ಸೋಮವಾರ, ಮೇ 25, 2020
27 °C

ಅಭಿವೃದ್ಧಿಯಲ್ಲಿ ಸಂಕುಚಿತ ಭಾವನೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: “ಅಭಿವೃದ್ಧಿಯ ಚಿಂತನೆಯನ್ನು ಕಾರ್ಯ ರೂಪಕ್ಕೆ ತರುವಾಗ ಕೆಲವೊಂದು ಬದಲಾವಣೆ ಆಗುತ್ತದೆ. ಅದನ್ನು ಸಂಕುಚಿತ ಮನೋಭಾವ ತೋರದೇ ಒಪ್ಪಿಕೊಳ್ಳಲು ಸಿದ್ಧರಿದ್ದಾಗ ಮಾತ್ರ ಅಭಿವೃದ್ಧಿ ಕಾರ್ಯಗತವಾಗಲು ಸಾಧ್ಯ” ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಮಂಚಿಕೇರಿಯ ಸಮಾಜ ಮಂದಿರದಲ್ಲಿ ಸೋಮವಾರ ನಡೆದ ‘ಉತ್ತರ ಕನ್ನಡ ಜಿಲ್ಲೆಯ ಅನನ್ಯತೆ ಮತ್ತು ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ ಜನರು ಅಧಿಕ ವರಮಾನದ ಹಿಂದೆ ಹೋಗಿ ಪರಂಪರೆಯ ಕೃಷಿಯನ್ನು ಕಡೆಗಣಿಸುತ್ತಿದ್ದಾರೆ. ನಗರ ಆಕರ್ಷಣೆ ಹೆಚ್ಚಾಗುತ್ತಿದೆ. ಹಣವನ್ನೇ ಆಧಾರವನ್ನಾಗಿಟ್ಟುಕೊಂಡು ಮಾಡಿದ ಅಭಿವೃದ್ಧಿ ನಾಡನ್ನು ಬೆಂಗಾಡಾಗಿಸುತ್ತದೆ. ಹಲವು ಯೋಜನೆಗಳಿಗೆ ಅವಕಾಶ ನೀಡಿದಾಗ ಹೊಸ ಗಾಳಿಯನ್ನು ನಾವು ಅನುಭವಿಸಲೇಬೇಕು. ಈಗಿನ ನಾಗಾಲೋಟದಲ್ಲಿ ಎಲ್ಲೋ ಒಂದೆಡೆ ದಾರಿ ತಪ್ಪುತ್ತದೆ ಎಂದು ಹೇಳಿದರು.ಇಲ್ಲಿನ ಸಂಪನ್ಮೂಲ ಬಳಸಿಕೊಂಡು ಹತ್ತು ಹಲವು ಯೋಚನೆಗಳನ್ನು ಮಾಡಿದಾಗ ಅವುಗಳಲ್ಲಿ ಕೆಲವು ಯೋಜನೆಯಾಗಿ ರೂಪುಗೊಳ್ಳುತ್ತದೆ. ಕಲ್ಪನೆಯನ್ನು ಕೃತಿಯ ರೂಪಕ್ಕೆ ಇಳಿಸುವುದು ಕಷ್ಟಕರ. ಇಷ್ಟು ದಿನ ಐಟಿ- ಬಿಟಿಗಳು ಜಗತ್ತನ್ನಾಳಿದವು. ಮುಂದೊಂದು ದಿನ ‘ನ್ಯಾನೋ’ ತಂತ್ರಜ್ಞಾನ ಜಗತ್ತನ್ನಾಳಲಿದೆ. ವಿಜ್ಞಾನ ಜನರಿಗೆ ತಂತ್ರಜ್ಞಾನ ನೀಡಿದರೂ, ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅಭಿವೃದ್ಧಿ ನಿಂತಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.ಚಿಂತನೆಯಲ್ಲಿ ಭಾಗವಹಿಸಿದ ಸಂಪಲ್ಮೂನ ವ್ಯಕ್ತಿ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಆತಿಥ್ಯ, ಆರೋಗ್ಯ ಕೇಂದ್ರ , ಉನ್ನತ ಶಿಕ್ಷಣ, ತೋಟಗಾರಿಕೆ ಮತ್ತು ಸಂತಸದ ಪ್ರದೇಶವಾಗಿ ನಿರ್ಮಾಣ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಬೇಕಿದೆ. ಮೂಲ ಸೌಕರ್ಯವನ್ನು ಉಳಿಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುವ ಕುರಿತು ನಾವು ಯೋಚಿಸಬೇಕಿದೆ.