ಶನಿವಾರ, ಮೇ 15, 2021
25 °C

ಅರ್ಧ ದಿನ ನುಂಗಿದ ಶಿಥಿಲ ಶಾಲೆಗಳ ವಿಷಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿರುವ ಶಿಥಿಲ ಶಾಲಾ ಕಟ್ಟಡಗಳ ವಿಷಯ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯ ಬಹುತೇಕ ಅವಧಿಯನ್ನು ನುಂಗಿ ಹಾಕಿತು. ಮೂರು ತಿಂಗಳ ನಂತರ ನಡೆದ ಸಾಮಾನ್ಯಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರೂ ತಮ್ಮ ವ್ಯಾಪ್ತಿಯಲ್ಲಿರುವ ಶಿಥಿಲವಾದ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಕುರಿತ ವಿಷಯಗಳನ್ನೇ ಪ್ರಸ್ತಾಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, `ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಆಧಿಕಾರಿಗಳು, ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ವಿಶೇಷ ಸಭೆಯನ್ನು ಒಂದು ವಾರದೊಳಗೆ ಆಯೋಜಿಸಲಾಗುವುದು. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆದಷ್ಟು ಬೇಗ ದುರಸ್ತಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು' ಎಂದರು.ಆದರೆ, ಇದರಿಂದ ಸಮಾಧಾಗೊಳ್ಳದ ಹಲವು ಸದಸ್ಯರು ತಮ್ಮ ವಾದ ಮಂಡಿಸಿದರು. ಅಲ್ಲದೇ, ಕಳೆದ ಸಭೆಗಳಲ್ಲಿ ಈ ಕುರಿತು ನಡೆದಿದ್ದ ಚರ್ಚೆಗೆ ಶಿಕ್ಷಣ ಇಲಾಖೆ ಅಧಿಕಾರಿ ನೀಡಿದ ಅನುಪಾಲನ ವರದಿಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಇಲಾಖೆಯು ಸದಸ್ಯರನ್ನು ನಿರ್ಲಕ್ಷಿಸುತ್ತಿದೆ ಎಂದು ಕಿಡಿ ಕಾರಿದರು. ಸಭೆಯಲ್ಲಿ ಚರ್ಚಿಸಲು ನಿಗದಿಪಡಿಸಲಾಗಿದ್ದ 37 ವಿಷಯಗಳ ಪೈಕಿ, 16 ಶಾಲಾ ಕಟ್ಟಡಗಳ ಪುನರ್‌ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ್ದಾಗಿದ್ದವು.ಕೆ.ಆರ್. ನಗರ ತಾಲ್ಲೂಕಿನ ಮುಡಿಗುಪ್ಪೆಯ ಶಾಲೆಯ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯೆ ಕಲ್ಪನಾ ಧನಂಜಯ್, `ಕಳೆದ ಸಭೆಯಲ್ಲಿ ನಮ್ಮ ಬೇಡಿಕೆ ಅನ್ವಯ ಅಧಿಕಾರಿಗಳು ನೀಡಿರುವ ಪ್ರತಿಕ್ರಿಯೆ ತೀರಾ ನಿರಾಶಾದಾಯಕವಾಗಿದೆ. ಶಿಥಿಲ ಶಾಲೆಯಲ್ಲಿ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸಹಾಯಕ ಮುಖ್ಯ ಎಂಜಿನಿಯರ್ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತರ ನೀಡಿರು ವುದು ಸರಿಯೇ. ರಜೆಯೂ ಮುಗಿದು ಶಾಲೆಗಳು ಆರಂಭವಾಗಿದ್ದು, ಮಳೆಗಾಲದಲ್ಲಿ ಹೆಚ್ಚಿನ ಅಪಾಯ ಸಂಭವಿಸಿದರೆ ಯಾರು ಹೊಣೆ' ಎಂದು ಪ್ರಶ್ನಿಸಿದರು.ಇದೇ ವಿಷಯವಾಗಿ ಶಿಕ್ಷಣ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಮಾರುತಿ, `ಅಧಿಕಾರಿ ಗಳು ಏನು ಮಾಡುತ್ತಿದ್ದಾರೆ. ಕಳೆದ ಸಭೆಯಲ್ಲಿಯೂ ಒಂದಿಡೀ ದಿನ ಮತ್ತು ಇವತ್ತು ಅರ್ಧ ದಿನಕ್ಕೂ ಹೆಚ್ಚು ಕಾಲ ಅದೇ ವಿಷಯದ ಕುರಿತು ಚರ್ಚೆ ನಡೆಸಲಾ ಗುತ್ತಿದೆ. ಸಭೆಯಲ್ಲಿ ಆದ ನಿರ್ಣಯಗಳನ್ನು ಸರಿಯಾಗಿ ಪಾಲಿಸದ ಅಧಿಕಾರಿಗಳು ಏಕೆ ಸಂಬಳ ತೆಗೆದುಕೊ ಳ್ಳುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಶೇಷ ಪ್ರಸ್ತಾವ ಸಲ್ಲಿಕೆ

ಚರ್ಚೆಯನ್ನು ಆಲಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಗೋಪಾಲ್, `ಹಲವಾರು ಶಾಲೆಗಳು ಶಿಥಿಲಗೊಂಡಿವೆ. ಕೆಲವು ತರಗತಿ ಕೋಣೆಗಳು ಶಿಥಿಲಗೊಂಡಿವೆ. ಇವುಗಳನ್ನು ನೆಲಸಮಗೊಳಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಬೇಕು. ಒಂದೊಮ್ಮೆ 10 ರಿಂದ 25 ಸಾವಿರ ರೂಪಾಯಿ ವೆಚ್ಚದಲ್ಲಿ ಕಟ್ಟಿದ್ದ ಹಲವು ಶಾಲೆಗಳು ಇವತ್ತು ದುಸ್ಥಿತಿಯಲ್ಲಿವೆ. ಈ ಕುರಿತು ಸರ್ಕಾರಕ್ಕೆ ವಿಶೇಷ ಪ್ರಸ್ತಾವ ಸಲ್ಲಿಸುತ್ತೇವೆ. ಸರ್ವ ಶಿಕ್ಷಣ ಅಭಿಯಾನದಲ್ಲಿ ಸಿಗುವ ಅನುದಾನವು ಕಡಿಮೆಯಿದೆ' ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕೆ.ಎಂ. ಸುಚಿತ್ರಾ, ಡಿಡಿಪಿಐ ಬಿ.ಕೆ. ಬಸವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯ್  ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ಮಹಿಳಾ ದೌರ್ಜನ್ಯ: ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ

