ಮಂಗಳವಾರ, ಜೂನ್ 22, 2021
22 °C

ಆದರ್ಶಗಳ ಕನಸುಗಾರ್ತಿ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

`ಮಹಿಳಾ ಸಶಕ್ತೀಕರಣ ಅಂದರೆ ಕೇವಲ ಆರ್ಥಿಕ ಸ್ವಾವಲಂಬನೆ ಅಲ್ಲ. ಅದು ನಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರವನ್ನು ನಾವೇ ತೆಗೆದುಕೊಳ್ಳುವ ಕ್ಷಮತೆ ಹಾಗೂ ಸ್ವಾತಂತ್ರ್ಯ. ಆ ಸ್ವಾತಂತ್ರ್ಯದ ದುರುಪಯೋಗ ಸಲ್ಲ. ವೃದ್ಧಾಶ್ರಮ ಬೆಳೆಸುವ ಆರ್ಥಿಕ ಸಶಕ್ತೀಕರಣವೂ ನಮಗೆ ಬೇಕಿಲ್ಲ. ಕೌಟುಂಬಿಕ ವಾತಾವರಣದಲ್ಲಿದ್ದು, ಬಾಂಧವ್ಯ ವೃದ್ಧಿಸಿಕೊಂಡು ಸಾಧಿಸುವುದೇ ನಿಜವಾದ ಮಹಿಳಾ ಸಶಕ್ತೀಕರಣ~.ಇದು ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಮೀನಾ ರಾಜೀವ್ ಚಂದಾವರಕರ ಅವರ ಪ್ರತಿಪಾದನೆ. `ಇದು ಕೇವಲ ನನ್ನ ಪ್ರತಿಪಾದನೆ ಅಷ್ಟೇ ಅಲ್ಲ; ನಾನು ಬದುಕುತ್ತಿರುವ ರೀತಿಯೂ ಸಹ~ ಎನ್ನುವುದು ಅವರ ವಿವರಣೆ.ಹೊರ ರಾಜ್ಯದಲ್ಲಿ ಜನಿಸಿ, ಶಾಲಾ-ಕಾಲೇಜು ಅವಧಿಯಲ್ಲಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡದಿದ್ದರೂ ಆ ಕೊರತೆಯನ್ನು ನೀಗಿಸಿಕೊಂಡು, ತಮ್ಮ ಸೃಜನಶೀಲತೆಯ ಮೂಲಕ ಕರ್ನಾಟಕದ ಶಿಕ್ಷಣ ರಂಗದಲ್ಲಿ ಛಾಪು ಮೂಡಿಸಿದವರು ಡಾ.ಮೀನಾ.ಮೀನಾ ಹುಟ್ಟಿದ್ದು ಮುಂಬೈಯಲ್ಲಿ. ಅವರ ತಂದೆ ಪ್ರಭಾಕರ ಬಗಡೆ, ತಾಯಿ ಪ್ರಮೀಳಾ ಮಂಗಳೂರು ಮೂಲದವರು. ನರ್ಸ್ ಆಗಿದ್ದ ಅಜ್ಜಿ ಮುಂಬೈಯಲ್ಲಿ ನೆಲೆಸಿದ್ದರಿಂದ ಅವರೂ ಅಲ್ಲಿಯೇ ವಾಸವಾಗಿದ್ದರು. ಮಧ್ಯಮ ವರ್ಗದ ಕುಟುಂಬ. ತಂದೆ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ತಾಯಿ ಪ್ರೌಢ ಶಾಲಾ ಶಿಕ್ಷಕಿ. ಮೀನಾ ಹುಟ್ಟಿದ್ದು ನವೆಂಬರ್ 29, 1955ರಂದು. ಬಿ.ಕಾಂ., ಎಂ.ಕಾಂ. ಓದಿದ್ದು ಮುಂಬೈನ ವಿಲೆಪಾರ್ಲೆಯ ನರಸಿಂಹನ್‌ಜಿ ಕಾಮರ್ಸ್ ಕಾಲೇಜಿನಲ್ಲಿ.