ಶುಕ್ರವಾರ, ಮೇ 14, 2021
32 °C

ಆಕಾರ್ ಪಟೇಲ್‌ಗೆ ಬೆಂಗಳೂರು ಯಾಕೆ ಇಷ್ಟ?

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

`ಮಿಂಟ್~ ವಾಣಿಜ್ಯ ದೈನಿಕದಲ್ಲಿ ಈಚೆಗೆ ಆಕಾರ್ ಪಟೇಲ್ ಬರೆದ ದಕ್ಷಿಣ ಭಾರತದ ಬಗೆಗಿನ ಲೇಖನ ಸುಮಾರು ಉತ್ತರ ಭಾರತೀಯರನ್ನು ಕೆಣಕಿದೆ. ಆಕಾರ್ ಗುಜರಾತಿ ಮೂಲದ ಹೆಸರಾಂತ ಇಂಗ್ಲಿಷ್ ಪತ್ರಕರ್ತ. ಅವರ ಬರಹದ ಒಟ್ಟಾರೆ ಇಂಗಿತ: ದಕ್ಷಿಣ ಭಾರತೀಯರು, ಅದರಲ್ಲೂ ಬೆಂಗಳೂರಿಗರು, ಉತ್ತರ ಭಾರತೀಯರಿಗಿಂತ ಎಲ್ಲ ವಿಷಯದಲ್ಲೂ ಉತ್ತಮರು. ಮುಂಬೈಯಲ್ಲೇ ಬಹಳ ವರ್ಷ ಕಳೆದ ಅವರು ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಅವರ ಲೇಖನದ ಐದು ಮುಖ್ಯ ವಾದಗಳ ಸಾರಾಂಶವನ್ನು ಇಲ್ಲಿ ಕೊಡಲು ಪ್ರಯತ್ನಿಸುತ್ತೇನೆ.

ಒಂದು: ದಕ್ಷಿಣದವರು ಸಂಗೀತದ ಅಭಿರುಚಿಯಲ್ಲಿ ಮುಕ್ತ ಮನಸಿಗರು. ಕುಮಾರ್ ಗಂಧರ್ವ ಮತ್ತು ಮನ್ಸೂರರು ಕನ್ನಡಿಗರಾಗಿದ್ದರೂ ಹಿಂದೂಸ್ತಾನಿ ಸಂಗೀತವನ್ನು ಕಲಿತು ಮೇರು ಕಲಾವಿದರಾಗಿದ್ದಾರೆ. ಇಲ್ಲಿಯ ಜನ ಹಿಂದೂಸ್ತಾನಿ ಸಂಗೀತವನ್ನು ಕೇಳುತ್ತಾರೆ, ಕಲಿಯುತ್ತಾರೆ ಮತ್ತು ಆಸ್ವಾದಿಸುತ್ತಾರೆ. ಆದರೆ ಉತ್ತರ ಭಾರತೀಯರಿಗೆ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯೇ ಇಲ್ಲ. ಅವರಿಗೆ ಪುರಂದರ ದಾಸ, ತ್ಯಾಗರಾಜರಂಥ ಮಹಾನ್ ವಾಗ್ಗೇಯಕಾರರ ದಕ್ಷಿಣಾದಿ ಶೈಲಿಯ ಕೃತಿಗಳನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.

ಎರಡು: ದಕ್ಷಿಣದ ಶ್ರೇಷ್ಠ ಸಂಸ್ಕೃತಿಯಲ್ಲಿ ಮುಸ್ಲಿಂ ಪ್ರಭಾವ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಕರ್ನಾಟಕ ಸಂಗೀತದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿರುವಂತೆ ಅರೇಬಿಕ್ ಮತ್ತು ಪರ್ಶಿಯನ್ ಅಂಶಗಳು ಇಲ್ಲ.

ಮೂರು: ಇಲ್ಲಿನ ಜನರ ತಾಳ್ಮೆ ಮತ್ತು ಸಹಬಾಳ್ವೆಯ ಗುಣ ಉತ್ತರ ಭಾರತೀಯರಿಗಿಲ್ಲ. ಬೆಂಗಳೂರಿನ ಸಸ್ಯಾಹಾರಿಗಳಿಗೆ ಅವರ ಸುತ್ತ ಇರುವ ಮಾಂಸಾಹಾರಿಗಳ ಬಗ್ಗೆ ಅಸಹನೆ ಇಲ್ಲ. ಮುಂಬೈನ ಗುಜರಾತಿ ಮತ್ತು ಮಾರವಾಡಿ ಕಾಲೊನಿಗಳಲ್ಲಿ ಮಾಂಸಾಹಾರಿಗಳನ್ನು ಕೆಟ್ಟದಾಗಿ ಕಾಣುತ್ತಾರೆ ಮತ್ತು ಅವರಿಗೆ ಅಲ್ಲಿ ಜಾಗವೇ ಇಲ್ಲದಂತೆ ಮಾಡುತ್ತಾರೆ.

ನಾಲ್ಕು: ಬೆಂಗಳೂರಿನಲ್ಲಿರುವ ಬೌದ್ಧಿಕ ವಾತಾವರಣ ಮುಂಬೈಯಲ್ಲಿಲ್ಲ. ಯು. ಆರ್. ಅನಂತಮೂರ್ತಿಯಂಥ ಬರಹಗಾರರನ್ನು ಬೆಂಗಳೂರು ಹಚ್ಚಿಕೊಂಡಂತೆ ಇತರ ನಗರಗಳು ಹಚ್ಚಿಕೊಳ್ಳಲಾರವು. ಇಲ್ಲಿಯ ಸಂಸ್ಕೃತಿ ಬ್ರಾಹ್ಮಣ ಕೇಂದ್ರಿತ. ದಕ್ಷಿಣ ಮುಂಬೈಯಲ್ಲಿ ಹೆಚ್ಚಾಗಿರುವ ಗುಜರಾತಿಗಳಿಗೆ ಬೌದ್ಧಿಕತೆ ಆಗಿಬರದ ವಿಷಯ. ಹಾಗಿರುವುದೇ ಅವರಿಗೆ ಹೆಮ್ಮೆ. ಇನ್ನು ಉತ್ತರ ಮುಂಬೈನಲ್ಲಿ ಸಿನಿಮಾದವರು ಬೇರೆಲ್ಲ ಸಂಸ್ಕೃತಿಯನ್ನೂ ಅಳಿಸಿಬಿಟ್ಟಿದ್ದಾರೆ. ಮಧ್ಯಮ ವರ್ಗದ ಮರಾಠಿಗರು ಸುಸಂಸ್ಕೃತರು, ಆದರೆ ಅವರಿಗೆ ದನಿಯಿಲ್ಲ.

ಐದು: ದಕ್ಷಿಣ ಭಾರತೀಯರು ನೆರೆಯ ರಾಜ್ಯಗಳ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ತಮ್ಮದಲ್ಲದ ಭಾಷೆಯಲ್ಲಿ ಸಂಗೀತ ಕೃತಿಗಳನ್ನು ಕಲಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ.  

ಈ ಕಾರಣಗಳಿಂದ ದಕ್ಷಿಣ ಭಾರತದಲ್ಲಿ ನೆಲೆಸುವುದು ಲೇಸು ಎಂದು ಆಕಾರ್ ತಮ್ಮ ಬರವಣಿಗೆ ಮುಗಿಸುತ್ತಾರೆ. ಲೇಖನ ಪ್ರಕಟವಾದ ಕೂಡಲೇ ಸಾವಿರಾರು ಜನ ಅವರ ವಾದಗಳನ್ನು ಗೇಲಿ ಮಾಡಿದರು.

ನನಗನ್ನಿಸಿದ ಕೆಲವು ಸಂಗತಿ: ಈ ಲೇಖನ ಪಾಲೇಮಿಕಲ್, ಅಂದರೆ ವಾಗ್ವಾದ ಹುಟ್ಟುಹಾಕುವ ಉದ್ದೇಶದಿಂದಲೇ ಬರೆದಂಥದ್ದು. ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಮೆರೆಯುತ್ತಿದೆ ಅನ್ನುವುದು ನಿಜ. ಆದರೆ ಈಚೆಗೆ ಅಲ್ಲಿಯವರು ಕರ್ನಾಟಕ ಸಂಗೀತವನ್ನು ಪೂರ್ತಿ ಕಡೆಗಣಿಸಿದ್ದಾರೆ. ಹಿಂದೂಸ್ತಾನಿ ಸಂಗೀತದ ವ್ಯಾಮೋಹ ಹಲವರನ್ನು ಕುರುಡಾಗಿಸಿ ಕರ್ನಾಟಕ ಸಂಗೀತದ ಬಗ್ಗೆ ಕೇವಲವಾಗಿ ಮಾತಾಡುವಂತೆ ಮಾಡಿದೆ. ಗಂಗೂಬಾಯಿ ಅವರನ್ನೂ ಸೇರಿ ಹಲವು ಪ್ರಸಿದ್ಧರ ತಂದೆ-ತಾಯಂದಿರ ಕಾಲದ ಸಂಗೀತವೆಂದರೆ ಕರ್ನಾಟಕ ಸಂಗೀತವೇ. ದಕ್ಷಿಣ ಭಾರತದ ಸಂಗೀತದಲ್ಲಿ ಪರ್ಶಿಯದ ಪ್ರಭಾವವಿಲ್ಲವೇ ಇಲ್ಲ ಎಂದು ಹೇಳಲಾಗದು. ಕಲ್ಯಾಣಿಯಂಥ `ಘನ~ ರಾಗವೂ ಪರ್ಶಿಯನ್-ಅರೇಬಿಕ್ ಮೂಲದ್ದು ಎಂದು ವೆಂಕಟಮಖಿ, ಪುಂಡರೀಕರಂಥ ಸಂಗೀತಶಾಸ್ತ್ರಜ್ಞರು ನಿರೂಪಿಸಿದ್ದಾರೆ. ಉತ್ತರ ಭಾರತೀಯರಿಗೆ ಸಾಮಾನ್ಯವಾಗಿ ಇಲ್ಲಿಯ ಸಂಗೀತ, ಭಾಷೆಗಳಲ್ಲಿ ಆಸಕ್ತಿ ಇಲ್ಲ ಅನ್ನುವುದು ನಿಜ. ಸಾಫ್ಟ್‌ವೇರ್‌ನಲ್ಲಿರುವ ಹಲವರಿಗೆ ನಮ್ಮ ದಕ್ಷಿಣಾದಿ ಭಾಷೆಗಳು ತಮಾಷೆಯಾಗಿ ಕಾಣುತ್ತವೆ.

