ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆತಂಕ ತಂದ ಕಲಿಕಾ ಮಟ್ಟ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆಯನ್ನು ಓದಲು ಬಾರದೇ ಇರುವ 8ನೇ ತರಗತಿಯ ಮಕ್ಕಳ ಸಂಖ್ಯೆ ಶೇ 0.7. ಇನ್ನು, 5, 6, 7ನೇ ತರಗತಿಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 2.2, ಶೇ 1.3 ಮತ್ತು ಶೇ 1 ಆಗಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, 4ನೇ ತರಗತಿಯ ಶೇ 42.60 ಮಕ್ಕಳಿಗೆ ವ್ಯವಕಲನ ಹಾಗೂ 5ನೇ ತರಗತಿಯ ಶೇ 60.5ರಷ್ಟು ಮಕ್ಕಳಿಗೆ ಭಾಗಾಕಾರ ಲೆಕ್ಕಗಳ ಬಗ್ಗೆ ಗೊತ್ತೇ ಇಲ್ಲ! ಸರ್ಕಾರೇತರ ಸಂಸ್ಥೆ ಪ್ರಥಮ್ ಜ.14ರಂದು ದೆಹಲಿಯಲ್ಲಿ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ (ಗ್ರಾಮೀಣ) ಶೈಕ್ಷಣಿಕ ಸ್ಥಿತಿಗಳ ವಾರ್ಷಿಕ ವರದಿ-ಆಸರ್ (Annual Status of Education Report) ಈ ಅಂಶಗಳನ್ನು ಬಹಿರಂಗಗೊಳಿಸಿದೆ. ಕಳೆದ 5 ವರ್ಷಗಳಲ್ಲಿ ದೇಶದಾದ್ಯಂತ ಪ್ರಥಮ್ ಸಂಸ್ಥೆಯ 25 ಸಾವಿರ ಸಿಬ್ಬಂದಿ 15 ಸಾವಿರ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, 515 ಜಿಲ್ಲೆಗಳ 7 ಲಕ್ಷ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ವರದಿಯ ಪ್ರಕಾರ 2010ರಲ್ಲಿ 6 ರಿಂದ 14 ವರ್ಷ ವಯೋಮಾನದ ಶೇ 96.9ರಷ್ಟು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. 2010ರ ಏಪ್ರಿಲ್ 28ರಂದು ಪ್ರಾಥಮಿಕ ಶಾಲಾ ಮಕ್ಕಳ ದಾಖಲಾತಿ ವಯಸ್ಸನ್ನು ಸರ್ಕಾರ 5 ವರ್ಷ 10 ತಿಂಗಳಿನಿಂದ, 5 ವರ್ಷಕ್ಕೆ ಇಳಿಸಿರುವುದೇ ಪ್ರವೇಶಾತಿ ಹೆಚ್ಚಲು ಕಾರಣ ಎನ್ನುವ ಅಂಶ ಉಲ್ಲೇಖವಾಗಿದೆ.

2009ರಲ್ಲಿ ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಶೇ 16.8ರಷ್ಟಿತ್ತು. ಆದರೆ, 2010ರಲ್ಲಿ ಈ ಪ್ರಮಾಣ ಶೇ 20ರಷ್ಟಾಗಿದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಲ್ಲಿಯೂ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಬಹುದು. ಇದರಿಂದಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ಈ ಮೂರು ಜಿಲ್ಲೆಗಳ ನಗರ ಪ್ರದೇಶದ ಹಲವು ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಕೇವಲ 60 ರಿಂದ 70 ಮಕ್ಕಳು ಮಾತ್ರ ಓದುತ್ತಿದ್ದಾರೆ ಎಂಬುದನ್ನು ಕಾಣಬಹುದು.