ವಿದ್ಯಾರ್ಥಿ ದಿಸೆಯಲ್ಲಿಯೇ ಮೀನಾ, ಬ್ಯಾಂಕ್ ಆಫ್ ಇಂಡಿಯಾದ ಬಾಂದ್ರಾ ಶಾಖೆಯಲ್ಲಿ ಅರೆಕಾಲಿಕ ಪಾಸ್‌ಪುಸ್ತಕ ಬರಹಗಾರ್ತಿಯಾಗಿ ನಿತ್ಯ ಎರಡು ಗಂಟೆ ಸೇವೆ ಸಲ್ಲಿಸುತ್ತಿದ್ದರು. ತಿಂಗಳಿಗೆ 175 ರೂಪಾಯಿ ಸಂಭಾವನೆ. ಶಿಕ್ಷಣ ಪೂರೈಸಿದ ನಂತರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ 1976ರಲ್ಲಿ ಸೇವೆಗೆ ಸೇರಿದರು. ಬಾಂದ್ರಾ, ಹುಬ್ಬಳ್ಳಿ, ಗುಳೇದಗುಡ್ಡಗಳಲ್ಲಿ ಏಳು ವರ್ಷ ಸೇವೆ ಸಲ್ಲಿಸಿದರು.ಪತಿ ಡಾ.ರಾಜೀವ್ ಚಂದಾವರಕರ ಕುಮಟಾ ಹತ್ತಿರದ ಮಲ್ಲಾಪುರದವರು. ಮಾವ ಚಂದ್ರಕಾಂತ ಚಂದಾವರಕರ ನಿವೃತ್ತ ಐಎಎಸ್ ಅಧಿಕಾರಿ. ಅತ್ತೆ ಸುಗುಣಾ ಸಂಗೀತ ಪ್ರವೀಣೆ. ಪೆಥಾಲಜಿಸ್ಟ್ ಆಗಿದ್ದ ಡಾ.ರಾಜೀವ್, ಕ್ರೀಡೆಯಲ್ಲಿಯೂ ಹೆಸರು ಮಾಡಿದ್ದರು. ಸಂಬಂಧಿ ಡಾ.ಸುಮನ್ ಶಿರೂರ ಅವರ ಸಲಹೆಯಂತೆ ಬಾಗಲಕೋಟೆಯಲ್ಲಿ ಖಾಸಗಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದರು.ಬಾಗಲಕೋಟೆಯ ವಿದ್ಯಾ ಪ್ರಸಾರಕ ಮಂಡಳಿಯ ಕಾರ್ಯದರ್ಶಿಯಾಗಿದ್ದ ಡಾ.ಹಣಮಂತರಾವ ಶಿರೂರ ಹಾಗೂ ಸಂಸ್ಥೆಯವರು, ತಮ್ಮ ಸಂಸ್ಥೆಯ ನರಸಾಪುರ ಕಲಾ ಮತ್ತು ಶಿರೂರ ವಾಣಿಜ್ಯ ಮಹಾವಿದ್ಯಾಲಯಕ್ಕೆ ಮೀನಾ ಅವರನ್ನು ಉಪ ಪ್ರಾಚಾರ್ಯರನ್ನಾಗಿ ನೇಮಿಸಿದರು. ಬ್ಯಾಂಕ್ ಉದ್ಯೋಗಕ್ಕೆ ವಿದಾಯ ಹೇಳಿದ ಮೀನಾ, ಅನಿರೀಕ್ಷಿತವಾಗಿ ಶಿಕ್ಷಣ ರಂಗ ಪ್ರವೇಶಿಸಿದರು. ಮೂರು ವರ್ಷಗಳ ನಂತರ 1987ರಿಂದ 21 ವರ್ಷಗಳವರೆಗೆ ಆ ಕಾಲೇಜಿನ ಪ್ರಾಚಾರ್ಯರಾಗಿ ಅದಕ್ಕೊಂದು ಹೊಸ ರೂಪ ನೀಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ 1996ರಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದುಕೊಂಡರು.ಮಹಿಳಾ ವಿವಿಗೆ ನೇಮಕವಾಗುವುದಕ್ಕಿಂತ ಮುನ್ನ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ತರಬೇತಿ ಕಾಲೇಜಿನ ನಿರ್ದೇಶಕಿಯಾಗಿದ್ದರು.

