ಶನಿವಾರ, ಫೆಬ್ರವರಿ 22, 2020
19 °C
ಅಮೃತವಾಕ್ಕು

ಅನುಭವ ಮಂಟಪ

ಎಸ್.ಜಿ. ಸಿದ್ದರಾಮಯ್ಯ Updated:

ಅಕ್ಷರ ಗಾತ್ರ : | |

ಹನ್ನೆರಡನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಕೆಲವು ಮಹಾರೂಪಕಗಳು ಬರುತ್ತವೆ. ಅವುಗಳಲ್ಲಿ ಮಹಾಮನೆ ಅನುಭವ ಮಂಟಪ ಮುಖ್ಯವಾದವು. ಬಸವಣ್ಣನವರ ಮನೆಯನ್ನು ಮಹಾಮನೆ ಎಂದು ಕರೆದದ್ದು ಉಚಿತವೂ ವಾಸ್ತವವೂ ಆದ ಸತ್ಯ. ಇದನ್ನು ವಿವಾದವಿಲ್ಲದೆ ಎಲ್ಲರೂ ಒಪ್ಪಿದ್ದಾರೆ. ಆದರೆ ಇನ್ನೊಂದು ಮಹಾರೂಪಕವಾದ ಅನುಭವ ಮಂಟಪದ ಬಗ್ಗೆ ಹಲವರು ಅಪಸ್ವರ ಎತ್ತಿದ್ದಾರೆ.

ಅನುಭವ ಮಂಟಪವೆಂಬುದು ಇರಲೇ ಇಲ್ಲ. ಅದು ಚಳವಳಿ ನಡೆದು ಎರಡು ಶತಮಾನ ಕಳೆದ ಮೇಲೆ ಕಲ್ಪಿಸಿದ ಒಂದು ಕಾಲ್ಪನಿಕ ಸಂಗತಿ ಎಂದು ವಾದಿಸುತ್ತಾರೆ. ಈ ವಾದಕ್ಕೆ ಹುರುಳಿಲ್ಲ ಕಾರಣ ಈ ದೇಶದಲ್ಲಿ ಹಲವು ವಿಚಾರಗಳಲ್ಲಿ ಚರಿತ್ರೆಯನ್ನು ತಿರುಚಲಾಗಿದೆ. ಇದ್ದದ್ದನ್ನು ಇಲ್ಲವೆನ್ನುವ ನಡೆದದ್ದಕ್ಕೆ ಅಪವ್ಯಾಖ್ಯೆ ನೀಡುವ ಅನರ್ಥಕಾರಿ ಪಂಡಿತ ಮಾನ್ಯರು ವರ್ಣಹಿತಸಾಧಕರು. ಇಂಥವರ ವಾದ ಸರಣಿಯಲ್ಲಿ ವಿವಾದಕ್ಕೆ ಒಳಗಾದ ಒಂದು ವಾಸ್ತವ ಸಂಗತಿ ಅನುಭವ ಮಂಟಪ.

ಬಾಹ್ಯ ಪ್ರಮಾಣುವಿಗಿಂತ ಅಂತಃ ಪ್ರಮಾಣವನ್ನೇ ನಿರುಕಿಸುವ ಮನಸ್ಸುಗಳಿಗೆ ವಚನ ಸಾಹಿತ್ಯದ ಬಹುತೇಕ ರಚನೆಗಳು ಅನುಭವ ಮಂಟಪದ ಜಿಜ್ಞಾಸೆಯ ಫಲರೂಪಗಳೆಂಬುದು ಅಂಗೈನೆಲ್ಲಿಯಷ್ಟು ಸತ್ಯ. ಒಬ್ಬರ ಪ್ರಶ್ನೆಗೆ ಮತ್ತೊಬ್ಬರ ಉತ್ತರವೆಂಬಂತೆ ಕೆಲವು ವಚನಗಳು ರಚನೆಗೊಂಡಿವೆ ; ಪ್ರಶ್ನೆ ಪ್ರತಿ ಪ್ರಶ್ನೆಗಳ ಉತ್ತರ ಪ್ರತ್ಯುತ್ತರಗಳ ಒಳ ಸುಳಿಗಳಲ್ಲಿ ನಡೆದ  ಸಾಮುದಾಯಿಕ ಮಹಾಜಿಜ್ಞಾಸೆಗಳಾಗಿ ಎದುರುನಿಲ್ಲುತ್ತವೆ.

ಇದರ ಪರಿಣಾಮದ ಪುನಾರಚನೆ ಎಂಬಂತೆ ಶೂನ್ಯಸಂಪಾದನೆಗಳು ರೂಪುಗೊಂಡಿವೆ. ಇಡೀ ವಚನ ಭಂಡಾರವನ್ನು ಸೂಕ್ಷ್ಮವಾಗಿ ಓದುತ್ತಾ ಹೋದರೆ ಅದೊಂದು ಮಹಾಯಾನ; ಹನಿ ಹಳ್ಳ ತೊರೆಗೂಡಿ ಹರಿದ ಮಹಾನದಿಯ ಯಾನ.  ಒಂದೆಡೆ ಸಂಘಟಿತವಾಗದೆ ಚರ್ಚಿಸದೆ ಯಾವ ಚಳವಳಿಯೂ ರೂಪುರೇಷೆಗಳನ್ನು ಪಡೆಯುವುದಿಲ್ಲ. ಇಂಥ ಸಂಘಟಿತ ಸಮಾವೇಶದ ಮೂರ್ತರೂಪವೇ ಅನುಭವ ಮಂಟಪ. ಈ ಅನುಭವ ಮಂಟಪದ ಆಯಸ್ಕಾಂತ ಸೆಳೆತಕ್ಕೆ ಒಳಗಾಗದೆ ಇರುವ ಶರಣರಿಲ್ಲ ಎಂಬಷ್ಟರ ಪರಿವ್ಯಾಪ್ತಿಯಲ್ಲಿ ಅದರ ಕ್ರಿಯಾಚಲನೆ ಹರಿದಿದೆ.