ನಾನು ಗುಜರಾತ್‌ನ ರಾಜಧಾನಿಗೆ 1999ರಲ್ಲಿ ಹೋದಾಗ ಅಲ್ಲಿಯ ಜೀವನ ಎಷ್ಟು ಸಾಮರಸ್ಯದಿಂದ ಕೂಡಿದೆ ಅಂದುಕೊಂಡಿದ್ದೆ. ಅದಾಗಿ ಮೂರೇ ವರ್ಷಕ್ಕೆ ಅಲ್ಲಿ ನಡೆದ ಮತೀಯ ಹಿಂಸೆ ಈಗ ಜಗತ್ತಿಗೆಲ್ಲ ಗೊತ್ತಿದೆ. ಸಹನೆ-ತಾಳ್ಮೆಯ ಬಗ್ಗೆ ಮೇಲ್ನೋಟಕ್ಕೆ ಏನೂ ಗೊತ್ತಾಗುವುದಿಲ್ಲ ಅನ್ನುವುದಕ್ಕೆ ಈ ಮಾತು ಉದಾಹರಣೆ. ಇನ್ನು ಮುಂಬೈ ಜನರ ಸಿನಿಮಾ ಹುಚ್ಚು ನನ್ನನ್ನೂ ದಂಗುಬಡಿಸಿದೆ. ಸೂಪರ್ ಮಾರ್ಕೆಟ್‌ಗೆ ಒಮ್ಮೆ ಹೋದಾಗ ಅಲ್ಲಿ ಕೊಳ್ಳುವುದಕ್ಕೆ ಬಂದವರಲ್ಲಿ ಹತ್ತಾರು ಜನ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಹೊಚ್ಚ ಹೊಸ ಹಾಡೊಂದನ್ನು ಒಟ್ಟಿಗೆ ಗುನುಗುತ್ತಿದ್ದರು. ಹೀಗಾಗುವುದು ಬೆಂಗಳೂರಿನಲ್ಲಿ ಸಾಧ್ಯವೇ?

ಅದೇನೇ ಇರಲಿ, ಆಕಾರ್ ಅವರ ಬೆಂಗಳೂರಿನ ಆರಾಧನೆ ಎಷ್ಟು ದಿನ ಇರುತ್ತದೆ ನೋಡಬೇಕು. ಬೆಂಗಳೂರು ಹೃದಯಹೀನ ನಗರ ಎಂದು ವಾದಿಸುವುದಕ್ಕೂ ಎಷ್ಟೋ ಸಂಗತಿಗಳು ಸಿಗುವುದರಲ್ಲಿ ಅನುಮಾನವಿಲ್ಲ. ಈ ಉತ್ತರ-ದಕ್ಷಿಣ ಹೋಲಿಕೆಯ ಬಗ್ಗೆ ನಿಮಗೇನನ್ನಿಸುತ್ತದೆ? 

