ಗುರುವಾರ , ಮೇ 26, 2022
28 °C

ಅವರು ಇಲ್ಲದ ಆ ಸಮಯದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮದುವೆಯಾದ ಹೆಣ್ಣುಮಕ್ಕಳಿಗೆ ತನ್ನಿಚ್ಛೆಯಂತೆ ತಿನ್ನುಣ್ಣುವುದಿರಲಿ, ಕಣ್ಣುತುಂಬ ನಿದ್ದೆ ಮಾಡುವುದಕ್ಕೂ ಟೈಮೇ ಸಿಗಲ್ಲ~ ಎಂದು ಎಷ್ಟೋ ದಿನಗಳಿಂದ `ಕಂಪ್ಲೇಂಟ್~ ಮಾಡುತ್ತಿದ್ದ ಗೆಳತಿ ಒಂದು ದಿನ ಫೋನ್ ಮಾಡಿ `ಅಬ್ಬಾ, ಇನ್ನೆರಡು ವಾರ ನಾನು ಹಾಯಾಗಿ ಇರಬಹುದು. ನಮ್ಮ ಮನೆಯವರು ಆಫೀಸ್ ಕೆಲಸದ ಮೇಲೆ ಟೂರ್ ಹೋಗಿದ್ದಾರೆ.

 

ನಾಳೆ ನಮ್ಮ ಮನೆಗೆ ಮಧ್ಯಾಹ್ನದ ಊಟಕ್ಕೆ ಬಂದುಬಿಡು. ಗಂಡಸರಿಗೆ ನಾವುಗಳು ತವರು ಮನೆಗೆ ಹೋದಾಗ ಸಿಗುತ್ತಲ್ಲ  `ಫೋರ್ಸ್ಡ್ ಬ್ಯಾಚಲರ್ಸ್‌~ ಸಮಯ, ಅದೇ ಥರ ಈಗ ನನಗೆ ಸಿಕ್ಕಿರುವ ಈ  `ಅವರಿಲ್ಲದ ಸಮಯ~ನ ಚೆನ್ನಾಗಿ ಎಂಜಾಯ್ ಮಾಡೋಣ ಅಂದ್ಕೊಂಡಿದ್ದೀನಿ.ಹಾಗೆ ಬರ‌್ತಾ ಇನ್ನೆರಡು ವಾರ ಟೈಮ್‌ನ ಹೇಗೆ ಎಂಜಾಯಬಲ್ ಆಗಿ ಮಾಡ್ಕೋಬೋದು ಅಂತ ಒಂದಿಷ್ಟು ಐಡಿಯಾಸ್ ತೊಗೊಂಬಾ~ ಎಂದು ಪಟಪಟ ಮಾತನಾಡಿದಳು.ಈ `ಅವರು~ ಇಲ್ಲದ ಸಮಯದ ಮೌಲ್ಯದ ಬಗ್ಗೆ ನನಗೂ ಅನುಭವವಿದ್ದುದರಿಂದ ನಾನು ಆಕೆಯ `ಆ ನಾಳೆ~ಯ  `ಇನ್ವಿಟೇಷನ್~ ಅನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡೆ.ಅವಳು ಕೇಳಿದ `ಐಡಿಯಾ~ಗಳ ಬಗ್ಗೆ ಆಲೋಚಿಸಬೇಕಿದ್ದರಿಂದ ಒಂದು ಬಿಳಿ ಹಾಳೆ ಹಾಗೂ ಪೆನ್ ತೆಗೆದುಕೊಂಡೆ. ಮೊದಲು ನನಗೆ ತಿಳಿದಿರುವ ಗೆಳತಿಯರ ಅನುಭವಗಳನ್ನು ಬರೆದುಕೊಳ್ಳಲು ಶುರುಮಾಡಿಕೊಂಡೆ.ಗೆಳತಿ ಕೀರ್ತಿ 

 ಸರ್ಕಾರಿ ನೌಕರಿಯಲ್ಲಿರುವ ಈಕೆಯ ಪತಿಗೆ ವರ್ಗಾವಣೆಯ ಸಮಸ್ಯೆ ಇರುವಂತಹದೇ! ಹೀಗಾಗಿ ಅವರೊಂದಿಗೆ ಊರೂರು ಓಡಾಡುವ ಆಕೆಯ ಪ್ರಕಾರ `ಅವರಿಲ್ಲದ ಸಮಯ~ವೆಂದರೆ ದಿನನಿತ್ಯದ ಮನೆವಾರ್ತೆಯ ನಡುವೆ ದೊರೆಯುವ ಬಿಡುವಿನ ಸಮಯವಷ್ಟೇ!

