ಮಂಗಳವಾರ, ಮೇ 18, 2021
30 °C

ಅವ್ಯವಸ್ಥೆ ಮೆಟ್ಟಿನಿಂತ ವಿದ್ಯಾರ್ಥಿಗಳು

ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಸ್ವಂತ ಕಟ್ಟಡವಿಲ್ಲದ ಕಾಲೇಜು, ವಸತಿ ನಿಲಯದಲ್ಲೂ ತರಗತಿಗಳು, ಇಕ್ಕಟ್ಟಾದ ಕೊಠಡಿಗಳು, ಸೋರುವ ಕಟ್ಟಡ, ಪ್ರಾಯೋಗಿಕ ಪಾಠಕ್ಕೆ ದೂರದ ಕಾಲೇಜುಗಳಿಗೆ ಹೋಗಬೇಕಾದ ಪರಿಸ್ಥಿತಿ. ಇದು ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸದ್ಯದ ಸ್ಥಿತಿ.ಕಾಲೇಜಿನಲ್ಲಿರುವ ಈ ಅವ್ಯವಸ್ಥೆ ಅಥವಾ ಕೊರತೆಗಳು ಸಾಧನೆಗೆ ಅಡ್ಡಿಯಾಗಿಲ್ಲ ಎನ್ನುವುದನ್ನು ಇದೇ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾಗಿರುವ ರವಿಕಿರಣ ಸಾಳಸ್ಕರ್, ಲಕ್ಷ್ಮಿ  ನಾರಾಯಣ ಪೈ, ಮಹಮ್ಮದ್ ಇಸಾಕ್ ಶೇಖ್ ಮತ್ತು ಪ್ರೀತಮ್ ನಾಯ್ಕ ಅವರು ವಿಭಾಗದ ಸಹಾಯಕ ಪ್ರಾಧ್ಯಾಪಕ ಶಶಿಧರ ಬನವಾಸಿ ಅವರ ಮಾರ್ಗದರ್ಶನದಲ್ಲಿ  `ಮೆಕೆನೈಸ್ಡ್ ಬ್ಲ್ಯಾಕ್ ಬೋರ್ಡ್ ಕ್ಲೀನರ್' ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.ಬೋರ್ಡ್ ಕ್ಲೀನರ್‌ನ ಕುರಿತ ಕಲ್ಪನೆಯನ್ನು ಮಾರ್ಗದರ್ಶಕ ಶಶಿಧರ ಬನವಾಸಿ ನಾಲ್ವರು ವಿದ್ಯಾರ್ಥಿಗಳ ಬಳಿ ಹೇಳಿದರು. ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲದಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕ ಬಸನವಾಸಿ ಹೇಳಿದ ಕಲ್ಪನೆಯನ್ನು ಸವಾಲಾಗಿ ತೆಗೆದುಕೊಂಡರು.ಗುರಿ ಈಡೇರಿಸಲು ಹಗಲು-ರಾತ್ರಿ ಎನ್ನದೇ ಕಾರ್ಯಪ್ರವೃತ್ತರಾದರು. ಕಾಲೇಜಿನ ಕೊಠಡಿಯೊಂದರಲ್ಲೇ ಪ್ರಯೋಗಕ್ಕೆ ಮುಂದಾದರು. ಕೊಠಡಿಯ ಬೋರ್ಡ್‌ನ ಮೇಲೆ ಮತ್ತು ಕೆಳಭಾಗದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಆ್ಯಂಗ್ಲರ್‌ಗಳನ್ನು ಅಳವಡಿಸಿದರು.  ನಾಲ್ಕು ಆ್ಯಂಗ್ಲರ್‌ಗಳಿಗೆ ಬೋರ್ಡ್ ಉದ್ದವಿರುವಷ್ಟು ಅಲ್ಯೂಮಿಯಮ್ ಟ್ಯೂಬ್ ಬಳಸಿ ಗೈಡ್ ವೇ(ಡಸ್ಟ್ ಕ್ಲೀನರ್ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಮಾಡಿರುವ ಹಳಿ) ನಿರ್ಮಿಸಿಕೊಂಡ ನಂತರ ಅಲ್ಯೂಮಿನಿಯಂ ಟ್ಯೂಬ್‌ನಿಂದಲೇ ಡಸ್ಟರ್ ಫ್ರೇಂ ನಿರ್ಮಿಸಿ ಅದಕ್ಕೆ ದಸ್ಟರ್ ಅಂಟಿಸಿದರು.