ಬೆಳಗಾವಿಯಲ್ಲಿ ಮುಗಿದ ಎರಡನೇ ವಿಶ್ವಕನ್ನಡ ಸಮ್ಮೇಳನಕ್ಕೆ ಗಡಿಜಿಲ್ಲೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಜನತೆ ನೀಡಿದ ಪ್ರತಿಕ್ರಿಯೆ ಸಂಘಟಕರನ್ನು ಬೆಚ್ಚಿಬೀಳಿಸುವಷ್ಟು ಸಕಾರಾತ್ಮಕವಾಗಿದೆ. ಉದ್ಘಾಟನೆ ಮತ್ತು ಸಮಾರೋಪದ ಮುಖ್ಯ ಸಮಾರಂಭಗಳಿಗೆ ಮಾತ್ರವಲ್ಲದೆ, ಸಮ್ಮೇಳನದ ಅವಧಿಯಲ್ಲಿ ಸಂಘಟಿಸಿದ 20ಕ್ಕೂ ಹೆಚ್ಚಿನ ಗೋಷ್ಠಿಗಳು ಮತ್ತು ಹಲವು ಕಡೆ ಸಂಘಟಿಸಿದ ಮನರಂಜನೆಯ ಕಾರ್ಯಕ್ರಮಗಳಿಗೆಲ್ಲ ಸಾಮಾನ್ಯ ಜನತೆ ನೀಡಿದ ಸ್ಪಂದನೆ ಅಭೂತಪೂರ್ವ.

ಉದ್ಘಾಟನಾ ಸಮಾರಂಭ ಮತ್ತು ನಂತರದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯರಾತ್ರಿಯ ನಂತರ ಕೂಡ ಮುಂದುವರಿದಿದ್ದರೂ ಜನ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದ್ದಾರೆ. ಈ ಸಡಗರ ಮುಖ್ಯ ವೇದಿಕೆಯಲ್ಲಿ ಮಾತ್ರವೇ ಅಲ್ಲದೆ, ವಿವಿಧ ಕಡೆ ಬೆಳಗಿನಿಂದ ತಡರಾತ್ರಿಯವರೆಗೆ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿಯೂ ವ್ಯಕ್ತವಾಗಿದೆ.

ಸರ್ಕಾರ ಸಂಘಟಿಸಿದ ಈ ಜಾಗತಿಕ ಮಟ್ಟದ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಿಗೂ ಹಬ್ಬದಲ್ಲಿ ಭಾಗಿಯಾಗುವ ಸಂಭ್ರಮದಿಂದ ಪಾಲುಗೊಂಡ ಸಾಮಾನ್ಯ ಜನತೆ ಸಮ್ಮೇಳನದ ಸೊಬಗನ್ನೆಲ್ಲ ತಮ್ಮ ನೆನಪಿನ ಭಾವಕೋಶಗಳಲ್ಲಿ ತುಂಬಿಕೊಂಡ ಧನ್ಯತೆಯನ್ನು ಅನುಭವಿಸಿದ್ದಾರೆ.

ಬಿರು ಬಿಸಿಲಿನ ಬೇಗೆಯಾಗಲೀ, ಊಟ ಉಪಚಾರಗಳಲ್ಲಿನ ಲೋಪವಾಗಲೀ ಜನರ ಉತ್ಸಾಹವನ್ನು ಕುಗ್ಗಿಸಿಲ್ಲ. ಆಹ್ವಾನಿತರೂ ಆತಿಥ್ಯದ ಸಣ್ಣಪುಟ್ಟ ಲೋಪಗಳನ್ನು ದೊಡ್ಡದು ಮಾಡಿಲ್ಲ. ಮರಾಠಿಗರೂ ಸಮ್ಮೇಳನದಲ್ಲಿ ಭಾಗಿಯಾಗಿ, ಈ ವಿಷಯದಲ್ಲಿ ಸಂಕುಚಿತವಾಗಿ ವರ್ತಿಸಿದವರಿಗೆ ಉತ್ತರ ನೀಡಿದ್ದಾರೆ. ಇದು ಕನ್ನಡ ಸಮ್ಮೇಳನಕ್ಕೆ ಸಿಕ್ಕಿದ ಐತಿಹಾಸಿಕ ಯಶಸ್ಸು.

