ಸೋಮವಾರ, ಮೇ 25, 2020
27 °C

ಅಲಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಹಂತಕರ ಪತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಸದಸ್ಯ ದಿವಾನ್ ಅಲಿ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದಲ್ಲಿ ರೌಡಿ ಮಾಹಿಮ್‌ನ ಕೈವಾಡವಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ದಿವಾನ್ ಅಲಿಯ ಎದುರಾಳಿಯಾದ ಮಾಹಿಮ್‌ನೇ ಈ ಕೊಲೆ ಮಾಡಿರಬಹುದು ಎಂದು ಮೊದಲು ಶಂಕಿಸಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಕಾರಣ ಬೇರೊಂದು ಗುಂಪು ಅಲಿಯನ್ನು ಕೊಲೆ ಮಾಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಖಲೀಂ ಮತ್ತು ಉಮರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಬ್ಬರ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ದಾಳಿ ಮಾಡಿದ ಆರೋಪಿಗಳಲ್ಲಿ ಕೆಲವರ ಹೆಸರನ್ನೂ ಅವರು ಬಹಿರಂಗಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ. ಆದರೆ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಸೂಕ್ತ ಸಾಕ್ಷ್ಯಗಳು ಸಿಕ್ಕ ನಂತರ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ದಿವಾನ್ ಅಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ವೈದ್ಯರು ವರದಿ ನೀಡಿದ್ದಾರೆ. ದುಷ್ಕರ್ಮಿಗಳು ಅಲಿಗೆ 17 ಕಡೆ ಮಾರಕಾಸ್ತ್ರಗಳಿಂದ ಕೊಚ್ಚಿರುವ ಗುರುತುಗಳು ದೇಹದಲ್ಲಿ ಪತ್ತೆಯಾಗಿವೆ. ಹಂತಕರು ಪಿಸ್ತೂಲ್‌ನಿಂದ ಹಾರಿಸಿದ ಗುಂಡು ಅಲಿಯ ದೇಹದಿಂದ ತೂರಿಕೊಂಡು ಹೊರ ಹೋಗಿದೆ ಎಂಬ ಸಂಗತಿ ಶವಪರೀಕ್ಷೆ ವರದಿಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ನಡೆದ ಬನಶಂಕರಿ ಎರಡನೇ ಹಂತದ ಯಾರಬ್‌ನಗರದಲ್ಲಿ ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದೆ. ಕೆಲ ವ್ಯಾಪಾರಿಗಳು ಅಂಗಡಿಗಳ ಬಾಗಿಲು ತೆರೆದಿದ್ದರೆ ಇನ್ನೂ ಕೆಲವರು ಬಾಗಿಲು ಮುಚ್ಚಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಮುಂದುವರೆಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.