ಶನಿವಾರ, ಮೇ 8, 2021
26 °C

ಅರ್ಚಕರಿಗೆ ಸೇವಾ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮನಿರಪೇಕ್ಷ ಆಶಯದ ಸಂವಿಧಾನವನ್ನು ದೇಶವು ಅಂಗೀಕರಿಸಿರುವುದರಿಂದ ಜನತೆ ತಮಗೆ ಇಷ್ಟವಾದ ಯಾವುದೇ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳನ್ನು ಹೊಂದುವ ಸ್ವಾತಂತ್ರ್ಯ ಪಡೆದಿದ್ದಾರೆ.ಶ್ರದ್ಧಾಭಕ್ತಿಯಿಂದ ಅಗೋಚರ ಶಕ್ತಿಯನ್ನು ಆರಾಧಿಸುವ ಭಾರತೀಯ ಮನಸ್ಸು ಸಕಲ ಜೀವರಾಶಿಗಳಲ್ಲಿಯೂ ದೈವಸ್ವರೂಪವನ್ನು ಕಾಣುವ ವೈಶಾಲ್ಯತೆಯನ್ನು ಪಡೆದಿದೆ. ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ಆಧರಿಸಿ ದೇಶದಾದ್ಯಂತ ವಿಸ್ತರಿಸಿರುವ ದೇವಾಲಯ ಪರಂಪರೆಯನ್ನು ಸಾಂಸ್ಥಿಕ ಚೌಕಟ್ಟಿಗೆ ತರುವ ಪ್ರಯತ್ನಗಳು ಆಗಾಗ ನಡೆದಿವೆ. `ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ~ಗೆ ರಾಜ್ಯ ಸರ್ಕಾರ ಈಚೆಗೆ ತಂದಿರುವ ಕೆಲವು ತಿದ್ದುಪಡಿಗಳು ಸರ್ಕಾರದ ಉಸ್ತುವಾರಿಯಲ್ಲಿರುವ ದೇವಾಲಯಗಳಲ್ಲಿ ಪೂಜಾ ವ್ಯವಸ್ಥೆಯನ್ನು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪುನರ್‌ರೂಪಿಸಲು ಉದ್ದೇಶಿತವಾಗಿವೆ.

 

ಪೂಜಾಕೈಂಕರ್ಯಕ್ಕೆ ವೃತ್ತಿಪರತೆಯನ್ನು ತರುವ ಯತ್ನವೂ ನಡೆದಿದೆ. ಪೂಜಾವೃತ್ತಿಗೆ ಶೈಕ್ಷಣಿಕ ಅಧ್ಯಯನದ ಅರ್ಹತೆಯನ್ನು ನಿಗದಿಪಡಿಸಿದೆ. ಜೊತೆಗೆ ಅರ್ಚಕರ ನೇಮಕಕ್ಕೆ ವೃಂದ ಮತ್ತು ಮೀಸಲಾತಿ ಪ್ರಸ್ತಾಪದ ಜೊತೆಗೆ ಸೇವಾನಿಯಮಗಳನ್ನೂ ರೂಪಿಸಿದೆ.ಸರ್ವ ಸಮಾನತೆಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಿದ ಈ ತಿದ್ದುಪಡಿಗಳು ಅರ್ಚಕ ವೃತ್ತಿಯನ್ನು ಆಕರ್ಷಕಗೊಳಿಸುವುದಕ್ಕೆ ಪೂರಕವಾಗಿವೆ. ಪ್ರಧಾನ ಅರ್ಚಕ, ಅರ್ಚಕ ಮತ್ತು ಸಹಾಯಕ ಅರ್ಚಕ ಹುದ್ದೆಗಳನ್ನೂ ಅವುಗಳಿಗೆ ವೇತನ ಶ್ರೇಣಿ ನಿಗದಿಪಡಿಸಲು ಅವಕಾಶವನ್ನೂ ಮಾಡಲಾಗಿದೆ.ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸಿ, ವರ್ಗಾವಣೆಗೂ ಅವಕಾಶ ಕಲ್ಪಿಸಿರುವುದು ಅರ್ಚಕ ವೃತ್ತಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಭದ್ರತೆಯನ್ನೂ ನೀಡಿದಂತಾಗಿದೆ.