ಇಪ್ಪತ್ತಾರು ವರ್ಷಗಳ ಹಿಂದೆ 1985ರಲ್ಲಿ ಮೈಸೂರಿನಲ್ಲಿ ಸಂಘಟಿಸಿದ್ದ ಮೊಟ್ಟಮೊದಲ ವಿಶ್ವಕನ್ನಡ ಸಮ್ಮೇಳನ ಕುವೆಂಪು- ಶಿವರಾಮ ಕಾರಂತರಂಥ ಭವ್ಯ ವ್ಯಕ್ತಿತ್ವಗಳ ಪ್ರಭಾವಳಿಯಲ್ಲಿ ಐತಿಹಾಸಿಕವಾಗಿತ್ತು. ಬೆಳಗಾವಿಯಲ್ಲಿ ಸಂಘಟಿಸಿದ ಈ ಸಮ್ಮೇಳನ ಕರ್ನಾಟಕವನ್ನು ಸಮಗ್ರವಾಗಿ ಜಾಗತಿಕ ಮಟ್ಟದಲ್ಲಿ ಬಿಂಬಿಸುವಂಥ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರೆ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು.

ಸಾಹಿತ್ಯ ಮಾತ್ರವಲ್ಲದೆ, ಕೃಷಿ, ಕೈಗಾರಿಕೆ ಮತ್ತು ಐಟಿಯಂಥ ಸೇವಾ ಕ್ಷೇತ್ರಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ವಿಶ್ವಸಮುದಾಯಕ್ಕೆ ತೆರೆದಿಡುವ ಪ್ರಯತ್ನ ಸಮ್ಮೇಳನದಲ್ಲಿ ಆಗಬೇಕಿತ್ತು. 20ಕ್ಕೂ ಹೆಚ್ಚಿನ ಗೋಷ್ಠಿಗಳಲ್ಲಿ 14 ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿ ಒಟ್ಟಾರೆಯಾಗಿ ಆಗಿರುವ ಸಾಹಿತ್ಯ ಸಮ್ಮೇಳನದ ಸ್ವರೂಪವನ್ನು ತಪ್ಪಿಸಬಹುದಿತ್ತು. ಆದರೆ ಸಮ್ಮೇಳನಕ್ಕೆ ಬಂದ ಜನ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಮುಕ್ತ ಪ್ರವೇಶ ಇರುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದರೆ ಜನ ಅದರ ಗರಿಷ್ಠ ಪ್ರಯೋಜನ ಪಡೆಯುತ್ತಾರೆ ಎಂಬುದಕ್ಕೆ ಬೆಳಗಾವಿ ಸಮ್ಮೇಳನಕ್ಕೆ ವ್ಯಕ್ತವಾದ ಬೆಂಬಲವೇ ಸಾಕ್ಷಿಯಾಗಿದೆ. ಸಮ್ಮೇಳನದ ಉದ್ಘಾಟಕರಿಗೆ ಸಂಬಂಧಿಸಿ ಸಾಹಿತ್ಯವಲಯದಲ್ಲಿ ಎದ್ದ ಅನವಶ್ಯಕ ಅಪಸ್ವರ ಸಾಮಾನ್ಯ ಕನ್ನಡಿಗರಲ್ಲಿ ಯಾವ ಪರಿಣಾಮವನ್ನೂ ಬೀರಲಿಲ್ಲವೆಂಬುದಕ್ಕೆ ಸಮ್ಮೇಳನದ ಅಭೂತಪೂರ್ವ ಯಶಸ್ಸಿನಿಂದ ಸ್ಪಷ್ಟವಾಗಿದೆ.

ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಇಪ್ಪತ್ತಾರು ವರ್ಷಗಳ ನಂತರ ನಡೆಸಿದ್ದಕ್ಕೆ ಏನೇ ಕಾರಣಗಳಿದ್ದರೂ ಇಂಥ ಸಮ್ಮೇಳನಗಳು ನಿರ್ದಿಷ್ಟ ಅವಧಿಯಲ್ಲಿ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ನಡೆಯಬೇಕು. ನಾಡಿನ ಸಮಗ್ರ ಪ್ರಗತಿಯ ಚಿತ್ರಣವನ್ನು ವಿಶ್ವಕ್ಕೆ ಬಿಂಬಿಸುವಂತೆ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಸಂಯೋಜಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.