ಶುಕ್ರವಾರ, ಜೂನ್ 25, 2021
30 °C

ಅಪಹೃತ ಮಗು ಪತ್ತೆ: ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಯಪ್ಪನಹಳ್ಳಿಯ ನಾಗವಾರ­ಪಾಳ್ಯ­ದಿಂದ ಬುಧವಾರ (ಮಾ.19) ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ರುದ್ರಸೋಮಚಾರಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ನಾಗವಾರಪಾಳ್ಯ ನಿವಾಸಿಗಳಾದ ರತ್ನ ಮತ್ತು ಕುಮಾರ್ ಎಂಬುವರ ಮಗ ಅಕ್ಷಯ್‌ನನ್ನು ಅಪ­ಹರಿಸಿದ್ದ ಆರೋಪಿ, ಕನಕಪುರ ನಿವಾಸಿ ರುದ್ರಸೋಮಚಾರಿ, ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹಿರಿಯ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆಯ ಆರೋಪದ ಮೇಲೆ 14ವರ್ಷಗಳ ಹಿಂದೆ ಆತ ಇಲಾಖೆ­ಯಿಂದ ಅಮಾನತಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.ರಘುವನಹಳ್ಳಿ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ರಾಮಚಂದ್ರ ಎಂಬುವರಿಗೆ ಮಕ್ಕಳಿರಲಿಲ್ಲ. ಅವರಿಗೆ ಅನಾಥ ಮಗುವೊಂದನ್ನು ತಂದುಕೊಡುವುದಾಗಿ ನಂಬಿಸಿದ್ದ ಆರೋಪಿ ಅವರಿಂದ ಮುಂಗಡ ₨ 2 ಸಾವಿರ ಹಣ ಪಡೆದಿದ್ದ. ಮಾ.18ರಂದು ನಾಗವಾರಪಾಳ್ಯ ಅಂಗನ­ವಾಡಿ ಬಳಿ ಬಂದಿದ್ದ ಆರೋಪಿ, ಮಗುವಿನ ಅಪಹ­ರಣಕ್ಕೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬುಧವಾರ ಬೆಳಿಗ್ಗೆ ಅಂಗನವಾಡಿಯ ಬಳಿ ಬಂದಿರುವ ಆರೋಪಿ ಚಾಕೊಲೇಟ್‌ ಕೊಡಿಸುವ ಆಸೆ ತೋರಿಸಿ ಮಗುವನ್ನು ಅಪಹರಿಸಿದ್ದ. ಮಗು ಅಂಗನ­ವಾಡಿ­ಯಿಂದ ಕಾಣೆಯಾಗಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ಪೋಷಕ­ರಿಗೆ ವಿಷಯ ತಿಳಿಸಿದ್ದಾರೆ. ಮಗು ಕಾಣೆ­ಯಾಗಿ­ರುವ ಬಗ್ಗೆ  ಪೋಷಕರು ಠಾಣೆಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ಕೂಡಲೆ ಎರಡು ವಿಶೇಷ ತಂಡಗಳನ್ನು ರಚಿಸಲಾಯಿತು. ಅಂಗನವಾಡಿ ಸಿಬ್ಬಂದಿ­ಯನ್ನು ವಿಚಾರಣೆ ನಡೆಸಿದಾಗ ಮಾ.18ರಂದು ಆರೋಪಿ ಬಹಳ ಹೊತ್ತು ಅಂಗನ­ವಾಡಿ ಬಳಿ ಸುತ್ತಾಡಿ­ದ್ದಾಗಿ ತಿಳಿಸಿದರು. ಆರೋಪಿ ಚಹರೆಯ ಮಾಹಿತಿ ಪಡೆದು ಪತ್ತೆ ಕಾರ್ಯ ನಡೆಸಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿಯು ಇತ್ತೀಚೆಗೆ ಬೈಯಪ್ಪನಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಯಿತು. ಆ ಶಾಲೆಯಲ್ಲಿ ವಿಚಾರಿಸಿದಾಗ ಆರೋಪಿಯು ಕೆಲಸಕ್ಕೆ ಸೇರುವ ವೇಳೆ ಕೊಟ್ಟಿದ್ದ ಪರಿಚಯ ಪತ್ರ ಸಿಕ್ಕಿತು. ಅದರಲ್ಲಿ ನಮೂದಿಸಿದ್ದ ಮೊಬೈಲ್‌ ಸಂಖ್ಯೆಯ ಕರೆಗಳ ಮಾಹಿತಿ ಸಂಗ್ರಹಿಸಲಾಯಿತು. ಆ ವೇಳೆ ಆರೋಪಿ ಕನಕಪುರದ ಬಳಿ ಇರುವುದು ಗೊತ್ತಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆತ­ನನ್ನು ಬಂಧಿಸಲಾಯಿತು. ಬಳಿಕ ರಘುವನಹಳ್ಳಿಯ ರಾಮ­­ಚಂದ್ರ ಅವರ ಬಳಿಯಿದ್ದ ಮಗುವನ್ನು ವಶಕ್ಕೆ ಪಡೆ­ಯ­­ಲಾಯಿತು. ಮಗುವಿನ ಪೋಷಕರು ಅಪಘಾತ­ದಲ್ಲಿ ಸಾವ­ನ್ನಪ್ಪಿ­ರುವುದಾಗಿ ಹೇಳಿ ಆರೋಪಿ ಮಗು­ವನ್ನು ಮಾರಾಟ ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.