ಶುಕ್ರವಾರ, ಏಪ್ರಿಲ್ 16, 2021
31 °C

ಅಪಘಾತ: ನಗರಸಭೆ ಆಯುಕ್ತನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ನಗರಸಭೆ ಆಯುಕ್ತ ಎಸ್.ಪಿ ದೇವರಾಜ್(47) ಅವರು ಸೋಮವಾರ ಮುಂಜಾನೆ ಚಿತ್ರದುರ್ಗ ಹತ್ತಿರ ಹಿರಿಯೂರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.2ನೇ ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಮೈಸೂರಿಗೆ ತೆರಳಿದ್ದರು. ರಜೆ ಮುಗಿದ ಬಳಿಕ ಟಾಟಾ ಮಾಂಜಾ ಕಾರ್‌ನಲ್ಲಿ ತಮ್ಮ ಗೆಳೆಯ ಗಂಗಾಧರ ಅವರೊಂದಿಗೆ ರಾಯಚೂರಿಗೆ ಬರುತ್ತಿದ್ದರು. ಸೋಮವಾರ ಬೆಳಿಗ್ಗೆ 6 ಗಂಟೆ ಹೊತ್ತಿಗೆ ಹಿರಿಯೂರು ಸಮೀಪ ರಸ್ತೆಯ ತಿರುವಿನಲ್ಲಿ ಕಾರ್ ಹಠಾತ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ದೇವರಾಜ್ ಅವರು ಕೆಲ ಕ್ಷಣದಲ್ಲಿ ಸಾವನ್ನಪ್ಪಿದರು ಎಂದು ತಿಳಿದಿದೆ. ಕಾರ್ ಚಾಲಕ ರಮೇಶ ಹಾಗೂ ಗಂಗಾಧರ ಅವರು ಗಾಯಗೊಂಡಿದ್ದಾರೆ. ಕಾರ್ ಚಾಲಕ ರಮೇಶ ರಾಯಚೂರಿನವರು.ದೇವರಾಜ್ ಮೂಲತಃ ಹೊಳೆನರಸೀಪುರದವರು. ಅವರಿಗೆ  ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಿ ಇದ್ದಾರೆ.ನಗರಸಭೆ ಸಂತಾಪ: ರಸ್ತೆ ಅಪಘಾತದಲ್ಲಿ ದೇವರಾಜ್ ಅವರ ಸಾವಿನ ಸುದ್ದಿ ತಿಳಿದ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಹಾಗೂ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಂತಾಪ ಸಭೆ ನಡೆಸಿ ಕಂಬನಿ ಮಿಡಿದರು. ದೇವರಾಜ್ ಅವರ ಕಾರ್ಯಶೈಲಿ, ಸರಳ ವ್ಯಕ್ತಿತ್ವವನ್ನು ಸ್ಮರಿಸಿದರು. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.ಅಧಿಕಾರ ಸ್ವೀಕಾರ: ರಾಯಚೂರು ನಗರಸಭೆ ಆಯುಕ್ತರಾಗಿ ದೇವರಾಜ್ ಅವರು ಮೇ 3ರಂದು ಅಧಿಕಾರವಹಿಸಿಕೊಂಡಿದ್ದರು. ಅಧಿಕಾರವಹಿಸಿಕೊಂಡು ಕೆಲವೇ ದಿನಗಳಲ್ಲಿ ರಸ್ತೆ ದುರಸ್ತಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಭಿವೃದ್ಧಿ ಕಾರ್ಯ ಚಟುವಟಿಕೆ ಚುರುಕುಗೊಳಿಸಲು ಆಸಕ್ತಿವಹಿಸಿದ್ದರು. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಕಳಕಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರು.ಹಿಂದಿನ ಆಯುಕ್ತ ಎಂ ತಿಪ್ಪೇಶ ಅವರು ವರ್ಗಾವಣೆಗೊಂಡ ಬಳಿಕ ಹಲವು ತಿಂಗಳು ಕಾಲ ನಗರಸಭೆಗೆ ಆಯುಕ್ತರು ಬಂದಿರಲಿಲ್ಲ. ಸಸ್ಪೆಂಡ್ ಆಗಿದ್ದ ಕೆಲ ಅಧಿಕಾರಿಗಳೂ ರಾಯಚೂರು ನಗರಸಭೆ ಆಯುಕ್ತ ಹುದ್ದೆಗೆ ಬರಲು ಹಿಂದೇಟು ಹಾಕಿದ್ದರೆನ್ನಲಾಗಿದೆ. ಈ ಸ್ಥಿತಿಯಲ್ಲಿ ದೇವರಾಜ್ ಅವರು ರಾಯಚೂರು ನಗರಸಭೆ ಆಯುಕ್ತ ಹುದ್ದೆ ವಹಿಸಿಕೊಂಡಿದ್ದರು. ಅವರ ಕಾರ್ಯ ಶ್ರದ್ದೆ ಸದಾ ಮಾದರಿ ಎಂದು ನಗರಸಭೆ ಅಧಿಕಾರಿಗಳು ಸ್ಮರಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.