಟಿಸುತ್ತಿದ್ದರೆ) ಉಳಿದವರೆಲ್ಲರೂ ಅಲ್ಲೇ ಇದ್ದು ಆ ಪಾತ್ರದ ಕ್ರಿಯೆ–ಪ್ರತಿಕ್ರಿಯೆಯನ್ನು ಗಮನಿಸುತ್ತಿದ್ದೆವು.

– ಕೆ.ಎಸ್‌. ಶ್ರೀಧರ್ (ಸದಾನಂದ್ ಪಾತ್ರಧಾರಿ)

 

ಪ್ರತಿಕ್ರಿಯಿಸಿ (+)