ಮಂಗಳವಾರ, ಮಾರ್ಚ್ 2, 2021
31 °C

ಆಟವೇನು ನೋಟವೇನು

– ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಆಟವೇನು ನೋಟವೇನು

ಯುವಕರಷ್ಟೇ ತ್ಯಾಗ ಮಾಡಬೇಕೇ?

ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಹಂತಗಳಲ್ಲಿಯೂ ಈ ತನಕ ಕುಳಿತಿದ್ದವರೆಲ್ಲರೂ ಹಿರಿಯರೇ. ಭ್ರಷ್ಟಾಚಾರ, ಪರಿಸರ ವಿನಾಶ, ಜಾತಿ, ಧರ್ಮ, ವರ್ಗ ವೈಷಮ್ಯಗಳಿಗೆ ಬೇಕಿರುವ ಭೂಮಿಕೆಯನ್ನು ಸೃಷ್ಟಿಸಿದವರೂ ಇದೇ ಹಿರಿಯರು. ಆದರೆ ಇವೆಲ್ಲದರಿಂದ ನಾಡನ್ನೂ ದೇಶವನ್ನೂ ಜಗತ್ತನ್ನು ಯುವಕರು ರಕ್ಷಿಸಬೇಕು. ಅದಕ್ಕಾಗಿ ಅವರು ತ್ಯಾಗ ಮಾಡಬೇಕು ಎಂಬುದು ಸರಿಯೇ?ಈ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು. ಇದಕ್ಕೆ ನಿಮ್ಮ ಅಸಲಿಯಾದ, ಚುರುಕಾದ, ಆಸಕ್ತಿದಾಯಕವಾದ ಉತ್ತರಗಳು ನಿಮ್ಮ ಬಳಿಯೂ ಇರಬಹುದು. ಅದನ್ನು ನಮಗೆ ಬರೆದು ಕಳುಹಿಸಿ. ಬರಹ ಸುಮಾರು 200 ಪದಗಳ ಮಿತಿಯಲ್ಲಿರಲಿ. ಕಳುಹಿಸಬೇಕಾದ ವಿಳಾಸಕ್ಕಾಗಿ ಏಳನೇ ಪುಟ ನೋಡಿ. ಬರಹಗಳು ನಮಗೆ ತಲುಪಬೇಕಾದ ಕೊನೆಯ ದಿನ 28 ಮಾರ್ಚ್ 2014. ಬರಹಗಳ ಜೊತೆ ನಿಮ್ಮ ಅಂಚೆ ವಿಳಾಸ ಕಡ್ಡಾಯ. ದೂರವಾಣಿ ಸಂಖ್ಯೆ ಅಪೇಕ್ಷಣೀಯ.ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸರತಿ ಸಾಲಿನಲ್ಲಿ ಇದ್ದ ಕೆಲವರ ಕಣ್ಣುಗಳು ಗೇಟ್ ಮುಂದಿನ ದೃಶ್ಯ ನೋಡಿ ಇನ್ನೂ ಅಗಲಗೊಂಡವು. ಕ್ರಿಕೆಟ್ ಅಭಿಮಾನಿಗಳಲ್ಲಿ ಲಲನೆಯರ ಸಂಖ್ಯೆ ಈಗ ಜಾಸ್ತಿಯಾಗಿದೆ. ಕ್ರೀಡಾಂಗಣಕ್ಕೆ ಹೋಗಿ ಕ್ರಿಕೆಟ್ ನೋಡುವ ಉಮೇದು ಇರುವ ಹೆಣ್ಣುಮಕ್ಕಳೂ ಅಸಂಖ್ಯ.