ಗುರುವಾರ , ಮೇ 6, 2021
26 °C

ಆತ್ಮವಿಲ್ಲದ ನಗರದಲ್ಲಿ ನಿಂತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತ್ಮವಿಲ್ಲದ ನಗರದಲ್ಲಿ ನಿಂತು...

ಇತರ ಅನಿವಾಸಿ ಕನ್ನಡಿಗರಿಗೆ ಹೋಲಿಸಿದರೆ ದೆಹಲಿ ಕನ್ನಡಿಗರು ಹೇಗೆ ಭಿನ್ನ?

ದಿಲ್ಲಿಯಲ್ಲಿರುವ ಕನ್ನಡಿಗರು ಮತ್ತು ಇಲ್ಲಿ ಕರ್ನಾಟಕದ ಪ್ರತಿನಿಧೀಕರಣ ಬೇರೆಡೆಗಳಿಗಿಂತ ಭಿನ್ನ, ಅದು ಹಾಗಿರಲೇಬೇಕು. ದೆಹಲಿ ದೇಶದ ರಾಜಧಾನಿ. ಭವಿಷ್ಯದ ಬಗೆಗಿನ ಬಹುಮಟ್ಟಿನ ನಿರ್ಧಾರಗಳು ಆಗುವುದು ಇಲ್ಲಿ.ರಾಜ್ಯದ ಯೋಜನೆ ಕಾರ‌್ಯಕ್ರಮಗಳಿಗೆ ಹಣ ಸಿಗುವ ಮೂಲ ಇರುವುದು ಇಲ್ಲಿ. ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಕಳಿಸಿದವರು ಬರುವುದು ಇಲ್ಲಿಗೇನೆ. ದೆಹಲಿಯಲ್ಲಿ ಕರ್ನಾಟಕಕ್ಕೆ ಯಾವ ಸ್ಥಾನ ಇದೆ ಮತ್ತು ಕರ್ನಾಟಕದ ಜನಪ್ರತಿನಿಧಿಗಳು ಇಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡಿಗರಿಗೆ ತಿಳಿಸುವ ಸಾಮಾಜಿಕ ಜವಾಬ್ದಾರಿ ದೆಹಲಿ ಕನ್ನಡಿಗರ ಮೇಲಿದೆ.ಆಧುನಿಕ ದೆಹಲಿ ಬೆಳೆದಿರುವುದು ಕಳೆದ 25-30 ವರ್ಷಗಳಲ್ಲಿ ಅಷ್ಟೇ. ಈಗ ನಿಂತು ನೋಡಿದರೆ ಉಳಿದ ಮೆಟ್ರೋಗಳಿಗಿಂತ ಹೆಚ್ಚು ಕಾಸ್ಮೊಪಾಲಿಟನ್ ಆಗಿದೆಯೆನ್ನಬಹುದು.ಸಾಂಸ್ಕೃತಿಕ ದೃಷ್ಟಿಯಿಂದ ದೆಹಲಿ ಆತ್ಮವಿಲ್ಲದ ನಗರ. ವಿವಿಧ ಭಾಷಿಕರು ದೆಹಲಿಗೆ ವಿವಿಧ ಬಣ್ಣ ಕೊಟ್ಟಿದ್ದಾರೆ (ರಂಗೋಲಿಯ ಹಾಗೆ). ಮುಂಬಯಿ, ಕೋಲ್ಕತ್ತ, ಚೆನ್ನೈಗಳಂತೆ ತನ್ನದೇ ಆದ ಆತ್ಮ (ವ್ಯಕ್ತಿತ್ವ) ಈ ಮಹಾನಗರಕ್ಕೆ ಇನ್ನೂ ಬಂದಿಲ್ಲ, ನಿಧಾನವಾಗಿ ರೂಪುಗೊಳ್ಳುತ್ತಿದೆ.

ದೆಹಲಿ ಕನ್ನಡಿಗರನ್ನು ಒಟ್ಟಾಗಿ ಬೆಸೆದಿರುವ ಸಂಗತಿಗಳು ಯಾವುವು?

ದೆಹಲಿಯಲ್ಲಿರುವ ಕನ್ನಡಿಗರ ಸಂಖ್ಯೆ ಸುಮಾರು 11 ಸಾವಿರ. ಕನ್ನಡಪರ ಸಂಘಟನೆಗಳು ಇಪ್ಪತ್ತೇಳು ಇವೆ. ಇವುಗಳಲ್ಲಿ ಜಾತಿ ಆಧಾರಿತ ಸಂಘಟನೆಗಳು (ಬಂಟ, ಗೌಡ, ಬಿಲ್ಲವ-ಬಸವ ಸಮಿತಿಯೂ) ಇವೆ; ಪ್ರದೇಶವನ್ನು ಆಧರಿಸಿದವೂ ಇವೆ (ಸೌತ್ ಕೆನರಾ ಕ್ಲಬ್, ಜೋಳದ ಬಳಗ, ತುಳುನಾಡು ಡೆವಲಪ್‌ಮೆಂಟ್ ಫೋರಂ).

