ಬುಧವಾರ, ಮೇ 18, 2022
23 °C

ಆದರ್ಶ ಗ್ರಾಮವಾಗಿಸಲು ಭಾಗವತ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆಆಲೂರ (ಗದಗ): ‘ಭಾರತದಲ್ಲಿ ಗ್ರಾಮಗಳೇ ಜೀವನ ಮೌಲ್ಯ. ಆದ್ದರಿಂದ ನೆರೆ ಸಂತ್ರಸ್ತರ ಅಸರೆ ಗ್ರಾಮ ಜಗನ್ನಾಥ ನಗರದಲ್ಲಿ ಬೇಧ ರಹಿತ ಸಾಮರಸ್ಯ ಜೀವನ ನಡೆಸುವ ಮೂಲಕ ದೇಶದಲ್ಲಿಯೇ ಆದರ್ಶ ಗ್ರಾಮವನ್ನಾಗಿ ಮಾಡಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಾದ  ಮೋಹನ ಭಾಗವತ್ ಕರೆ ನೀಡಿದರು.ಹೊಳೆ ಆಲೂರಿನಲ್ಲಿ ಸೇವಾ ಭಾರತಿ ಸಂಸ್ಥೆ ವತಿಯಿಂದ ನಿಮಾರ್ಣ ಮಾಡಲಾಗಿರುವ ಆಸರೆ ಮನೆಗಳನ್ನು ಗುರುವಾರ ಫಲಾನುಭವಿಗಳಿಗೆ ವಿತರಣೆ ಮಾಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಪ್ರತಿಯೊಂದು ಗ್ರಾಮ ಚೆನ್ನಾಗಿದ್ದಾರೆ ದೇಶ ಚೆನ್ನಾಗಿರುತ್ತದೆ. ಗ್ರಾಮಗಳಲ್ಲಿ ವಾತಾವರಣ ಉತ್ತಮವಾಗಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನೂತನ ಗ್ರಾಮದಲ್ಲಿ ವಾಸ ಮಾಡುವ ಜನರು ಉತ್ತಮ ಜೀವನ ರೂಢಿ ಸಿಕೊಳ್ಳಿ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಮನೆ ಮುಂದೆ ಗಿಡ ನೆಟ್ಟು ಬೆಳೆಸಿ, ಸುತ್ತ ಮುತ್ತಲ ಪರಿಸರದ ಸ್ವಚ್ಛತೆ ಕಾಪಾಡಿ’ ಎಂದು ಜನರಿಗೆ ಕಿವಿಮಾತು ಹೇಳಿದರು.ನವಗ್ರಾಮಕ್ಕೆ ಜಗನ್ನಾಥನಗರ ಎಂದು ನಾಮಕರಣ ಮಾಡಿರುವುದು ಅತ್ಯಂತ ಸೂಕ್ತ ನಿರ್ಧಾರ. ತಮಗಾಗಿ ಏನನ್ನು ಬಯಸದೇ ದೇಶ ಸೇವೆಗೆ ತಮ್ಮ ಬದುಕನ್ನು ಮುಡಪಾಗಿಟ್ಟ ಜಗನ್ನಾಥರಾವ್ ಜೋಶಿ ಅವರ ತ್ಯಾಗ ಹಾಗೂ ಕರ್ಮ ಸಿದ್ಧಾಂತ ಈ ಗ್ರಾಮದ ಜನರಿಗೆ ಆದರ್ಶಪ್ರಾಯವಾಗಬೇಕು ಎಂದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ದೃಷ್ಟಿಯಿಂದ ಕೈಗಾರಿಕಾ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಮಾದರಿಯಲ್ಲಿಯೇ ಬರುವ ಜೂನ್ ತಿಂಗಳಲ್ಲಿ ಕೃಷಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುವುದು’ ಎಂದರು.‘ರೈತರ ಮಕ್ಕಳಿಗೆ ಉನ್ನತ ಅಧ್ಯಯನಕ್ಕಾಗಿ ಸಾಲ ನೀಡಿ, ಅದರ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಕೃಷಿಕರು ಸಂಕಷ್ಟ  ಸ್ಥಿತಿ ಎದುರಿಸುವ ಸಂದರ್ಭದಲ್ಲಿ ಅವರ ನೆರವಿಗಾಗಿ 5 ಸಾವಿರ ಕೋಟಿ ರೂಪಾಯಿಗಳ ಆವರ್ತ ನಿಧಿಯನ್ನು ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ 1 ಸಾವಿರ ಕೋಟಿ ರೂಪಾಯಿಗಳನ್ನು ಈ ವರ್ಷದ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ. ಇನ್ನುಳಿದ ವರ್ಷಗಳಲ್ಲಿ ತಲಾ ಒಂದು ಸಾವಿರ ಕೋಟಿ ರೂಪಾಯಿಗಳಂತೆ ಮುಂದಿನ ನಾಲ್ಕು ವರ್ಷ 4 ಸಾವಿರ ಕೋಟಿ ರೂಪಾಯಿ ಹಣವನ್ನು ಇದಕ್ಕಾಗಿ ಮೀಸಲಾಗಿಡಲಾಗುವುದು’ ಎಂದರು.