ಒಂದು ಹ್ಯಾಂಡ್‌ಬ್ಯಾಗ್ ನೇತುಹಾಕಿಕೊಳ್ಳದೆ ಹೆಜ್ಜೆ ಮುಂದಿಡುವವರು ಕಡಿಮೆಯೇ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟಿನ ಬಳಿ ಎಲ್ಲರ ಹ್ಯಾಂಡ್‌ಬ್ಯಾಗ್‌ಗಳನ್ನು ಚೆಕ್ ಮಾಡಲಾಗುತ್ತಿತ್ತು. ಅವುಗಳಲ್ಲಿ ಸಿಕ್ಕ ಡಿಯೋಡರೆಂಟ್‌ಗಳನ್ನು ಪೊಲೀಸರು ಮೊದಲು ಜೋಡಿಸಿದರು. ಆಮೇಲೆ ಅವುಗಳನ್ನು ಜೋಡಿಸಲಾಗದೆ ರಾಶಿ ಮಾಡಿಟ್ಟರು. ಪಂದ್ಯ ಮುಗಿದ ಮೇಲೆ ಅವುಗಳಲ್ಲಿ ತಮ್ಮದನ್ನು ಆರಿಸಿ ಮನೆಗೆ ತೆಗೆದುಕೊಂಡು ಹೋಗುವುದು ಸಾಧ್ಯವೇ ಇರಲಿಲ್ಲ. ಅಷ್ಟು ದೊಡ್ಡ ರಾಶಿ ಅಲ್ಲಿತ್ತು.ಬೆಂಗಳೂರಿನಲ್ಲಿ ಕ್ರಿಕೆಟ್ ಪ್ರೀತಿ ಲಲನೆಯರಲ್ಲಿ, ವನಿತೆಯರಲ್ಲಿ, ಮಹಿಳೆಯರಲ್ಲಿ ಎಷ್ಟು ಹೆಚ್ಚಾಗಿದೆ ಎಂಬುದರ ರೂಪಕದಂತೆ ಆ ಡಿಯೋಡರೆಂಟ್‌ಗಳ ರಾಶಿ ಕಂಡಿತು.ಹತ್ತು ವರ್ಷಗಳ ಹಿಂದೆ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಎಲ್ಲಾ ಭಾಷಣಗಳಲ್ಲಿ ಹೇಳುತ್ತಿದ್ದ ಸಾಮಾನ್ಯವಾದ ಮಾತು- ‘here sports is not a lifestyle’ (ನಮ್ಮಲ್ಲಿ ಕ್ರೀಡೆ ಜೀವನಶೈಲಿ ಅಲ್ಲ). ಅವರು ‘here’ ಎಂಬುದನ್ನು ಇಡೀ ದೇಶಕ್ಕೆ ಅನ್ವಯಿಸಿ ಬಳಸುತ್ತಿದ್ದರು.

ಆದರೆ, ಅಶ್ವಿನಿ ಆ ಮಾತು ಆಡುವ ಹೊತ್ತಿಗೆ ಸಾನಿಯಾ ಮಿರ್ಜಾ ಮೂಗುತಿ ಹೊಳೆಯುತ್ತಿತ್ತು. ಧರ್ಮದ ಹಿನ್ನೆಲೆಯಲ್ಲಿ ಅವರು ತೊಡುವ ವಸ್ತ್ರ್ರಗಳ ಕುರಿತು ಇನ್ನೊಂದು ಕಡೆ ಚರ್ಚೆ ಶುರುವಾಗಿತ್ತು. ಸಾನಿಯಾ ಅವರನ್ನು ಬೆನ್ನಟ್ಟಿದ ಕ್ಯಾಮೆರಾಗಳಿಗೆ ಲೆಕ್ಕವಿಲ್ಲ. ಅವರ ಕದಲಿಕೆಗಳು ನಮೂದಾದ ಪುಟಗಳಿಗೂ ಲೆಕ್ಕವಿಲ್ಲ. ಅವರು ಬೆಳಿಗ್ಗೆ ಏಳುವುದು ಎಷ್ಟುಹೊತ್ತಿಗೆ, ತಿನ್ನುವುದು ಏನು, ಮಾಡುವ ವ್ಯಾಯಾಮಗಳು ಎಂತೆಂಥವು, ದಿನಕ್ಕೆ ಎಷ್ಟು ಗಂಟೆ ಟೆನಿಸ್ ಅಭ್ಯಾಸ ಮಾಡುತ್ತಾರೆ, ಕುರಾನ್ ಅವರಿಗೆ ಗೊತ್ತೋ ಇಲ್ಲವೋ, ಓದಿನಲ್ಲಿ ಅವರು ಹೇಗಿದ್ದರು, ಯಾರನ್ನಾದರೂ ಪ್ರೀತಿಸಿದ್ದಾರೆಯೇ, ಬಾಲಿವುಡ್ ಸಿನಿಮಾಗಳನ್ನು ನೋಡುತ್ತಾರೆಯೇ, ಮಾಡೆಲ್ ಆಗುವ ಚಹರೆ ಅವರಿಗಿದೆಯೋ ಇಲ್ಲವೋ... ಹೀಗೆಲ್ಲಾ ಸಾನಿಯಾ ಮಿರ್ಜಾ ಚರ್ಚೆಯ ವಸ್ತುವಾದರು. ಇಲ್ಲಿ ‘ವಸ್ತು’ ಎಂಬುದನ್ನು ವಿಷಯ ಎಂದು ಅರ್ಥೈಸಿಕೊಳ್ಳಬೇಕು. ಕಳೆದ ದಶಕದಲ್ಲಿ ಮಾಧ್ಯಮ ಮಹಿಳಾ ಕ್ರೀಡಾಪಟು ಒಬ್ಬರ ಅತಿ ಹೆಚ್ಚು ತೋರಿಸಿದ ಚಹರೆ, ಮುದ್ರಿಸಿದ ಚಿತ್ರಗಳು ಅವರವೇ ಇರಬಹುದೇನೋ?ನಮ್ಮಲ್ಲಿ ಕ್ರೀಡೆ ಜೀವನಶೈಲಿ ಅಲ್ಲ ಎಂಬ ಅಶ್ವಿನಿ ನಾಚಪ್ಪ ಅವರ ಮಾತು, ‘ಹೆಣ್ಣುಮಕ್ಕಳು ಓಡಲು ಯಾಕೋ ಮನಸ್ಸು ಮಾಡುವುದಿಲ್ಲ’ ಎಂಬ ಪಿ.ಟಿ. ಉಷಾ ಬೇಸರ ಎಲ್ಲಕ್ಕೂ ಆ ಕಾಲಘಟ್ಟದಲ್ಲಿ ಸಾನಿಯಾ ಉತ್ತರರೂಪವಾದರು. ಅವರ ಆಟ ನಿಜಕ್ಕೂ ಜೀವನಶೈಲಿಯೇ ಆಯಿತು. ಸಾನಿಯಾ ಕ್ರೀಡಾ ಪ್ರಗತಿ ಹಾಗೂ ಜನಪ್ರಿಯತೆ ಕಂಡು ದೇಶದಲ್ಲಿ ರ್‍್ಯಾಕೆಟ್ ಹಿಡಿದ ಮಹಿಳೆಯರ ಸಂಖ್ಯೆ ವೃದ್ಧಿಸಿತು. ಯಾರಾದರೂ ಮೂಗಿಗೆ ಉಂಗುರ ಸಿಕ್ಕಿಸಿಕೊಂಡರೆ, ಅದನ್ನು ಸಾನಿಯಾ ಸ್ಟೈಲ್ ಎಂದರು (ಆ ರೀತಿ ಮೂಗುತಿ ತೊಡುವುದು ಕೆಲವು ಸಮುದಾಯದ ಮಹಿಳೆಯರ ಸಂಪ್ರದಾಯವೇ ಆಗಿದ್ದರೂ). ಪಂಜಾಬ್‌ನ ಮೊಹಾಲಿ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನೋಡಲು ಸಾನಿಯಾ ಅತಿ ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ಕೂತಿದ್ದೂ ಆಯಿತು.ಅವರಿಗೀಗ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಮದುವೆಯಾಗಿದೆ. ಮಲಿಕ್ ಈಗ ಕ್ರಿಕೆಟ್ ಆಡುತ್ತಿಲ್ಲ; ಸಾನಿಯಾ ಈಗಲೂ ಆಡುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗುವಷ್ಟು ಬೆಳೆದ ಮಲಿಕ್ ಅವರಿಗೀಗ ಕ್ರೀಡೆ ಜೀವನಶೈಲಿ ಅಲ್ಲ. ಚಿಕ್ಕಂದಿನಿಂದ ಟೆನಿಸ್ ಹಚ್ಚಿಕೊಂಡಿದ್ದ ಸಾನಿಯಾಗೆ ಮಾತ್ರ ಈಗಲೂ ಕ್ರೀಡೆ ಜೀವನಶೈಲಿ.