ಭಾನುವಾರ, ಆಗಸ್ಟ್ 9, 2020
23 °C

ಆದಿಚುಂಚನಗಿರಿ ಮಠ, ಆಸ್ಪತ್ರೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಿಚುಂಚನಗಿರಿ ಮಠ, ಆಸ್ಪತ್ರೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಬೆಂಗಳೂರು/ಗುಲ್ಬರ್ಗ: ಬೆಂಗಳೂರಿನ ಆದಿಚುಂಚನಗಿರಿ ಮಠದ ವಿಜಯನಗರ ಶಾಖೆ, ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸಪ್ತಗಿರಿ ವೈದ್ಯಕೀಯ ಕಾಲೇಜ್ ಮತ್ತು ಗುಲ್ಬರ್ಗದ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಹೊಂದಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ (ಎಚ್‌ಕೆಇಎಸ್)ಯ ಆಡಳಿತ ಮಂಡಳಿ ನಾಲ್ಕು ಪದಾಧಿಕಾರಿಗಳ ಮನೆಗಳ ಮೇಲೆ ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ವಿಜಯನಗರ ಶಾಖಾ ಮಠದ ವ್ಯವಸ್ಥಾಪಕ ಶಿವರಾಮ್, ಸಪ್ತಗಿರಿ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಗಿರಿಗೌಡ ಮೊದಲಾದವರ ಮನೆಗಳ ಮೇಲೂ ದಾಳಿ ನಡೆದಿದೆ. ಬಿಜಿಎಸ್ ಆಸ್ಪತ್ರೆಯ ಅಧ್ಯಕ್ಷ ಶೇಖರ್ ಸ್ವಾಮೀಜಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಶೇಖರ್ ಅವರ ಸ್ನೇಹಿತರ ಮನೆಯ ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆದ ದಾಳಿ ವೇಳೆ ದಾಖಲಾತಿಗಳು, ಲೆಕ್ಕ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು.ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟು ಅವ್ಯವಹಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಒಕ್ಕಲಿಗ ಸಮುದಾಯದವರಿಗೆ ಸೇರಿದ ಮಠದ ಮೇಲೆ ನಡೆದಿರುವ ದಾಳಿಗೆ ಜನಾಂಗದ ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯ ವಿರುದ್ಧ ಮಠದ ಭಕ್ತರು ಶಾಖಾ ಮಠದ ಬಳಿ ಪ್ರತಿಭಟನೆಯನ್ನೂ ನಡೆಸಿದರು. ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಿದರು. ಮಂಡ್ಯದಲ್ಲಿಯೂ ಪ್ರತಿಭಟನೆ ನಡೆದಿದೆ.ಗುಲ್ಬರ್ಗ ವರದಿ: `ಎಚ್‌ಕೆಇಎಸ್' ಸಂಸ್ಥೆಯ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ, ಕಾರ್ಯದರ್ಶಿ ಶಿವಾನಂದ ಮಾನಕರ, ಸಹಕಾರ್ಯದರ್ಶಿ ಶಿವರಾಜ ನಿಗ್ಗುಡಗಿ, ಕಾರ್ಯಕಾರಿಣಿ ಸದಸ್ಯ ಸಂಪತಕುಮಾರ್ ಲೋಯಾ ಅವರ ಮನೆ ಮೇಲೆ ನಡೆದಿದೆ. ಗುರುವಾರ ಬೆಳಿಗ್ಗೆ 6.30ಕ್ಕೆ ಧಾವಿಸಿದ ಅಧಿಕಾರಿಗಳು ರಾತ್ರಿವರೆಗೂ ಲೆಕ್ಕಪತ್ರ ಪರಿಶೀಲನೆ ಮುಂದುವರಿಸಿದ್ದರು. ಕುಟುಂಬದ ಯಾವುದೇ ಸದಸ್ಯರು ಹೊರಗೆ ಹೋಗದಂತೆ ಹಾಗೂ ಬೇರೆಯವರು ಒಳಗೆ ಬರದಂತೆ ಅಧಿಕಾರಿಗಳು ನಿರ್ಬಂಧ ಹಾಕಿದ್ದರು. ದಾಳಿಯ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರ ಕುಟುಂಬದ ಕೆಲವು ಸದಸ್ಯರನ್ನು ಮಧ್ಯಾಹ್ನ ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದರು. ಅಧಿಕಾರಿಗಳು ಮನೆಗೆ ಮರಳುವಾಗ  ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ನಗ-ನಾಣ್ಯಗಳ ದೊಡ್ಡ ಪೆಟ್ಟಿಗೆ ಕಂಡುಬಂತು.