ಶನಿವಾರ, ಫೆಬ್ರವರಿ 27, 2021
31 °C

ಆಟೊ ಚಾಲಕರ, ಎತ್ತಿನಗಾಡಿ ಹಮಾಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊ ಚಾಲಕರ, ಎತ್ತಿನಗಾಡಿ ಹಮಾಲರ ಪ್ರತಿಭಟನೆ

ಹಾವೇರಿ: ಪ್ರತಿನಿತ್ಯ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಆಗುತ್ತಿರುವ ಟ್ರಾಫಿಕ್ ಜಾಮ್‌ಗೆ ಬೇಸತ್ತು ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆಯಲ್ಲಿ ಆಟೋ, ಎತ್ತಿನ ಗಾಡಿ ನಿಲ್ಲಿಸಿ ದೀಢಿರ್ ಪ್ರತಿಭಟನೆ ನಡೆಸಿದ ಘಟನೆ ನಗರದ ಲಾಲ್‌ಬಹುದ್ದೂರ ಶಾಸ್ತ್ರಿ ಮಾರುಕಟ್ಟೆ ರಸ್ತೆಯಲ್ಲಿ ನಡೆಯಿತು.ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆ ಮಧ್ಯದಲ್ಲಿ ಗಾಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ನಗರದ ಪ್ರಮುಖ ಕಾಯಿಪಲ್ಲೆ ಹಾಗೂ ಕಿರಾಣಿ ವಸ್ತುಗಳ ಮಾರುಕಟ್ಟೆಯಾಗಿದ್ದರಿಂದ ಪ್ರತಿನಿತ್ಯ ಲಾರಿಗಳು ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಅಷ್ಟೇ ಅಲ್ಲದೇ ಲಾರಿ, ಮಿನಿ ಲಾರಿಗಳು ರಸ್ತೆ ಮೇಲೆ ನಿಂತುಕೊಂಡೆ ತಾಸುಗಟ್ಟಲೆ ಅನ್ ಮಾಡುತ್ತವೆ.ಈ ನಡುವೆ ತಳ್ಳುಗಾಡಿ ವ್ಯಾಪಾರಿಗಳು ಸಹ ರಸ್ತೆ ಮೇಲೆ ನಿಲ್ಲುತ್ತಾರೆ. ಇದರಿಂದ ಯಾವಾಗಲೂ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ ಎಂದು ಪ್ರತಿಭಟನಾ ನಿರತ ಆಟೋ ಚಾಲಕರು ಹೇಳಿದರು.ನಗರದ ಅಲಂಕಾರ ಸ್ಟೇಶನರಿಯಿಂದ ಕೆ.ಇ.ಬಿ. ವೃತ್ತದವರೆಗಿನ ರಸ್ತೆ ಕೇವಲ ಅರ್ಧ ಕಿಲೋ ಮೀಟರ್ ಅಂತರವಿದೆ. ನಿರಂತರ ಟ್ರಾಫಿಕ್ ಸಮಸ್ಯೆಯಿಂದ ಈ ರಸ್ತೆ ದಾಟಲು ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ.

 

ಅನಗತ್ಯ ಸಮಯ ಹಾಳಾಗುವುದಕ್ಕೆ ಬೇಸತ್ತು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ನಡುವೆ ಒಂದಿಲ್ಲ ಒಂದು ಕಡೆ ಜಗಳ ನಡೆಯುತ್ತಲಿವೆ. ಇದು ಕೇವಲ ಒಂದು ದಿನದ ಮಾತಲ್ಲ ದಿನ ನಿತ್ಯದ ಗೋಳಾಗಿದೆ ಎಂದು ಆಟೋ ಚಾಲಕ ದ್ಯಾಮಣ್ಣ ಡೊಳ್ಳಿನ ತಮ್ಮ ಅಳಲು ತೋಡಿಕೊಂಡರು.ಟ್ರಾಫಿಕ್‌ನಲ್ಲಿ ತಾವು ಸಿಕ್ಕಿ ಹಾಕಿಕೊಳ್ಳುವುದರಿಂದ ಗ್ರಾಹಕರು ಆಟೋ ಬಿಟ್ಟು ಇಳಿದುಬಿಡುತ್ತಾರೆ. ಇದರಿಂದ ಪ್ರತಿದಿನ ನೂರು ರೂಪಾಯಿ ದುಡಿಯುವುದೇ ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗದೇ ಪರಿತಪಿಸಬೇಕಾಗಿದೆ.

 

ನಮ್ಮ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲದೇ ನಮ್ಮ ವಾಹನ ಯಾವುದಾದರೂ ಬೇರೆ ವಾಹನಕ್ಕೆ ಟಚ್ ಆದರೆ ಸಾಕು, ವಾಹನ ಚಾಲಕರು ಐದನೂರು, ಸಾವಿರ ರೂಪಾಯಿ ಕೊಡು. ಇಲ್ಲವಾದರೆ, ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಾರೆ. ಈ ಎಲ್ಲ ಕಷ್ಟಗಳ ನಡುವೆ ಆಟೋ ಓಡಿಸುವುದೇ ಬೇಡ ಅನಿಸಿಬಿಟ್ಟಿದೆ ಎನ್ನುತ್ತಾರೆ ಆಟೋ ಚಾಲಕರು.ಅದೇ ರೀತಿ ಎತ್ತಿನಗಾಡಿ ಹಮಾಲರ ಪರಿಸ್ಥಿತಿಯೂ ಭಿನ್ನವೇನಿಲ್ಲ. ಅವರು ಸಹ ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರಲ್ಲದೇ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಮಹ್ಮದ್ ಸಾದಿಕ್ ಆರೋಪಿಸುತ್ತಾರೆ.ಈ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಬೇಕಾದರೆ, ತಕ್ಷಣವೇ ತಳ್ಳುವ ಗಾಡಿ ವ್ಯಾಪಾರಿಗಳಿಗೆ ರೈತ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಲಾರಿಗಳಿಗೆ ರಸ್ತೆ ಮೇಲೆ ನಿಂತು ಅನ್‌ಲೋಡ್ ಮಾಡಲು ಸಮಯ ನಿಗದಿ ಮಾಡಬೇಕು. ಇಲ್ಲವಾದರೆ, ಈ ಸಮಸ್ಯೆಗೆ ಕೊನೆ ಎಂಬುದೇ ಇರುವುದಿಲ್ಲ. ತಕ್ಷಣವೇ ನಗರಸಭೆ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಾರೆ.ಪ್ರತಿಭಟನೆಯಲ್ಲಿ ಆಟೋ ಚಾಲಕರು, ಎತ್ತಿನ ಗಾಡಿ ಹಮಾಲರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.