ಶುಕ್ರವಾರ, ಮೇ 7, 2021
24 °C
ಸಂಯೋಜನೆಯಲ್ಲಿ ಬಹು ಉದ್ದೇಶಕ್ಕೆ `ಉದ್ಯೋಗ ಖಾತ್ರಿ' ಹಣ

ಅನುದಾನ ಬಳಕೆ: `ಇತರ ಇಲಾಖೆಗಳು' ವಿಫಲ

ಎಂ. ಮಹೇಶ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನಿಧಿಯೊಂದಿಗೆ ಇತರ ಇಲಾಖೆಗಳ ಕಾರ್ಯಕ್ರಮ ಒಗ್ಗೂಡಿಸಿ ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರಯತ್ನ ನಡೆದಿರುವುದು ಬಿಟ್ಟರೆ ಉಳಿದ ಇಲಾಖೆಗಳು ದೊರೆತ ಅನುದಾನವನ್ನು ಖರ್ಚು ಮಾಡುವುದಕ್ಕೂ ಸಹ ಸಾಧ್ಯವಾಗಿಲ್ಲ.2012-13ನೇ ಸಾಲಿನಲ್ಲಿ ಜಲಾನಯನ ಇಲಾಖೆ, ಅರಣ್ಯ ಇಲಾಖೆ, ಕೃಷಿ, ಮೀನುಗಾರಿಕೆ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನಾ ಇಲಾಖೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯ ಅನುದಾನದೊಂದಿಗೆ ಒಗ್ಗೂಡಿಸಿ ವಿವಿಧ ಕಾರ್ಯಕ್ರಮ ಕೈಗೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

ಬಹುತೇಕ ಇಲಾಖೆಗಳು ಯೋಜನೆ ಅನುದಾನ ಬಳಸಿಕೊಂಡು ಹತ್ತುಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿವೆ. ತೋಟಗಾರಿಕೆ ಇಲಾಖೆ ಬಿಟ್ಟರೆ, ಇತರ ಇಲಾಖೆಗಳು ಅನುದಾನವನ್ನು ಜಿಲ್ಲಾ ಪಂಚಾಯ್ತಿಗೆ ವಾಪಸ್ ಮಾಡಿರುವುದು ಬೆಳಕಿಗೆ ಬಂದಿದೆ.ಉದ್ಯೋಗ ಖಾತ್ರಿ ಯೋಜನೆ ಅಧಿನಿಯಮ ಪ್ರಕಾರ, ಶೇ 50ರಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯ್ತಿಗಳಿಗೆ ಹಂಚಬೇಕು ಎಂದು ನಿಬರ್ಂಧಿಸುತ್ತದೆ. ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮತ್ತು ಇತರ ಇಲಾಖೆಗಳನ್ನು `ಅನುಷ್ಠಾನ ಸಂಸ್ಥೆ'ಗಳನ್ನಾಗಿ ಪರಿಗಣಿಸಬಹುದು. ಈ ಅವಕಾಶ ಬಳಸಿಕೊಂಡು, ಬಹುಉದ್ದೇಶಕ್ಕೆ ಉದ್ಯೋಗ ಖಾತ್ರಿ ಹಣವನ್ನು ನೀಡಲು ಕಳೆದ ಸಾಲಿನಿಂದ ಆರಂಭಿಸಲಾಗಿದೆ.

ಜಿಲ್ಲಾ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಅನುಷ್ಠಾನ ಸಂಸ್ಥೆಗಳ ಮುಖ್ಯಸ್ಥರಿಗೆ ನೇರವಾಗಿ ಅನುದಾನ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಮಾರ್ಗಸೂಚಿ ಪ್ರಕಾರ, ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಕಾಮಗಾರಿ ಮಾಡಬಹುದಾದ ಅನುಷ್ಠಾನದ ಪ್ರಮಾಣ ಆಧರಿಸಿ ಅನುದಾನ ಪಡೆಯಬಹುದು.ಏನೇನು ಯೋಜನೆಗಳನ್ನು ಕೈಗೊಳ್ಳಬಹುದು?