ಖಾಸಗಿ ಶಾಲೆಗಳಲ್ಲಿ ದಾಖಲಾತಿ: 2010ರ ಶೈಕ್ಷಣಿಕ ವರ್ಷದಲ್ಲಿ 6 ರಿಂದ 14 ವರ್ಷದ ಶೇ 76.5ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಶೇ 20ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಅಭ್ಯಸಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಶೇ 55.3ರಷ್ಟು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 18ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಉಡುಪಿ (ಶೇ 42.7), ದಕ್ಷಿಣ ಕನ್ನಡ (ಶೇ 39.16) ಹಾಗೂ ಕೊಡಗು (ಶೇ 32.5) ನಂತರದ ಸ್ಥಾನದಲ್ಲಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ3.3ರಷ್ಟು ವಿದ್ಯಾರ್ಥಿ ಗಳು ಮಾತ್ರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬ ಅಂಶವನ್ನು ‘ಪ್ರಥಮ್’ ತನ್ನ ವರದಿಯಲ್ಲಿ ಹೇಳಿದೆ.

ಆತಂಕಕಾರಿ ಅಂಶ: 2ನೇ ತರಗತಿ ಪಠ್ಯವನ್ನು ಓದಲು ಬಾರದ ಮಕ್ಕಳ ಸಂಖ್ಯೆಯನ್ನು ಗಮನಿಸಿದರೆ ನಿಜಕ್ಕೂ ಒಂದು ಕ್ಷಣ ಅಚ್ಚರಿಯಾಗದೇ ಇರದು. 

 3ನೇ ತರಗತಿಯ ಶೇ 81.4, 4ನೇ ತರಗತಿಯ ಶೇ 71 ಹಾಗೂ 5ನೇ ತರಗತಿಯ ಶೇ 55 ಮಕ್ಕಳಿಗೆ 2ನೇ ತರಗತಿಯ ಪಠ್ಯವನ್ನೂ ಓದಲು ಬರುವುದಿಲ್ಲ! ಅಷ್ಟೇ ಅಲ್ಲ, ಬಹಳಷ್ಟು ವಿದ್ಯಾರ್ಥಿಗಳಿಗೆ ತೀರ ಸರಳವಾದ ವಾಕ್ಯಗಳನ್ನು ಅರ್ಥೈಸಿಕೊಳ್ಳುವುದು ಸಾಧ್ಯವಾಗಿಲ್ಲ. ಪ್ರಥಮ್ ಸಂಸ್ಥೆಯೇ ನೀಡಿರುವ ಉದಾಹರಣೆಯನ್ನು ನೋಡುವುದಾದರೆ, ‘ವಿಮಲ ಕರಿಯನ ತಂಗಿ. ವಿಮಲೆಗೆ ಕುದುರೆ ಕಂಡರೆ ಒಲವು. 
              
ಕರಿಯನಿಗೆ ಕೋತಿ ಕಂಡರೆ ಇಷ್ಟ. ವಿಮಲ ಮತ್ತು ಕರಿಯ ನೀರು ತರಲು ಕುದುರೆ ಮತ್ತು ಕೋತಿಯ ಜೊತೆಗೆ ನೀರಿನ ಕೊಳಕ್ಕೆ ಹೋದರು’ ಎಂಬಂತಹ ಸರಳ ವಾಕ್ಯಗಳನ್ನು ಓದುವಲ್ಲಿಯೂ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎನ್ನುವ ಅಂಶವನ್ನು ವರದಿಯಲ್ಲಿ ಕಾಣಬಹುದು.

ಇನ್ನು ಗಣಿತ ವಿಷಯಕ್ಕೆ ಬಂದರೆ ಗಣಿತ ನಿಜಕ್ಕೂ ಕಬ್ಬಿಣದ ಕಡಲೆಯೇ ಸರಿ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 5ನೇ ತರಗತಿಯ ಶೇ 39.9 ಹಾಗೂ 8ನೇ ತರಗತಿಯಲ್ಲಿ ಓದುತ್ತಿರುವ ಶೇ 23.1ರಷ್ಟು ಮಕ್ಕಳು ವ್ಯವಕಲನ ಲೆಕ್ಕಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. 2006ರಲ್ಲಿ 5ನೇ ತರಗತಿಯ ಶೇ 17.9ರಷ್ಟು ಮಕ್ಕಳಿಗೆ ಭಾಗಾಕಾರ ಲೆಕ್ಕಗಳು ಗೊತ್ತಿರಲಿಲ್ಲ. 2010ರಲ್ಲಿ ಈ ಪ್ರಮಾಣ ಶೇ 20ರಷ್ಟಕ್ಕೆ ಏರಿದೆ.

ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಬೇಕು ಎಂಬುದು ಕಡ್ಡಾಯ. ಅದಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಆದರೆ, ಶೇ 43.5ರಷ್ಟು ಶಾಲೆಗಳಲ್ಲಿ ಮಾತ್ರ ಬಳಕೆಗೆ ಅನುಕೂಲ ಆಗುವಂತಹ ಶೌಚಾಲಯಗಳು ನಿರ್ಮಾಣವಾಗಿವೆ.

ಪ್ರಥಮ್ ಸಂಸ್ಥೆ ತನ್ನ ವರದಿಯಲ್ಲಿ ಅಂಗನವಾಡಿ ಮಕ್ಕಳ ದಾಖಲಾತಿಯನ್ನೂ ನೀಡಿದೆ. ಅದರ ಪ್ರಕಾರ ಶೇ 87 ರಿಂದ (2006) ಶೇ 93.2 (2010)ಕ್ಕೆ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗಿದೆ. 3 ರಿಂದ 4 ವರ್ಷದ ಶೇ 100ರಷ್ಟು ಮಕ್ಕಳು ಅಂಗನವಾಡಿಗೆ ಸೇರಿರುವ ಜಿಲ್ಲೆಗಳಾಗಿ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಉಡುಪಿ ಹಾಗೂ ಉತ್ತರಕನ್ನಡ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಥಮಿಕ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿವೆ. ಆದಾಗ್ಯೂ, ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಉಳಿದುಕೊಂಡಿವೆ. ರಾಜ್ಯದಲ್ಲಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆ 1 ಕೋಟಿಗೂ ಅಧಿಕವಾಗಿದೆ. ಅಂದರೆ, ಪ್ರತಿ 6 ಜನರಲ್ಲಿ ಒಬ್ಬರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಬಗ್ಗೆ ಶಿಕ್ಷಕರೇ ಹೆಚ್ಚು ಕಾಳಜಿ ವಹಿಸಬೇಕು ಎಂಬುದು ಪೋಷಕರ ಒಲವು, ನಿಜ. ಆದರೆ, ಅವರು ಕಲಿಕೆಗಿಂತ ಹೆಚ್ಚಾಗಿ ಬಿಸಿಯೂಟ, ಸಮವಸ್ತ್ರ, ಉಚಿತ ಪಠ್ಯಪುಸ್ತಕ ವಿತರಣೆ, ಜನಗಣತಿ, ಚುನಾವಣೆ, ಶಾಲಾಭಿವೃದ್ಧಿ ಸಭೆಗಳಲ್ಲಿಯೇ ಕಳೆದು ಹೋಗುತ್ತಿದ್ದಾರೆ.

ತಳಮಟ್ಟದಲ್ಲಿ ಇಂತಹ ನೂರಾರು ಸಮಸ್ಯೆಗಳಿದ್ದರೂ ಇಂದು ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆ ಆಗುತ್ತಿರುವುದು ಉನ್ನತ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಮಾತ್ರ. ಇನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಪ್ರಶ್ನೆ ಬಂದಾಗ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ನೀಡಬೇಕೆ? ಲೈಂಗಿಕ, ಜ್ಯೋತಿಷ್ಯ ಶಿಕ್ಷಣ ಅವಶ್ಯಕವೇ? ಶಿಕ್ಷಣ ಹಕ್ಕು ಕಾಯಿದೆ ಜಾರಿ ಕಡ್ಡಾಯ.. ಎಂಬಂತಹ ಚರ್ಚೆಗಳು ನಡೆಯುತ್ತಿವೆ.  ಆದರೆ, ಶಿಕ್ಷಣದ ಖಾಸಗೀಕರಣ ತಂದೊಡ್ಡುತ್ತಿರುವ ಅಪಾಯದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಶಿಕ್ಷಣ ಹಕ್ಕು ಕಾಯಿದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಿದರೂ ಖಾಸಗೀಕರಣದ ಹಿಡಿತವನ್ನು ತಪ್ಪಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮೂಲ ಶಿಕ್ಷಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣದ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ.

(ಸುಭಾಸ.ಎಸ್.ಮಂಗಳೂರ, ಮೈಸೂರು ಕಚೇರಿ, ದೂ.9341784710)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT