ಶನಿವಾರ, ಮೇ 21, 2022
20 °C

ಅರ್ಧಕ್ಕೆ ನಿಂತ ಆಸರೆ ಮನೆ ಶೀಘ್ರ ಪೂರ್ಣ: ರೂ. 17 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ 50 ಸಾವಿರ ಮನೆಗಳನ್ನು 5,500 ಎಕರೆಯಲ್ಲಿ ಆಸರೆ ಯೋಜನೆಯಡಿ ದಾನಿ ಸಂಸ್ಥೆಗಳ ನೆರವಿನಿಂದ ಸರ್ಕಾರ ನಿರ್ಮಿಸಿದೆ. ಬೇರೆ ರಾಜ್ಯಗಳಲ್ಲಿ ಈ ಕಾರ್ಯ ಆಗಿಲ್ಲ.ಹಣದ ಕೊರತೆಯಿಂದ ಸದ್ಯ 3,300 ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದೆ. ಇದರಲ್ಲಿ ರಾಯಚೂರು, ಬಾಗಲಕೋಟ ಮತ್ತು ಬಿಜಾಪುರ ಜಿಲ್ಲೆಯಲ್ಲಿ 1700 ಮನೆಗಳ ನಿರ್ಮಾಣಕ್ಕೆ 17 ಕೋಟಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ವಸತಿ ಖಾತೆ ಸಚಿವ ವಿ ಸೋಮಣ್ಣ ಹೇಳಿದರು.ರಾಯಚೂರು ತಾಲ್ಲೂಕಿನ  ಡೊಂಗಾರಾಂಪುರ ಗ್ರಾಮದಲ್ಲಿ ಭಾನುವಾರ ನಡೆದ ನೆರೆ ಸಂತ್ರಸ್ತರಿಗೆ ಆಸರೆ ಪುನರ್ವಸತಿ ಯೋಜನೆಯಡಿ ಮಾತಾ ಅಮೃತಾನಂದಮಯಿ ಮಠ ನಿರ್ಮಿಸಿದ 475 ಮನೆ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಪಕ್ಷಬೇಧ ಸಲ್ಲದು. ರಾಜಕಾರಣ ಎಂಬುದು ಜನರ ಕಣ್ಣೊರೆಸುವ ತಂತ್ರ ಆಗಬಾರದು. ಅವರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವುದು ಮುಖ್ಯ ಎಂದು ಹೇಳಿದರು.ವಿವಿಧ ವಸತಿ ಯೋಜನೆಯಡಿ ಬಡವರಿಗೆ ಸರ್ಕಾರವು ಲಕ್ಷಾಂತರ ಮನೆ ದೊರಕಿಸಿದರೂ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಅರ್ಹ ಫಲಾನುಭವಿ ಗುರುತಿಸಿ ಕಿರಿ ಕಿರಿ ಮಾಡದೇ ಮನೆ ದೊರಕಿಸಿದರೆ ಯೋಜನೆಗೆ ಅರ್ಥವಿರುತ್ತದೆ. ಇದನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು.ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಬಸವ ವಸತಿ ಯೋಜನೆಯಡಿ 28,059 ಮನೆ, ಇಂದಿರಾ ವಸತಿ ಯೋಜನೆಯಡಿ 16,000, ವಾಜಪೇಯಿ ವಸತಿ ಯೋಜನೆಯಡಿ 3,050 ಮನೆ ಮಂಜೂರ ಮಾಡಲಾಗಿದೆ. ಅರ್ಹ ಫಲಾನುಭವಿ ಗುರುತಿಸಿ ದೊರಕಿಸುವುದು ಜನಪ್ರತಿನಿಧಿಗಳು, ಆಡಳಿತ ವರ್ಗದ ಜವಾಬ್ದಾರಿ. ಮನೆ ದೊರಕದೇ ದೂರುಗಳು ಬಂದಲ್ಲಿ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ವಸತಿ ಯೋಜನೆ ಅನುಷ್ಠಾನದಲ್ಲಿ ಲಂಚ ಪಡೆಯಲು ಮುಂದಾದ ಬೀದರ್, ಮಡಿಕೇರಿ, ಚಾಮರಾಜನಗರ ಜಿಲ್ಲೆಯ ಕೆಲ ಗ್ರಾ.ಪಂ ಅಧ್ಯಕ್ಷ, ಸದಸ್ಯರ ಸದಸ್ಯತ್ವ ರದ್ದುಪಡಿಸಿ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.ಅಶ್ರಯ ಯೋಜನೆಯಡಿ ರಾಜ್ಯದಲ್ಲಿ ಇದುವರೆಗೆ 20 ಲಕ್ಷ ಮನೆ ನಿರ್ಮಿಸಲಾಗಿದೆ. ಆದರೆ ವಾಸ್ತವಿಕ ಸ್ಥಿತಿಯೇ ಬೇರೆ. ಮನೆ ಪಡೆದವ ಎಲ್ಲೋ ಹೋಗಿ ಬೇರೋಬ್ಬರು ವಾಸ ಮಾಡುತ್ತಿದ್ದಾರೆ. ಇಂಥ ಪ್ರಕರಣ ಪತ್ತೆ ಮಾಡಿ ಯಾರು ವಾಸ ಮಾಡುತ್ತಾರೋ ಅವರಿಗೆ ಮನೆ ನೋಂದಣಿ ಮಾಡಿ ಹಕ್ಕು ಪತ್ರ ಕೊಡುವ ಮೂಲಕ ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಂಡಿದೆ ಎಂದರು.ಕೊಳಚೆ ಅಭಿವೃದ್ಧಿ ಮಂಡಳಿ ಮುಖಾಂತರ 1 ಲಕ್ಷ ಮನೆಗಳನ್ನು ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಹೀಗೆ ಸರ್ಕಾರ ಏನೆಲ್ಲ ಯೋಜನೆ ರೂಪಿಸಿ ಹಣ ದೊರಕಿಸಬಹುದು. ಆದರೆ ಕೆಳ ಹಂತದಲ್ಲಿ ಕೆಲಸ ಮಾಡುವ ಜನಪ್ರತಿನಿಧಿ, ಸಿಬ್ಬಂದಿ ವರ್ಗ ಕಾಳಜಿಯೇ ಅತಿ ಮುಖ್ಯ ಎಂದು ವಿವರಿಸಿದರು.ಶಾಸಕ ರಾಜಾ ರಾಯಪ್ಪ ನಾಯಕ ಅಧ್ಯಕ್ಷತೆವಹಿಸಿದ್ದರು. ಶಾಸಕರಾದ ಸಯ್ಯದ್ ಯಾಸಿನ್, ವೆಂಕಟರಾವ್ ನಾಡಗೌಡ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ, ಬ್ರಹ್ಮಚಾರಿ ಭೀಮಾಮೃತ ಚೈತನ್ಯ, ಜಿಲ್ಲಾ ಪಂಚಾಯಿತಿ ಸಿಇಓ ಮನೋಜಕುಮಾರ ಜೈನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಅಮರೇಶ ಹೊಸಮನಿ, ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ಆತ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶಂಕರಗೌಡ ಹರವಿ ಇತರರಿದ್ದರು. ಅಮೃತಾನಂದಮಯಿ ಸಂಸ್ಥೆಯ ಕೃಷ್ಣಾ ಅವರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಸ್ವಾಗತಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.