ಆಗಿನ ಸಾನಿಯಾಗೂ ಈಗಿನ ಸಾನಿಯಾಗೂ ನಡುವೆ ಒಂದಿಷ್ಟು ಹೆಸರುಗಳು ಮೂಡಿವೆ: ಮೇರಿ ಕೋಮ್, ದೀಪಿಕಾ ಪಲ್ಲಿಕಾಲ್, ಶಿಖಾ ಟಂಡನ್, ಸಾನಿಯಾ ಸಚ್‌ದೇವ, ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಶರ್ಮಿಳಾ ನಿಕೊಲೆಟ್, ಜ್ವಾಲಾ ಗುಟ್ಟಾ, ದೀಪಿಕಾ ಕುಮಾರಿ ಹೀಗೆ. ಇವರ ನಡುವೆ ಪ್ರತಿಮಾ ದೇವಿಯಂಥ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯ ಹೆಸರೂ ದೆಹಲಿಯಲ್ಲಿ ಹಿಂದೆ ಸದ್ದು ಮಾಡಿತ್ತು. ಕೋನೆರು ಹಂಪಿ ಚೆಸ್ ಆಟ ಸುದ್ದಿಯಾಗಿತ್ತು.ಈಜುಕೊಳದಲ್ಲಿ, ಟೆನಿಸ್ ಅಂಗಣದಲ್ಲಿ, ಸ್ಕ್ವಾಷ್ ಆಡುವ ಜಾಗದಲ್ಲಿ, ಗುರಿ ನೆಟ್ಟ ಶೂಟರ್‌ಗಳ ಸಾಲಿನಲ್ಲಿ, ದೊಡ್ಡ ಕನಸನ್ನು ಕಾಣುವ ಬಿಲ್ಲುಗಾರರ ಮಧ್ಯೆ, ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಮೂಡುತ್ತಿರುವ ಲಲನೆಯರ ಹೆಜ್ಜೆಗುರುತುಗಳ ಸಂಖ್ಯೆ ನಿಜಕ್ಕೂ ಏರಿದೆ. ಕ್ರೀಡೆ ನಮ್ಮಲ್ಲಿ ಜೀವನಶೈಲಿ ಕೆಲವರ ಮಟ್ಟಿಗಂತೂ ಆಗಿದೆ.ಕ್ರೀಡೆ ಕೆಲವರಿಗೆ ಫಿಟ್‌ನೆಸ್ ಪ್ರಜ್ಞೆ. ಕೆಲವರಿಗೆ ಶೋಕಿ. ಅಲ್ಲೊಬ್ಬರು ಇಲ್ಲೊಬ್ಬರಿಗೆ ಮಹತ್ವಾಕಾಂಕ್ಷೆ. ಕೋಟಿಗೊಬ್ಬರಿಗೆ ಅದು ಉತ್ಕಟತೆ.ನಿತ್ಯವೂ ಬೆಳಿಗ್ಗೆ ಪಾರ್ಕುಗಳ ಜಾಗಿಂಗ್ ಪಾತ್‌ನಲ್ಲಿ ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಓಡುವ ಹುಡುಗಿಯರಿಗೆ ಸಣ್ಣಗಾಗುವ ಬಯಕೆ. ಬ್ಯಾಸ್ಕೆಟ್‌ಬಾಲ್ ಮೈದಾನದಲ್ಲಿ ಜಿಗಿಜಿಗಿದು ಕಣ್ಣು ಅಗಲ ಮಾಡಿಕೊಳ್ಳುವವರಿಗೆ ಉದ್ದವಾಗುವ ಉಮೇದು. ಸಾನಿಯಾ ತರಹ ಆಗಬೇಕೆಂದು ಟೆನಿಸ್ ಕೋರ್ಟ್‌ನಲ್ಲಿ ರ್‍್ಯಾಕೆಟ್ ಹಿಡಿದು ಬೆವರಿಳಿಸುತ್ತಿರುವ ಬಾಲಕಿಯರ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ.ಹಾಗೆಂದ ಮಾತ್ರಕ್ಕೆ ನಮ್ಮ ದೇಶದಲ್ಲಿ ಕ್ರೀಡೆ ಜೀವನಶೈಲಿ ಆಗಿದೆ ಎಂದು ಭಾವಿಸುವಂತಿಲ್ಲ. ಸಾನಿಯಾ ಮೇನಿಯಾ, ಸೈನಾ ಸ್ಫೂರ್ತಿ, ದೀಪಿಕಾ ಪಲ್ಲಿಕಾಲ್‌ ಸೌಂದರ್ಯ ಇವೆಲ್ಲವೂ ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸಿರುವುದೇನೋ ನಿಜ. ಆದರೆ, ಇವರ ಆಟ ಕಂಡು ಯಾವುದೋ ಹಳ್ಳಿಯ ಹುಡುಗಿ ತಾನೂ ದೇಶಕ್ಕಾಗಿ ಆಡಬೇಕು ಎಂದು ಸಂಕಲ್ಪ ಮಾಡುವ ವಾತಾವರಣವೇನೂ ನಮ್ಮಲ್ಲಿ ಇಲ್ಲ. ಆದ್ದರಿಂದ ಕ್ರೀಡೆ ನಮ್ಮ ಜೀವನಶೈಲಿಯ ಒಂದು ಭಾಗವೇ ಹೊರತು ಅದೇ ಜೀವನಶೈಲಿ ಆಗುವ ಕಾಲ ಇನ್ನೂ ದೂರವೇ ಇದೆಯೇನೋ?ಕ್ರಿಕೆಟ್‌ ದೇಶದಲ್ಲಿ ಅತಿ ಜನಪ್ರಿಯ ಆಟ. ಮಹಿಳಾ ತಂಡ ಎಂಬುದೂ ಇದೆ. ದಶಕಗಳಿಂದ ಮಹಿಳಾ ಕ್ರಿಕೆಟ್‌ ತಂಡವೂ ಆಡಿಕೊಂಡು ಬರುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಪ್ರಕಟಿಸುವ ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಸದ್ಯಕ್ಕೆ ನಂಬರ್‌ ಒನ್‌ ಬ್ಯಾಟ್ಸ್‌ವುಮನ್‌ ಆಗಿರುವುದು ಭಾರತದ ಮಿಥಾಲಿ ರಾಜ್‌. ರಾಜಸ್ತಾನದ ಜೋಧಪುರದ ಒಂದು ಕಾಲದ ಹುಡುಗಿ ಮಿಥಾಲಿ ಈಗ ಮಹಿಳೆ.ಏರ್‌ಫೋರ್ಸ್‌ನಲ್ಲಿ ಕೆಲಸ ಕೈಲಿಟ್ಟುಕೊಂಡು ಕ್ರಿಕೆಟಿಗಳಾದ ಮೇಲೂ ಅವರು ಸಾಕಷ್ಟು ಹೆಣಗಾಡಿದರು. ಮಿಥಾಲಿ ನಂಬರ್‌ ಒನ್‌ ಬ್ಯಾಟ್ಸ್‌ವುಮನ್‌ ಎಂಬ ಸಂಗತಿ ಬಹುತೇಕ ಮಹಿಳಾ ಕ್ರಿಕೆಟ್‌ ಅಭಿಮಾನಿಗಳಿಗೇ ಗೊತ್ತಿರುವುದಿಲ್ಲ ಅಥವಾ ಅದು ಮುಖ್ಯವಾಗುವುದಿಲ್ಲ.