ಬುಧವಾರ, ಏಪ್ರಿಲ್ 14, 2021
24 °C

ಅರ್ಥವಾಗುವಂತೆ ಗಣಿತ ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ತರಗತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಕಬ್ಬಿಣದ ಕಡಲೆ ಎನಿಸುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಇಷ್ಟವಾಗುವ ಹಾಗೂ ಸುಲಭದಲ್ಲಿ ಅರ್ಥವಾಗುವ ಮಾದರಿಯಲ್ಲಿ ಗಣಿತವನ್ನು ಕಲಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು~ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ ಕಿವಿಮಾತು ಹೇಳಿದರು.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಆಶ್ರಯದಲ್ಲಿ `ರಾಷ್ಟ್ರೀಯ ಗಣಿತ ವರ್ಷಾಚರಣೆ~ ಅಂಗವಾಗಿ ನಗರದ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾದುದು. ಈ ಕ್ಷೇತ್ರದ ಶ್ರೀಮಂತ ಪರಂಪರೆಯನ್ನು ಮುಂದುವರಿಸಲು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗಣಿತ ಆಸಕ್ತಿಯನ್ನು ಮೂಡಿಸಬೇಕು~ ಎಂದು ಅವರು ಸಲಹೆ ನೀಡಿದರು.  ಭಾರತೀಯ ವಿಜ್ಞಾನ ಮಂದಿರದ ಗಣಿತ ಒಲಿಂಪಿಯಾಡ್ ಘಟಕದ ಪ್ರಾಧ್ಯಾಪಕ ಡಾ.ಸಿ.ಆರ್.ಪ್ರಾಣೇಶಾಚಾರ್ ಕಾರ್ಯಕ್ರಮ ಉದ್ಘಾಟಿಸಿ, `ಗಣಿತ ಒಲಿಂಪಿಯಾಡ್‌ಗೆ ವಿದ್ಯಾರ್ಥಿಗಳ ಆಯ್ಕೆಗೆ ದೇಶದಲ್ಲಿ ಎರಡು ಹಂತದ ಪ್ರಕ್ರಿಯೆ ನಡೆಸಲಾಗುತ್ತದೆ. ಬಳಿಕ ರಾಷ್ಟ್ರೀಯ ಮಟ್ಟಕ್ಕೆ 35 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನಾಲ್ಕು ವಾರಗಳ ತರಬೇತಿ ನೀಡಲಾಗುವುದು. ಕೊನೆಗೆ ಆರು ವಿದ್ಯಾರ್ಥಿಗಳನ್ನು ಅಂತರರಾಷ್ಟ್ರೀಯ ಮಟ್ಟದ ಗಣಿತ ಒಲಿಂಪಿಯಾಡ್‌ಗೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಿಗಳಲ್ಲಿ ಶೇ 50ರಷ್ಟು ಮಂದಿ ಬಹುಮಾನ ಪಡೆಯುವುದು ಈ ಒಲಿಂಪಿಯಾಡ್‌ನ ವಿಶೇಷ~ ಎಂದರು.ವಿಜ್ಞಾನ ಪರಿಷತ್ ಆಡಳಿತಾಧಿಕಾರಿ ಬಿ.ಎಂ.ಪ್ರಭಾಕರ್, ಭಾರತೀಯ ವಿದ್ಯಾಭವನದ `ವಿಜ್ಞಾನ ಮತ್ತು ಮಾನವಿಕ ಮೌಲ್ಯಗಳು~ ವಿಭಾಗದ ನಿರ್ದೇಶಕ ಎಸ್. ಬಾಲಚಂದ್ರ ರಾವ್, ಓರಿಗಾಮಿ ತಜ್ಞ ವಿ.ಎಸ್.ಎಸ್.ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ 17 ಜಿಲ್ಲೆಗಳ 40 ಶಿಕ್ಷಕರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.