ಸರ್ಕಾರದ ಆರ್ಥಿಕ ನೆರವಿನಲ್ಲಿ ನಡೆಯುತ್ತಿರುವ ಸಂಸ್ಕೃತ ವಿದ್ಯಾಲಯಗಳಲ್ಲಿ ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಈಗಾಗಲೇ ಲಭ್ಯವಿದೆ.`ಕಾಲೋಚಿತ ನಿರ್ಣಯ~ ತರಬೇತಿಯಲ್ಲದೆ, ಜ್ಯೋತಿಷ, ತರ್ಕ, ಆಗಮ ಮೊದಲಾದ ಜ್ಞಾನಶಿಸ್ತುಗಳಲ್ಲಿ ವಿದ್ವತ್ ಪದವಿಯನ್ನು ಪಡೆದವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿನ ದೇವಾಲಯಗಳಲ್ಲಿಯೂ ಬೇಡಿಕೆ ಇದೆ.ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದಕ್ಕೆ ಮಾನವನಿರ್ಮಿತ ಜಾತಿಮತಗಳ ಕಟ್ಟುಪಾಡುಗಳು ಅನಗತ್ಯವೆಂದು ನಾಡಿನ ಅನೇಕ ಸಮಾಜ ಸುಧಾರಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅದರಲ್ಲಿಯೂ ನಾರಾಯಣಗುರುಗಳಂತಹ ಸಂತರು ಹಿಂದುಳಿದ ವರ್ಗಗಳಿಗಾಗಿ ದೇವಾಲಯಗಳನ್ನು ಪ್ರತಿಷ್ಠಾಪಿಸಿ ಆ ವರ್ಗಗಳಿಂದಲೇ ಅರ್ಚಕರನ್ನು ತರಬೇತುಗೊಳಿಸುವ ಗುರುಕುಲಗಳನ್ನು ಆರಂಭಿಸಿದ್ದು ಐತಿಹಾಸಿಕ ಸಂಗತಿಯಾಗಿದೆ.

 

ವಿವಿಧ ಜಾತಿ ಸಮುದಾಯಗಳ ದೇವಾಲಯಗಳಲ್ಲಿ ಆಯಾ ಸಮುದಾಯಗಳ ಪುರೋಹಿತರೇ ಪರಂಪರೆಯಿಂದ ಅರ್ಚಕರಾಗಿ ಕೈಂಕರ್ಯ ಮಾಡುತ್ತಿರುವ ನಿದರ್ಶನಗಳು ರಾಜ್ಯದಲ್ಲಿಯೇ ಇವೆ. ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಪಡೆಯುವ ಅವಕಾಶವನ್ನು ಎಲ್ಲ ವರ್ಗಕ್ಕೂ ಮುಕ್ತವಾಗಿ ಒದಗಿಸಿದಾಗ ಅದೊಂದು ವೃತ್ತಿವಿಶೇಷವಾಗಿ ಆಸಕ್ತರನ್ನು ಸೆಳೆಯಬಲ್ಲುದಾಗಿದೆ.ಆದ್ದರಿಂದ ದೇವಾಲಯಗಳ ಅರ್ಚಕ ವೃತ್ತಿ ನಿರ್ದಿಷ್ಟ ಸಮುದಾಯದವರಿಗೆ ಮಾತ್ರವೇ ಮೀಸಲಾಗಿಡಬೇಕೆಂಬ ಯಾವುದೇ ಬೇಡಿಕೆಯನ್ನು ಸರ್ಕಾರ ಪುರಸ್ಕರಿಸಲಾಗದು. ದೇವಾಲಯಗಳಲ್ಲಿನ ಪೂಜಾ ಕೈಂಕರ್ಯವನ್ನು ಶೈಕ್ಷಣಿಕ ಅರ್ಹತೆ ಆಧರಿಸಿದ ವೃತ್ತಿಯಾಗಿ ಸರ್ಕಾರ ಪರಿಗಣಿಸಬೇಕು.ಅರ್ಚಕವೃತ್ತಿಗೆ ಅರ್ಹತೆ ಪಡೆದವರನ್ನು ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ನೇಮಿಸಿ ಕಾನೂನಿನ ಎದುರು ಮಾತ್ರವಲ್ಲದೆ ದೇವರ ಎದುರ ಕೂಡ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾಕಾರಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.