ಬುಧವಾರ, ಜನವರಿ 29, 2020
24 °C

ಅರಣ್ಯ ಕಚೇರಿ ಕೇಂದ್ರ ತೆರೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ತಾಲ್ಲೂಕಿನಲ್ಲಿರುವ ಮೀಸಲು ಅರಣ್ಯ ಪ್ರದೇಶವನ್ನು ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ವ್ಯಾಪ್ತಿಗೆ ಸೇರಿಸಿರುವುದು ಸರಿಯಲ್ಲ, ತಾಲ್ಲೂಕಿನ ಮೀಸಲು ಅರಣ್ಯ ಪ್ರದೇಶವನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕು ಕೇಂದ್ರದಲ್ಲಿ ಕಚೇರಿ ತೆರಯಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದ್ದಾರೆ.ತಾಲ್ಲೂಕಿನ ಕಾವೇರಿ ಸಮೀಪದ ಅರಣ್ಯ ಪ್ರದೇಶವನ್ನು ಕನಕಪುರ -ಕೊಳ್ಳೇಗಾಲಕ್ಕೆ ಸೇರಿಸಿರುವ ಕ್ರಮವನ್ನು ಸರಿಯಿಲ್ಲ ಎಂದಿರುವ ಅವರು  ತಾಲ್ಲೂಕಿನ ಅರಣ್ಯ ಸಂಪತ್ತು ಬೇರೆ ತಾಲ್ಲೂಕಿಗೆ ಒಳಪಡುವ ಜೊತೆಗೆ ಧಕ್ಕೆಯೂ ಆಗುತ್ತದೆ. ಪ್ರಾದೇಶಿಕ ವಲಯಗಳಾದ ಬಸವನಬೆಟ್ಟ ಮತ್ತು ಧನಗೂರು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರಿದ 20ಕ್ಕೂ ಹೆಚ್ಚಿನ ಗ್ರಾಮಗಳ ರೈತರಿಗೆ ಅನಾನುಕೂಲವಾಗುವುದರ ಜೊತೆಗೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದಾಗ ಕನಕಪುರ ಹಾಗೂ ಕೊಳ್ಳೇಗಾಲ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದರು.ಪ್ರಾದಶೀಕ ವಲಯದ ಮೀಸಲು ಅರಣ್ಯ ಪ್ರದೇಶಗಳಾದ ಬಸವನಬೆಟ್ಟ ಅರಣ್ಯ ಪ್ರದೇಶ 5, 913 ಹೆಕ್ಟೇರ್ ಹಾಗೂ ಧನಗೂರು ಅರಣ್ಯ ಪ್ರದೇಶ 2,623 ಹೆಕ್ಟೇರ್ ಪ್ರದೇಶವನ್ನು ತಾಲ್ಲೂಕಿನಿಂದ ಬೇರೆ ತಾಲ್ಲೂಕಿಗೆ ಏಪ್ರಿಲ್ 2013ರಲ್ಲಿ ವರ್ಗಾವಣೆ ಮಾಡಿದ್ದು, ಇದರಿಂದ ತಾಲ್ಲೂಕಿಗೆ ಅರಣ್ಯ ಕಚೇರಿ ಏಕೆ ಬೇಕು ಎಂದು ಪ್ರಶ್ನಿಸಿರುವ ಅವರು ಕೂಡಲೇ ಈ ವ್ಯಾಪ್ತಿಯ ಸಂಸದರು, ಶಾಸಕರು ಕೂಡಲೇ ಇದರ ಬಗ್ಗೆ ಗಮನ ನೀಡಿ ಮೀಸಲು ಅರಣ್ಯ ಪ್ರದೇಶವನ್ನು ತಾಲ್ಲೂಕಿನ ವ್ಯಾಪ್ತಿಗೆ ಸೇರಿಸುವಂತೆ ಅವರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)