ಬುಧವಾರ, ಮೇ 12, 2021
18 °C

ಅಪ್ಪಳಿಸಲಿದೆ ನಿಷ್ಕ್ರಿಯ ಉಪಗ್ರಹ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಹವಾಮಾನ ಸಂಬಂಧಿ ಅಧ್ಯಯನ ಉದ್ದೇಶದಿಂದ 20 ವರ್ಷಗಳ ಹಿಂದೆ ಅಂತರಿಕ್ಷಕ್ಕೆ ಚಿಮ್ಮಿದ್ದ, ಆದರೆ ಈಗ ನಿಷ್ಕ್ರಿಯವಾಗಿ ಭೂಮಿಯನ್ನು ಭ್ರಮಿಸುತ್ತಿರುವ ಆರೂವರೆ ಟನ್ ತೂಕದ ಕೃತಕ ಉಪಗ್ರಹವೊಂದು ಸೆ.23ರಂದು ಭೂಮಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ.ಬಸ್ ಗಾತ್ರದ ಈ ಉಪಗ್ರಹ ಸೆ.23ಕ್ಕಿಂತ ಒಂದು ದಿನ ಮುಂಚೆ ಅಥವಾ ಒಂದು ದಿನ ನಂತರವೂ ಧರೆಗೆ ಬಡಿಯಬಹುದು. ಇದರ ಅವಶೇಷಗಳು ಯಾವುದೇ ವ್ಯಕ್ತಿಯನ್ನು ಅಪ್ಪಳಿಸುವ ಸಂಭವ 3200ರಲ್ಲಿ ಒಂದು ಅಂಶದಷ್ಟು ಮಾತ್ರ ಎಂದು  ನಾಸಾ ತಜ್ಞರು ಅಂದಾಜಿಸಿದ್ದಾರೆ.ಭೂ ವಾತಾವರಣ ಪ್ರವೇಶಿಸುವ ಸಂದರ್ಭದಲ್ಲಿ ಉಂಟಾಗುವ ಅಪಾರ ತಾಪಮಾನವನ್ನು ತಾಳಿದ ನಂತರ ಈ ಉಪಗ್ರಹ ಕನಿಷ್ಠ 26 ದೊಡ್ಡ ತುಣುಕುಗಳಾಗಿ ಭೂಮಿಯನ್ನು ಅಪ್ಪಳಿಸಬಹುದು. ಆದರೆ ಅವಶೇಷಗಳು ಎಲ್ಲಿ ಬೀಳುತ್ತವೆ ಎಂಬುದನ್ನು ನಿಖರವಾಗಿ ಊಹಿಸಲು ಆಗದು. ಉತ್ತರ ಕೆನಡಾದ ತುತ್ತ ತುದಿಯಿಂದ ಹಿಡಿದು ದಕ್ಷಿಣ ಅಮೆರಿಕದ ಬುಡದವರೆಗೆ ಹರಡಿಕೊಂಡಿರುವ ವಿಶಾಲ ಭೂಪ್ರದೇಶದಲ್ಲಿ ಎಲ್ಲಾದರೂ ಬೀಳಬಹುದು.ಭೂಮಿಯ 75ರಷ್ಟು ಪ್ರದೇಶದಲ್ಲಿ ಸಾಗರ ಜಲರಾಶಿಯೇ ವ್ಯಾಪಿಸಿರುವುದರಿಂದ ಉಪಗ್ರಹದ ಭಗ್ನಾವಶೇಷಗಳು ಸಮುದ್ರದ ಮೇಲೆ ಅಥವಾ ಜನವಸತಿಯಿಲ್ಲದ ಪ್ರದೇಶದಲ್ಲಿ ಬೀಳುವ ಸಾಧ್ಯತೆಯೇ ಹೆಚ್ಚು ಎಂಬುದು ತಜ್ಞ ವಿಕ್ಟೋರಿಯಾ ಸ್ಯಾಮ್ಸನ್ ಲೆಕ್ಕಾಚಾರ.ಒಂದೊಮ್ಮೆ ಜನವಸತಿ ಪ್ರದೇಶದಲ್ಲಿ ತುಣುಕುಗಳು ಬಿದ್ದರೆ ಕಣ್ಣು ಕೋರೈಸುವ ಬೆಳಕಿನ ಚಿತ್ತಾರ ಕಾಣಿಸಲಿದೆ ಎಂದೂ ಹೇಳಲಾಗಿದೆ. 35 ಅಡಿ ಉದ್ದ, 15 ಅಡಿ ಅಗಲದ ಈ ಉಪಗ್ರಹ ಕಳೆದ ಭಾನುವಾರ ಭೂಮಿಯಿಂದ 240 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿತ್ತು. ಓಜೋನ್ ಪದರ, ಭೂ ವಾತಾವರಣದ ಮೇಲುಸ್ತರದ ಅಧ್ಯಯನ ನಡೆಸುವ ಉದ್ದೇಶದಿಂದ 75 ಕೋಟಿ ಡಾಲರ್ ವೆಚ್ಚದಲ್ಲಿ 1991ರಲ್ಲಿ ಇದನ್ನು ಉಡಾಯಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.