ಸೋಮವಾರ, ಜನವರಿ 20, 2020
21 °C

ಅಬಲವಾಡಿ ಮರ್ಯಾದಾ ಹತ್ಯೆ ಪ್ರಕರಣ :ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಅಬಲವಾಡಿಯಲ್ಲಿ ನಡೆದಿದೆ ಎನ್ನಲಾದ ಮರ್ಯಾದಾ ಹತ್ಯೆ ಪ್ರಕರಣದ ಸತ್ಯಾ ಸತ್ಯತೆ ಅರಿಯಲು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿ ದಲಿತ ಸಂಘರ್ಷ ಸಮಿತಿ ಸಮನ್ವಯ ವೇದಿಕೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು.ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಮೌನ ಜಾಥಾದಲ್ಲಿ ತೆರಳಿದ ಪ್ರತಿಭಟನಕಾರರು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿದ್ದರು.ಸುವರ್ಣಾ ಹತ್ಯೆ ಬಗೆಗಿನ ಒಟ್ಟಾರೆ ಘಟನೆ ಕುರಿತು ಪೊಲೀಸರ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲದೇ ಇರುವುದು ಖಂಡನೀಯ. ಪೊಲೀಸರು ತನಿಖೆ ಚುರುಕುಗೊಳಿಸಿದೆ, ಮೌನವಾಗಿರುವುದು ಶಂಕಾಸ್ಪದವಾಗಿದೆ ಎಂದು ಟೀಕಿಸಿದರು.ತನಿಖೆಯ ಪ್ರಗತಿ ಗಮನಿಸಿದರೆ, ಪೊಲೀಸರೂ ರಾಜಕೀಯ ಒತ್ತಡಕ್ಕೆ ಮಣಿದಂತಿದೆ. ಹೀಗಾಗಿ, ಪ್ರಕರಣದ ಸತ್ಯಾಸತ್ಯತೆ ಮುಚ್ಚಿ ಹೋಗುವ ಸಾಧ್ಯತೆಯಿದ್ದು, ನ್ಯಾಯ ಸಿಗುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಾಹಿತಿ ಪ್ರೊ.ಎಚ್.ಎಲ್.ಕೇಶವಮೂರ್ತಿ, ದಲಿತ ಸಂಘರ್ಷ ಸಮಿತಿ ಸಮನ್ವಯ ವೇದಿಕೆಯ ಗುರುಪ್ರಸಾದ್ ಕೆರೆಗೋಡು, ಎಂ.ಬಿ.ಶ್ರೀನಿವಾಸ್, ವೆಂಕಟಗಿರಿಯಯ್ಯ, ಎಂ.ನಾಗರಾಜಯ್ಯ, ಎಂ.ವಿ.ಕೃಷ್ಣ, ಅನ್ನದಾನಿ ಇತರರು ಇದ್ದರು.

 

ಪ್ರತಿಕ್ರಿಯಿಸಿ (+)