ಗುರುವಾರ , ಜುಲೈ 29, 2021
24 °C

ಆಡಳಿತಕ್ಕೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗೆಗೆ ಬಿಜೆಪಿ ನಾಯಕರಿಗೇ ಈಗ ತೃಪ್ತಿ ಇದ್ದಂತಿಲ್ಲ ಎನ್ನುವುದು ಅವರಾಡುವ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ.‘ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ; ನಾವು ಹೇಗೆ ಮತ್ತು ಎಂತಹ ಆಡಳಿತ ನೀಡುತ್ತೇವೆ ಎನ್ನುವುದು ಮುಖ್ಯ’ ಎಂದು ಬಿಜೆಪಿಯ ಅಗ್ರಗಣ್ಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕಳೆದ ವಾರ ರಾಜ್ಯದಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದಿರುವವರ ಕಿವಿ ಹಿಂಡಿ ಹೋಗಿದ್ದಾರೆ.

 

ಇತ್ತ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ದೈನಂದಿನ ಆಡಳಿತದಲ್ಲಿ ಸಚಿವರುಗಳ ಕುಟುಂಬದವರ ಹಸ್ತಕ್ಷೇಪ ನಡೆಯುತ್ತಿರುವ ಬಗೆಗೆ ಕಿಡಿ ಕಾರಿದ್ದಾರೆ. ಕಾಲಲ್ಲಿ ಚಕ್ರ ಕಟ್ಟಿಕೊಂಡವರಂತೆ ದಿನ ನಿತ್ಯ ರಾಜ್ಯದಾದ್ಯಂತ ಅಡ್ಡಾಡುವ ಮುಖ್ಯಮಂತ್ರಿ ಇನ್ನು ಮುಂದೆ, ವಾರದಲ್ಲಿ ನಾಲ್ಕು ದಿನ ತಾವೂ ಸೇರಿದಂತೆ ಸಚಿವರೆಲ್ಲ ವಿಧಾನಸೌಧದಲ್ಲಿಯೇ ಕುಳಿತು ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.

 

ಸರ್ಕಾರದ ಕಾರ್ಯವೈಖರಿಯಲ್ಲಿ ಬದಲಾವಣೆ ತರುವುದಾಗಿ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಆದರೆ ಅವರು ಹೇಳಿಕೊಂಡಂತೆ ಸರ್ಕಾರದ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಯಾಗಲಿ, ಸುಧಾರಣೆಯಾಗಲಿ, ಹೊಸತನವಾಗಲಿ ಕಾಣುತ್ತಿಲ್ಲ. ಬಿಜೆಪಿಯ ಮೂರು ವರ್ಷಗಳ ಆಡಳಿತದಲ್ಲಾಗಿರುವ ಅಧ್ವಾನ, ಅಕ್ರಮ ಮತ್ತು ಭಿನ್ನಮತ ಚಟುವಟಿಕೆಗಳ ಬಗೆಗೆ ಬಹುತೇಕ ಜನರು ರೋಸಿ ಹೋಗಿದ್ದಾರೆ.

 

ಈ ಬೆಳವಣಿಗೆ ಬಗೆಗೆ ಆ ಪಕ್ಷದ ನಾಯಕರಿಗೆ ಈಗಷ್ಟೇ ಅರಿವಾಗುತ್ತಿರುವಂತಿದೆ. ಆದರೂ, ಅರುವತ್ತು ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಮಾಡದ ಸಾಧನೆಯನ್ನು ಈ ಮೂರು ವರ್ಷದಲ್ಲಿ ಮಾಡಿರುವುದಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವುದು ವಿಚಿತ್ರ.ದೇಶದ ಸಂಸ್ಕೃತಿ, ರಾಷ್ಟ್ರಾಭಿಮಾನ ಮತ್ತು ಶಿಸ್ತಿನ ಬಗೆಗೆ ಮಾತನಾಡುವ ಪಕ್ಷ ಅಧಿಕಾರಕ್ಕೆ ಬಂದಾಗ, ಸಹಜವಾಗಿಯೇ ಜನರು ಆ ಪಕ್ಷದ ಆಡಳಿತ ವೈಖರಿ ಮತ್ತು ಅದರ ಸೂತ್ರವನ್ನು ಹಿಡಿದವರ ನಡೆ ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.ಆದರೆ, ಮಾಡಿದ ತಪ್ಪಿಗೆಲ್ಲ  ‘ಹಿಂದಿನವರು ಮಾಡಿಲ್ಲವೇ’ ಎಂಬ ಸಮರ್ಥನೆಯನ್ನು ಜನರು ಒಪ್ಪುವುದಿಲ್ಲ. ಇಂತಹ ಉತ್ತರ ವಿವೇಕದಿಂದ ಕೂಡಿದ್ದು ಎನ್ನಲಾಗದು. ಆಡಳಿತದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ತಡೆಯುವ ಬಗೆಗೆ ಮುಖ್ಯಮಂತ್ರಿ ಅವರು ಇನ್ನಾದರೂ ಗಂಭೀರವಾಗಿ ಚಿಂತಿಸಬೇಕು.ಆಡಳಿತ ಹಳಿ ತಪ್ಪಿದಾಗ ಸರ್ಕಾರದ ವಿರುದ್ಧ ಟೀಕೆ ಮಾಡುವುದು ವಿರೋಧ ಪಕ್ಷಗಳ ಹಕ್ಕು. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಬದಲು, ಪ್ರತಿಪಕ್ಷಗಳ ಮೇಲೆ ಹರಿಹಾಯುವುದು ಉತ್ತಮ ನಾಯಕತ್ವದ ಲಕ್ಷಣವಲ್ಲ. ಹಿಂದಿನ ಕೆಲವು ಮುಖ್ಯಮಂತ್ರಿಗಳು ಮಾಡಿದ್ದರೆನ್ನಲಾದ ಅಕ್ರಮಗಳ ಕಡತಗಳೇ ಕಣ್ಮರೆಯಾಗಿವೆ ಎಂದರೆ ವಿಧಾನ ಸೌಧದಲ್ಲಿನ ಆಡಳಿತದ ಮೇಲೆ ಬಿಗಿ ತಪ್ಪಿದೆ ಎಂದೇ ಅರ್ಥ.ಆದ್ದರಿಂದ ಆಡಳಿತಕ್ಕೆ ಕಾಯಕಲ್ಪ ನೀಡುವ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿ. ‘ಎಷ್ಟು ದಿನ ಆಡಳಿತ ಮಾಡಿದೆವು ಎನ್ನುವುದಕ್ಕಿಂತ ಜನರಿಗೆ ಹೇಗೆ ಆಡಳಿತ ನೀಡುತ್ತೇವೆ’ ಎನ್ನುವ ದೂರದೃಷ್ಟಿ ಆಡಳಿತ ನಡೆಸುವ ನಾಯಕತ್ವಕ್ಕೆ ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.