`ನಾನು ಶಿಕ್ಷಕಿಯಾಗುತ್ತೇನೆ ಎಂದು ಕನಸನ್ನೂ ಕಂಡಿರಲಿಲ್ಲ. ನನ್ನ ಮಾತೃ ಭಾಷೆ ಕೊಂಕಣಿ, ಓದಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ದ್ವಿತೀಯ ಭಾಷೆ ಫ್ರೆಂಚ್. ನನಗೆ ಕನ್ನಡ ಬಿಟ್ಟು ಮಿಕ್ಕೆಲ್ಲ ಭಾಷೆ ಬರುತ್ತಿದ್ದವು. ಈಜು ಬಾರದ ನನ್ನನ್ನು ಆಳದ ನೀರಿಗೆ ನೂಕಿದ ಅನುಭವ. ಈಜಲೇಬೇಕಾದ ಅನಿವಾರ್ಯತೆ. ಶಿಕ್ಷಕಿ ವೃತ್ತಿಗೆ ಬಂದ ನಂತರ ಛಲದಿಂದ ಕನ್ನಡ ಕಲಿತೆ.

 

ಶಿಕ್ಷಕ ವೃತ್ತಿಯಲ್ಲಿಯೇ ಸಾಧನೆ ಮಾಡಬೇಕೆಂಬ ಪಣ ತೊಟ್ಟೆ. ಆ ಛಲ ಮತ್ತು ಸತತ ಪರಿಶ್ರಮ, ಸಹೃದಯರ ಸಹಕಾರವೇ ನನ್ನನ್ನು ಈ ಸ್ಥಾನದವರೆಗೆ ಕರೆದುಕೊಂಡು ಬಂದಿದೆ~ ಎಂದು ಸ್ಮರಿಸುತ್ತಾರೆ ಮೀನಾ.`ಸಂಶೋಧನೆ ಕೈಗೊಂಡ ನಂತರ ನನ್ನ ಮನೋಭಾವವೇ ಬದಲಾಯಿತು. ಡೆಬಿಟ್-ಕ್ರೆಡಿಟ್‌ಗಳಿಗೆ ಹೆಚ್ಚಿನ ಒತ್ತು ನೀಡದೇ ಅಭಿವೃದ್ಧಿ ವಿಷಯದತ್ತ ಗಮನ ಹರಿಸಿದೆ. ಸಾಧನೆಗೆ ಅದು ದಾರಿದೀಪವೂ ಆಯಿತು~ ಎನ್ನುತ್ತಾರವರು.`ಬದುಕೇ ಹಾಗೆ. ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಸಂಕಷ್ಟಗಳು ಎದುರಾಗಿ ಬಿಡುತ್ತವೆ~ ಎಂಬ ಮಾತು ಡಾ.ಮೀನಾ ಅವರ ಬದುಕಿನಲ್ಲಿ ನಿಜವಾಯಿತು. 1996ರಲ್ಲಿ ಪತಿ ಡಾ.ರಾಜೀವ್ ಹೃದಯಾಘಾತದಿಂದ ನಿಧನರಾದರು. ಅದಾದ ಮೂರೇ ವರ್ಷಗಳಲ್ಲಿ ಮುದ್ದಿನ ಮಗಳು ಅಮೃತಾ ಅಪಘಾತದಲ್ಲಿ ಬಲಿಯಾದಳು. ತಮ್ಮ ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾದ ಈ ಬಿರುಗಾಳಿಗೆ ಡಾ.ಮೀನಾ ವಿಚಲಿತರಾಗಲಿಲ್ಲ.