ಆದರೆ ಇವುಗಳ ನಡುವೆ ಸಂಘರ್ಷ ಇಲ್ಲ.`ದೆಹಲಿ ಕರ್ನಾಟಕ ಸಂಘ~ದ ಕಾರ‌್ಯಕ್ರಮಗಳಿಗೆ ಇವರೆಲ್ಲ ಬರುತ್ತಾರೆ. ಜಾತಿ, ಪ್ರದೇಶಗಳ ಐಡೆಂಟಿಟಿ ಉಳಿಸಿಕೊಳ್ಳುವ ಪ್ರಯತ್ನಗಳಿವೆ. `ವಿಶ್ವಮಾನವ~ರಾದವರು ಯಾರೂ ಇಲ್ಲ. ಆದರೂ ದೊಡ್ಡ ಕಾರ‌್ಯಕ್ರಮಗಳ ಸಂದರ್ಭದಲ್ಲಿ ಎಲ್ಲರೂ ಸೇರುತ್ತಾರೆ.ಕನ್ನಡ ಸಂಘಟನೆಗಳ ಸದಸ್ಯರು ಮೇಲು ಮಧ್ಯಮವರ್ಗದವರು. ದೆಹಲಿ ಖರ್ಚಿನ ಊರು. ಬಡವರು ಇಲ್ಲಿ ಬಂದು ಬದುಕುವುದು ಕಷ್ಟವಿದೆ. ಕನ್ನಡಿಗರಲ್ಲಿ ಕೆಲವರು ಹೋಟೆಲಿನಲ್ಲಿ ಕೆಲಸ ಮಾಡುವವರು, ಅವರನ್ನು ಬಡವರೆನ್ನಬಹುದು. ಆದರೆ ಅವರಿಗೆ ದೈನಂದಿನ ಜೀವನದ ಕಷ್ಟಗಳ ನಡುವೆ ಕನ್ನಡ ಸಂಘಟನೆಗಳ ಕೆಲಸದಲ್ಲಿ ತೊಡಗಿಕೊಳ್ಳುವುದು ಅಸಾಧ್ಯ.ದಲಿತರು, ಅಲ್ಪಸಂಖ್ಯಾತರ ಪ್ರಾತಿನಿಧ್ಯ ತುಂಬ ಕಡಿಮೆ... `ದೆಹಲಿ ಕರ್ನಾಟಕ ಸಂಘ~ ಒಂದು ಮಾತೃಸಂಸ್ಥೆಯಿದ್ದಂತೆ. ಸಮಾಲೋಚನಾ ಸಭೆಗೆ ಕರೆದಾಗ, ಸ್ಪರ್ಧೆಗಳಲ್ಲಿ ಭಾಗವಹಿಸಲು ಪತ್ರ ಕಳುಹಿಸಿದಾಗ ವಿವಿಧ ಸಂಘಟನೆಗಳವರು ಬರುತ್ತಾರೆ. ಸೌಹಾರ್ದಯುತ ಸಂಬಂಧ, ಸಮನ್ವಯ ಸಾಧ್ಯ ಆಗಿದೆ.

ದೆಹಲಿಯ ವಿವಿಧ ಕನ್ನಡ ಸಂಘಗಳು ನಡೆಸುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ `ಗೆಟ್ ಟುಗೆದರ್~ ಸ್ವರೂಪವನ್ನು ಮೀರಲು ಸಾಧ್ಯವಾಗಿದೆಯೆ?

ರಾಷ್ಟ್ರಕವಿ ಕುವೆಂಪು ಅವರನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆದ `ಕುವೆಂಪು; ಸಮಗ್ರ ನೋಟ~ ಅಂಥದೊಂದು ಪ್ರಯತ್ನ. ಈ ಹಿಂದೆ `ಸಾಮಾಜಿಕ ನ್ಯಾಯ ವ್ಯವಸ್ಥೆಗೆ ಕರ್ನಾಟಕದ ಕೊಡುಗೆ~ ಎಂಬ ಬಗೆಗೆ ವಿಚಾರಸಂಕಿರಣ ನಡೆಸಿದ್ದೆವು. ಯುಗಾದಿ, ಗಣೇಶನ ಹಬ್ಬ ಆಚರಿಸುತ್ತೇವೆ ನಿಜ. ಇದನ್ನೂ ಮೀರಿ ಕರ್ನಾಟಕದ ಒಳಿತಿನ, ಅಭಿವೃದ್ಧಿಯ ಬಗೆಗೆ ಚಿಂತಿಸಿ ಅಭಿಪ್ರಾಯ ರೂಪಿಸುವ ಕೆಲಸವೂ ನಿಧಾನವಾಗಿ ನಡೆಯುತ್ತಿದೆ.

