ಅಸಮರ್ಪಕ ವೇತನ: ಆರೋಪ
ಬಾಗೇಪಲ್ಲಿ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಕೂಲಿ ಸಂಘದ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಯೋಜನೆಯ ಹೆಸರಿನಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅವರು, ‘ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲ. ಹಣ ದುರ್ಬಳಕೆ ಜತೆ ಜಾಬ್ ಕಾರ್ಡ್ಗಳನ್ನು ಸಹ ವಿತರಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಲಿ ಸಂಘದ ಅಧ್ಯಕ್ಷ ವೆಂಕಟನರಸಪ್ಪ ಮಾತನಾಡಿ, ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರಿನಲ್ಲಿ ಕೆಲ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ತಾಲ್ಲೂಕಿನ ಸೋಮನಾಥಪುರ, ಪಾಳ್ಯಕೆರೆ, ಬಿಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಸಮರ್ಪಕವಾಗಿ ವಿತರಿಸಲಾಗಿಲ್ಲ’ ಎಂದು ಆರೋಪಿಸಿದರು. ಕೂಲಿ ಸಂಘದ ಮುಖಂಡ ಗೋವಿಂದಪ್ಪ ಮಾತನಾಡಿ, ‘ಕೂಲಿಕಾರರಿಗೆ ಶೀಘ್ರವೇ ಕೂಲಿ ನೀಡದಿದ್ದಲ್ಲಿ, ನಿರ್ಲಕ್ಷ್ಯ ತೋರುವುದು ಮುಂದುವರೆಸಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾ.ಪಂ. ವ್ಯವಸ್ಥಾಪಕಿ ಲಕ್ಷ್ಮಿದೇವಮ್ಮ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ತಾಲ್ಲೂಕು ಕೂಲಿ ಸಂಘದ ಖಜಾಂಚಿ ಎಲ್.ಆಂಜಿನಪ್ಪ, ಪ್ರಸಾದ್, ರಾಧಮ್ಮ, ಮಂಜುಳಮ್ಮ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.