ಮಂಗಳವಾರ, ಮೇ 24, 2022
30 °C

ಆಂಧ್ರ ಗೃಹ ಸಚಿವೆಗೆ ತಟ್ಟಿದ ಗಣಿ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್):  ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿರುವುದಾಗಿ ಮೂಲಗಳು ಶನಿವಾರ ಇಲ್ಲಿ ತಿಳಿಸಿವೆ.ಸಿಬಿಐ ಅಧಿಕಾರಿಗಳ ತಂಡವು ಶುಕ್ರವಾರ ರಾತ್ರಿ 11 ಗಂಟೆಯವರೆಗೆ ಸಚಿವೆಯನ್ನು ಇಲ್ಲಿರುವ ಅವರ ಕಚೇರಿಯಲ್ಲಿ ಸುಮಾರು ಎರಡು ತಾಸು ಪ್ರಶ್ನಿಸಿರುವುದಾಗಿ ಅವು ಹೇಳಿವೆ. ಕರ್ನಾಟಕ ಗಡಿಯ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಹೊತ್ತ ಜನಾರ್ದನ ರೆಡ್ಡಿಯವರ ಓಬಳಾಪುರಂ ಗಣಿ ಕಂಪೆನಿಗೆ (ಓಎಂಸಿ) ಗಣಿ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಬಿತಾ ಅವರನ್ನು ತನಿಖಾ ಸಂಸ್ಥೆ ಪ್ರಶ್ನಿಸಿತು.2004ರಿಂದ 2009ರವರೆಗೆ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಸಂಪುಟದಲ್ಲಿ ಸಬಿತಾ ಗಣಿ ಸಚಿವರಾಗಿದ್ದಾಗ, ಓಎಂಸಿಗೆ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ ಗಣಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶ್ರೀಲಕ್ಷ್ಮೀ ಅವರನ್ನು ಸಿಬಿಐ ತಂಡವು ಮತ್ತೊಮ್ಮೆ ಸುಮಾರು ನಾಲ್ಕು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ ಕೂಡಲೇ ಸಬಿತಾ ಅವರನ್ನೂ ಪ್ರಶ್ನಿಸಿದೆ.ಓಎಂಸಿಗೆ ಗಣಿ ಗುತ್ತಿಗೆ ಪರವಾನಗಿ ನೀಡುವಾಗ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡವು ಈ ಮುನ್ನವೂ ಶ್ರೀಲಕ್ಷ್ಮೀ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರನ್ನು ತನಿಖೆಗೆ ಒಳಪಡಿಸಿತ್ತು. ಸಬಿತಾ ಮತ್ತು ಶ್ರೀಲಕ್ಷ್ಮೀ ಅವರನ್ನು ಸಿಬಿಐ ತನಿಖೆಗೆ ಒಳಪಡಿಸುವ ಮೂಲಕ 2009ರಲ್ಲಿ ದಾಖಲಾದ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದಂತಾಗಿದೆ. ಸಿಬಿಐ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ ಅವರು ಪ್ರಕರಣದ ಸಂಬಂಧ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಮೂರು ದಿನಗಳ ಹಿಂದೆ ತಿಳಿಸಿದ್ದರು.ಈಗಾಗಲೇ ತನಿಖಾ ಸಂಸ್ಥೆಯು ಅಕ್ರಮ ಗಣಿಗಾರಿಕೆಯಲ್ಲಿ ಹಲವು ಸಾರ್ವಜನಿಕ ಸೇವಾ ಅಧಿಕಾರಿಗಳು ಸಹ ಭಾಗಿಯಾಗಿರುವುದಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.