ಬುಧವಾರ, ಏಪ್ರಿಲ್ 14, 2021
25 °C

ಆತಂಕ ನಿವಾರಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಲ್ಲಿ ಟರ್ಕಿ ಕೋಳಿಗಳಿಗೆ ಹಕ್ಕಿ ಜ್ವರ (ಕೋಳಿ ಶೀತಜ್ವರ) ಕಾಣಿಸಿಕೊಂಡಿರುವುದರಿಂದ ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರದ ಪಶುಪಾಲನೆ, ಡೇರಿ ಮತ್ತು ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿರುವ ಸಂಶೋಧನಾ ಕೇಂದ್ರದಲ್ಲೇ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಜನತೆಯಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಕುಕ್ಕುಟ ಅಭಿವೃದ್ಧಿ ಕೇಂದ್ರದಲ್ಲಿ ಟರ್ಕಿ ಕೋಳಿಗಳ ಸರಣಿ ಸಾವು ಸಂಭವಿಸುತ್ತಿದ್ದಂತೆ ರಾಜ್ಯ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಎಚ್ಚೆತ್ತುಕೊಂಡಿತು.

ಕೇಂದ್ರ ಸರ್ಕಾರದಿಂದ ಸೂಚನೆ ಬರುವ ಮೊದಲೇ ರಾಜ್ಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ಕೈಗೊಂಡಿತು. ಕೇಂದ್ರದಲ್ಲಿದ್ದ 30,000ಕ್ಕೂ ಹೆಚ್ಚು ಟರ್ಕಿ ಕೋಳಿಗಳು, ಕೋಳಿಗಳು, ಎಮು ಮತ್ತು ಬಾತುಕೋಳಿಗಳನ್ನು ಕೊಲ್ಲಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಅವುಗಳ ಮೃತದೇಹಗಳನ್ನು ವಿಲೇವಾರಿ ಮಾಡಿದ್ದು, ಕೇಂದ್ರದ ಆವರಣವನ್ನು ಶುಚಿಗೊಳಿಸಲಾಗುತ್ತಿದೆ. ಕುಕ್ಕುಟ ಅಭಿವೃದ್ಧಿ ಕೇಂದ್ರದ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ನಿಗಾ ಇಡಲಾಗಿದೆ. ಸರ್ಕಾರ ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ.ಇಲ್ಲಿ ಎಚ್5ಎನ್1 ಎಂಬ ವೈರಾಣುವಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂಬುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ಈ ವೈರಾಣುಗಳು ಮನುಷ್ಯರ ಜೀವಕ್ಕೂ ಅಪಾಯ ಉಂಟುಮಾಡುವ ಸಾಮರ್ಥ್ಯ ಹೊಂದಿವೆ.    ವಿಶ್ವಸಂಸ್ಥೆಯ ವರದಿ ಪ್ರಕಾರ 2003ರಿಂದ 2012ರ ಆಗಸ್ಟ್‌ವರೆಗೆ     ಎಚ್5ಎನ್1 ವೈರಾಣುಗಳಿಂದ ಜಗತ್ತಿನ 12 ದೇಶಗಳಲ್ಲಿ 359 ಮಂದಿ ಸಾವಿಗೀಡಾಗಿದ್ದಾರೆ.

ಹಕ್ಕಿಜ್ವರಕ್ಕೆ ತುತ್ತಾದ ಪಕ್ಷಿಗಳ ಜೊತೆ ನೇರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಈ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಹಬ್ಬುವುದಿಲ್ಲ. ಆದರೂ ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚುತ್ತಿದೆ. ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಕರ್ನಾಟಕದಿಂದ ಕೋಳಿ, ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಯನ್ನು ನಿಷೇಧಿಸಿರುವುದು ಆತಂಕ ದ್ವಿಗುಣಗೊಳ್ಳಲು ಕಾರಣವಾದ ಅಂಶಗಳಲ್ಲೊಂದು.

ಸೋಂಕು ಹಬ್ಬುವುದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಪಶುಪಾಲನಾ ಇಲಾಖೆ, ಈ ಬಗ್ಗೆ ಜಾಗೃತಿ ಮೂಡಿಸಲು ಅಷ್ಟೇ ಆದ್ಯತೆ ನೀಡಿದಂತಿಲ್ಲ. ಹಕ್ಕಿ ಜ್ವರದ ಲಕ್ಷಣಗಳು, ಅದರಿಂದ ಆಗುವ ಅಪಾಯಗಳು, ಸೋಂಕು ಹರಡುವ ಸಾಧ್ಯತೆಗಳು, ಮನುಷ್ಯರು ಹೇಗೆ ಹಕ್ಕಿಜ್ವರದ ಸೋಂಕಿನಿಂದ ಪಾರಾಗಬಹುದು ಮತ್ತಿತರ ಅಂಶಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.

ಖಾಸಗಿ ಕೋಳಿ ಸಾಕಣೆ ಘಟಕಗಳಲ್ಲಿ ಸೋಂಕು ಕಂಡುಬಂದಲ್ಲಿ ಮಾಹಿತಿ ಮುಚ್ಚಿಡದಂತೆ ಉದ್ದಿಮೆದಾರರಲ್ಲೂ ಅರಿವು ಮೂಡಿಸಬೇಕಿದೆ. ಹೆಸರಘಟ್ಟದ ಕುಕ್ಕುಟ ಅಭಿವೃದ್ಧಿ ಕೇಂದ್ರದಲ್ಲಿ ಕಂಡುಬಂದ ಹಕ್ಕಿಜ್ವರ ಮತ್ತು ನಂತರದ ಬೆಳವಣಿಗೆಗಳ ಕುರಿತು ಪಶುಪಾಲನಾ ಇಲಾಖೆಯು ಮುಕ್ತ ಹಾಗೂ ಪಾರದರ್ಶಕವಾಗಿ ಜನರ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಈಗಿನ ತುರ್ತು ಅಗತ್ಯ.          

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.