ಮೈಸೂರು: ಮಳೆ ಮೋಡ ಆವರಿಸಿದ್ದ ಮಂಗಳವಾರ  ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಮಹಿಳಾ ದೌರ್ಜನ್ಯದ ವಿಷಯ ಮಾತ್ರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.ಮೊದಲಿಗೆ ವಿಷಯ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ಅವರು, `ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ, ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೊಂದವರಿಂದ ದೂರು ಸ್ವೀಕರಿಸಲು ಮೀನ-ಮೇಷ ಎಣಿಸುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಎಷ್ಟೋ ಪ್ರಕರಣಗಳು ದಾಖಲಾಗುತ್ತಿಲ್ಲ. ಮಹಿಳಾ ದೌರ್ಜನ್ಯಗಳು ಹೆಚ್ಚಲು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಧೋರಣೆಯೂ ಒಂದು ಕಾರಣ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಬೇಕು' ಎಂದು ಆಗ್ರಹಿಸಿದರು.`ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಲ್ಲಿ ಇದೇ ಸಭೆಯಲ್ಲಿ ಈ ಕುರಿತು ನಿರ್ಣಯ ಮಂಡಿಸಲಾಗಿತ್ತು. ಅದರ ಬಗ್ಗೆ ಅಧಿಕಾರಿಗಳು ನೀಡಿರುವ ಅನುಪಾಲನ ವರದಿಯು ಸ್ಪಷ್ಟವಾಗಿಲ್ಲ. ಜಿಲ್ಲೆಯಲ್ಲಿ ಎಂಟು ಮಹಿಳಾ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ. ಈ ಕೇಂದ್ರಗಳನ್ನು ಎಲ್ಲಿ ಆರಂಭಿಸಲಾಗಿದೆ. ಇಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಮತ್ತು ಕ್ರಮಗಳ ಬಗ್ಗೆ ಯಾವುದೇ ರೀತಿಯ ವಿವರಗಳು ಇಲ್ಲ. ಈ ಮಾಹಿತಿ ನಮಗೆ ಕೊಡಲು ಸಾಧ್ಯವಿಲ್ಲವೇ. 2005ರ ದೌರ್ಜನ್ಯ ತಡೆ ಕಾಯಿದೆಯ ಅನ್ವಯ ದೂರು ದಾಖಲಿಸಿಕೊಳ್ಳಲು ಪೊಲೀಸರು ಮುಂದೆ ಬರುತ್ತಿಲ್ಲ. ನೊಂದ ಮಹಿಳೆಯು ಠಾಣೆಗೆ ಹೋದರೆ, ಅವರ ಪರವಾಗಿ ಪುರುಷರೊಬ್ಬರು ಬಂದು ಹೇಳಿಕೆ ನೀಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಕ್ರಿಯೆ ನೀಡಿದ ಸಿಇಓ ಗೋಪಾಲ್, `ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಮಾಹಿತಿ ತರಿಸಿ ಕೊಡುತ್ತೇವೆ' ಎಂದರು.  ಇದರಿಂದ ಸಮಾಧಾನಗೊಳ್ಳದ ಸದಸ್ಯ ಡಾ.ಶಿವರಾಂ, `ಸಾಂತ್ವನ ಕೇಂದ್ರಗಳಲ್ಲಿ ಕೇವಲ ಓಡಿಬಂದ ಪ್ರೇಮಿಗಳು ಮತ್ತು ಕೌಟುಂಬಿಕ ಸಮಸ್ಯೆಗಳ ಚರ್ಚೆಗಳೂ ನಡೆಯುತ್ತಿವೆ. ಅವರಿಗೆ ಸಾಂತ್ವನ ಹೇಳಿ, ಸಲಹೆಗಳನ್ನು ನೀಡುವ ಕೇಂದ್ರಗಳಾಗಿವೆ. ಆದರೆ, ಅತ್ಯಾಚಾರ, ಕಿರುಕುಳ, ದೌರ್ಜನ್ಯಗಳ ಪ್ರಕರಣಗಳು ಏನಾಗಿವೆ. ಅದರ ಕುರಿತು ಸಮಗ್ರ ವಿವರ ಕೊಡಿ' ಎಂದು ಆಗ್ರಹಿಸಿದರು.ನಾನೂ ಪೊಲೀಸ್ ಅಧಿಕಾರಿ ಪತ್ನಿ

