ಶನಿವಾರ, ಮೇ 15, 2021
24 °C

ಅನುದಾನ ಬಳಕೆಗೆ ನಿರ್ಬಂಧ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಪ್ರಸಕ್ತ ಸಾಲಿನಲ್ಲಿ ಸರ್ಕಾರ ಪ್ರತಿ ತಾಲ್ಲೂಕು ಪಂಚಾಯಿತಿಗೆ ರೂ. 1ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಇದರ ಬಳಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಲವು ನಿರ್ಬಂಧಗಳನ್ನು ವಿಧಿಸಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಮುಖವಾಗಿ ವಾರ್ಷಿಕ ಹಂಚಿಕೆಯಾಗುವ ರೂ.1ಕೋಟಿ ಅನುದಾನಕ್ಕೆ ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಯೋಜನೆ ತಯಾರಿಸುವುದು, ಈ ಅಭಿವೃದ್ಧಿ ಯೋಜನೆಯು ತಾ.ಪಂ. ಆಯ್ಯವ್ಯಯ ಹಾಗೂ ಅಭಿವೃದ್ಧಿ ಯೋಜನೆಯ ಭಾಗವಾಗಿರಬೇಕು. ಪ್ರತ್ಯೇಕವಾಗಿ ಕಂತುವಾರು ಕ್ರಿಯಾ ಯೋಜನೆ ತಯಾರಿಸುವುದನ್ನು ನಿರ್ಬಂಧಿಸಲಾಗಿದೆ.ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಶೇ 90ರಷ್ಟು ದೀರ್ಘಕಾಲ ಬಾಳಿಬರುವಂತಹ ಮೂಲಸೌಕರ್ಯಗಳು, ಅಂದರೆ ಕಟ್ಟಡಗಳನ್ನು ನಿರ್ಮಿಸಲು, ಶೇಕಡ 10ರಷ್ಟು ಇತರೆ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡಬೇಕು. ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ನಿರ್ಬಂಧಿಸಲಾಗಿದೆ. ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವಾಗ ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುವಂತಹ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಪೌಷ್ಟಿಕಾಂಶಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು.ಯೋಜನೆಗಳನ್ನು ತಯಾರಿಸುವಾಗ ಯೋಜನೆಗಳಿಗೆ ಅವಶ್ಯಕತೆ ಇರುವ ಪೂರ್ಣ ಅನುದಾನವನ್ನು ಕಾಯ್ದಿರಿಸಬೇಕು. ಪರಿಶಿಷ್ಟಜಾತಿ ಮತ್ತು ಪಂಗಡ ವರ್ಗದ ಕಲ್ಯಾಣಕ್ಕಾಗಿ ಕನಿಷ್ಠ ಶೇ 25ರಷ್ಟು ಹಾಗೂ ಅಂಗವಿಕಲರ ಅಭಿವೃದ್ಧಿ ಯೋಜನೆಗೆ ಶೇ 3ರಷ್ಟು ಅನುದಾನ ಕಡ್ಡಾಯವಾಗಿ ಮೀಸಲಿಡಬೇಕಾಗುತ್ತದೆ ಎಂದು ಆದೇಶಿಸಲಾಗಿದೆ.ಲಿಂಗಾಧಾರಿತ ಆಯವ್ಯಯ ತಯಾರಿಸಿ ಅನುಷ್ಠಾನಗೊಳಿಸಬೇಕು. ವಾರ್ಡ್ ಸಭೆ ಮತ್ತು ಗ್ರಾಮ ಸಭೆ ಶಿಫಾರಸುಗಳ ಅನ್ವಯ ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವುದು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಿದ್ದಲ್ಲಿ ಅಂತಹ ಯೋಜನೆಗಳು ತನಗೆ ತಾನೆ ರದ್ದಾಗುತ್ತವೆ ಎಂದು ತಿಳಿಸಲಾಗಿದೆ.ಹಿಂದಿನ ವರ್ಷಗಳ ಅನುದಾನದಲ್ಲಿ ಜನರಿಗೆ ಅಗತ್ಯವಾಗಿರುವ ಮೂಲಸೌಲಭ್ಯಗಳಾದ ರಸ್ತೆ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅವಕಾಶವಿತ್ತು. ಪ್ರಸ್ತುತ ಇದಕ್ಕೆ ಅವಕಾಶವಿಲ್ಲದಿರುವುದು ಸಮಸ್ಯೆಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ `ಪ್ರಜಾವಾಣಿ'ಗೆ ತಿಳಿಸಿದರು.ತಾಲ್ಲೂಕು ಪಂಚಾಯಿತಿಯ ಒಟ್ಟು ರೂ. 1ಕೋಟಿ ಅನುದಾನದಲ್ಲಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಪ್ರಮುಖ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಲು ಅನುದಾನ ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಆದರೆ ಹೊಸ ಆದೇಶದಲ್ಲಿ ಇದನ್ನು ನಿರ್ಬಂಧಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.