ಎಂಜಿನಿಯರ್ ಆಗಿರುವ ಮಗ ಆನಂದ-ಸೊಸೆ ಮೇಘನಾ ಅವರನ್ನು ಬೆಂಗಳೂರಿಗೆ (ವಿಪ್ರೊ ಕಂಪನಿಯಲ್ಲಿ) ನೌಕರಿಗೆ ಕಳಿಸಿ ತಮ್ಮ ಬದುಕನ್ನೇ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಿಸಿಕೊಂಡುಬಿಟ್ಟರು. ತಂದೆ, ತಾಯಿ, ಅತ್ತೆಯ ಸೇವೆಯನ್ನೂ ಮರೆಯಲಿಲ್ಲ. `ನಮ್ಮ ಮನೆ ಎಂದರೆ ಅದೊಂದು ಮಿನಿ ವೃದ್ಧಾಶ್ರಮವಿದ್ದಂತೆ. 82 ವರ್ಷ ವಯಸ್ಸಿನ ನಮ್ಮ ತಾಯಿ ಆ ವೃದ್ಧಾಶ್ರಮದ ಅತ್ಯಂತ ಕಿರಿಯ ವ್ಯಕ್ತಿ. ತಂದೆ, ಅತ್ತೆಗೆ 86 ವರ್ಷ ವಯಸ್ಸು. ನಾನೆಲ್ಲಿದ್ದರೂ ಅವರೆಲ್ಲರ ವಾಸ ನನ್ನೊಂದಿಗೆ~ ಎಂದು ತಮ್ಮ ಸೇವಾ ಮನೋಭಾವದ ಬಗ್ಗೆ ಹೆಮ್ಮೆ ಪಡುತ್ತಾರೆ ಅವರು.ಮಗಳ ಸ್ಮರಣೆಯಲ್ಲಿ `ಅಮೃತಾ ಮಾನವ ಸಂಪನ್ಮೂಲ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ~ ಸ್ಥಾಪಿಸಿ 100ಕ್ಕೂ ಹೆಚ್ಚು ಮಹಿಳಾ ಮಂಡಳಿಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯ ತರಬೇತಿ ನೀಡಿದರು. ಗುಜರಾತ್‌ನ ಭುಜ್ ಪ್ರದೇಶದಲ್ಲಿ 2002ರಲ್ಲಿ ಭೂಕಂಪ ಸಂಭವಿಸಿದಾಗ ಮುಂಬೈನ ರಘುವಂಶಿ ಚಾರಿಟೆಬಲ್ ಟ್ರಸ್ಟ್ ಪರವಾಗಿ ಅಲ್ಲಿಗೆ ತೆರಳಿ ಕೆನಡಾ-ಇಂಡಿಯಾ ಅಭಿವೃದ್ಧಿ ಸಂಸ್ಥೆಯಿಂದ ಸಂತ್ರಸ್ಥರಿಗೆ ಐದು ಕೋಟಿ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಸೇವೆ, ಸಾಧನೆಗೆ ಹಲವು ಪ್ರಶಸ್ತಿಗಳೂ ಸಂದಿವೆ.ಮಹಿಳಾ ವಿವಿಯ ಅಭಿವೃದ್ಧಿಯ ಬಗ್ಗೆ ಹೊಂದಿರುವ ಕನಸನ್ನು ಅವರ ಮಾತಲ್ಲೇ ಕೇಳಿ.