ಬದುಕಿನ ಅವಶ್ಯಕತೆಯಿಂದ ಹೊರಬಂದು ಸಮಾಧಾನಕರ ಬದುಕನ್ನು ಕಾಣುವ, ಸಂತಸಕರ ದೇಶವಾಗಿ ರೂಪಿಸುವ ಪರಿಕಲ್ಪನೆಯನ್ನು ಇಟ್ಟುಕೊಂಡು ಯೋಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಕೇಶವ ಹೆಗಡೆ ಉಜಿರೆ ಮಾತನಾಡಿ, ಪರಿಸರ ಪೂರಕ ಅಂಶಗಳು ಅಭಿವೃದ್ಧಿಯ ಉತ್ಪಾದನೆಯ ಪೂರಕ ಅಂಶವಾಗಬೇಕು. ಅಭಿವೃದ್ಧಿಯಲ್ಲಿ ಸಮಾಜದ ಎಲ್ಲ ಸ್ತರದ ಜನ ತೊಡಗಿಸಿಕೊಂಡಾಗ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಹೊನ್ನಾವರ, ಜಿಲ್ಲೆಗೆ ಯಾವುದೇ ಕ್ಷೇತ್ರದಲ್ಲಿ ನಾಯಕತ್ವವಿಲ್ಲ. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವಿಲ್ಲ. ಯಾವುದೇ ಯೋಜನೆ ಜಿಲ್ಲೆಗೆ ಬಂದರೂ ವಿರೋಧವನ್ನು ಎದುರಿಸಬೇಕಾಗುತ್ತಿದೆ. ನಾವು ಜಿಲ್ಲೆಯ ಅನನ್ಯತೆಯನ್ನೂ ಉಳಿಸಿಕೊಂಡಿಲ್ಲ, ಅಭಿವೃದ್ಧಿಯನ್ನೂ ಸಾಧಿಸಿಲ್ಲ. ಯೋಜನೆಗಳನ್ನು ವಿರೋಧಿಸಿ ನಾವು  ಎಷ್ಟು ಪರಿಸರವನ್ನು ಉಳಿಸಿಕೊಂಡಿದ್ದೇವೆ. ಶೇ. 80 ರಷ್ಟಿದ್ದ ಅರಣ್ಯ, ಇಂದು ಶೇ. 40ಕ್ಕೆ ಇಳಿದಿದೆ. ಹೀಗಿರುವಾಗ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಮಾತ್ರ ಅರಣ್ಯ ನಾಶವಾಗುತ್ತದೆಯೇ? ಎಂದು ಪ್ರಶ್ನಿಸಿದರು.ಆಶಯ ಭಾಷಣ ಮಾಡಿದ ಶ್ರೀಧರ ಬಳಗಾರ, ಜಿಲ್ಲೆಯ ಪರಿಸರ ಅಭಿವೃದ್ಧಿಗೆ ಪರ್ಯಾಯವಲ್ಲ ಪೂರಕ ಎಂಬ ಆಶಯದೊಂದಿಗೆ ಅಭಿವೃದ್ಧಿಯ ಚಿಂತನೆ ಮಾಡಬೇಕಿದೆ ಎಂದರು.ಕಾರ್ಯಕ್ರಮದ  ಸಂಘಟನೆಯ ಗೌರವಾಧ್ಯಕ್ಷ ಎನ್.ಎಸ್.ಹೆಗಡೆ ಕುಂದರಗಿ ಸ್ವಾಗತಿಸಿದರು. ರೇಖಾ ಹೆಗಡೆ, ಪುಷ್ಪಾ ಹೆಗಡೆ ಮಾಳಕೊಪ್ಪ ಪ್ರಾರ್ಥಿಸಿದರು. ಸಹನಾ ಭಟ್ಟ ನಿರೂಪಿಸಿದರು.ಜಿ.ಪಂ. ಸದಸ್ಯ ಅನಂತ ನಾಗರಜಡ್ಡಿ, ರಾಘವ ಭಟ್ಟ, ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಆರ್.ಎಂ. ಭಟ್ಟ ಬಾಳಕಲ್, ಸಂಘಟನೆಯ ಕಾರ್ಯಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಜಿ.ಎನ್. ಹೆಗಡೆ ಹಿರೇಸರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.