ಮಂಗಳವಾರ, ಮೇ 17, 2022
27 °C

ಅಮೆರಿಕದಲ್ಲಿ ಕ್ರೆಡಿಟ್ ಕಾರ್ಡ್ ವಂಚಕರ ಭಾರಿ ಜಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್, (ಪಿಟಿಐ): ಸಾವಿರಾರು ಗ್ರಾಹಕರ ಕ್ರೆಡಿಟ್ ಕಾರ್ಡ್ ದತ್ತಾಂಶಗಳನ್ನು ಕದ್ದು 13 ದಶಲಕ್ಷ ಡಾಲರ್‌ಗೂ ಹೆಚ್ಚು ಬೆಲೆಯ ವಸ್ತುಗಳನ್ನು ಖರೀದಿ ಮಾಡಿರುವ ಮಹಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ಮೂಲದ 13 ಮಂದಿ ಸೇರಿದಂತೆ 111 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.ಅಮೆರಿಕದ ಅಪರಾಧ ಇತಿಹಾಸದಲ್ಲೇ ಅತಿ ದೊಡ್ಡ ವಂಚನೆ ಪ್ರಕರಣ ಎಂದು ಬಣ್ಣಿಸಲಾಗಿರುವ ಈ ಹಗರಣದ ಪಾಲುದಾರರು ಆ್ಯಪಲ್ ಕಂಪೆನಿಯ ಕಂಪ್ಯೂಟರ್‌ನಿಂದ ಹಿಡಿದು ಗುಸ್ಸಿ ಕಂಪೆನಿಯ ಫ್ಯಾನ್ಸಿ ಬ್ಯಾಗ್‌ವರೆಗೆ ಎಲ್ಲವನ್ನೂ ಖರೀದಿ ಮಾಡಿ ಮಜಾ ಮಾಡಿದ್ದಾರೆ.ಬ್ಯಾಂಕ್ ಉದ್ಯೋಗಿಗಳು, ಅಂಗಡಿಗಳ ನೌಕರರು ಮತ್ತು ರೆಸ್ಟೋರೆಂಟ್‌ಗಳ ಉದ್ಯೋಗಿಗಳು ಶಾಮೀಲಾಗಿ ಸಾವಿರಾರು ಕ್ರೆಡಿಟ್ ಕಾರ್ಡ್ ಗ್ರಾಹಕರ ದತ್ತಾಂಶವನ್ನು ಕದ್ದು ಐಷಾರಾಮಿ ಜೀವನ ನಡೆಸಿದ್ದಾರೆ.ಈ ವಂಚಕರ ಅನೇಕ ಸಂಬಂಧಿಕರು ಅಮೆರಿಕದ ವಿವಿಧೆಡೆ ಶಾಪಿಂಗ್ ಮಾಡಿದ್ದಾರೆ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡು ವೈಭೋಗ ಅನುಭವಿಸಿದ್ದಾರೆ. ಇದಲ್ಲದೆ ಓಡಾಟಕ್ಕೆ ಐಷಾರಾಮಿ ಕಾರು ಮತ್ತು ಖಾಸಗಿ ವಿಮಾನಗಳನ್ನೇ ಬಳಸಿದ್ದಾರೆ.ಅಮೆರಿಕ ಮತ್ತು ಯೂರೋಪ್ ಗ್ರಾಹಕರ ಕ್ರೆಡಿಟ್ ಕಾರ್ಡ್‌ಗಳ ದತ್ತಾಂಶಗಳನ್ನು ಕದ್ದು ನಕಲಿ ಕಾರ್ಡ್‌ಗಳನ್ನು ಮಾಡಿಸಿಕೊಂಡು ಈ ಬೃಹತ್ ವಂಚನೆ ಎಸಗಲಾಗಿದೆ.ಕ್ವೀನ್ಸ್ ಪ್ರಾಂತ್ಯದಲ್ಲಿರುವ ಐದು ಸಂಘಟಿತ ಕ್ರೆಡಿಟ್ ಕಾರ್ಡ್ ವಂಚಕರ ತಂಡವು ಯೂರೋಪ್, ಏಷ್ಯ, ಆಫ್ರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳ ವಂಚಕರ ಜಾಲದ ಜತೆ ಸಂಪರ್ಕ ಹೊಂದಿದೆ. ಇಮ್ರಾನ್ ಖಾನ್, ಅಲಿ ಖ್ವೆಸಿಸ್, ಆಂಟನಿ ಮಾರ್ಟಿನ್, ಸಂಜಯ್ ದೇವರಸನ್ ಮತ್ತು ಅಮರ್ ಸಿಂಗ್ ಐದು ಕಾನೂನು ಬಾಹಿರ ಸಂಘಟನೆಗಳ ಮುಖ್ಯಸ್ಥರು.ಪ್ರಕರಣದಲ್ಲಿ ಶಾಮೀಲಾಗಿರುವ ಭಾರತೀಯ ಮೂಲದ ಇತರರೆಂದರೆ ವಿಷ್ಣು ಹರಿಲಾಲ್, ರವೀಂದ್ರ ಸಿಂಗ್, ನೇಹಾ ಪಂಜಾಬಿ ಸಿಂಗ್, ರವಿ ರಾಮ್‌ರೂಪ್ ಮತ್ತು ಕಮಲ್ ಸನಾಸಿ. ನಕಲಿ ಕ್ರೆಡಿಟ್ ಕಾರ್ಡ್ ಜಾಲದ ರೂವಾರಿಗಳು ಮತ್ತು ಅವರ ಸಂಬಂಧಿಕರ ವಿರುದ್ಧ ಕಳ್ಳತನ, ದರೋಡೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.`ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ವೈಯಕ್ತಿಕ ಮಾಹಿತಿ ಕಳ್ಳತನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಂಚಕರು ನಕಲಿ ಕ್ರೆಡಿಟ್ ಕಾರ್ಡ್ ರೂಪಿಸುವಲ್ಲಿ ಪರಿಣತರಾಗಿದ್ದಾರೆ. ಇಂತಹವರಿಂದ ಬ್ಯಾಂಕುಗಳು ಮತ್ತು ಗ್ರಾಹಕರಿಗೆ ಕೋಟ್ಯಂತರ ಡಾಲರ್‌ಗಳ ನಷ್ಟವಾಗುತ್ತಿದೆ~ ಎಂದು ಕ್ವೀನ್ಸ್ ಜಿಲ್ಲೆಯ ಅಟಾರ್ನಿ ರಿಚರ್ಡ್ ಬ್ರೌನ್ ಆತಂಕ ವ್ಯಕ್ತಪಡಿಸಿದ್ದಾರೆ.ನಕಲಿ ಕಾರ್ಡ್‌ಗಳನ್ನು ಬಳಸಿ ಐಪ್ಯಾಡ್ಸ್, ಐಫೋನ್, ಕಂಪ್ಯೂಟರ್, ಭಾರಿ ವಾಚುಗಳು ಮುಂತಾದ ವಸ್ತುಗಳನ್ನು ಖರೀದಿಸಲಾಗಿದೆ. ಈ ರೀತಿ ಖರೀದಿಸಿದ ವಸ್ತುಗಳನ್ನು ಚೀನಾ, ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.