ಸೋಮವಾರ, ಮೇ 25, 2020
27 °C

ಅಭಿವೃದ್ಧಿಯ ಚಿಂತನೆ ನಡೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾತ್ಮರ ಆದರ್ಶಗಳ ಕುರಿತು ವಿದ್ಯಾರ್ಥಿಗಳು ಅವಲೋಕನ ನಡೆಸಿದಾಗ ಮಾತ್ರ ಉದ್ಧಾತ್ತ ಚಿಂತನೆಗಳು ಮೈಗೂಡಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ ಶ್ರೀಧರ ಬಾಳಿಗ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ, ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಸ್ವಾರ್ಥ ಚಿಂತನೆಗಳು ಹೆಚ್ಚಾಗಿರುವ ಈ ದಿನಗಳಲ್ಲಿ, ವಿದ್ಯಾರ್ಥಿಗಳು ಅಂಕಗಳಿಸುವ ಸೀಮಿತ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಕರೆ ನೀಡಿದರು.ಸಮಾಜದಲ್ಲಿನ ಸ್ಥಿತಿ-ಗತಿಗಳು, ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾತ್ಮರು, ಸಮಾಜದಲ್ಲಿ ಒಳ್ಳೆಯತನಕ್ಕಾಗಿ ಹೆಸರು ಗಳಿಸಿರುವ ವ್ಯಕ್ತಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ, ಅವರ ಆಲೋಚನೆಗಳು ಸೀಮಿತವಾಗಿರದೇ ವಿಶಾಲವಾಗಿರುತ್ತದೆ, ಇಂತಹ ಆಲೋಚನೆ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಯಾವುದೇ ದೇಶವನ್ನು ಕೇವಲ ಸೈನ್ಯದ ಬಲದಿಂದ ಆಳುವುದಕ್ಕೆ ಸಾಧ್ಯವಿಲ್ಲ. ಜನರಲ್ಲಿನ ಬುದ್ಧಿಯನ್ನು ಜಾಗೃತಗೊಳಿಸುವ ಮೂಲಕ ಮಾತ್ರ ದೇಶಕ್ಕೆ ಉತ್ತಮ ಆಡಳಿತ ನೀಡಲು ಸಾಧ್ಯವಿದ್ದು, ಇದಕ್ಕೆ ಅನುಕೂಲವಾದಂತಹ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ನಿರ್ದೇಶಕ, ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ನಾಯಕರ ವ್ಯಕ್ತಿತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸುವ ಮೂಲಕಅವರ ಆದರ್ಶಗಳ ಪರಿಚಯ ಮಾಡಿಸಬೇಕಿದೆಎಂದರು.ಕಾರ್ಯಕ್ರಮದಲ್ಲಿ ‘ವಿವೇಕಾಂಜಲಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿ.ಇಡಿ, ಡಿ.ಇಡಿ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮಾಡಲಾಯಿತು. ಶಿಕ್ಷಕರ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.