ದೇಶದ ಮೂಲೆ ಮೂಲೆಗಳಿಂದ ಇದರ ಕಕ್ಷೆಗೆ ಬಂದು ಸೇರಿದವರಿದ್ದಾರೆ. ಕಾಶ್ಮೀರದ ಅರಸ ತನ್ನ ಪತ್ನಿಯೊಡಗೂಡಿ ಅರಸೊತ್ತಿಗೆಯನ್ನು ತೊರೆದು ಕಲ್ಯಾಣಕ್ಕೆ ಬಂದ. ಕಟ್ಟಿಗೆ ಕಾಯಕದಲ್ಲಿ ತೊಡಗಿ ಜಂಗಮ ದಾಸೋಹಕ್ಕೆ ತೊಡಗಿದ. ಆ ದಂಪತಿಗಳು ಮೋಳಿಗೆ ಮಾರಯ್ಯ ಮಹದೇವಮ್ಮನೆಂದು ಹೆಸರಾಗಿದ್ದಾರೆ. ಸೌರಾಷ್ಟ್ರದ ವರ್ತಕ ಆದಯ್ಯ, ಆಂಧ್ರದಿಂದ ಮೈದುನ ರಾಮಯ್ಯ ಕುಂತಳದಿಂದ ಏಕಾಂತದರಾಮಯ್ಯ ಕಳಿಂಗದಿಂದ ಮರುಳಶಂಕರದೇವ ಹೀಗೆ ಈ ಪಟ್ಟಿ ಬೆಳೆಯುತ್ತದೆ.

ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗ ವರ್ಣ ಮೂಲದ ಶರಣರೂ ಕಲೆತು ಸರ್ವ ಭೇದಗಳನ್ನು ಕಿತ್ತೊಗೆದು ಶಿವಾನುಭವ ಸಹಪಂಕ್ತಿ ಭೋಜನ ನಡೆಸುತ್ತಿದ್ದರು. ಅನುಭವ ಮಂಟಪದ ಮಧ್ಯದಲ್ಲಿ ಶೂನ್ಯ ಸಿಂಹಾಸನ. ಇದು ಅಧ್ಯಕ್ಷರ ಗದ್ದುಗೆ, ಈ ಸಿಂಹಾಸನವನ್ನೇರಲು ಆರು ಮೆಟ್ಟಿಲುಗಳು. ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗ ಶರಣ ಐಕ್ಯ ಈ ಷಟ್ಸಲ್ಥಗಳನ್ನು ಸಂಕೇತಿಸುವ ಪಾವಟಿಕೆಗಳಿವು.

ಶೂನ್ಯ ಸಿಂಹಾಸನದ ಮೊದಲ ಅಧ್ಯಕ್ಷ ಅಲ್ಲಮಪ್ರಭು; ಐಕ್ಯ ಸ್ಥಲದ ಅನುಭವವನ್ನು ಪಡೆದಿದ್ದ ಅನುಭಾವಿ. ಕರ್ಮವಾದದ ಬೇರುಗಳನ್ನು ಕಿತ್ತು ಹೊಸ ಸಮಾನತೆಯ ಹೊಸ ದಾರಿಯಲ್ಲಿ ನಡೆಯುವುದು ಇಷ್ಟಲಿಂಗ ಪೂಜೆ, ವಿಚಾರ ಸ್ವಾತಂತ್ರ್ಯ ಆಚಾರಸ್ವಾತಂತ್ರ್ಯಗಳ ತಳಹದಿಯಲ್ಲಿ ವ್ಯಕ್ತಿಗೌರವವನ್ನು ಕಾಪಾಡುವುದು ಕಾಯಕ ದಾಸೋಹಗಳ ನೆಲೆಯಲ್ಲಿ ನಡೆನುಡಿ ಶುದ್ಧ ಬದುಕು ಕಟ್ಟುವುದು ಇತ್ಯಾದಿ ಪ್ರಗತಿಪರಕಾರ್ಯಗಳಲ್ಲಿ ಅನುಭವ ಮಂಟಪ ಕ್ರಿಯಾಶೀಲವಾಗಿತ್ತು.

ಶಿವಾನುಭವವೆಂದರೆ ಇಹಲೋಕ ದೂರ ಪರಲೋಕ ಪರವಾದ ಚಿಂತನೆಯಲ್ಲ ಮತ್ರ್ಯದ ಬಾಳುವೆಯನ್ನು ಕರ್ತಾರನ ಕಮ್ಮಟವಾಗಿಸುವ ಅನುಭಾವಿಕ ನಡೆ, ಇದು ಅನುಭವ ಮಂಟಪದ ಆಶಯ. ಇದು ನುಡಿವಳಿಕೆ ನಡವಳಿಕೆಯಾಗಬೇಕಾದ ಅರಿವಿನ ದಾರಿ ತೋರಿದ ನಿಜವಾದ ಅರಿವಿನ ಮನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)