 

ಆಕೆ ಆ ಸಮಯವನ್ನೇ ಜಾಣತನದಿಂದ ಉಪಯೋಗಿಸಿಕೊಂಡು, ಹೊಸ ಗೆಳತಿಯರ ಸ್ನೇಹವನ್ನು ಸಂಪಾದಿಸಿ, ಹೊಸ ವಾತಾವರಣದಲ್ಲಿ ತಾನೂ ಒಬ್ಬಳಾಗಿ ಅವರುಗಳೊಂದಿಗೆ ಸಂತೋಷವಾಗಿ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾಳೆ.ಗೆಳತಿ ಚಾರು

ನೆಂಟಸ್ತಿಕೆಯಲ್ಲೇ ವಿವಾಹ ಮಾಡಿಕೊಂಡಿರುವ ಈಕೆಗೆ  `ಅವರಿಲ್ಲದ ಸಮಯ~ ದೊರೆಯುವುದು ತುಸು ಕಷ್ಟವೇ! ಒಟ್ಟು ಕುಟುಂಬದಲ್ಲಿರುವ ಈಕೆಗೆ ಬಿಡುವಿನ ಸಮಯ ದೊರೆತರೆ ಮನೆಯನ್ನು ಸ್ವಚ್ಛಮಾಡುವುದು, ನೆಂಟರಿಷ್ಟರ ಮನೆಗಳ ಆಗು -ಹೋಗುಗಳಲ್ಲಿ  ಪಾತ್ರ ವಹಿಸುವುದು....ಹೀಗೆ ಒಟ್ಟಿನಲ್ಲಿ ಕುಟುಂಬದೊಂದಿಗೆಯೇ ಇರಬೇಕಷ್ಟೆ. ಅದೃಷ್ಟದಿಂದ ಯಾರೂ ಜೊತೆಗಿಲ್ಲದ ಸಮಯ ಸಿಕ್ಕಲ್ಲಿ ಅವಳು ಸದ್ದು-ಗದ್ದಲವಿರದ ವಾತಾವರಣದಲ್ಲಿ ಹಾಯಾಗಿ ನಿದ್ದೆ ಮಾಡಿಬಿಡುತ್ತಾಳೆ.ಗೆಳತಿ ಪ್ರಿಯಾ

 ನೌಕರಿಯಲ್ಲಿರುವುದರಿಂದ ಈಕೆಗೆ `ಅವರಿಲ್ಲದ ಸಮಯ~ ವೆಂದರೆ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ಹೊರುವುದೆಂದರ್ಥ. ತನ್ನ ಪತಿಯು ಕೆಲಸದ ಮೇಲೆ `ಟೂರ್~ ಹೋದಾಗಲಂತೂ ಈಕೆಯ ಬವಣೆ ಹೇಳತೀರದು.

 

ಅವರಿಲ್ಲದ ಆ ಸಮಯದಲ್ಲಿ ಆಕೆಯು ಒಂದೆರಡು ದಿನಗಳ ಮಟ್ಟಿಗೆ ನೌಕರಿಯಿಂದ ರಜೆ ಪಡೆದು, ಮಕ್ಕಳನ್ನು `ಬೇಬಿ ಸಿಟ್ಟರ್~ ಹತ್ತಿರ ಕಳುಹಿಸದೆ ಅವರುಗಳಿಗೆ ಬೇಕಾದ ಅಡುಗೆ- ತಿಂಡಿಗಳನ್ನು ಮಾಡಿಕೊಟ್ಟು ಕಾಲ ಕಳೆಯುತ್ತಾಳೆ.ಅವಳು ಹೇಳುವುದಿಷ್ಟೇ- ಪತಿಯಷ್ಟೇ ಕುಟುಂಬದ ಜವಾಬ್ದಾರಿಯನ್ನು ಹೊರುವ ಸ್ತ್ರೀಯ ದೃಷ್ಟಿಯಿಂದ ನೋಡಿದಲ್ಲಿ `ಅವರಿಲ್ಲದ ಸಮಯ~ವು ಅವಳ ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ಅತಿ ಅವಶ್ಯವಿರುವ ಒಂದು ಔಷಧವೆಂಬುದಂತೂ ಸತ್ಯ.ಗೆಳತಿ ಜ್ಯೋತಿ

 ಗೃಹವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಈಕೆಯು ನವವಿವಾಹಿತಳು. ಈಕೆಯ `ಅವರಿಲ್ಲದ ಸಮಯ~ ವು ಗೆಳತಿಯರಿಂದ ಹೊಸ ಅಡುಗೆಗಳನ್ನು ಕಲಿಯುವುದು, ಹೊಸರೀತಿಯ ಗೃಹಾಲಂಕರಣಗಳನ್ನು ಮಾಡುವುದು ...ಒಟ್ಟಿನಲ್ಲಿ ನವವಿವಾಹಿತರು ಆಲೋಚಿಸುವಂತೆ ಪತಿಯ ಇಷ್ಟಾನಿಷ್ಟಗಳನ್ನು ಅರಿತು ನಡೆಯುವಲ್ಲಿ ಕಳೆಯುತ್ತದೆ.ಗೆಳತಿ ರೂಪ