`ಮಹಿಳಾ ವಿಶ್ವವಿದ್ಯಾಲಯಕ್ಕೆ ಆರಂಭದಲ್ಲೇ ಕುಲಪತಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಎಂಟು ವರ್ಷಗಳ ನಂತರ ಅದು ನನಸಾಗಿದೆ. ತೊರವಿಯ ಹೊಸ ಕ್ಯಾಂಪಸ್‌ನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವುದು. ಗುಣಮಟ್ಟದ ಉತ್ಕೃಷ್ಟ ಶಿಕ್ಷಣಕ್ಕೆ ಒತ್ತು ನೀಡುವುದು. ಸಮಾಜದ ಬೇಡಿಕೆಗೆ ತಕ್ಕಂತೆ ಪಠ್ಯಕ್ರಮ ಪರಿಷ್ಕರಣೆ. ವಿದ್ಯಾ ಪ್ರಸಾರದಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆ. ಇವು ನನ್ನ ಗುರಿ. ಮಾನವ ಸಂಪನ್ಮೂಲದ ಅಭಿವೃದ್ಧಿಯೇ ನನ್ನ ಪರಿಕಲ್ಪನೆ~.`ಮಹಿಳಾ ವಿವಿ ಆರಂಭವಾಗಿ ಎಂಟು ವರ್ಷ ಗತಿಸಿದೆ. ಹನ್ನೊಂದು ಜಿಲ್ಲೆಗಳಿಗೆ ಸೀಮಿತವಾಗಿರುವ ವಿವಿಯ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಗಿಸಲು ಅಗತ್ಯವಿರುವ ಇನ್ನಷ್ಟು ಕೋರ್ಸ್‌ಗಳನ್ನು ಮಾಡಬೇಕಿತ್ತು. ಬೋಧಕರ ಕೊರತೆ ನೀಗಿಲ್ಲ.  ಬೋಧಕೇತರ ಸಿಬ್ಬಂದಿಯ ಪೂರ್ಣ ಪ್ರಮಾಣದ ನೇಮಕಾತಿಯೂ ಆಗಿಲ್ಲ. ಸರ್ಕಾರದ ಸಹಾಯದಿಂದ ಬೋಧಕ-ಬೋಧಕೇತರ ಸಿಬ್ಬಂದಿಯ ಕಾಯಂ ನೇಮಕಾತಿ ಮಾಡುವುದು. ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿವಿಯ ವ್ಯಾಪ್ತಿ ವಿಸ್ತರಿಸುವುದು. ಸಂಶೋಧನೆಗೆ ಒತ್ತು ನೀಡಿ, ಹೊಸ ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿನಿಯರನ್ನು ಹೆಚ್ಚು ಹೆಚ್ಚಾಗಿ ವಿವಿಯತ್ತ ಆಕರ್ಷಿಸುವ ಕೆಲಸ ಮಾಡುತ್ತೇನೆ~.`ಉತ್ತರ ಕರ್ನಾಟಕದ ವಿದ್ಯಾರ್ಥಿನಿಯರು ಯಾವುದೇ ದೃಷ್ಟಿಯಲ್ಲಿ ಕಡಿಮೆ ಇಲ್ಲ. ಆದರೆ, ಅವರಲ್ಲಿ ಹಿಂಜರಿಕೆ, ಕೀಳರಿಮೆ ಹೆಚ್ಚು. ನನ್ನಿಂದ ಆ ಕೆಲಸ ಆಗುವುದಿಲ್ಲ ಎಂಬ ಭಾವನೆ ಅವರಲ್ಲಿ ಬೇರೂರಿದೆ. ಶಿಕ್ಷಣವನ್ನು ಕೈಗಾರಿಕೆ ಎನ್ನುತ್ತೇವೆ. ಆ ಕೈಗಾರಿಕೆಗೆ ಬೇಕಿರುವಷ್ಟು ಕೌಶಲ ಅವರಲ್ಲಿ ಇಲ್ಲ. ಕೌಶಲ ಅಭಿವೃದ್ಧಿ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಿ, ಎಲ್ಲ ವಿದ್ಯಾರ್ಥಿನಿಯರಲ್ಲೂ ಕೌಶಲ ಬೆಳೆಸುವುದು. ವಿದ್ಯಾರ್ಥಿನಿಯರು ಅಷ್ಟೇ ಅಲ್ಲ.

