ಗುರುವಾರ , ಮೇ 26, 2022
22 °C
ಮಂಡ್ಯ: ಕಾಂಗ್ರೆಸ್ ಬಣಗಳ ತಿಕ್ಕಾಟ ಆರಂಭ

ಆತ್ಮಾನಂದ ವಜಾಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮತ್ತು ವಸತಿ ಸಚಿವ ಅಂಬರೀಷ್ ಬೆಂಬಲಿಗರ ಗುಂಪಿನ ನಡುವೆ ಮತ್ತೆ ತಿಕ್ಕಾಟ ಆರಂಭವಾಗಿದೆ. ಆತ್ಮಾನಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಹಲವು ಮುಖಂಡರು ಭಾನುವಾರ ಅಂಬರೀಷ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆತ್ಮಾನಂದ ಅವರು ಅಂಬರೀಷ್ ಅವರಿಗೆ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣಾ ಸಮಯದಲ್ಲೂ ತಟಸ್ಥರಾಗಿ ಉಳಿದಿದ್ದರು. ಅವರ ರಾಜೀನಾಮೆಯನ್ನೂ ಕೆಪಿಸಿಸಿ ಅಂಗೀಕರಿಸಿರಲಿಲ್ಲ.ಲೋಕಸಭಾ ಚುನಾವಣಾ ತಯಾರಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬುಧವಾರ ನಡೆಸಿದ ಸಭೆಯಲ್ಲಿ ಆತ್ಮಾನಂದ ಪಾಲ್ಗೊಂಡಿದ್ದರು.ಈ ಬೆಳವಣಿಗೆ ಅಂಬರೀಷ್ ಅವರ ಬೆಂಬಲಿಗರನ್ನು ಕೆರಳಿಸಿದೆ. ಭಾನುವಾರ ಬೆಂಗಳೂರಿಗೆ ನಿಯೋಗದಲ್ಲಿ ಬಂದ ಈ ಗುಂಪು, ಅಂಬರೀಷ್ ನಿವಾಸದ ಎದುರು ಪ್ರದರ್ಶನ ನಡೆಸಿ, ಆತ್ಮಾನಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿತು.`ಆತ್ಮಾನಂದ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಆಗಲೇ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣಾ ಪ್ರಚಾರದಲ್ಲೂ ಭಾಗವಹಿಸಿರಲಿಲ್ಲ. ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯತ್ತ ಬಂದಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬಾರದು' ಎಂದು ನಿಯೋಗದಲ್ಲಿದ್ದ ಮುಖಂಡರು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಅಂಬರೀಷ್, `ಆತ್ಮಾನಂದ ಅವರು ಪಕ್ಷದಿಂದ ದೂರ ಹೋಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅದೇ ಹುದ್ದೆಯಲ್ಲಿ ಮುಂದುವರಿಸುವುದು ಸರಿಯಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸುತ್ತೇನೆ' ಎಂದರು.ಅಂಬರೀಷ್ ನಿವಾಸದಿಂದ ತೆರಳಿದ ಈ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದೆ. ಆತ್ಮಾನಂದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರಿಗೂ ಮನವಿ ಸಲ್ಲಿಸಿದೆ.ಮಂಡ್ಯ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್, ನಗರಸಭೆ ಮಾಜಿ ಸದಸ್ಯ ರವಿಶಂಕರೇಗೌಡ, ಮೈಷುಗರ್ಸ್ ಕಂಪೆನಿ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಡಿ.ಗಂಗಾಧರ್, ಮಂಡ್ಯ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಸಿ.ಆನಂದ್ ಮತ್ತಿತರರು ನಿಯೋಗದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.