ಈ ಡಸ್ಟರ್ ಫ್ರೇಂ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವಂತೆ ಮಾಡಲು 250ಎಚ್‌ಪಿ ಸಾಮರ್ಥ್ಯದ ಮೋಟಾರು ಅಳವಡಿಸಿ ಪ್ರಾಯೋಗಿಕವಾಗಿ ಬೋರ್ಡ್ ಕ್ಲೀನರ್‌ಗೆ ಚಾಲನೆ ನೀಡಿದಾಗ ಇಡೀ ವ್ಯವಸ್ಥೆ ವೈಬ್ರೆಟ್ ಆಗಲು ಪ್ರಾರಂಭಿಸಿತು. ಅದೂ ಅಲ್ಲದೇ ಬೋರ್ಡ್ ಕ್ಲೀನರ್ ಕೇವಲ ಐದೇ ಸೆಕೆಂಡ್‌ನಲ್ಲಿ ಬೋರ್ಡ್ ಸ್ವಚ್ಛ ಮಾಡುತ್ತಿತ್ತು.ವೈಬ್ರೆಟ್ ಆಗುವುದನ್ನು ತಡೆಗಟ್ಟಲು ಮತ್ತು ಕ್ಲೀನರ್ ಚಲಿಸುವ ವೇಗ ಕಡಿಮೆ ಮಾಡಲು ತಲೆಕೆಡಿಸಿಕೊಂಡ ವಿದ್ಯಾರ್ಥಿಗಳು ಮೋಟಾರಿಗೆ ವೇಗ ನಿಯಂತ್ರಕ ಎರಡು ಪುಲ್ಲಿಯನ್ನು ಅಳವಡಿಸಿದರು. ಇದರೊಂದಿಗೆ ಡಸ್ಟರ್ ಫ್ರೇಂ ಚಲಿಸಲು ಅಳವಡಿಸಿರುವ `ಗೈಡ್‌ವೇ'ಯ ಉದ್ದವನ್ನು ಹೆಚ್ಚಿಸಿದರು. ಹೀಗೆ ಎಲ್ಲ ಕಾರ್ಯ ಪೂರ್ಣಗೊಂಡ ನಂತರ ಡಸ್ಟ್ ಕ್ಲೀನರ್‌ಗೆ ಪುನಃ ಚಾಲನೆ ನೀಡಿದರು. ಕಾರ್ಯ ಆರಂಭಿಸಿದ ಡಸ್ಟ್ ಕ್ಲೀನರ್ ಯಂತ್ರ ಯಾವುದೇ ರೀತಿಯ ವೈಬ್ರೆಟ್ ಆಗಲಲ್ಲ. ಅಲ್ಲದೇ ವೇಗವೂ ಕಡಿಮೆಯಾಗಿತ್ತು. ಏಳು ಸೆಕೆಂಡ್‌ಗಳಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಚಲಿಸಿತು. ಡಸ್ಟ್ ಕ್ಲೀನರ್ ಸರಿಯಾಗಿ ಕಾರ್ಯನಿರ್ವಹಿಸು ಪ್ರಾರಂಭಿಸುತ್ತಿದ್ದಂತೆ ವಿದ್ಯಾರ್ಥಿಗಳು ವಿಶ್ವವನ್ನೇ ಗೆದ್ದಷ್ಟು ಖುಷಿಪಟ್ಟರು. ಈ ಯಂತ್ರ ಸಿದ್ಧಪಡಿಸಲು ಮಾಡಿರುವ ಖರ್ಚು ಮಾತ್ರ  5, 600 ರೂಪಾಯಿ.`ದೇಶದಲ್ಲಿರುವ ಎಲ್ಲ ಶೈಕ್ಷಣಿ ಸಂಸ್ಥೆಗಳಲ್ಲಿ ಬ್ಲ್ಯಾಕ್ ಬೋರ್ಡ್‌ಗಳಿವೆ. ಈ ಬೋರ್ಡ್‌ಗಳನ್ನು ಕೈಯಿಂದ ಸ್ವಚ್ಛ ಮಾಡಲು ಸಾಕಷ್ಟು ಸಮಯ ಮತ್ತು ಶಕ್ತಿಬೇಕು. ಇದೂ ಅಲ್ಲದೇ ಬೋರ್ಡ್ ಸ್ವಚ್ಛಗೊಳಿಸುವಾಗ ಚಾಕ್ ಪೌಡರ್ ಗಾಳಿಯಲ್ಲಿ ಹಾರಿ ವಾತಾವರಣದಲ್ಲಿ ಸೇರುವುದರಿಂದ ಆರೋಗ್ಯಕ್ಕೂ ಹಾನಿ ಆಗುವ ಸಾಧ್ಯತೆ ಇರುತ್ತದೆ. ನಾವು ಸಿದ್ಧಪಡಿಸಿರುವ ಈ ಯಂತ್ರ ಬೋರ್ಡ್ ಸ್ವಚ್ಛಗೊಳಿಸಲು ಉತ್ತಮ ಮತ್ತು ಸುರಕ್ಷಿತ ಸಾಧನವಾಗಿದೆ' ಎನ್ನುತ್ತಾರೆ ಬೋರ್ಡ್ ಕ್ಲೀನರ್ ಸಿದ್ಧಪಡಿಸಿದ ವಿದ್ಯಾರ್ಥಿಗಳು.`ಕಾಲೇಜಿನ ಪ್ರಾಂಶುಪಾಲ ವಿ.ಎ.ರಾಯ್ಕರ್, ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ಅವರು ಪ್ರೋತ್ಸಾಹ, ಸಲಹೆ ನೀಡಿರುವುದು ನಾವು ಸಾಧನೆಯ ಎತ್ತರ ತಲುಪಲು ಸಾಧ್ಯವಾಯಿತು' ಎನ್ನುತ್ತಾರೆ ವಿದ್ಯಾರ್ಥಿಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.