ಸೋಮವಾರ, ಜೂನ್ 14, 2021
22 °C

ಆಂತರಿಕ ಕಿತ್ತಾಟವೇ ಬಿಜೆಪಿ ಸರ್ಕಾರದ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಇಂದಿನವರೆಗೆ ಆಂತರಿಕವಾಗಿ ಕಿತ್ತಾಡಿಕೊಂಡಿರುವುದೇ ಅವರ ಸಾಧನೆಯಾಗಿದೆ~ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.`20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅವರು ಮಾಡಿದ್ದ ಸಾಧನೆಗಳನ್ನೇ ತಮ್ಮದೆಂದು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಈ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.`ಬಿಜೆಪಿ ಸರ್ಕಾರವು ಈ ರಾಜ್ಯಕ್ಕೆ ಒಂದು ಶಾಪವಾಗಿದೆ. ಆ ಶಾಪದಿಂದ ಜನರನ್ನು ವಿಮೋಚನೆಗೊಳಿಸಬೇಕು ಎಂದು ತಂದೆ ಬಂಗಾರಪ್ಪ ಅವರು ಹೇಳುತ್ತಿದ್ದರು. ಅವರ ಆಸೆಯನ್ನು ಈಡೇರಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ~ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.`ಬಿಜೆಪಿಯಲ್ಲಿ ನಡೆಯುತ್ತಿರುವ ಕಿತ್ತಾಟವನ್ನು ನೋಡಿದರೆ ಚುನಾವಣೆ ಯಾವುದೇ ಕ್ಷಣದಲ್ಲಿ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ~ ಎಂದು ಅವರು ತಿಳಿಸಿದರು.`ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ ಮಾತಿಗೆ ತಪ್ಪಿದೆ. ಜೆಡಿಎಸ್ ನೇತೃತ್ವದ ಸರ್ಕಾರ ಬಂದರೆ ನಿರುದ್ಯೋಗಿ ಭತ್ಯೆ ನೀಡಲಾಗುವುದು. ಜೊತೆಗೆ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲಾಗುವುದು~ ಎಂದು ಅವರು ಹೇಳಿದರು.`ಒಂದು ಪಕ್ಷಕ್ಕೆ ನಾಯಕತ್ವ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ನಾಯಕರಾರು ಎಂದು ಗೊತ್ತಿಲ್ಲ. ಇನ್ನು ಬಿಜೆಪಿಯಲ್ಲಿ ಬೆಳಿಗ್ಗೆ ಒಬ್ಬರು, ಮಧ್ಯಾಹ್ನ ಮತ್ತೊಬ್ಬರು ನಾನೇ ನಾಯಕ ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಯುವ ಶಕ್ತಿಯು ಕುಮಾರಸ್ವಾಮಿ ಅವರ ನೇತೃತ್ವ ಒಪ್ಪಿಕೊಂಡು ಜೆಡಿಎಸ್‌ನತ್ತ ಹರಿದು ಬರುತ್ತಿದೆ~ ಎಂದರು.`ಇತ್ತೀಚೆಗೆ ಯಾದಗಿರಿಯಲ್ಲಿ ಚಿತ್ರನಟಿ ಪೂಜಾ ಗಾಂಧಿ ಅವರು `ದಂಡುಪಾಳ್ಯ~ ಚಿತ್ರದ ಪೋಸ್ಟರ್ ಬಗೆಗೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ವಿಧಾನಸೌಧದಲ್ಲಿ ಅವರ ಪಕ್ಷದ ಮಾಜಿ ಮಂತ್ರಿಗಳು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೊದಲು ಅವರನ್ನು ಮನೆಗೆ ಕಳುಹಿಸಿ, ಆ ಮೇಲೆ ನಮ್ಮನ್ನು ಕೇಳಲಿ~ ಎಂದು ಅವರು ಸವಾಲು ಹಾಕಿದರು.`ನನಗೂ ಚಿತ್ರರಂಗದ ನಂಟಿದೆ. ಚಲನಚಿತ್ರ ರಂಗದ ಬಗೆಗೆ ಯಾರೂ ಹಗುರವಾಗಿ ಮಾತನಾಡಬಾರದು. ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಬೇಕು~ ಎಂದರು.ಚಿತ್ರನಟಿ ಪೂಜಾ ಗಾಂಧಿ ಮಾತನಾಡಿ, ಮಹಿಳೆಯರ ಧ್ವನಿಯಾಗಲೆಂದು ಪಕ್ಷಕ್ಕೆ ಬಂದಿದ್ದೇನೆ. ಜೆಡಿಎಸ್ ತತ್ವಗಳನ್ನು ಮೆಚ್ಚಿ, ಕುಮಾರಸ್ವಾಮಿಯವರ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.ಮಾಜಿ ಸಚಿವ ಎ.ಬಿ. ಪಾಟೀಲ, ಮಾಜಿ ಶಾಸಕರಾದ ಮೋಹನ ಷಾ, ಭೀಮಪ್ಪ ಸರಿಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಟಗಾರ ಮತ್ತಿತರರು ಹಾಜರಿದ್ದರು.

ಮೆರವಣಿಗೆ: ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹಾಗೂ ಚಿತ್ರನಟಿ ಪೂಜಾಗಾಂಧಿ ಅವರನ್ನು ಅಶೋಕ ವೃತ್ತದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಕರೆತಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.