 

ಈ ಭಾಗದ ಮಹಿಳೆಯರಿಗೂ ಅವರ ಜೀವನೋಪಾಯಕ್ಕೆ ಅನುಕೂಲವಾಗುವ ಹಾಗೂ ಈ ಶತಮಾನಕ್ಕೆ ಸರಿಹೊಂದುವ ಕೋರ್ಸ್‌ಗಳನ್ನು ಆರಂಭಿಸುವುದು. ಕೌಟುಂಬಿಕ ಸಲಹಾ ಕೇಂದ್ರ, ಆಪ್ತಸಮಾಲೋಚನೆಯ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರ ನೋವಿಗೆ ಸ್ಪಂದಿಸುವುದು. ಅಗತ್ಯವಿದ್ದವರಿಗೆ ಕಾನೂನು ನೆರವು ಕೊಡಿಸುವ ಕೆಲಸವನ್ನೂ ಮಾಡಬೇಕಿದೆ~.`ಶಿಕ್ಷಣದ ಗುಣಮಟ್ಟ ಸುಧಾರಣೆ ಆಗುವವರೆಗೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಶಿಕ್ಷಣಕ್ಕೆ ಬರುವುದು ಕಷ್ಟ. ಮಹಿಳಾ ವಿವಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಉದ್ದಿಮೆದಾರರ ಸಹಯೋಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಯೋಜನೆ ಜಾರಿಗೊಳಿಸುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದು, ಯುಜಿಸಿಯಿಂದ ಹೆಚ್ಚಿನ ಅನುದಾನ ದೊರಕಿಸಿಕೊಳ್ಳುವ ಯೋಚನೆ ಇದೆ. ಸಾಂಘಿಕ ಪ್ರಯತ್ನದ ಮೂಲಕ ಮಹಿಳಾ ವಿವಿಯನ್ನು ಮಾದರಿ ವಿವಿಯನ್ನಾಗಿ ರೂಪಿಸುತ್ತೇವೆ~.`ಸಶಕ್ತೀಕರಣದ ದುರುಪಯೋಗವಾಗಬಾರದು. ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಂತೆ, ಯಶಸ್ವಿ ಮಹಿಳೆಯ ಹಿಂದೆ ಪುರುಷ ಇರುತ್ತಾರೆ ಎಂಬುದು ನನ್ನ ಭಾವನೆ.ಮಾನವ ಸಂಪನ್ಮೂಲದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಅಬ್ದುಲ್ ಕಲಾಂ ಅವರು ಕಂಡ ಅಭಿವೃದ್ಧಿ ಹೊಂದಿದ ರಾಷ್ಟ್ರದ ಕನಸನ್ನು ನನಸಾಗಿಸಲು ನಮ್ಮ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಪಾತ್ರ ಪ್ರಮುಖವಾದುದು.ಮಹಿಳಾ ದೌರ್ಜನ್ಯದ ವಿರೋಧಿ ಹೋರಾಟಕ್ಕಷ್ಟೇ ನಾವು ಸೀಮಿತರಾಗಬಾರದು. ಸಶಕ್ತ ಮಹಿಳಾ ಸಮಾಜ ನಿರ್ಮಿಸಲು ಅಗತ್ಯವಿರುವ ನಮ್ಮ ಪಾತ್ರವನ್ನು ನಾವು ನಿರ್ವಹಿಸಲೇಬೇಕು. ಅಂದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಇದರ ಯಶಸ್ಸು-ವೈಫಲ್ಯಕ್ಕೆ ನಾವೇ ಕಾರಣರಾಗಲಿದ್ದೇವೆ ಎಂಬುದನ್ನು ಮಹಿಳೆಯರಾದ ನಾವು ಮರೆಯಬಾರದು~.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.