ನೆರೆ ಸಂತ್ರಸ್ತರಿಗಾಗಿ ನಿರ್ಮಿಸಲಾದ ಈ ಪುನರ್ವಸತಿ ಕೇಂದ್ರಗಳಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಫಲಾನುಭವಿಗಳು ಈ ನವಗ್ರಾಮಕ್ಕೆ ಸ್ಥಳಾಂತರಗೊಂಡು ಸುಖ ಜೀವನ ನಡೆಸುವಂತೆ ಯಡಿಯೂರಪ್ಪ ಹಾರೈಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಮಾತನಾಡಿ,  ‘2009 ರಲ್ಲಿ ತುಂಬಿ ಹರಿದ ಬೆಣ್ಣೆಹಳ್ಳ ಹಾಗೂ ಮಲಪ್ರಭೆಯ ರೌದ್ರಾವತಾರದಿಂದ ಜಿಲ್ಲೆಯ 14 ಗ್ರಾಮಗಳು ತತ್ತರಿಸಿದವು. ಇದನ್ನು ಮನಗಂಡ ಸರ್ಕಾರ ತಕ್ಷಣವೇ ಪರಿಹಾರ ಸೌಲಭ್ಯದ ಜೊತೆಗೆ ಪುನರ್ವಸತಿ  ಕೇಂದ್ರಗಳನ್ನು ನಿರ್ಮಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡು ಅದನ್ನು ಸಾಕಾರಗೊಳಿಸಿದೆ’ ಎಂದರು.ಇದೊಂದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದ ಅವರು, ‘ಆಲೂರು ವೆಂಕಟರಾಯರ ಸಂಸ್ಮರಣೆಗಾಗಿ ಹೊಳೆಆಲೂರಿನಲ್ಲಿ 1.15ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ಭವನವನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಈ ದಿನ ಶಿಲಾನ್ಯಾಸ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿದ್ದಾರೆ. ಅಲ್ಲದೇ ಜಗನ್ನಾಥರಾವ್ ಜೋಶಿ ಅವರ ಸ್ಮಾರಕ ಭವನ ಸಹ 1 ಕೋಟಿ  ರೂಪಾಯಿ ವೆಚ್ಚದಲ್ಲಿ ನರಗುಂದದಲ್ಲಿ  ನಿರ್ಮಾಣಗೊಳ್ಳಲಿದೆ’ ಎಂದರು.ಸ್ಥಳೀಯ ರೈತರ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಕುರಿತಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೂ ಮುನ್ನ ಹೊಳೆಆಲೂರು ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇತರ ಗಣ್ಯರಿಗೆ ಪೂರ್ಣ ಕುಂಭಮೇಳದೊಂದಿಗೆ ಸಂಭ್ರಮದ ಸ್ವಾಗತ ನೀಡಲಾಯಿತು. ನೂತನ ನಿರ್ಮಿತ ಮನೆಗಳನ್ನು ವೀಕ್ಷಿಸಿ ಯಡಿಯೂರಪ್ಪ, ನಂತರ ಈ ಸಂದರ್ಭದಲ್ಲಿ ಆಯೋಜಿಸಲಾದ ಅಭಿವೃದ್ಧಿ ಕಾರ್ಯಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.ಸಚಿವರಾದ  ಬಸವರಾಜ ಬೊಮ್ಮಾಯಿ, ಕೃಷ್ಣ ಪಾಲೇಮಾರ, ಶಾಸಕರಾದ  ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ,  ಜಿ.ಪಂ. ಅಧ್ಯಕ್ಷೆ  ಚಂಬವ್ವ ಪಾಟೀಲ, ಮುಖ್ಯಮಂತ್ರಿ ಕಾರ್ಯದರ್ಶಿ  ಲಕ್ಷ್ಮೀನಾರಾಯಣ, ಉತ್ತರ ವಲಯದ ಐಜಿಪಿ ಪಿ.ಎಸ್.ಸಂಧು, ಜಿಲ್ಲಾಧಿಕಾರಿ  ಎಸ್. ಶಂಕರನಾರಾಯಣ, ಜಿ.ಪಂ. ಸಿಇಓ ವೀರಣ್ಣ ತುರಮರಿ, ಎಸ್‌ಪಿ ರವಿಕುಮಾರ ನಾಯಕ ಮತ್ತಿತರರು ಹಾಜರಿದ್ದರು. ದಿನೇಶ ಹೆಗಡೆ ಸ್ವಾಗತಿಸಿದರು. ಸೇವಾ ಭಾರತಿ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಭಾರತಿ ಸಂಸ್ಥೆ ಕಾರ್ಯದರ್ಶಿ  ಶ್ರಿಧರ ನಾಡಗೇರ ವಂದಿಸಿದರು.ಆಸರೆ ಮನೆಗಳ ನಿರ್ಮಾಣಕ್ಕೆ ಸಹಾಯ ಮಾಡಿದ ಪ್ರಮುಖ ದಾನಿಗಳಾದ ಕೊಂಕೋಡಿ ಪದ್ಮನಾಭ್, ತುಳಸಿ ಮುನಿರಾಜು, ಪುಟ್ಟರಾಜು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.