ಬುಧವಾರ, ಸೆಪ್ಟೆಂಬರ್ 30, 2020
21 °C

ಅನುಭವ, ಅವಕಾಶ ಹಾಗೂ ಸೌಂದರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಭವ, ಅವಕಾಶ ಹಾಗೂ ಸೌಂದರ್ಯ

ದೊಡ್ಡ ಕಲಾವಿದರ ಕುಟುಂಬ. ಅಮ್ಮ ತಾರೆ. ಜತೆಗೆ ನಿರ್ಮಾಪಕಿ. ಆದರೂ ಚಿತ್ರರಂಗ ಪ್ರವೇಶ ಕಠಿಣ ಹಾದಿ. ನಟಿ ಸೌಂದರ್ಯ ಜಯಮಾಲಾ ಕತೆ ಇದು. ಚಿಕ್ಕಂದಿನಲ್ಲಿಯೇ ಬಣ್ಣದ ಲೋಕದ ಅರಿವಿದ್ದ ಈ ಹುಡುಗಿ ಬೆಳ್ಳಿ ತೆರೆಯ ಮೇಲೆ ವಿದ್ಯುಕ್ತವಾಗಿ ಕಾಣಿಸಿಕೊಳ್ಳುತ್ತಿರುವುದು ತನ್ನ ಇಪ್ಪತ್ತೆರಡನೇ ವಯಸ್ಸಿಗೆ.ಚಿತ್ರರಂಗದ ಏಳುಬೀಳುಗಳನ್ನೆಲ್ಲ ಕಂಡಿದ್ದ ಜಯಮಾಲಾ ಮಗಳು ಬಣ್ಣ ಹಚ್ಚುವುದನ್ನು ಮೊದಮೊದಲು ವಿರೋಧಿಸಿದ್ದುಂಟು. ಆಕೆ ಐಎಎಸ್ ಓದಬೇಕು ಎಂಬುದು ತಾಯಿಯ ಆಸೆ. ಆದರೆ ಸೌಂದರ್ಯರಿಗೆ ಪಶುವೈದ್ಯೆಯಾಗುವ ಕನಸು. ಎರಡೂ ಈಡೇರಲಿಲ್ಲ.

ಒಂದು ದಿನ `ಫ್ಯಾಷನ್ ಗುರು~ ಪ್ರಸಾದ್ ಬಿದ್ದಪ್ಪ ಅವರಿಂದ ಅವಕಾಶ ಒದಗಿಬಂತು.

 
ನೆನಪುಗಳಿಗೆ ಜಾರಿದ ಜಯಮಾಲಾ

`ನಮ್ಮ ಕಾಲದಲ್ಲಿ ಹೀಗಿರಲಿಲ್ಲ~ ಎಂದರು ನಟಿ ಜಯಮಾಲಾ. ಅವರ ಕಾಲದಲ್ಲಿ ಪ್ರಖರ ಬೆಳಕಿರಲಿಲ್ಲ. ಅಬ್ಬರದ ಪ್ರಚಾರವಿರಲಿಲ್ಲ. ಚಿತ್ರರಂಗ ಪ್ರವೇಶವಂತೂ ಸಡಗರದ ಸಂಗತಿಯಾಗಿರಲಿಲ್ಲ. ಆದರೆ ತಮ್ಮ ಕಾಲದಲ್ಲಿ ಆಗದೇ ಹೋದದ್ದು ಮಗಳು ಸೌಂದರ್ಯ ಕಾಲದಲ್ಲಿ ಸಾಧ್ಯವಾಗುತ್ತಿದೆ ಎಂಬ ಸಮಾಧಾನ ಅವರದ್ದು. ನಟಿಯೊಬ್ಬಳನ್ನು ಪರಿಚಯಿಸುವುದು ಕೂಡ ನೃತ್ಯಪಟುಗಳ `ರಂಗ ಪ್ರವೇಶ~ದಂತಾಗಿರುವುದನ್ನು ಅವರು ಗಮನಿಸಿದ್ದಾರೆ.

