ಭಾನುವಾರ, ಆಗಸ್ಟ್ 1, 2021
20 °C

ಅಸಂಘಟಿತ ಕಾರ್ಮಿಕರ ತರಬೇತಿಗೆ ಕೌಶಲ ಅಕಾಡೆಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಸಂಘಟಿತ ಕಾರ್ಮಿಕರಿಗೆ ತರಬೇತಿ ನೀಡುವ ಸಂಬಂಧ ದೇಶದಲ್ಲಿಯೇ ಪ್ರಥಮ ಬಾರಿಗೆ ನಗರದ ಕೆಂಗೇರಿಯಲ್ಲಿ ಕೌಶಲ್ಯ ಅಕಾಡೆಮಿ ಸ್ಥಾಪಿಸಲಾಗುವುದು~ ಎಂದು ಕಾರ್ಮಿಕ ಸಚಿವ ಬಿ.ಎನ್‌.ಬಚ್ಚೇಗೌಡ ತಿಳಿಸಿದರು.ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲೀಕರ ಮತ್ತು ತಂತ್ರಜ್ಞರ ಸಂಘ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಕೇಂದ್ರ ಸರ್ಕಾರ ಅರ್ಧದಷ್ಟು ಹಣವನ್ನು ಅಕಾಡೆಮಿ ಸ್ಥಾಪನೆಗೆ ನೀಡುತ್ತಿದ್ದು ಇಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದ ಅಸಂಘಟಿತ ಕಾರ್ಮಿಕರು ತರಬೇತಿ ಪಡೆಯಬಹುದಾಗಿದೆ. ಕಾರ್ಮಿಕರ ಮಕ್ಕಳು ಕೂಡ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ತರಬೇತಿ ಪಡೆಯುವ ಕಾರ್ಮಿಕರಿಗೆ ಉಚಿತ ಹಾಸ್ಟೆಲ್‌, ಗೌರವಧನ ನೀಡಲಾಗುವುದು. ತರಬೇತಿ ಪಡೆದ ನಂತರ ಸೂಕ್ತ ಉದ್ಯೋಗವಕಾಶ ಕಲ್ಪಿಸಲಾಗುವುದು~ ಎಂದು ಹೇಳಿದರು.`ಅಕಾಡೆಮಿಗಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಅನುದಾನ ಪಡೆಯಲಾಗುತ್ತಿದೆ. ಸುಮಾರು 10 ಸಾವಿರ ಚದರ ಅಡಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ತರಬೇತಿ ಪಡೆಯುವ ಕಾರ್ಮಿಕರ ಆಯ್ಕೆಗಾಗಿ ಶೀಘ್ರದಲ್ಲಿಯೇ ಸಮಿತಿ ರಚಿಸಲಾಗುವುದು~ ಎಂದರು.`ಅಲ್ಲದೇ 67 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧೋದ್ದೇಶ ತರಬೇತಿ ಕೇಂದ್ರವನ್ನು ಬೆಂಗಳೂರು ಹಾಗೂ ಗುಲ್ಬರ್ಗಗಳಲ್ಲಿ ಸ್ಥಾಪಿಸಲಾಗುವುದು. ರಾಷ್ಟ್ರೀಯ ಸ್ವಾಸ್ಥ ಯೋಜನೆಯಡಿ ಉತ್ತರ ಕರ್ನಾಟಕದ 1.5 ಲಕ್ಷ ಅಸಂಘಟಿತ ಕಾರ್ಮಿಕರಿಗೆ ವಿವಿಧ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. 30 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ~ ಎಂದು ತಿಳಿಸಿದರು.`ಮಾಲೀಕರು, ಆಡಳಿತ ಮಂಡಲಿಯಿಂದ ಕಾರ್ಮಿಕರು ಶೋಷಣೆ ಅನುಭವಿಸಬಾರದು. ಈ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಅಸಂಘಟಿತ ಕಾರ್ಮಿಕರ ಏಳಿಗೆಗಾಗಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ~ ಎಂದು ಹೇಳಿದರು.ಗೃಹ ಸಚಿವ ಆರ್‌. ಅಶೋಕ ಮಾತನಾಡಿ `ದ್ವಿಚಕ್ರ ವಾಹನ ವಲಯದ ಕಾರ್ಮಿಕರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವೇಗವಾಗಿ ಬೆಳೆಯಬೇಕು. ಆಗ ಮಾತ್ರ ಪಾಶ್ಚಾತ್ಯ ದೇಶಗಳಂತೆ ಅಭಿವೃದ್ಧಿ ಹೊಂದಲು ಸಾಧ್ಯವಿದೆ~ ಎಂದರು.`ರೈತರನ್ನು ಹೊರತುಪಡಿಸಿದರೆ ಕಾರ್ಮಿಕರು ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚುತ್ತಿವೆ~ ಎಂದು ಅವರು ಹೇಳಿದರು.ಚಲನಚಿತ್ರ ನಟ ಜಗ್ಗೇಶ್‌ ಮಾತನಾಡಿ `ಸುನಾಮಿ ಭೂಕಂಪಗಳಿಂದ ತತ್ತರಿಸಿದ ಜಪಾನ್‌ ಕೇವಲ 8 ದಿನಗಳಲ್ಲಿ ಅಲ್ಲಿನ ಹೆದ್ದಾರಿಗಳನ್ನು ಮರು ನಿರ್ಮಿಸಿತು. ಕಾರ್ಮಿಕರು ಮನಸ್ಸು ಮಾಡಿದರೆ ಕೇವಲ ಒಂದು ವರ್ಷದಲ್ಲಿ ದೇಶವನ್ನು ಉನ್ನತಿಗೆ ಕೊಂಡೊಯ್ಯಬಹುದು~ ಎಂದರು. `ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಸಂದೇಶದಂತೆ ಕಾರ್ಮಿಕರು ಕಾಯಕದ ಬಗ್ಗೆ ನಿಷ್ಠೆ ಹೊಂದಬೇಕು. ಕಾಲಹರಣಕ್ಕೆ ಮಹತ್ವ ನೀಡದೇ ಕಾಯಕಕ್ಕೆ ಒತ್ತು ನೀಡಬೇಕು~ ಎಂದು ತಿಳಿಸಿದರು.ಉಪ ಮೇಯರ್‌ ಎಸ್‌. ಹರೀಶ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಸಂಘದ ಅಧ್ಯಕ್ಷ ಕೆ.ಎಸ್‌.ಪ್ರಸನ್ನಕುಮಾರ ಗೌಡ, ಉದ್ಯಮಿಗಳಾದ ರೆಹಮತ್‌ಉಲ್ಲಾ, ಎಸ್‌.ಎಂ.ಬಾಳಿಗ, ರಜಿತ್‌ ಜಾನ್‌, ವೆಂಕಟೇಶ ಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.