ಗುರುವಾರ , ಜೂನ್ 17, 2021
23 °C

ಅಪರಾಧ ಪ್ರಕರಣದ ಮಾಹಿತಿ ಹಂಚಿಕೆ: ಭಾರತ- ಮಲೇಷ್ಯಾ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂದಿಸುವುದು, ತನಿಖೆಗೆ ಒಳಪಡಿಸುವುದು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ನೀಡುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಮಲೇಷ್ಯಾ ಸಹಿ ಹಾಕಿದ್ದು, ಅಂತರರಾಷ್ಟ್ರೀಯ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಮೈಲುಗಲ್ಲಾಗಿದೆ ಎಂದು ಮಲೇಷ್ಯಾ ಹೇಳಿದೆ.

ನಾಲ್ಕು ವರ್ಷಗಳ ಸತತ ಚರ್ಚೆಯ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ಸಾಗಣೆ, ಕಾರ್ಮಿಕರ ಕಳ್ಳ ಸಾಗಣೆ, ಭಯೋತ್ಪಾದನೆಯಂತಹ ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ದಿಸೆಯಲ್ಲಿ ಈ ಒಪ್ಪಂದ ನೆರವಾಗಲಿದೆ ಎನ್ನಲಾಗಿದೆ.

ಭಾರತದ ವಿದೇಶಾಂಗ ವ್ಯವಹಾರ ಕಾರ್ಯದರ್ಶಿ (ಪೂರ್ವ) ಸಂಜಯ್ ಸಿಂಗ್ ಹಾಗೂ ಮಲೇಷ್ಯಾದ ಅಟಾರ್ನಿ ಜನರಲ್ ಅಬ್ದುಲ್ ಗನಿ ಪಟೇಲ್ ಉಭಯ ದೇಶಗಳ ಪರವಾಗಿ ಒಪ್ಪಂದಕ್ಕೆ ಅಂಕಿತ ಹಾಕಿದರು.

ಈ ಒಪ್ಪಂದದ ಅನ್ವಯ ಎರಡೂ ದೇಶಗಳು ಅಪರಾಧಗಳ ತನಿಖೆಯ ವಿವರ ಹಂಚಿಕೊಳ್ಳಲಿವೆ. ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಸಾಕ್ಷ್ಯ ತೆಗೆದುಕೊಳ್ಳುವುದು, ನಿರ್ದಿಷ್ಟ ಅಪರಾಧ ನಡೆದಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆ ಪಡೆಯುವುದು, ದಾಖಲೆ ಪತ್ರ, ವಸ್ತುಗಳನ್ನು ವಶಕ್ಕೆ ಪಡೆಯುವುದು ಇತ್ಯಾದಿ ಈ ಒಪ್ಪಂದದ ವ್ಯಾಪ್ತಿಗೆ ಬರುತ್ತದೆ.

ಯಾವುದೇ ಒಂದು ದೇಶದ ಅಧಿಕಾರಿಗಳು ನಿರ್ದಿಷ್ಟ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ದೇಶದಲ್ಲಿ ತನಿಖೆ ನಡೆಸುತ್ತಿರುವಾಗ ಅವರ ನೆರವಿಗೆ ಅಧಿಕಾರಿಯೊಬ್ಬರನ್ನು ನೇಮಿಸುವ ಪ್ರಸ್ತಾಪವೂ ಈ ಒಪ್ಪಂದದಲ್ಲಿ ಇದೆ. ಈ ಹಿಂದೆ ಅನೌಪಚಾರಿಕವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ಉಭಯ ದೇಶಗಳ ತನಿಖಾ ಸಂಸ್ಥೆಗಳು ಈಗ ಅಧಿಕೃತವಾಗಿ ಮಾಹಿತಿಗಳನ್ನು ಹಂಚಿಕೊಳ್ಳಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.