ಶುಕ್ರವಾರ, ಜುಲೈ 30, 2021
25 °C

ಅಮೆರಿಕ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವನ್ನು ಅಮೆರಿಕದ ಪ್ರಮುಖ ಚಿತ್ರಮಂದಿರಗಳಲ್ಲಿಯೂ ಕನ್ನಡ ಪ್ರೇಕ್ಷಕರಿಗೆ ತೋರಿಸುವ ವಿಶಿಷ್ಟ ಕಾರ್ಯಕ್ರಮವನ್ನು ರೀಲ್ ಬಾಕ್ಸ್ ಸಂಸ್ಥೆ ರೂಪಿಸಿದೆ.ಕನ್ನಡ ಚಲನಚಿತ್ರ ನಿರ್ಮಾಪಕರೊಂದಿಗೆ ಕೈ ಜೋಡಿಸಿರುವ ರೀಲ್ ಬಾಕ್ಸ್ ಅಮೆರಿಕದ ನಗರಗಳಲ್ಲಿ ಪ್ರದರ್ಶನ ಜಾಲವೊಂದನ್ನು ರೂಪಿಸಿದ್ದು, ಅಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ. ಅಲ್ಲಿನ ಕನ್ನಡ ಚಿತ್ರಪ್ರೇಮಿಗಳು ಆನ್‌ಲೈನ್ ಮತ್ತು ಚಿತ್ರಮಂದಿರಗಳಲ್ಲಿಯೂ ಹೊಸ ಕನ್ನಡ ಚಿತ್ರಗಳನ್ನು ವೀಕ್ಷಿಸಬಹುದು. ಇದಕ್ಕೆ ನಿರ್ಮಾಪಕರು ಹಣ ತೆರಬೇಕಾಗಿಲ್ಲ. ಆದಾಯವನ್ನು ಹಂಚಿಕೊಳ್ಳುವ ಆಧಾರದ ಮೇಲೆ ರೀಲ್‌ ಬಾಕ್ಸ್ ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.೨೦೧೦ರಲ್ಲಿ ಅಮೆರಿಕದಲ್ಲಿ ‘ಮುಂಗಾರು ಮಳೆ’ ಚಿತ್ರ ಪ್ರದರ್ಶನಗೊಂಡಿತ್ತು. ಅದರ ಬಳಿಕ ಹಲವು ಕನ್ನಡ ಚಿತ್ರ ನಿರ್ಮಾಪಕರು ಅಮೆರಿಕದಲ್ಲಿ ಚಿತ್ರ ಪ್ರದರ್ಶಿಸುವ ವಿಫಲ ಯತ್ನ ನಡೆಸಿದ್ದರು. ಈಗ ರೀಲ್ ಬಾಕ್ಸ್ ಈ ಪ್ರಯತ್ನಕ್ಕೆ ಬಲ ತುಂಬಿದೆ. ಇದೇ ವರ್ಷ ಕ್ಯಾಲಿಫೋರ್ನಿಯದ ಸ್ಯಾನ್ ಜೋಸ್‌ನಲ್ಲಿ ರೀಲ್ ಬಾಕ್ಸ್ ‘ಲೂಸಿಯಾ’ ಚಿತ್ರವನ್ನು ಪ್ರದರ್ಶಿಸಿತ್ತು. ಅದರ ಯಶಸ್ಸಿನಿಂದ ಉತ್ತೇಜನಗೊಂಡ ರೀಲ್ ಬಾಕ್ಸ್ ಅಮೆರಿಕದ ಹಲವು ಚಿತ್ರಮಂದಿರಗಳಲ್ಲಿ ‘ಭಜರಂಗಿ’ ಸಿನಿಮಾವನ್ನು ಬಿಡುಗಡೆ ಮಾಡಿದೆ. ಬಾಲಿವುಡ್ ಹೊರತುಪಡಿಸಿ ಮೊದಲ ಬಾರಿಗೆ ಭಾರತದ ಪ್ರಾದೇಶಿಕ ಚಲನಚಿತ್ರವೊಂದನ್ನು ಅಮೆರಿಕದ ಪ್ರಮುಖ ಚಿತ್ರಮಂದಿರಗಳಲ್ಲಿ ನಿಯಮಿತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಚಿತ್ರಗಳನ್ನು ಅಮೆರಿಕನ್ನಡಿಗರು ಖುಷಿಯಿಂದ ನೋಡುತ್ತಿದ್ದಾರೆ ಎಂದು ರೀಲ್‌ಬಾಕ್ಸ್‌ನ ಅಮೆರಿಕ ಮಾರಾಟ ಮತ್ತು ಕಾರ್ಯಾಚರಣೆಯ ಉಪಾಧ್ಯಕ್ಷ ರಾಜಾ ನಾರಾಯಣಸ್ವಾಮಿ ಹೇಳಿದರು.ಆಡಿಯನ್ಸ್ ಫಿಲ್ಮ್ಸ್, ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರೂ ರೀಲ್‌ ಬಾಕ್ಸ್‌ನ ಪ್ರಯತ್ನಗಳನ್ನು ಮೆಚ್ಚಿಕೊಂಡಿದ್ದಾರೆ. ರೀಲ್ ಬಾಕ್ಸ್ ಅಮೆರಿಕದಲ್ಲಿ ಕನ್ನಡ ಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಇದೊಂದು ಪ್ರೇರಣೆಯಾಗಲಿದೆ ಎನ್ನುತ್ತಾರೆ ಅವರು. ರೀಲ್‌ ಬಾಕ್ಸ್ ವೀಡಿಯೊ ಆನ್ ಡಿಮಾಂಡ್ ಸೇವಾ ಸಂಸ್ಥೆಯಾಗಿದ್ದು, ಹಳೆಯ ಮತ್ತು ಹೊಸ ಕನ್ನಡ ಚಿತ್ರಗಳ ದೊಡ್ಡ ಸಂಗ್ರಹವನ್ನೇ ಹೊಂದಿದೆ. ವಿಶ್ವಾದ್ಯಂತ ಕನ್ನಡ ಚಿತ್ರ ಪ್ರೇಮಿಗಳ ಬೇಡಿಕೆಗಳಿಗೆ ಅದು ಸ್ಪಂದಿಸುತ್ತ ಬಂದಿದೆ. ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದ ಮೂಲಕ ಮನೆಯಲ್ಲೇ ಕುಳಿತು ಕನ್ನಡ ಚಿತ್ರಗಳನ್ನೂ ಪ್ರೇಕ್ಷಕರು ವೀಕ್ಷಿಸಬಹುದು.ವಿವರಗಳಿಗೆ: http://reelbox.tv

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.