ಮಂಗಳವಾರ, ಏಪ್ರಿಲ್ 20, 2021
30 °C

ಅಮೆರಿಕದಲ್ಲಿ ಸಿಖ್ಖರ ಮೇಲೆ ದಾಳಿ: ಅಕಾಲಿ ದಳ - ಕಾಂಗ್ರೆಸ್ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಅಮೆರಿಕದ ವಿಸ್ಕಾನ್ಸಿನ್‌ನ ಗುರುದ್ವಾರದಲ್ಲಿ ನಡೆದ ದಾಳಿ ಪ್ರಕರಣವು ಗುರುವಾರ ಲೋಕಸಭೆಯಲ್ಲಿ ಅಕಾಲಿ ದಳ ಮತ್ತು ಕಾಂಗ್ರೆಸ್ ನಡುವೆ ಕಾವೇರಿದ ವಾಗ್ವಾದ ಎಬ್ಬಿಸಿ ಕಲಾಪ ಮುಂದೂಡಿಕೆಗೆ ಕಾರಣವಾಯಿತು.ಮೊದಲು, ಅಕಾಲಿ ದಳದ ಸದಸ್ಯೆ ಹರ್‌ಸಿಮ್ರತ್ ಕೌರ್ ಈ ಕುರಿತು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.ಇಂತಹ ದಾಳಿ ಮರುಕಳಿಸದಂತೆ ಒತ್ತಡ ಹೇರುವ ಸಲುವಾಗಿ, ಪ್ರಧಾನಿ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವೊಂದನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಬೇಕೆಂದು ಕೌರ್ ಒತ್ತಾಯಿಸಿದರು. ಸದನದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಇದನ್ನು ಬೆಂಬಲಿಸಿದರು.ಸಂಸತ್ತಿನ ಕಲಾಪ ಸೋಮವಾರ ಪುನಃ ಆರಂಭವಾಗಲಿದ್ದು, ಅಂದು ಸರ್ಕಾರ ಈ ಸಂಬಂಧ ತಾನು ಕೈಗೊಂಡ ಕ್ರಮಗಳ ವಿವರವನ್ನು ಒದಗಿಸಬೇಕು ಎಂದು ಸುಷ್ಮಾ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ.ಬನ್ಸಲ್, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇದರಿಂದ ಸಮಾಧಾನವಾಗದ ಅಕಾಲಿ ದಳ ಸದಸ್ಯರು ಕಲಾಪಕ್ಕೆ ತಡೆಯೊಡ್ಡುತ್ತಲೇ ಇದ್ದರು.ಈ ಹಂತದಲ್ಲಿ ನಾಯಕಿ ಸೋನಿಯಾ ಗಾಂಧಿ ಅವರ ಬೆಂಬಲದಿಂದ ಪ್ರೇರಿತರಾದ ಬನ್ಸಲ್, ಅಕಾಲಿ ದಳದ ಮೇಲೆ ಟೀಕಾಸ್ತ್ರ ಪ್ರಯೋಗಿಸಿ, `ಸಂತ್ರಸ್ತರ ಸಮಾಧಿಯ ಮೇಲೆ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು~ ಎಂದರು.ಅಕಾಲಿ ದಳ ಸದಸ್ಯರು ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವ ಬದಲು, ಈ ಬಗ್ಗೆ ಗಮನ ಸೆಳೆಯುವ ನಿರ್ಣಯವನ್ನು ಮಂಡಿಸಬೇಕಿತ್ತು. ಆಗ ಸರ್ಕಾರವು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುತ್ತಿತ್ತು ಎಂದೂ ಬನ್ಸಲ್ ಹೇಳಿದರು. `ಈ ಪ್ರಕರಣ ನಡೆದ ಬಗ್ಗೆ ನಮಗೂ ವಿಷಾದವಿದೆ. ಇದರಲ್ಲಿ ಏಕೆ ರಾಜಕೀಯ ಮಾಡುತ್ತೀರಿ.ಈ ವಿಷಯದಲ್ಲಿ ಪಂಜಾಬಿನಲ್ಲಿರುವ ನಿಮ್ಮ ಶಿರೋಮಣಿ ಅಕಾಲಿ ದಳ ಸರ್ಕಾರ ಏನು ಮಾಡಿದೆ~ ಎಂದು ಬನ್ಸಲ್ ಚುಚ್ಚಿದರು.ಅಕಾಲಿ ದಳ ಸದಸ್ಯರು ಸುಮ್ಮನಾಗದೆ ಗದ್ದಲ ಮುಂದುವರಿಸಿದ್ದರಿಂದ ಸ್ಪೀಕರ್ ಸ್ಥಾನದಲ್ಲಿದ್ದ ಎಂ.ತಂಬಿದೊರೈ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.