ಗಲ್ಲಿಗಲ್ಲಿಗಳಲ್ಲಿ ಹುಡುಗರು ಕ್ರಿಕೆಟ್‌ ಆಡುತ್ತಾರೆ. ಅವರಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಮಹಿಳೆಯರೂ ಸೇರಿಕೊಳ್ಳಬಹುದಷ್ಟೆ. ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲೆಲ್ಲಾ ಹುಡುಗರೇ ಕಾಣುತ್ತಾರೆ. ಹುಡುಗಿಯರು ಹೀಗೆ ಒಂದು ತಂಡ ಕಟ್ಟಿಕೊಂಡು ಕ್ರಿಕೆಟ್‌ ಪಂದ್ಯಗಳನ್ನು ಆಡುವ ಉದಾಹರಣೆಗಳು ವಿರಳಾತಿವಿರಳ. ದೈಹಿಕ ವ್ಯಾಯಾಮಕ್ಕೆಂದು ಬ್ಯಾಡ್ಮಿಂಟನ್‌ ಆಡುವವರೂ ನಮ್ಮಲ್ಲಿ ಅನೇಕರಿದ್ದಾರೆ. ಆದರೆ, ಅವರ ಪಾಲಿಗೆ ಅದು ದಿನದ ಒಂದಿಷ್ಟು ಹೊತ್ತಿನ ಕಸರತ್ತಿನ ದಾರಿ ಅಷ್ಟೆ.ಶಾಲಾ–ಕಾಲೇಜುಗಳಲ್ಲಿ ಅಥ್ಲಿಟ್‌ಗಳನ್ನು ಹುಡುಕುವ ತರಬೇತುದಾರರಿಗೆ ಮೊದಲಿನಿಂದಲೂ ಪ್ರತಿಭೆಗಳನ್ನು ಹೆಕ್ಕಿ, ಹಂತಹಂತವಾಗಿ ಮೇಲಕ್ಕೇರಿಸುವುದು ಒಂದು ಸವಾಲು. ಹುಡುಗಿಯರ ವಿಷಯದಲ್ಲಂತೂ ಈ ವಿಷಯದಲ್ಲಿನ ಕಷ್ಟ ಇನ್ನೂ ಬಗೆಹರಿದಿಲ್ಲ.ಓದಿನ ಆದ್ಯತೆ ಆಟದ ಪ್ರೀತಿಗೆ ಆಗೀಗ ಅಲ್ಪವಿರಾಮ ಹಾಕುವ ವಾತಾವರಣ ಇನ್ನೂ ಇದೆ. ಮೊನ್ನೆ ಮೊನ್ನೆ ಬಂಧುವೊಬ್ಬರು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಮುಂಬೈನಲ್ಲಿ ಟೇಬಲ್‌ ಟೆನಿಸ್‌ ಆಟದಲ್ಲಿ ಪಳಗಿದವರು. ದೊಡ್ಡವಳು ಅಲ್ಲಿ ರಾಜ್ಯಮಟ್ಟದಲ್ಲಿ ಆಡಿ ಹೆಸರು ಗಳಿಸಿದ್ದವಳು. ಈಗ ಎಂಜಿನಿಯರಿಂಗ್‌ ಓದು ಅವಳ ಆದ್ಯತೆ. ಅಲ್ಲಿ ಅವಳಿಗೆ ಟೇಬಲ್‌ ಟೆನಿಸ್‌ ವರಸೆಗಳನ್ನು ಹೇಳಿಕೊಟ್ಟಿದ್ದ ತರಬೇತುದಾರರು ಈಗಲೂ ಆಗೀಗ ಕರೆಸಿಕೊಳ್ಳುತ್ತಾರೆ.ಅವಳ ಆಟ ನೋಡಿ ಅಲ್ಲಿ ಇನ್ನಷ್ಟು ಹುಡುಗಿಯರು ಕಲಿಯಲಿ, ಆಟಕ್ಕೆ ಒಲಿಯಲಿ ಎಂಬುದು ಆ ತರಬೇತುದಾರರ ಬಯಕೆ.

