ಗುರುವಾರ , ಮೇ 19, 2022
21 °C

ಅಬ್ಬಾ ನೇರಳೆ! ಅಬ್ಬಬ್ಬಾ ಬೆಲೆ!?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: `ಕಾಲಾ ಜಾಮೂನ್~ ಎಂದೇ ಗುರುತಿಸಲಾಗುವ ನೇರಳೆ ಹಣ್ಣು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಾಯಲ್ಲಿ ನೀರೂರಿಸುವ ಈ ಹಣ್ಣಿನ ಬೆಲೆ ಕೇಳಿಯೇ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ.

ಕಳೆದ ವರ್ಷ ಕೆ.ಜಿ.ಗೆ 100 ರೂಪಾಯಿ ಇದ್ದ ದಪ್ಪ ಹಾಗೂ ಸಿಹಿಯಾದ ನೇರಳೆ ಹಣ್ಣು ಈ ಬಾರಿ ಕೆ.ಜಿ.ಗೆ ರೂ. 200 ನಂತೆ ಮಾರಾಟ ಆಗುತ್ತಿದೆ. `ಚೌಕಾಶಿ~ ಮಾಡಿದರೂ ಬೆಲೆ 150ಗೆ ಕಡಿಮೆಯೇನಿಲ್ಲ.

ನಾಲ್ಕೈದು ದಿನಗಳಿಂದಷ್ಟೆ ನಗರದಲ್ಲಿ ನೇರಳೆ ಹಣ್ಣು ಕಾಣಿಸಿಕೊಳ್ಳಲಾರಂಭಿಸಿದೆ. ಸುಗ್ಗಿ ಈಗ ತಾನೆ ಶುರು ಆಗಿರುವುದರಿಂದ ಬೆಲೆ ಜಾಸ್ತಿ ಆಗಿದೆ. ಮಳೆಯ ಅಭಾವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಬೆಳೆಯದೇ ಇರುವುದು ಕೂಡ ಇದಕ್ಕೆ ಕಾರಣವಾಗಿದೆ ಎಂದು ತಿಳಿಸುತ್ತಾರೆ ವ್ಯಾಪಾರಿ ಮಹಮ್ಮದ್ ಪಾಶಾ.  

`ಕಾಲಾ ಜಾಮೂನ್~ ಎಂದೇ ಕರೆಯಲಾಗುವ ನೇರಳೆ ಔರಾದ್ ತಾಲ್ಲೂಕಿನ ವಿವಿಧ ಪ್ರದೇಶ, ಬೀದರ್ ತಾಲ್ಲೂಕಿನ ಜನವಾಡ ಮತ್ತಿತರ ಕಡೆಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ನೇರಳೆ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಪ್ರಿಯವಾದ ಹಣ್ಣು.

ಪ್ರತಿ ದಿನ ನೇರಳೆ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ನಿಯಂತ್ರಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಹಣ್ಣು ಖರೀದಿಸುತ್ತಾರೆ. ಗರ್ಭಿಣಿಯರಿಗೂ ನೇರಳೆ ಅಚ್ಚುಮೆಚ್ಚು ಎಂದು ನುಡಿಯುತ್ತಾರೆ.

ದಪ್ಪ ನೇರಳೆ ಹಣ್ಣು ಬಲು ರುಚಿಯಾಗಿರುತ್ತದೆ. ಉಪ್ಪಿನೊಂದಿಗೆ ಸೇವಿಸಿದರಂತೂ ಇದರ ರುಚಿ ಮತ್ತಷ್ಟು ಇಮ್ಮಡಿಯಾಗುತ್ತದೆ. ಈ ಹಣ್ಣನ್ನು ಮೂರು ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದಾಗಿದೆ ಎಂದು ಹೇಳುತ್ತಾರೆ.

ಬಾಳೆಗೂ ಬರದ ಬಿಸಿ: ಈ ಬಾರಿ ಬಾಳೆ ಹಣ್ಣಿಗೂ ಬರದ ಬಿಸಿ ತಟ್ಟಿದೆ. ಕಳೆದ ಮೂರು ತಿಂಗಳಿಂದ ಬಾಳೆ ನಗರದ ಮಾರುಕಟ್ಟೆಗೆ ಬಂದಿದ್ದು ಅತ್ಯಲ್ಪ. ಕಳೆದ ಒಂದು ವಾರದಿಂದ ವಿವಿಧೆಡೆಯಿಂದ ಬಾಳೆ ಹಣ್ಣು ಬರಲಾರಂಭಿಸಿದ್ದು, ಬೆಲೆ ಮಾತ್ರ ತುಟ್ಟಿ ಆಗಿದೆ.

ಕಳೆದ ವರ್ಷ ಡಜನ್‌ಗೆ ರೂ. 20 ಇದ್ದ ಬಾಳೆ ಹಣ್ಣು ಈಗ ರೂ. 30 ಆಗಿದೆ. 80 ರಿಂದ 100 ರೂಪಾಯಿಗೆ ಕೆ.ಜಿ. ಆಗಿದ್ದ ಸೇಬು ಹಣ್ಣಿನ ಬೆಲೆ 160 ರೂಪಾಯಿ ಆಗಿದೆ. ಸಮರ್ಪಕ ಮಳೆ ಆಗದಿರುವುದು, ಹಣ್ಣಿನ ಕೊರತೆಯೇ ಈ ರೀತಿ ಬೆಲೆ ಏರಿಕೆ ಆಗಲು ಕಾರಣವಾಗಿದೆ ಎಂದು ತಿಳಿಸುತ್ತಾರೆ ಮತ್ತೊಬ್ಬರು ವ್ಯಾಪಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.