ದೆಹಲಿಯಲ್ಲಿ ಕರ್ನಾಟಕ, ಕನ್ನಡಗಳ ಬಗೆಗೆ ಇತರರ ಒಟ್ಟಾರೆ ಅರಿವು, ಅನಿಸಿಕೆ ಏನು?

ಉತ್ತರ ಭಾರತೀಯರಿಗೆ ಕರ್ನಾಟಕ ಎಂಬ ಪ್ರಬಲ ರಾಜ್ಯ ಒಂದಿದೆ. ಅದಕ್ಕೆ ಸುಮಾರು 2000 ವರ್ಷಗಳ ಸಂಸ್ಕೃತಿ-ಇತಿಹಾಸ ಇದೆ ಎಂದು ಗೊತ್ತೇ ಇಲ್ಲ. ಕೆಲವರಿಗೆ ಗೊತ್ತಿರಬಹುದು, ಆದರೆ ಓದಿ ತಿಳಿದುಕೊಂಡವರಿಲ್ಲ. ಇನ್ನೂ ಕೆಲವರಿಗೆ ಬೆಂಗಳೂರು ಗೊತ್ತಿರಬಹುದು, ಆದರೆ ಕರ್ನಾಟಕ ಗೊತ್ತಿಲ್ಲ! ಇದಕ್ಕೆ ನಾವೇ ಕಾರಣ.ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರಸಿದ್ಧ ಪಡಿಸುವ ಕೆಲಸ ಮಾಡಿಲ್ಲ. ಕನ್ನಡದ ಪ್ರಮುಖ ಕೃತಿಗಳನ್ನು ಹಿಂದಿಗೆ, ಇಂಗ್ಲಿಷಿಗೆ ಅನುವಾದಿಸುವ ಕೆಲಸ ಸಾಕಷ್ಟು ಆಗಿಲ್ಲ.ನಾನು ಕರ್ನಾಟಕ ಸರ್ಕಾರಕ್ಕೆ ಒಂದು ಪ್ರಸ್ತಾವ ಕೊಟ್ಟೆ, `ದೆಹಲಿಯಲ್ಲಿ ಕರ್ನಾಟಕ ಅಧ್ಯಯನ ಕೇಂದ್ರವೊಂದನ್ನು ತೆರೆಯಿರಿ. ಹೊರನಾಡಿನವರಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಬಗೆಗೆ ತಿಳಿಸುವುದು ಹಾಗೂ ಕರ್ನಾಟಕದ ಅಭಿವೃದ್ಧಿಗೆ ಮಾರ್ಗದರ್ಶನ ಮಾಡುವುದು ಇದರ ಉದ್ದೇಶಗಳಾಗಬೇಕು~. ಒಳ್ಳೆಯ ವಿಚಾರ ಎಂದರು, ಏನೂ ಆಗಲಿಲ್ಲ.

ರಂಗಭೂಮಿಯಲ್ಲಿ ಕನ್ನಡಕ್ಕೆ ಒಂದು ಐಡೆಂಟಿಟಿ ಇದೆ. ಬೇರೆ ವಿಷಯಗಳಲ್ಲಿ (ಉದಾ: ಸಾಹಿತ್ಯ) ಇದು ಇಲ್ಲ. ಹೀಗೇಕೆ?

ಇದು ನಿಜ. ಇದಕ್ಕಾಗಿ ನಾವು ಬಿ.ವಿ. ಕಾರಂತ ಹಾಗೂ ಕಾರ್ನಾಡರನ್ನು ವಂದಿಸಬೇಕು. ಕನ್ನಡದ ಸತ್ವವನ್ನು ಕರ್ನಾಟಕದ ಹೊರಗಿನ ಜನಕ್ಕೆ ಹೇಳಿದ ಮಹಾಪುರುಷರು ಅವರು.