ಆರ್ಥಿಕವಾಗಿ ಚಿಂತೆ ಇಲ್ಲದವರು ತಮ್ಮ ಹೆಣ್ಣು ಮಕ್ಕಳನ್ನು ಟೆನಿಸ್‌ ಅಕಾಡೆಮಿಗೋ, ಬ್ಯಾಡ್ಮಿಂಟನ್‌ ಕೋಚ್‌ಗೆಂದೋ ಸೇರಿಸಬಹುದು.ಕಳೆದ ಒಂದು ಒಂದೂವರೆ ದಶಕದಲ್ಲಿ ಹೀಗೆ ಮಾಡುವ ಅಪ್ಪ–ಅಮ್ಮಂದಿರ ಸಂಖ್ಯೆ ನಿಜಕ್ಕೂ ಏರಿದೆ. ಆ ಆಟವೇ ಅವರ ಜೀವನಶೈಲಿ ಆಗುತ್ತದೆ ಎಂಬುದಕ್ಕೆ ಮಾತ್ರ ಇನ್ನೂ ಖಾತರಿ ಇಲ್ಲ. ಕೀನ್ಯಾದ ದೂರದ ಓಟಗಾರ್ತಿ ಅಪ್ಪನ ಬೇಸಾಯಕ್ಕೆ ಅನುಕೂಲವಾಗಲಿ ಎಂದು ಟ್ರ್ಯಾಕ್ಟರ್‌ ಕೊಡಿಸುವಷ್ಟು ಹಣ ಸಂಪಾದಿಸಬಲ್ಲಳು. ಹಾಗಾಗಿ ಓಟ ಅವಳಿಗೆ ವೈಯಕ್ತಿಕವಾಗಿ ಅಷ್ಟೇ ಅಲ್ಲದೆ ಬದುಕಿನ ಒಂದು ಗುರಿಯಾಗಿಯೂ ಕಾಣುತ್ತದೆ. ಇಲ್ಲಿ ಹೆಣ್ಣುಮಕ್ಕಳು ಅಂಥ ಗುರಿ ಮುಂದಿಟ್ಟುಕೊಂಡು ಕಣಕ್ಕಿಳಿಯುವುದು ಈಗಲೂ ಕಡಿಮೆ. ಅಶ್ವಿನಿ ನಾಚಪ್ಪ ಇವತ್ತಿಗೂ ತಮ್ಮ ಭಾಷಣದಲ್ಲಿ ‘ನಮ್ಮಲ್ಲಿ ಕ್ರೀಡೆ ಜೀವನಶೈಲಿ ಅಲ್ಲ’ ಎಂದು ಹೇಳುತ್ತಿರುತ್ತಾರೆ. ಸಾನಿಯಾ, ಸೈನಾ, ದೀಪಿಕಾ ಎಂಬ ಮಿಂಚುಗಳು ಕಂಡಾಗ ಅವರ ಮಾತು ಸ್ವಲ್ಪ ಮಂಕಾದಂತೆ ಕಾಣುತ್ತದಷ್ಟೆ. ಪರಿಸ್ಥಿತಿಯಲ್ಲಿ ಅಂಥ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.