ಕನ್ನಡ ಪುಸ್ತಕದಂಗಡಿಗಳ ಹೊಸ ಸೌಕರ್ಯ 

ಕನ್ನಡ ಪುಸ್ತಕಗಳನ್ನು ಇಂಟರ್ನೆಟ್‌ನಲ್ಲಿ ಕೊಳ್ಳಲು ಹೋದಾಗ ಕಂಡ ಕೆಲವು ಅಂಶ: ಫ್ಲಿಪ್‌ಕಾರ್ಟ್ ಭಾರತದ ಅತಿ ಜನಪ್ರಿಯ ಆನ್‌ಲೈನ್ ಪುಸ್ತಕದಂಗಡಿ. ಅಲ್ಲಿ ಕನ್ನಡ ಪುಸ್ತಕಗಳು ಈಚೆಗೆ ಮಾರಟಕ್ಕೆ ಬಂದಿವೆ. ಇಂಗ್ಲಿಷ್ ಅಲ್ಲದೆ ಹನ್ನೊಂದು ಭಾರತೀಯ ಭಾಷೆಗಳ ಪುಸ್ತಕಗಳನ್ನು ಈ ಬೆಂಗಳೂರಿನ ಸಂಸ್ಥೆ ಕೊರಿಯರ್ ಮುಖಾಂತರ ಓದುಗರಿಗೆ ರವಾನೆ ಮಾಡುತ್ತಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ ಇಲ್ಲದವರು ಇಲ್ಲಿ ಕ್ಯಾಶ್ ಆನ್ ಡೆಲಿವರಿ (ಪುಸ್ತಕ ತಲುಪಿದಾಗ ದುಡ್ಡು ಕೊಡುವ) ಸೌಲಭ್ಯವನ್ನು ಬಳಸಿಕೊಳ್ಳಬಹುದು. 

ಇದಲ್ಲದೆ ಇನ್ನೂ ಕೆಲವು ಅಂಗಡಿಗಳು ಅಂತರ್ಜಾಲದಲ್ಲಿ ಕನ್ನಡ ಪುಸ್ತಕ ಮಾರುತ್ತಿವೆ. ಟೋಟಲ್ ಕನ್ನಡ, ಆಕೃತಿ ಬುಕ್ಸ್ ಮತ್ತು ಸಪ್ನಾ ಬುಕ್ ಶಾಪ್‌ನಂಥ  ಸಂಸ್ಥೆಗಳ ಆನ್‌ಲೈನ್ ಅವತರಣಿಕೆಗಳು ಕನ್ನಡ ಪುಸ್ತಕಗಳ ಪಟ್ಟಿಯನ್ನು ಒದಗಿಸುತ್ತವೆ. ಕನ್ನಡ ಬುಕ್ಸ್ ಎಂಬ ಸೈಟ್ ಏನನ್ನೂ ಮಾರುತ್ತಿಲ್ಲ!

ನಾನು ಹುಡುಕಿದ ಗೋಪಾಲಕಷ್ಣ ಪೈ ಅವರ `ಸ್ವಪ್ನ ಸಾರಸ್ವತ~ ಪುಸ್ತಕಕ್ಕೆ ಹೆಚ್ಚಿನ ರಿಯಾಯತಿ ಆಕೃತಿ ಬುಕ್ಸ್‌ನಲ್ಲಿ ಕಂಡುಬಂತು (ಸಪ್ನದಲ್ಲಿ ರೂ. 333, ಆಕೃತಿಯಲ್ಲಿ ರೂ. 300). ಆ ಪುಸ್ತಕದ ಮುದ್ರಿತ ಬೆಲೆ ರೂ 350. ಬೇರೆ `ಈ-ಅಂಗಡಿ~ಗಳಲ್ಲಿ ಈ ಪುಸ್ತಕ ಕಾಣಲಿಲ್ಲ. ಕನ್ನಡ ಪುಸ್ತಕಗಳನ್ನು ದೇಶ ವಿದೇಶಕ್ಕೆ ಹಂಚುವ ಆನ್‌ಲೈನ್ ವ್ಯವಸ್ಥೆ ತುಂಬಾ ಉಪಕಾರಿ. ಆದರೆ ಸಪ್ನ ಬಿಟ್ಟರೆ ಬೇರೆ ಆನ್‌ಲೈನ್ ಅಂಗಡಿಗಳಲ್ಲಿ ಸರ್ಚ್ ಸೌಲಭ್ಯ ಅಷ್ಟು ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಪುಸ್ತಕ ಹುಡುಕುವ ಸೌಲಭ್ಯವನ್ನು ಈ ಅಂಗಡಿಗಳು ತಮ್ಮ ತಂತ್ರಾಂಶ ತಜ್ಞರಿಗೆ ಹೇಳಿ ಸುಧಾರಿಸಬೇಕಿದೆ.

ಮಮತಾ ಜೋಕ್

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವುದೋ ವ್ಯಂಗ್ಯಚಿತ್ರ ನೋಡಿ ಕುಪಿತರಾಗಿ ಅದರ ಕರ್ತೃವನ್ನು ಜೈಲಿಗೆ ತಳ್ಳಿದ್ದಾರೆ, ನಿಷಿದ್ಧ ಹೇರಿದ್ದಾರೆ. ಎಷ್ಟೇ ಆದರೂ ಅವರು ಬ್ಯಾನ್ ಮಾಡುವವರು, ಅಲ್ಲವೇ? ಬ್ಯಾನರ್-ಜೀ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.