 ಈಕೆಗೆ ಶಾಪಿಂಗ್ ಎಂದರೆ ಬಲು ಇಷ್ಟ. ಈಗಿನ್ನೂ ಶಾಲೆಗೆ ಹೋಗುವ ವಯಸ್ಸಿನ ಮಗುವಿರುವ ಈಕೆಯ ಪತಿಗೆ ಶಾಪಿಂಗ್ ಎಂದರೆ  `ಕೇವಲ ಕಾಲಹರಣ~. ಆದ್ದರಿಂದ `ಅವರಿಲ್ಲದ ಸಮಯ~ದಲ್ಲಿ ತಾನೊಬ್ಬಳೇ  `ವಿಂಡೋ ಶಾಪಿಂಗ್~ಗೆ ಹೊರಡುತ್ತಾಳೆ.ಈಕೆಯ ಪ್ರಕಾರ, ಕುಟುಂಬದೊಂದಿಗೆ `ಮಾಲ್~ಗಳಿಗೆ ಹೋಗುವುದು ಮನೆಯ ಸಾಮಾನು ತರುವುದಕ್ಕೆ! ಆದರೆ ತನಗೋಸ್ಕರವಾಗಿ ಮಾಲ್‌ಗೆ ಹೋಗುವುದು ~ಶಾಪಿಂಗ್~ಗೆ! ಅವಳ ಅನಿಸಿಕೆ ಎಂದರೆ ಕುಟುಂಬಕ್ಕೆ ನಿಷ್ಠಳಾಗಿರುವ ಹೆಂಗಸಿಗೆ ತನ್ನದೇ ಆದ ಸಮಯವನ್ನು ತನಗೋಸ್ಕರವಾಗಿ ವಿನಿಯೋಗಿಸಿಕೊಳ್ಳುವ ಅವಕಾಶವು ಒದಗಿದಲ್ಲಿ ಆಕೆ ಅದೃಷ್ಟವಂತಳೇ ಸರಿ!ಗೆಳತಿ ಶ್ಯಾಮಾ

ಈಕೆಗೆ ಕಾದಂಬರಿಗಳನ್ನು ಓದುವ ಹವ್ಯಾಸ ಇದೆ. ಈಕೆಗೆ `ಅವರಿಲ್ಲದ ಸಮಯ~ವೆಂದರೆ ಹಿಗ್ಗೋ ಹಿಗ್ಗು. ಮನೆಯ ಸಮೀಪವಿರುವ ಗ್ರಂಥಾಲಯದಿಂದ ವಾರಕ್ಕೆ ಮೂರು ಪುಸ್ತಕಗಳನ್ನು ಎರವಲು ತರುವ ಈಕೆ ತನ್ನ ಬಿಡುವಿನ ವೇಳೆಯಲ್ಲಿ ತಾನು ಓದುವ ಕಥೆಗಳ ಪಾತ್ರಗಳಲ್ಲಿ ಒಂದಾಗಿ ತನ್ನದೇ ಆದ ವಿಶೇಷವಾದ ಜಗತ್ತಿನಲ್ಲಿ ವಿಹರಿಸುತ್ತಾಳೆ.ಈ ರೀತಿ ಪಟ್ಟಿ ಬೆಳೆಯುತ್ತಲೇ ಹೋಯಿತು. ನಾಳೆ ಗೆಳತಿಯ ಮನೆಗೆ ಹೋದಾಗ  ನನಗೆ ಬಂದ - `ಅವರವರ ಭಾವಕ್ಕೆ, ಅವರವರ ಬದುಕಿಗೆ~ ತಕ್ಕಂತೆ ದೊರೆಯುವ ~ಅವರಿಲ್ಲದ ಸಮಯ~ವು, ಗಂಡಸರಿಗೆ ದೊರೆಯುವ `ಅವಳಿಲ್ಲದ ಸಮಯ~ಕ್ಕಿಂತ ಹೇಗೆ ಭಿನ್ನವಾಗುತ್ತದೆ?

 

ಪತಿಯ ~ಅವಳಿಲ್ಲದ ಸಮಯ~ವನ್ನು ~ಸಿಂಪತಿ~ಯಿಂದ ನೋಡಿ, ಆತನ ಚಟುವಟಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನರು, ಸತಿಯ `ಅವರಿಲ್ಲದ ಸಮಯ~ವನ್ನು `ವ್ಯರ್ಥಕಾಲಹರಣ~ವೆಂಬುದಾಗಿ ಪರಿಗಣಿಸುವುದೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.