ಎಚ್‌ಕೆಇ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುವ ಪಿಡಿಎ ಎಂಜಿನಿಯರಿಂಗ್ ಕಾಲೇಜು, ಎಂಆರ್‌ಎಂಸಿ ವೈದ್ಯಕೀಯ ಕಾಲೇಜು, ಮಾತೋಶ್ರೀ ತಾರಾದೇವಿ ರಾಂಪೂರೆ ಔಷಧಗಳ ವಿಜ್ಞಾನ ಮಹಾವಿದ್ಯಾಲಯ ಹಾಗೂ ನಿಜಲಿಂಗಪ್ಪ ದಂತ ಮಹಾವಿದ್ಯಾಲಯ ಸೇರಿ ವಿವಿಧ ಕಾಲೇಜುಗಳಿಗೆ ಈಗ ಪ್ರವೇಶ ಪ್ರಕ್ರಿಯೆ ನಡೆಯುತ್ತಿವೆ.ಮನಸ್ಸಿಗೆ ನೋವು; ಎಚ್‌ಡಿಕೆ ಪ್ರತಿಕ್ರಿಯೆ: `ಆದಿಚುಂಚನಗಿರಿ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ಕುತಂತ್ರ ಅಡಗಿರಬಹುದು. ಇದು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸ. ಇದರಿಂದ ಮನಸ್ಸಿಗೆ ತೀರಾ ನೋವಾಗಿದೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಮಠ ಮಂದಿರಗಳ ಮೇಲೆ ವಕ್ರದೃಷ್ಟಿ ಬೀಳುವುದು ಉತ್ತಮ ಸಂಪ್ರದಾಯ ಅಲ್ಲ. ಮಠಗಳು ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ.ಆದಿಚುಂಚನಗಿರಿ ಮಠದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಮುನ್ನ ಅಧ್ಯಯನ ಮಾಡಿ ಮುಂದಿನ ಹೆಜ್ಜೆ ಇಡಬೇಕಾಗಿತ್ತು. ಈ ದಾಳಿಯ ಹಿಂದಿನ ಉದ್ದೇಶ ಬಹಿರಂಗವಾಗಬೇಕು. ಇದೊಂದು ರಾಜಕೀಯ ಪ್ರೇರಿತವಾಗಿದ್ದು, ಮಠ-ಮಂದಿರಗಳ ಸೇವಾ ಕಾರ್ಯಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ' ಎಂದು ಹೇಳಿದ್ದಾರೆ.`ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವುದು ಸರಿಯಲ್ಲ. ಸಮಾಜಕ್ಕೆ ಒಳಿತು ಬಯಸುವ ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ಮಾಡಿದರೆ ತಪ್ಪು ಸಂದೇಶ ರವಾನೆ ಆಗುತ್ತವೆ. ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮಠದ ಮೇಲೆ ದಾಳಿ ನಡೆಸುವುದು ಅಪಾಯಕಾರಿ ಬೆಳವಣಿಗೆ. ಸಮಾಜದ ನಿಯೋಗದೊಂದಿಗೆ ರಾಷ್ಟ್ರಪತಿ ಮತ್ತು ಪ್ರಧಾನಿಯವರನ್ನು ಭೇಟಿಮಾಡಿ ಎಲ್ಲವನ್ನೂ ವಿವರಿಸುತ್ತೇನೆ' ಎಂದು ವಿಜಯನಗರ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.`ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಂತೆ ಕಾಣುತ್ತಿದೆ. ಈ ದಾಳಿಯ ಹಿಂದೆ ರಾಜಕೀಯ ಕೈವಾಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಜನರನ್ನು ಕೆರಳಿಸುವಂತಹ ಕೆಲಸವನ್ನು ಯಾರೂ ಮಾಡಬಾರದು' ಎಂದು ಜೆಡಿಎಸ್ ಶಾಸಕ ಎನ್.ಚೆಲುವರಾಯಸ್ವಾಮಿ ತಿಳಿಸಿದ್ದಾರೆ.ಪ್ರತಿಭಟನೆ

ಮೈಸೂರು/ಮಂಡ್ಯ:
ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಮೈಸೂರು, ಮಂಡ್ಯ ಹಾಗೂ ಮದ್ದೂರಿನಲ್ಲಿ ಗುರುವಾರ ಪ್ರತಿಭಟನೆ ನಡೆದಿದೆ.ಮಂಡ್ಯದಲ್ಲಿ ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು  ಧಾರ್ಮಿಕ ಜಾಗೃತಿ ಮೂಡಿಸುವ ಮಠದ ಮೇಲೆ ದಾಳಿ ನಡೆಸಿದ್ದು ಸರಿಯಲ್ಲ. ಕೇಂದ್ರ ಸರ್ಕಾರ ಇಂತಹ ಕೃತ್ಯಕ್ಕೆ ಕೈಹಾಕಬಾರದು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಭಾವಚಿತ್ರವನ್ನು ತೆಗೆದು ಹಾಕಿರುವುದನ್ನೂ ಪ್ರತಿಭಟನಕಾರರು ಖಂಡಿಸಿದರು. ಒಕ್ಕಲಿಗ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವುದನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.  ಮದ್ದೂರಿನಲ್ಲೂ ಹೆದ್ದಾರಿ ತಡೆ ನಡೆಸಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.