ಸೋಮವಾರ, ಮಾರ್ಚ್ 8, 2021
30 °C

ಅರಕಲಗೂಡು: ಉದ್ಯಾನ ನಿರ್ವಹಣೆ ಅಧ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ಉದ್ಯಾನ ನಿರ್ವಹಣೆ ಅಧ್ವಾನ

ಅರಕಲಗೂಡು: ಪಟ್ಟಣದ ಬಡಾವಣೆಗಳಲ್ಲಿರುವ ಉದ್ಯಾನಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ, ಪ್ರಮುಖ ರಸ್ತೆಗಳಲ್ಲಿ  ಬಿಡಾಡಿ ಜಾನುವಾರುಗಳಿಂದ ಸಂಚಾರಕ್ಕೆ ಅಡಚಣೆ, ಬೀದಿ ನಾಯಿಗಳ ಹಾವಳಿ ತಪ್ಪಸಿ, ಬಡಾವಣೆಗಳಲ್ಲಿ ಮಾಹಿತಿ ಫಲಕ ಅಳವಡಿಸಿ... ಹೀಗೆ ಹತ್ತಾರು ಸಮಸ್ಯೆಗಳನ್ನು  ಪ.ಪಂ. ಬಜೆಟ್‌ ಪೂರ್ವಭಾವಿ ಸಭೆಯಲ್ಲಿ  ಸದಸ್ಯರು ಮತ್ತು ನಾಗರಿಕರು ತೆರೆದಿಟ್ಟರು.ಪ.ಪಂ. ಅಧ್ಯಕ್ಷೆ ಶಾರದಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ  ಬಜೆಟ್‌ ಪೂರ್ವಭಾವಿ ಸಭೆ ನಡೆಯಿತು. ಸದಸ್ಯ ರಮೇಶ್‌ ವಾಟಾಳ್‌ ಮಾತನಾಡಿ, ಪಟ್ಟಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ನಡೆಸಲು ಸರಿಯಾದ ಸ್ಥಳಾವಕಾಶವಿಲ್ಲ, ಬಯಲು ರಂಗಮಂದಿರ ನಿರ್ಮಾಣ ಮಾಡಬೇಕು, ಕಾಲೇಜು ರಸ್ತೆಯಲ್ಲಿರುವ ಸಂತೆಗೆ ಜಾಗ ಕಿರಿದಾಗಿದ್ದು ಇದನ್ನು ವಿಶಾಲ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಸಲಹೆ ಮಾಡಿದರು.ಮಾಜಿ ಸದಸ್ಯ ಶಂಕರಯ್ಯ ಮಾತನಾಡಿ, ಬಡಾವಣೆಗಳಲ್ಲಿರುವ ಉದ್ಯಾನಗಳನ್ನು  ಸರಿಯಾದ ರೀತಿ ನಿರ್ವಹಣೆ  ಮಾಡುತ್ತಿಲ್ಲ,  ಬಡವರ್ಗಗಳಿಗೆ ನಿವೇಶನ ನೀಡಲು ಸ್ಥಳ ಗುರುತಿಸಿದ್ದರೂ ಕಳೆದ ಒಂದು ದಶಕದಿಂದ ನಿವೇಶನಗಳ ವಿತರಣೆ ನಡೆದಿಲ್ಲ. ಪ್ರತಿ ಬಡಾವಣೆಗೂ ನಾಮಫಲಕಗಳನ್ನು ಅಳವಡಿಸಿ, ಈಜುಕೊಳ ನಿರ್ಮಿಸಲು ₹ 60 ಲಕ್ಷ ವೆಚ್ಚದ ಯೋಜನೆ ತಯಾರಿಸಲಾಗಿತ್ತು. ಆದರೆ ಈವರೆಗೂ ಅನುಷ್ಠಾನಗೊಂಡಿಲ್ಲ. ಈ ಕುರಿತು ಕ್ರಮಕೈಗೊಳ್ಳಿ ಎಂದು ಸಲಹೆ ಮಾಡಿದರು.ಮುಖ್ಯಾಧಿಕಾರಿ ಎಸ್‌. ಸುರೇಶ್‌ಬಾಬು ಮಾತನಾಡಿ, ಸಾರ್ವಜನಿಕರು ಮತ್ತು ಸದಸ್ಯರು ನೀಡಿದ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ಉಪಾಧ್ಯಕ್ಷ ಬೀರಪ್ಪ ಸದಸ್ಯರಾದ ಮಂಜುಳಾ, ನಂದಕುಮಾರ್‌, ಶಶಿಕುಮಾರ್‌,  ಸಾಕಮ್ಮ, ಶ್ರೀನಿವಾಸ್‌, ಅಲೀಂಪಾಷ, ಎಂಜಿನಿಯರ್‌ ಕವಿತಾ, ಪ್ರಥಮದರ್ಜೆ ಸಹಾಯಕ ಜಯರಾಮ್‌ ಉಪಸ್ಥಿತರಿದ್ದರು.ಬೀದಿನಾಯಿ ನಿಯಂತ್ರಣಕ್ಕೆ ಶಂಕರಯ್ಯ ಒತ್ತಾಯ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ ಹೆಚ್ಚಿದ್ದು ನಾಗರಿಕರು ಬೀದಿಯಲ್ಲಿ ತಿರುಗಾಡಲು ಭಯಪಡುವಂತಾಗಿದೆ. ರಾತ್ರಿ ವೇಳೆ ಬಂದರಂತೂ ಚಿರತೆಯಂತೆ ಮೈಮೇಲೆ ಎರಗುತ್ತವೆ.  ಬೀದಿ ನಾಯಿಗಳ ಕುರಿತು ತಾವು ಸರ್ವೆ ನಡೆಸಿದ್ದು ಪಟ್ಟಣದಲ್ಲಿ 1367 ನಾಯಿಗಳಿವೆ ಎಂದು ಪ.ಪಂ. ಮಾಜಿ ಸದಸ್ಯ ಶಂಕರಯ್ಯ ಸಭೆಯಲ್ಲಿ ತಿಳಿಸಿ, ನಾಯಿ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿದರು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ಜಾನುವಾರುಗಳ ಹಾವಳಿ ವಿಪರೀತವಾಗಿದ್ದು ಜನರ ಹಾಗೂ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂದು ಇನ್ನೊಬ್ಬ ಮಾಜಿ ಸದಸ್ಯ ಪಿ.ಎನ್‌. ರಮೇಶ್‌ ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.