ಜಲಾನಯನ ಇಲಾಖೆ ಸಂಯೋಜನೆಯಲ್ಲಿ, ಚೆಕ್‌ಡ್ಯಾಮ್, ಕೊಳಗಳು, ಬದುಗಳ ನಿರ್ಮಾಣ, ಜಲಾನಯನ ಪ್ರದೇಶಗಳಲ್ಲಿ ತೋಟಗಾರಿಕೆ, ರೈತರು ಹಾಗೂ ಸಾಮುದಾಯಿಕ ಜಮೀನುಗಳಲ್ಲಿನ ತೋಟಗಳನ್ನು ಮೂರು ವರ್ಷಗಳ ಅವಧಿಗೆ ನಿರ್ವಹಿಸುವುದು (ವೈಯಕ್ತಿಕ ಅರ್ಹ ಫಲಾನುಭವಿಗಳಿಗೆ), ಭೂಗರ್ಭ ಕಂದಕಗಳ ನಿರ್ಮಾಣ, ತಡೆಬದುಗಳ ನಿರ್ಮಾಣ, ಬಂಡೆಗಳಿಂದ ನಿರ್ಮಿಸುವ ಕಟ್ಟೆ, ಭೂಗರ್ಭ ಕಾಲುವೆಗಳ ರಚನೆ, ಮಣ್ಣಿನ ಅಣೇಕಟ್ಟೆಗಳು ಹಾಗೂ ಕೃಷಿ ಕೊಳಗಳ ನಿರ್ಮಾಣ.ಅರಣ್ಯ ಇಲಾಖೆ: ಅರಣ್ಯದಲ್ಲಿನ ನೆಡುತೋಪುಗಳು (ಮೀಸಲಿರಿಸಿದ ಸಾಮಾಜಿಕ ಅರಣ್ಯಗಳು), ಏರಿಗಳಲ್ಲಿ ನೆಡುತೋಪು ಕೆಲಸಗಳು, ಅರಣ್ಯ ಪ್ರದೇಶದಲ್ಲಿ ಚೆಕ್‌ಡ್ಯಾಂ ನಿರ್ಮಾಣ, ಅರಣ್ಯ ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಿಸುವುದು, ಅರಣ್ಯದಲ್ಲಿರುವ ಕೆರೆಗಳ ಹೂಳೆತ್ತುವುದು, ಬಂಜರು ಸಮುದಾಯ ಜಮೀನುಗಳಲ್ಲಿ ಜೈವಿಕ ಇಂಧನ ತೋಟ ಬೆಳೆಸುವುದು, ಅರಣ್ಯ ಪ್ರದೇಶದಲ್ಲಿ ಬೆಂಕಿ ನಿಯಂತ್ರಿಸುವ ಕಂದಕಗಳನ್ನು ನಿರ್ಮಿಸುವುದು, ಬೀಜೋತ್ಪಾದನೆಯಂತಹ ಸಸ್ಯೋ ದ್ಯಾನಗಳ ನೆಡುತೋಪುಗಳನ್ನು ಮೂರು ವರ್ಷದೊಳಗೆ ನಿರ್ವಹಿಸುವುದು.ಕೃಷಿ, ಮೀನುಗಾರಿಕೆ ಪೂರಕ ಇಲಾಖೆ: ಎರೆಹುಳು ಗೊಬ್ಬರ ತಯಾರಿಕೆ, ದ್ರವ್ಯ ಜೈವಿಕ ಗೊಬ್ಬರ ತಯಾರಿಕೆ (ಗಂಜಲ ಬಳಸಿ ದ್ರವರೂಪದ ಗೊಬ್ಬರ ತಯಾರಿಕೆ), ಮೀನು ಕೊಳಗಳ ನಿರ್ಮಿಸಬಹುದು.ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತ್ತು ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಂಬಂಧಿಸಿದ ವೈಯಕ್ತಿಕ ವರ್ಗದ ಕಾಮಗಾರಿಗೆ ಅವಕಾಶವಿದೆ. ಇದರಲ್ಲಿ, ಬದುಗಳ ನಿರ್ಮಾಣ, ಕೃಷಿ/ತೋಟಗಳ ಹೊಂಡಗಳ ನಿರ್ಮಾಣ, ಜಮೀನು ಸಮ ಮಾಡುವುದು, ಜಮೀನು ಅಭಿವೃದ್ಧಿ (ಕಲ್ಲು ಬಂಡೆಗಳನ್ನು ತೆಗೆಯುವುದು ಸೇರಿದಂತೆ), ವೈಯಕ್ತಿಕ ಜಮೀನಿನಲ್ಲಿ ತೋಟಗಾರಿಕೆ, ಪುಷ್ಪ ಕೃಷಿ ಕೈಗೊಳ್ಳುವುದು, ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವುದು.ಚುರುಕು ನೀಡಲು ಕ್ರಮ: ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, `ಜಿಲ್ಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ರೂ 240 ಕೋಟಿ ಅನುದಾನ ದೊರೆತಿದೆ. ಕೆಲ ಇಲಾಖೆಗಳು ಮಾತ್ರ ಯೋಜನೆಯಡಿ ಅನುದಾನ ಬಳಸಿವೆ. ಕೆಲವು ಇಲಾಖೆಗಳು ವಾಪಸ್ ನೀಡಿವೆ' ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧೆಡೆ ಬಾಳೆಹಣ್ಣಿನ ಕ್ಷೇತ್ರ ಅಭಿವೃದ್ಧಿಪಡಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೆರೆಯ ಹೂಳೆತ್ತಲಾಗಿದೆ. ಸಂಯೋಜನೆ ಯೊಂದಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಸಾಲಿನಲ್ಲಿ, ಸಂಯೋಜಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಯೋಜನೆಗೆ ಚುರುಕು ನೀಡಲಾಗುವುದು. ಶೌಚಾಲಯಗಳ ನಿರ್ಮಾಣ, ಸಸಿ ನೆಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.ಪ್ರಸ್ತುತ ಗ್ರಾಮ ಪಂಚಾಯ್ತಿ ಮೂಲಕ ಕೂಲಿ ನೀಡಲಾಗುತ್ತಿತ್ತು. ಈ ಸಾಲಿನಲ್ಲಿ ಇತರ ಇಲಾಖೆಗಳು ನಡೆಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಯ ಮುಖ್ಯಸ್ಥರಿಗೇ ಅನುದಾನ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ. ಇತರ ಇಲಾಖೆಗಳು ಸಮರ್ಪಕವಾಗಿ ಕೈಜೋಡಿಸಿದರೆ ಉದ್ಯೋಗ ಖಾತ್ರಿ ಅನುಷ್ಠಾನ ಮತ್ತಷ್ಟು ವೇಗ ಪಡೆಯಲಿದೆ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.