ಬುಧವಾರ, ಜನವರಿ 29, 2020
27 °C

ಆಂಧ್ರ ಕನ್ನಡಿಗರಿಗೆ ಪಠ್ಯಪುಸ್ತಕ ಕೊಡಿ

ಶ್ರೀಧರಗಡ್ಡೆ ಸಿದ್ದಬಸಪ್ಪ,ಬಳ್ಳಾರಿ Updated:

ಅಕ್ಷರ ಗಾತ್ರ : | |

`ಕನ್ನಡ ಭಾಷಾ ಪಠ್ಯ ಪುಸ್ತಕ' ಕುರಿತು ಹೊಸ ಸರ್ಕಾರಕ್ಕೆ ಮನವಿ. ಕಳೆದ ವರ್ಷ ಸರ್ಕಾರದ ಹಾರಿಕೆಯ ಉತ್ತರಗಳಿಂದ ಬೇಸತ್ತಿದ್ದ ನಮಗೆ ಈ ವರ್ಷವಾದರೂ ಸಿಹಿ ಸುದ್ದಿ ಸಿಗಬಹುದೇನೋ ಎಂಬ ನಿರೀಕ್ಷೆಯಿದೆ.ಕರ್ನಾಟಕ ಸರ್ಕಾರದಂತೆ ಆಂಧ್ರ ಸರ್ಕಾರವು ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಲ್ಲ. ಗ್ರಾಮಾಂತರ ಪ್ರದೇಶದ ಕನ್ನಡದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ಹೊಸ ಪ್ರೌಢಶಾಲೆಗಳನ್ನು ಪ್ರಾರಂಭಿಸಿದೆ. ಕರ್ನೂಲ್ ಜಿಲ್ಲೆ ಒಂದರಲ್ಲಿಯೇ 22 ಮಂದಿ ಕನ್ನಡ ಶಿಕ್ಷಕರನ್ನು ನೇಮಿಸಿ ಶಿಕ್ಷಕರ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿದೆ. ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಖರೀದಿಸಲು ಕೆಲವು ಶಾಲೆಗಳಿಗೆ ಅನುದಾನ ನೀಡಿ ಪ್ರೋತ್ಸಾಹ ನೀಡಿದೆ.ಕನ್ನಡ ಭಾಷಾ ಪಠ್ಯ ಪುಸ್ತಕಗಳನ್ನು ಒದಗಿಸುವಂತೆ ನಾವು ಕರ್ನಾಟಕ ಸರ್ಕಾರವನ್ನು ಕೇಳುವುದಿಲ್ಲ; ಬದಲಿಗೆ ನಮ್ಮ ತೆಲುಗು ಪಠ್ಯವನ್ನೇ ಕನ್ನಡದಲ್ಲಿ ಅನುವಾದಿಸಿ ಕೊಡುತ್ತೇವೆಂದು ಆಂಧ್ರ ಸರ್ಕಾರವು ಹೇಳಿಕೆ ನೀಡಿದೆ. ಒಂದು ವೇಳೆ ಹಾಗೇನಾದರೂ ಆದರೆ ಕನ್ನಡ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗುತ್ತದೆ.ಇದರಿಂದ  ಕರ್ನಾಟಕದ ಪರಿಚಯವನ್ನಾಗಲಿ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವಲ್ಲಿಯಾಗಲಿ ವಿದ್ಯಾರ್ಥಿ ವಂಚಿತನಾಗುತ್ತಾನೆ. ಸಾಂಸ್ಕೃತಿಕ ನಗರಗಳಾದ ಧಾರವಾಡ, ಮೈಸೂರು ಬದಲಿಗೆ ವಿಜಯವಾಡ-ಹೈದರಾಬಾದ್ ಬಗ್ಗೆ ಓದಬೇಕಾಗುತ್ತದೆ. ಆದಿಕವಿ ಪಂಪ, ಕುಮಾರವ್ಯಾಸರನ್ನು ಮರೆತು ತಿಕ್ಕಯ್ಯ-ನನ್ನಯರನ್ನು ಗುಣಗಾನ ಮಾಡಬೇಕು. ಕಿತ್ತೂರ ಚೆನ್ನಮ್ಮ, ಸಂಗೊಳ್ಳಿರಾಯಣ್ಣರ ಸ್ಥಾನದಲ್ಲಿ ರಾಣಿರುದ್ರಮದೇವಿ, ಅಲ್ಲೂರಿ ಸೀತಾರಾಮರಾಜುರನ್ನು ಇತಿಹಾಸದಲ್ಲಿ ಕಾಣಬೇಕಾಗುತ್ತದೆ! “ಜಯಹೇ ಕರ್ನಾಟಕ ಮಾತೆ” ಬದಲಾಗಿ ನಮ್ಮ ತೆಲುಗು ತಾಯಿಗೆ ಮಲ್ಲಿಗೆ ಹೂವಿನ ಹಾರವೆಂದು ನಾಡಗೀತೆಯನ್ನು ಹಾಡಬೇಕಾಗುತ್ತದೆ. ಇದು ದುರಂತವಲ್ಲವೇ?ಕನ್ನಡ ಸಾಹಿತ್ಯ ಸಮ್ಮೇಳನಗಳಿಗಾಗಿ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವೃಥಾ ಖರ್ಚು ಮಾಡುತ್ತಿದೆ. ಅದರಲ್ಲಿನ ಒಂದೆರಡು ಅಂಶದ ಹಣವನ್ನು ಮೀಸಲಿಟ್ಟರೆ ಸಾಕು, ಹೊರ ರಾಜ್ಯದಲ್ಲಿರುವ ಎಲ್ಲಾ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪಠ್ಯ ಪುಸ್ತಕಗಳನ್ನು ನೀಡಬಹುದು. ಈ ನಿಟ್ಟಿನಲ್ಲಿ ನೂತನ ಸರ್ಕಾರವು ಯೋಚಿಸಬೇಕಾಗಿದೆ.

 

ಪ್ರತಿಕ್ರಿಯಿಸಿ (+)