 

ಬಿ.ವಿ.ಕಾರಂತರು ಭೋಪಾಲದ `ರಂಗಮಂಡಲ~, ದೆಹಲಿಯ `ಎನ್‌ಎಸ್‌ಡಿ~ಗಳಲ್ಲಿ ಕೆಲಸ ಮಾಡಿದ್ದು, ಕಾರ್ನಾಡರು `ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ~ಕ್ಕೆ ಹೋದುದು ಸಹಾಯಕವಾಯಿತು. ಹಾಗೆಯೇ ಯು.ಆರ್.ಅನಂತಮೂರ್ತಿಯವರಿಗೆ ಎ.ಕೆ.ರಾಮಾನುಜನ್‌ರಂತಹ ಅನುವಾದಕ ಸಿಕ್ಕಿದರು.ಈ ಮೂವರಷ್ಟೇ ಪ್ರತಿಭಾಶಾಲಿಗಳಾದ ಮಾಸ್ತಿ, ಕಾರಂತ, ಬೇಂದ್ರೆಯವರಿಗೆ ಸಮರ್ಥ ಅನುವಾದಕರು ಸಿಕ್ಕಲಿಲ್ಲ. ಆ ಕಾರಣದಿಂದ ಕನ್ನಡದ ಮಹತ್ವದ ಕೃತಿಗಳು ಕನ್ನಡೇತರರಿಗೆ ಲಭ್ಯವಾಗಲಿಲ್ಲ. ಇನ್ನೊಂದು ಅಂಶ- ನಾಟಕಕ್ಕೆ ಭಾಷೆಯನ್ನು ಮೀರಿ ಜನರನ್ನು ಮುಟ್ಟುವ ಶಕ್ತಿ ಇರುತ್ತದೆ. ಆದರೆ ಸಾಹಿತ್ಯಕ್ಕೆ ಭಾಷೆಯೇ ಅಂತಿಮ (ಸಾಧನ).

`ಅಭಿವೃದ್ಧಿ~ ಎನ್ನುವುದು ಸಾಂಸ್ಕೃತಿಕ ವ್ಯಕ್ತಿತ್ವವನ್ನು ದುರ್ಬಲಗೊಳಿಸುತ್ತಿದೆಯೆ?

ಹೌದು. ಇದು ಜಾಗತೀಕರಣದ ಅತ್ಯಂತ ಕೆಟ್ಟ ಪರಿಣಾಮ. ನಮ್ಮ ಅಭಿವೃದ್ಧಿಯ ಪರಿಕಲ್ಪನೆಯು ಸಾಂಸ್ಕೃತಿಕ ಪರಿಕಲ್ಪನೆಯನ್ನು ನಿರಾಕರಿಸಿ ಬರುತ್ತಿದೆ, ಆರ್ಥಿಕ ಪರಿಭಾಷೆಯಲ್ಲಿ ಮಾತ್ರ ಪ್ರತ್ಯಕ್ಷವಾಗುತ್ತಿದೆ.ಸಂಸ್ಕೃತಿಯ ಪರಿವೇಶ ಇಲ್ಲದೆಯೇ (ಆರ್ಥಿಕ) ಅಭಿವೃದ್ಧಿಯನ್ನು ರೂಪಿಸುತ್ತಿರುವುದರಿಂದ ಹೀಗಾಗಿದೆ. ಬೆಂಗಳೂರಿನ ಒಬ್ಬ ಹುಡುಗ ಇಂದು ನ್ಯೂಯಾರ್ಕ್, ಟೋಕಿಯೊಗಳಿಗೆ ಹೋಗುವುದು ಸುಲಭವಾಗಿದೆ. ಆದರೆ ಕಲೆಗಳಿಗೆ ಇಂಥ flexibility  ಸಾಧ್ಯವಾಗಿಲ್ಲ.ನಮ್ಮ ಯಕ್ಷಗಾನ ಜಗತ್ತನ್ನಿರಲಿ, ಉತ್ತರ ಭಾರತವನ್ನೇ ಸಮರ್ಥವಾಗಿ ಮುಟ್ಟಿಲ್ಲ. ಆರ್ಥಿಕ ಅಭಿವೃದ್ಧಿ ಸಂಸ್ಕೃತಿಯ ಮೇಲೆ ಸ್ವಲ್ಪಮಟ್ಟಿನ ಪರಿಣಾಮ ಬೀರಿರುವುದು ನಿಜ. ಆದರೆ ಸುದೀರ್ಘ ಪರಂಪರೆಯ, ಸಶಕ್ತ ಸಂಸ್ಕೃತಿಗೆ ನ್ಯಾಯ ದೊರೆತಿಲ್ಲ, ಅದರ ಸಾಧ್ಯತೆ, ಸಾಮರ್ಥ್ಯಗಳನ್ನು ದುಡಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿವಿಧ ದೇಶಗಳ 22 ವಿಶ್ವವಿದ್ಯಾಲಯಗಳಲ್ಲಿ ತಮಿಳು ಇದೆ, ಕನ್ನಡ ಇಲ್ಲ. ಕನ್ನಡ ಸಾಹಿತ್ಯಕ್ಕೆ ಶಕ್ತಿ ಇದೆ, ಆದರೆ ಆ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಸಾಂಸ್ಕೃತಿಕ ಮನಸ್ಸುಗಳಿಲ್ಲ.

