ಭಾನುವಾರ, ಮಾರ್ಚ್ 7, 2021
28 °C

ಅಪ್ಪ–ಮಗಳ ‘ಪುಷ್ಪಕ ವಿಮಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪ–ಮಗಳ ‘ಪುಷ್ಪಕ ವಿಮಾನ’

ಮತ್ತೊಂದು ‘ಪುಷ್ಪಕ ವಿಮಾನ’ವನ್ನು ಸ್ವಾಗತಿಸಲು ‘ಚಂದನವನ' ಸಿದ್ಧವಾಗಿದೆ. 1987ರಲ್ಲಿ ಕಮಲಹಾಸನ್ ಅಭಿನಯದ ಮೂಕಿ ಚಿತ್ರ ‘ಪುಷ್ಪಕ ವಿಮಾನ’ ಅಪಾರ ಜನಪ್ರಿಯತೆ ಗಳಿಸಿತ್ತು. ಈಗ ಮತ್ತೆ ಅದೇ ಹೆಸರಿನಲ್ಲಿ ಹೊಸತೊಂದು ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ ಹಳೆಯ ‘ಪುಷ್ಪಕ ವಿಮಾನ’ಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ.ಕಿರುತೆರೆ ನಿರ್ದೇಶಕ ಎಸ್. ರವೀಂದ್ರನಾಥ್ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ನಿರ್ದೇಶನಕ್ಕೆ ಕೈ ಹಾಕಿರುವ ಚಿತ್ರವಿದು. ಕೆಲವು ದಿನಗಳ ಹಿಂದಷ್ಟೇ ಮುಹೂರ್ತ ನಡೆಸಿರುವ ಚಿತ್ರತಂಡ ಇದೀಗ ಹತ್ತು ದಿನಗಳ ಚಿತ್ರೀಕರಣ ಪೂರೈಸಿ, ಮಾಧ್ಯಮದ ಎದುರು ಹಾಜರಾಗಿತ್ತು– ಟ್ರೈಲರ್‌ನೊಂದಿಗೆ.ಅಪ್ಪ ಮಗಳ ನಡುವಿನ ಬಾಂಧವ್ಯವನ್ನು ಹೇಳುವ ಕಥೆ ‘ಪುಷ್ಪಕ ವಿಮಾನ’ ಚಿತ್ರದ್ದು. ಇವರಿಬ್ಬರ ಬದುಕಿನ ಪ್ರಯಾಣದಲ್ಲಿ ಹಲವು ಪಾತ್ರಗಳು ಎಡತಾಕುವ ಸನ್ನಿವೇಶಗಳಿಗೆ ಹಾಸ್ಯದ ಸ್ಪರ್ಶ ನೀಡಲಾಗಿದ್ದು, ಭಾವುಕ ಸನ್ನಿವೇಶಗಳೂ ಇವೆ. ರಮೇಶ್ ಅರವಿಂದ್ ಮತ್ತು ಪುಟ್ಟ ಮಗು ಯುವಿನಾ ಕಾಣಿಸಿಕೊಂಡ ಟ್ರೈಲರ್ ಕುತೂಹಲ ಹುಟ್ಟಿಸುವಂತಿದೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣದ ದೃಷ್ಟಿಯಿಂದಲೂ ಗಮನ ಸೆಳೆಯುವ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.‘ಕಥೆ ಮಾಡುವಾಗ ಈ ಪಾತ್ರಕ್ಕೆ ರಮೇಶ್ ಅರವಿಂದ್ ಅವರೇ ಸೂಕ್ತ ಎನಿಸಿತ್ತು. ರಮೇಶ್ ಒಪ್ಪುತ್ತಾರೆಯೇ ಎಂಬ ಅನುಮಾನವೂ ಇತ್ತು. ಆದರೆ ಕಥೆ ಕೇಳಿದಾಕ್ಷಣ ಅವರು ಖುಷಿಯಿಂದ ಒಪ್ಪಿಕೊಂಡರು’ ಎನ್ನುತ್ತಾರೆ ನಿರ್ದೇಶಕ ರವೀಂದ್ರನಾಥ್. ನಾಯಕನಿಗೆ ವಿಮಾನಗಳೆಂದರೆ ತುಂಬ ಇಷ್ಟ. ಅದಕ್ಕಾಗೇ ಚಿತ್ರಕ್ಕೆ ಈ ಹೆಸರು ಇಟ್ಟಿರುವುದು ಎಂಬುದು ಅವರ ವಿಶ್ಲೇಷಣೆ. ‘ಈ ಚಿತ್ರವನ್ನು ಎಲ್ಲ ಅಪ್ಪಂದಿರಿಗೆ ಸಮರ್ಪಿಸುತ್ತೇವೆ’ ಎಂದರು ರಮೇಶ್.ಪವನ್ ಒಡೆಯರ್, ಸುಕೃತ್ ದೇವೇಂದ್ರ, ದೀಪಕ್ ಕಿಶೋರ್, ವಿಖ್ಯಾತ್ ಮತ್ತು ಪಿಆರ್‌ಒ ದೀಪಕ್ ಕೃಷ್ಣ ಚಿತ್ರಕ್ಕೆ ಬಂಡವಾಳ ಹೊಂದಿಸಿದ್ದಾರೆ. ‘ವಿಶೇಷ ನಿರೂಪಣಾ ಶೈಲಿ ಚಿತ್ರಕ್ಕಿದ್ದು, ತೆರೆಯ ಮೇಲೆ ಹಬ್ಬವೇ ಸೃಷ್ಟಿಯಾಗಲಿದೆ’ ಎಂದರು ಪವನ್ ಒಡೆಯರ್. ‘ಖಂಡಿತವಾಗಿಯೂ ಸಿನಿಮಾ ಪ್ರೇಕ್ಷಕನ ಕಣ್ಣಲ್ಲಿ ನೀರು ತರಿಸುತ್ತದೆ’ ಎಂಬುದು ದೇವೇಂದ್ರ ರೆಡ್ಡಿ ಅಭಿಪ್ರಾಯ. ಹಲವು ಪಾತ್ರಗಳಿಗೆ ಇನ್ನಷ್ಟೇ ತಾರಾಗಣ ಆಯ್ಕೆಯಾಗಬೇಕಿದೆ. ಭುವನ್ ಗೌಡ ಛಾಯಾಗ್ರಹಣ, ಗುರುಪ್ರಸಾದ್ ಸಂಭಾಷಣೆ, ವಿಖ್ಯಾತ್ ಕಥೆ ಚಿತ್ರಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.