ಮಗಳ ಸಿನಿಮಾ ಪ್ರವೇಶ ಇಷ್ಟವಿಲ್ಲದಿದ್ದರೂ `ಮಕ್ಕಳ ಕನಸನ್ನು ನನಸು ಮಾಡೋದು ಗುಡಿ ಕಟ್ಟಿದ ಹಾಗೆ~ ಎಂದು ನಂಬಿ ಅದನ್ನು ಪೂರೈಸಿದ್ದಾರೆ. ಈ `ಕಟ್ಟುವ~ ಕೆಲಸಕ್ಕೆ ಸಹಕಾರ ನೀಡಿದ ನಿರ್ಮಾಪಕ ಕೆ.ಮಂಜು, ನಿರ್ದೇಶಕ ಶ್ರೀರಾಂ ಹಾಗೂ ನಟ ಉಪೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿದರು `ನಾನು ಸೌಂದರ್ಯ~ ಎಂಬ ಕಾರ್ಯಕ್ರಮದಲ್ಲಿ.

ಮಂಜು ಸೌಂದರ್ಯ ಅವರ ಕನ್ನಡ ಪ್ರೀತಿಯನ್ನು ಕೊಂಡಾಡಿದರು. ಶ್ರೀರಾಂ, ಉಪೇಂದ್ರ, ವಿತರಕ ಪ್ರಸಾದ್ ಸೌಂದರ್ಯ ಅವರಿಗೆ ಶುಭ ಕೋರಿದರು. ಸೌಂದರ್ಯ ಎಳೆಯ ಮಗುವಿನಂತೆ ಚಿತ್ರರಂಗದ ಅನುಭವಗಳನ್ನು ಹಂಚಿಕೊಂಡರು.ಸರಿ ಎಂದೊಪ್ಪಿ ರ‌್ಯಾಂಪ್ ಮೇಲೆ ನಡೆದಾಡಿದರು. ಒಂದಷ್ಟು ಜನರ ಮೆಚ್ಚುಗೆಯನ್ನೂ ಗಳಿಸಿದರು. ಆದರೆ ಮೈ ಬಳುಕಿಸುತ್ತ ಆ ಮೂಲೆಯಿಂದ ಈ ಮೂಲೆಗೆ ಓಡಾಡುವುದರಲ್ಲಿ ಸೌಂದರ್ಯರಿಗೆ ತೃಪ್ತಿ ಕಾಣಲಿಲ್ಲ. ಅತ್ತ ಫ್ಯಾಷನ್ ಜಗತ್ತಿಗೂ ಒಗ್ಗಿಕೊಳ್ಳದೆ ಇತ್ತ ಸಿನಿಮಾ ರಂಗವನ್ನೂ ಪ್ರವೇಶಿಸದೆ ಸೌಂದರ್ಯ ಒಂದು ಬಗೆಯ ಅಂತರ ಕಾಯ್ದುಕೊಂಡರು. ಚಿತ್ರರಂಗ ಪ್ರವೇಶವನ್ನು ವಿರೋಧಿಸುತ್ತಿದ್ದ ಜಯಮಾಲಾ ಮಗಳ ಪ್ರತಿಭೆಗೆ ಮನಸೋಲದೆ ವಿಧಿ ಇರಲಿಲ್ಲ. ಪಿಯುಸಿ ನಂತರ ಸೌಂದರ್ಯ ತೆರಳಿದ್ದು ಮುಂಬೈಗೆ. ಅಲ್ಲಿನ ರೋಷನ್ ತನೇಜಾ ಅಭಿನಯ ಸಂಸ್ಥೆಯಲ್ಲಿ ನಟನೆ ಕಲಿತರು. ಸಿನಿಮಾ ಬಗ್ಗೆ ತಾಂತ್ರಿಕ ಜ್ಞಾನವನ್ನು ಗಳಿಸಿಕೊಂಡರು. ಬಳಿಕ ಬಿ.ಎ ಪದವಿಗಾಗಿ ಅಧ್ಯಯನ.ಇಷ್ಟರ ಮಧ್ಯೆ ಲಗೋರಿ ಚಿತ್ರಕ್ಕೆ ಆಹ್ವಾನ ಬಂತು. ಯೋಗರಾಜ ಭಟ್ಟರು ಚಿತ್ರದ ನಿರ್ದೇಶಕರು. `ಚಕ್ ದೇ ಇಂಡಿಯಾ~ ಚಿತ್ರದಂತೆ ಇದೂ ಕೂಡ ಕ್ರೀಡೆ ಕುರಿತ ಸಿನಿಮಾ. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ದೊಡ್ಡ ಅವಕಾಶವೊಂದು ಬಂದ ಹಾಗೆಯೇ ಹೊರಟು ಹೋಯಿತು. ನಂತರ ಸೌಂದರ್ಯ ತೆಲುಗು ಚಿತ್ರರಂಗದತ್ತ ಹೆಜ್ಜೆ ಇರಿಸಿದರು. ಅಲ್ಲಿಯೂ ಅದೇ ಕತೆ. `ಮಿಸ್ಟರ್ ಪ್ರೇಮಿಕುಡು~ ಚಿತ್ರದಲ್ಲಿ ನಾಯಕ ನಟ ಯಶಸ್ ಸಾಗರ್ ಜತೆ ಅಭಿನಯಿಸಬೇಕಿತ್ತು. ಚಿತ್ರ ತೆರೆ ಕಾಣಲಿಲ್ಲ.ಸರಿ ಒಂದೊಳ್ಳೆ ಅವಕಾಶಕ್ಕಾಗಿ ತಾಯಿ ಮಗಳು ಕಾದರು. `ಗಾಡ್‌ಫಾದರ್~ ಮೂಲಕ ಆ ಅವಕಾಶ ಒದಗಿಬಂತು. ಉಪೇಂದ್ರ ನಟಿಸುತ್ತಿದ್ದಾರೆ, ಕೆ.ಮಂಜು ಚಿತ್ರ ನಿರ್ಮಿಸುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಸೌಂದರ್ಯ ಅವರಿಗೆ ಹೆಚ್ಚಿನ ಮಾಹಿತಿ ಗೊತ್ತಿರಲಿಲ್ಲ. ಅಮ್ಮ ಇಂಥದ್ದೊಂದು ಆಫರ್ ಇದೆ ಎಂದಾಗ ಅವರು ಕಣ್ಣುಮುಚ್ಚಿ ಒಪ್ಪಿದ್ದರು.ಬಳಿಕ ಅವರಿಗೆ ಒಂದಾದ ನಂತರ ಹಿತಕರ ಆಘಾತಗಳು! ಎ.ಆರ್.ರೆಹಮಾನ್ ಸಂಗೀತ ನಿರ್ದೇಶನವಿರುವುದು, ಬಾಲಿವುಡ್‌ನಲ್ಲಿ ಛಾಯಾಗ್ರಾಹಕರಾಗಿದ್ದ ಶ್ರೀರಾಂ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತಾದ ಮೇಲಂತೂ ಸೌಂದರ್ಯ ಹಿರಿ ಹಿರಿ ಹಿಗ್ಗಿದರು. ಚಿತ್ರರಂಗದಲ್ಲಿಯೇ ಗಟ್ಟಿಯಾಗಿ ಬೇರೂರಬೇಕು ಎಂದು ಅವರಿಗೆ ಅನ್ನಿಸತೊಡಗಿದ್ದು ಗಾಡ್‌ಫಾದರ್‌ನಲ್ಲಿ ಅಭಿನಯಿಸಲು ತೊಡಗಿದ ನಂತರವಂತೆ. ದೊಡ್ಡ ಮಟ್ಟದ ಸಿನಿಮಾ ಅಲ್ಲದೆ ತಮ್ಮ ಚೊಚ್ಚಿಲ ಚಿತ್ರ ಎನ್ನುವ ಕಾರಣಕ್ಕೆ ಸೌಂದರ್ಯ ಪರಿಶ್ರಮ ಹೆಚ್ಚಿತ್ತು. ತಮಿಳು ಚಿತ್ರವನ್ನು ಪದೇ ಪದೇ ನೋಡಿ ಅಲ್ಲಿನ ಪಾತ್ರಗಳನ್ನು ಅಧ್ಯಯನ ಮಾಡತೊಡಗಿದರು. ಕೇಶರಾಶಿಯಿಂದ ಹಿಡಿದು ಅಭಿನಯದ ತನಕ ಇಂಚಿಂಚನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡತೊಡಗಿದರು.ನಟನೆ ಕುರಿತು ಓದುವುದೇ ಬೇರೆ ನಟಿಸುವುದೇ ಬೇರೆ ಎಂಬುದು ಅವರ ಅನುಭವಕ್ಕೆ ಬಂದದ್ದು ಚಿತ್ರೀಕರಣದಲ್ಲಿ ತೊಡಗಿದಾಗ. ಹೀಗಾಗಿ ನಟನೆಯ ಪರಿಸರವಿದ್ದ ಮಾತ್ರಕ್ಕೆ ಎಲ್ಲರೂ ನಟರಾಗುವುದು ಸಾಧ್ಯವಿಲ್ಲ ಎನ್ನುವುದು ಅವರು ನಂಬಿರುವ ಸತ್ಯ.ತಡವಾಗಿ ಚಿತ್ರರಂಗ ಪ್ರವೇಶಿಸಿದ ಬಗ್ಗೆ ಅವರಿಗೆ ಕಿಂಚಿತ್ತೂ ಆತಂಕವಿಲ್ಲ. ಚಿಕ್ಕವಯಸ್ಸಿಗೇ ಬಣ್ಣ ಹಚ್ಚಿದ್ದರೆ ಅಪ್ರಬುದ್ಧತೆ ಕಾಡುತ್ತಿತ್ತು. ದಾರಿ ತಪ್ಪುವ ಸಾಧ್ಯತೆ ಇತ್ತು. ಆದರೆ ಈಗ ಎಲ್ಲವನ್ನೂ ನಿಭಾಯಿಸುವುದು ಹೇಗೆಂಬುದು ಗೊತ್ತಿದೆ. ಸಣ್ಣ ವಯಸ್ಸಿಗೆ ಪ್ರವೇಶ ಪಡೆದಿದ್ದರೆ ಅವಕಾಶಗಳು ಸಿಗುತ್ತಿದ್ದವೇ ವಿನಾ ಅನುಭವ ಸಿಗುತ್ತಿರಲಿಲ್ಲ. ಈಗ ನನ್ನ ಮೇಲೆ ನನಗೆ ವಿಶ್ವಾಸ ಮೂಡಿದೆ. ಆಯ್ಕೆಯ ಬಗ್ಗೆ ಯೋಚಿಸುವಷ್ಟು ಬುದ್ಧಿ ಬಲಿತಿದೆ ಎನ್ನುವುದು ಅವರ ಮಾತು.ಅಂದಹಾಗೆ ಅವರ ನೆಚ್ಚಿನ ನಟಿ ದಿ. ಸೌಂದರ್ಯ. ಅಂಗಾಂಗ ಪ್ರದರ್ಶಿಸದೆ ಕೇವಲ ಅಭಿನಯದ ಮೂಲಕವೇ ಹೇಗೆ ಪ್ರೇಕ್ಷಕರನ್ನು ಗೆಲ್ಲಬಹುದು ಎನ್ನುವುದಕ್ಕೆ ಆ ನಟಿ ಸ್ಫೂರ್ತಿಯಂತೆ. ತಮ್ಮ ಮೈಸಿರಿಯ ಮೂಲಕವೇ ಗೆಲ್ಲುತ್ತಿರುವ ಕದ್ದ ಅನುಷ್ಕಾ ಶೆಟ್ಟಿ ಅವರ ಮತ್ತೊಬ್ಬ ನೆಚ್ಚಿನ ನಟಿ. ಇವರಿಬ್ಬರ ನಡುವಿನ ಹಾದಿ ಸೌಂದರ್ಯ ಜಯಮಾಲ ಅವರದ್ದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.