ಈ ಸ್ಥಿತಿಗೆ ನೇತೃತ್ವದ ಕೊರತೆ ಕಾರಣವೆ?

ಹೌದು, ಬಹುಮಟ್ಟಿಗೆ. ಅರವತ್ತು ಕೋಟಿ ರೂಪಾಯಿ ಖರ್ಚು ಮಾಡಿ ವಿಶ್ವಕನ್ನಡ ಸಮ್ಮೇಳನ ಮಾಡಿ ನೀವು ತಲುಪಿದ್ದು ಯಾರನ್ನು? ಇದರ ಬದಲು ಅದೇ ಜಾಗತಿಕ ಮಟ್ಟದಲ್ಲಿ 10 ಕೋಟಿ ರೂಪಾಯಿ ಖರ್ಚು ಮಾಡಿ 5 ಕನ್ನಡ ಪೀಠಗಳನ್ನು ಸ್ಥಾಪಿಸಿ, 10 ವಿದ್ಯಾರ್ಥಿ ವೇತನಗಳನ್ನು ಕೊಡಬಹುದಾಗಿತ್ತು.ಉತ್ತರಭಾರತದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠ ಬರಲಿ. ಈ ಬಗೆಯ ರಾಷ್ಟ್ರೀಯ ಮುನ್ನೋಟ, ಅಂತಾರಾಷ್ಟ್ರೀಯ ತಿಳಿವಳಿಕೆ ಇರುವವರು ಕರ್ನಾಟಕ ಸರ್ಕಾರದಲ್ಲಿಲ್ಲ.ವೀರಪ್ಪ ಮೊಯಿಲಿ ಅವರಿಗೆ ಕನ್ನಡ ಸಾಹಿತ್ಯದ ಬಗೆಗೆ ಅರಿವಿದೆ, ಮನಸ್ಸು ಮಾಡಿದರೆ ಕೆಲವು ಕೆಲಸ ಮಾಡಬಹುದು. ಆದರೆ ಇದುವರೆಗೆ ಮಾಡಿದಂತಿಲ್ಲ... ತಾನಾಗಿ ಬರುವ ಹಣದ ಮಾತು ಬಿಡಿ, ವಿಶೇಷ ಪ್ರಯತ್ನ ಏನು ಮಾಡಿದಿರಿ ಎಂಬುದು ಮುಖ್ಯ... ಯೋಜನಾ ಆಯೋಗದ ಅಂಕಿ ಅಂಶದ ಪ್ರಕಾರ ಕೇಂದ್ರ ನಿಗದಿಪಡಿಸಿದ ಮೊತ್ತದಲ್ಲೇ ಶೇ.35ರಷ್ಟು ಪಡೆಯದೆ (ಬಳಕೆಯಾಗದೆ) ಉಳಿದಿದೆ!ಲೋಕಸಭೆಯಲ್ಲಿ ಭಾಗವಹಿಸುವುದರಲ್ಲಿ ಕರ್ನಾಟಕದ ಪ್ರತಿನಿಧಿಗಳು 35ನೇ ರ‌್ಯಾಂಕ್ ಪಡೆದಿದ್ದಾರೆ (ಒಟ್ಟು 38ರಲ್ಲಿ!). ಇತ್ತೀಚೆಗೆ ಬೈಕೆರೆ ನಾಗೇಶ್‌ರಿಂದ ಕರ್ನಾಟಕದಲ್ಲಿನ ಅಭಿವೃದ್ಧಿ ಯೋಜನೆಗಳ ಬಗೆಗೆ ಉತ್ತಮ ಕೆಲಸ ಆಗಿದೆ. ರೈಲ್ವೆ, ರಸ್ತೆ, ಪರಿಸರ, ವಿದ್ಯುತ್ ಈ ವಲಯಗಳಿಗೆ ಪ್ರಾಶಸ್ತ್ಯ ದೊರಕಬೇಕು. ಸಂಪನ್ಮೂಲ, ಆದಾಯಗಳ ವಿನಿಯೋಗದಲ್ಲಿ ವಿವೇಕ ಬೇಕು, ದೂರದೃಷ್ಟಿ, ದಾರ್ಶನಿಕತೆಗಳೂ ಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.