ಬುಧವಾರ, ಏಪ್ರಿಲ್ 21, 2021
33 °C

ಅಮೆರಿಕಕ್ಕೂ ಪಸರಿಸಿದ ವಿಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ/ಐಎಎನ್ ಎಎಸ್):  ಭೂಕಂಪದ ವೇಳೆ ಜಪಾನಿನ ಫುಕುಶಿಮಾ ಅಣು ಸ್ಥಾವರಗಳಿಂದ ಸೋರಿಕೆಯಾದ ವಿಕಿರಣಗಳು ಪೆಸಿಫಿಕ್ ಸಾಗರದ ಮೂಲಕ ಅಮೆರಿಕ ತಲುಪಿವೆ.ಕ್ಯಾಲಿಫೋರ್ನಿಯಾದ ಸಾಕ್ರಾಮೆಂಟೋನಲ್ಲಿರುವ ವಿಕಿರಣ ಪತ್ತೆ ಕೇಂದ್ರದಲ್ಲಿ ಸ್ವಲ್ಪ ಮಟ್ಟಿಗಿನ ವಿಕಿರಣ ದಾಖಲಾಗಿದ್ದು ಶಕ್ತಿ ಮತ್ತು ಪರಿಸರ ಸಂರಕ್ಷಣಾ ಸಂಸ್ಥೆ ಶುಕ್ರವಾರ ವಿಕಿರಣಗಳು ಅಮೆರಿಕ ಪ್ರವೇಶಿಸಿರುವುದನ್ನು ದೃಢಪಡಿಸಿದೆ.ಜಪಾನಿನಿಂದ ಪೆಸಿಫಿಕ್ ಸಾಗರದ ಮೂಲಕ ಸಾವಿರಾರು ಕಿ.ಮೀ ಸಂಚರಿಸಿದ ಬಳಿಕ ಅಮೆರಿಕ ಕಡಲ ತೀರ ಪ್ರವೇಶಿಸಿರುವ ಅಲ್ಪಪ್ರಮಾಣದ ಅಣು ವಿಕಿರಣಗಳ ಶಕ್ತಿ ಕುಂದಿದೆ. ಜನರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗುವ ಸಾಧ್ಯತೆಗಳಿಲ್ಲದ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.ವಿಕಿರಣ ಹೊಗೆಯ ಚಲನವಲನಗಳ ಅಧ್ಯಯನ ನಡೆಸುತ್ತಿರುವ ವಿಕಿರಣ ತಜ್ಞರ ಪ್ರಕಾರ ಮುಂದಿನ ವಾರದೊಳಗೆ ವಿಕಿರಣಗಳು ನ್ಯೂಯಾರ್ಕ್ ತಲುಪವ ಸಾಧ್ಯತೆಗಳಿವೆ.  ‘ಹಾನಿಕಾರಕ ವಿಕಿರಣಗಳು ಅಮೆರಿಕ, ಅಲಸ್ಕ ಅಥವಾ ಹವಾಯ್ ತಲುಪುವ ಸಾಧ್ಯತೆಗಳಿಲ್ಲ’ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.ಈ ಹಿಂದೆ 1986ರಲ್ಲಿ ರಷ್ಯಾದ ಉಕ್ರೇನ್‌ನಲ್ಲಿದ ಚೆರ್ನೋಬಿಲ್ ಅಣುಶಕ್ತಿ ಸ್ಥಾವರ ದುರಂತದಲ್ಲಿ ಕೂಡ ವಿಕಿರಣಗಳು ಹತ್ತು ದಿನಗಳ ನಂತರ ಅಮೆರಿಕವನ್ನು ಪ್ರವೇಶಿಸಿದ್ದವು. ಆಗಲೂ ಇದೇ ರೀತಿ ಅಲ್ಪ ಪ್ರಮಾಣದಲ್ಲಿ ವಿಕಿರಣ ಪತ್ತೆಯಾಗಿದ್ದವು. ಯವುದೇ ಹಾನಿ ಸಂಭವಿಸಿರಲಿಲ್ಲ.ಫುಕುಶಿಮಾ ಅಣುಶಕ್ತಿ ಸ್ಥಾವರಗಳಿಂದ ಸೋರಿಕೆಯಾದ ವಿಕಿರಣಗಳು ಮೊದಲು ರಷ್ಯ ತಲುಪಿದ್ದವು.   ಸದ್ಯಕ್ಕೆ ಜಪಾನ್ ಪ್ರಯಾಣ ಬೇಡ: ಭೂಕಂಪ, ಸುನಾಮಿ ಮತ್ತು ವಿಕಿರಣ ಸೋರಿಕೆಯಿಂದ ಪರಿಸ್ಥಿತಿ ಬಿಗಡಾಯಿಸುತ್ತಿರುವ ಕಾರಣ ಸದ್ಯಕ್ಕೆ ಜಪಾನ್ ಪ್ರವಾಸ ಮುಂದೂಡುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.ಜಪಾನ್ ಫುಕುಶಿಮಾದ 80 ಕಿ.ಮೀ. ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳು ಕೂಡಲೇ ಆ ಸ್ಥಳವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಮೆರಿಕ ಪರಮಾಣು ನಿಯಂತ್ರಣ ಆಯೋಗ ಸೂಚಿಸಿದೆ. ಸಂಡೈ ದ್ವೀಪದ ಹೊರತಾಗಿ ಜಪಾನ್‌ನ ಇತರ ಭಾಗಗಳಿಗೆ ವಿಮಾನ ಹಾರಾಟವನ್ನು ಪುನಃ ಆರಂಭಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.