ಈ ಸಂದರ್ಭದಲ್ಲಿ ಸುನೀತಾ ಅವರ ಹೇಳಿಕೆ ಉದ್ದೇಶಿಸಿ ಮಾತನಾಡಿದ ಸದಸ್ಯೆ ಸುಧಾ ಮಹದೇವಯ್ಯ, `ನಾನೂ ಒಬ್ಬ ಪೊಲೀಸ್ ಅಧಿಕಾರಿಯ ಪತ್ನಿ. ಎಲ್ಲ ಪೊಲೀಸರೂ ಭ್ರಷ್ಟರಲ್ಲ. ಯಾವ ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಮಾಜಿ ಅಧ್ಯಕ್ಷೆ ಸುನೀತಾ ಅವರು ಸ್ಪಷ್ಟವಾಗಿ ಹೇಳಬೇಕು. ಎಲ್ಲರನ್ನೂ ದೂಷಿಸಬಾರದು' ಎಂದು ಅವರು ಕುಟುಕಿದರು.ಆಗ ಎದ್ದುನಿಂತ ಸದಸ್ಯ ಸಿ.ಜೆ. ದ್ವಾರಕೀಶ್, `ಇದು ವೈಯಕ್ತಿಕ ಆರೋಪ ಅಲ್ಲ. ದೆಹಲಿ ಘಟನೆ ಹಿನ್ನೆಲೆಯಲ್ಲಿ ನಡೆದಿದ್ದ ಚರ್ಚೆ. ಇದನ್ನೂ ಯಾವೊಬ್ಬ ಅಧಿಕಾರಿಯ ವಿರುದ್ಧವೂ ನೀಡುವ ಹೇಳಿಕೆಯೆಂದು ಭಾವಿಸಬಾರದು' ಎಂದು ವಿಷಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.ಆದರೆ, ಕೆಲ ಕಾಲದ ನಂತರ ಸದಸ್ಯ ಎಲ್. ಮಾದಪ್ಪ ತಮ್ಮ ಸರದಿ ಬಂದಾಗ, `ಎಷ್ಟೋ ದೌರ್ಜನ್ಯಗಳು ಮುಚ್ಚಿಹೋಗುತ್ತಿವೆ. ಆದರೆ, ಮಾಜಿ ಅಧ್ಯಕ್ಷೆ ಪೊಲೀಸ್ ಅಧಿಕಾರಿಗಳ ಕುರಿತು ಚುಚ್ಚು ಮಾತಾಡಿದ್ದಾರೆ' ಎಂದು ಹೇಳಿದ್ದನ್ನು ಸುನೀತಾ ವಿರೋಧಿಸಿದರು.ಏರುಧ್ವನಿಯಲ್ಲಿ ಮಾತನಾಡಿದ ಸುನೀತಾ, `ಕೆಲವು ಪ್ರಕರಣಗಳ ಬಗ್ಗೆ ಇಲ್ಲಿ ಹೇಳುವುದು ಬೇಡ ಎಂದಿದ್ದೆ. ನಿನ್ನೆಯಷ್ಟೇ ನಡೆದ ಒಂದು ಪ್ರಕರಣ ಹೇಳಲೇಬೇಕು. ನಮ್ಮ ಊರಲ್ಲಿ ಒಬ್ಬ ಅಳಿಯ ತನ್ನ ಅತ್ತೆ ಮತ್ತು ಪತ್ನಿಯನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದ. ಹೇಗೋ ಬಿಡಿಸಿಕೊಂಡು ಬಂದ ಅವರು ಠಾಣೆಗೆ ಹೋಗಿ ದೂರು ನೀಡಿದರೆ ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ 9ರವರೆಗೆ ಠಾಣೆಯಲ್ಲಿ ಕೂರಿಸಿದರೂ ದೂರು ಸ್ವೀಕರಿಸಲಿಲ್ಲ. ಇಂತಹ ಪ್ರಕರಣಗಳು ನಿತ್ಯವೂ ನಡೆಯುತ್ತಿವೆ' ಎಂದರು.ಇತರ ಸದಸ್ಯರೂ ಮಾತನಾಡಿ, ಮಾದಪ್ಪನವರೂ ಮಾತನಾಡತೊಡಗಿದಾಗ ಕೆಲ ಕಾಲ ಗೊಂದಲ ಉಂಟಾಯಿತು. ಆಗ ಮಧ್ಯಪ್ರವೇಶಿಸಿದ ಸದಸ್ಯ ಮಾರುತಿ ಚರ್ಚೆಗೆ ತೆರೆ ಎಳೆಯಲು ಯತ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.