ಸೋಮವಾರ, ಜೂಲೈ 13, 2020
29 °C

ಆನೆಕೆರೆ ಬಸದಿಗೆ ಹೊಸ ಶೋಭೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ (ಬಜಗೋಳಿ): ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವುಳ್ಳ  ಕಾರ್ಕಳ ಆನೆಕೆರೆ ಜಿನಾಲಯ ಮತ್ತು ಸರೋವರ ಜೀಣೋದ್ಧಾರಗೊಳಿಸಲು ಇಲ್ಲಿಯ ಅನೇಕ ಶ್ರದ್ದಾವಂತರು ಒಟ್ಟು ಸೇರಿ ಇನ್ನೊಂದು ಪ್ರಯತ್ನಕ್ಕೆ ಕೈ ಹಚ್ಚಿ ಸಮಾಜದ ಹಾಗೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಈ ಜಿನಾಲಯ ಐತಿಹಾಸಿಕ ಹಿನ್ನೆಲೆ ಹಾಗೂ ಮಹತ್ವ ತಿಳಿದುಕೊಳ್ಳಲು, ಶಿಲಾಶಾಸನ ಅಧ್ಯಯನ ಮಾಡಲು ಉಜಿರೆ ಎಸ್‌ಡಿಎಂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ವೈ.ಉಮಾನಾಥ ಶೆಣೈ ಇತ್ತೀಚೆಗೆ ಬಸದಿಗೆ ಭೇಟಿ ನೀಡಿ ಶಿಲಾಶಾಸನದ ಅಧ್ಯಯನ ಆರಂಭಿಸಿದ್ದಾರೆ.ಕಾರ್ಕಳ ಬಾಹುಬಲಿ ಸ್ವಾಮಿಯ ಉನ್ನತ ಏಕಶಿಲಾ ಮೂರ್ತಿಯಂತೆ ಹಲವು ಪ್ರಾಚೀನ ಪೂಜಾ ಮಂದಿರಗಳಿಗೂ ಪ್ರಸಿದ್ಧ. ಅವುಗಳ ಪೈಕಿ ಸುಮಾರು 26 ಎಕರೆಗಿಂತಲೂ ವಿಸ್ತಾರವಾಗಿರುವ ಬೃಹತ್ ಸರೋವರದ ಮಧ್ಯದಲ್ಲಿ ಕಂಗೊಳಿಸುತ್ತಿರುವ ಬಸದಿಯೂ ಒಂದು. ಇದರ ಇತಿಹಾಸ ತೆರೆದಿಡುವ ಕ್ರಿ.ಶ. 1545ರ ಕಾಲದ ಶಿಲಾಶಾಸನ ಇಲ್ಲಿದೆ.ಬಸದಿಯ ಸುತ್ತಲ ಕೆರೆಯಲ್ಲಿ ಹರಡಿರುವ ಜಲರಾಶಿಯು ಕಸಕಡ್ಡಿ ಗಿಡಗಂಟಿಗಳಿಂದ ತುಂಬಿದ್ದರೂ, ಅಲ್ಲಲ್ಲಿ ಅರಳಿ ನಿಂತಿರುವ ಕಮಲ, ನೈದಿಲೆಗಳು ಕಣ್ಮನ ಆಕರ್ಷಿಸುತ್ತವೆ.ಈ ಕೆರೆ ಅಂದಗೊಳಿಸುವ, ಸ್ವಚ್ಛಗೊಳಿಸುವ ಪ್ರಯತ್ನ ಅಪೂರ್ಣವಾಗಿಯೇ ಉಳಿದುಕೊಂಡಿವೆ. ಹೊಯ್ಸಳ ವಾಸ್ತುಶೈಲಿಯ ನಕ್ಷತ್ರಾಕಾರದ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡು ಸುಂದರವಾದ ಜಿನಬಿಂಬ ಹೊಂದಿರುವ ಈ ಜಿನಾಲಯ, ಜೈನ ತೀರ್ಥಂಕರ ವರ್ಧಮಾನ ಮಹಾವೀರನ ನಿರ್ವಾಣ ಸ್ಥಳ ಬಿಹಾರ ಪಾವಾಪುರಿಯ ನೆನಪು ತರುತ್ತದೆ ಎಂದು ಅನುಭವಿಗಳ ಮಾತು.ಜಿನಾಲಯದ ಪಶ್ಚಿಮ ದ್ವಾರದ ಬಳಿಯಿರುವ ಐದಡಿ ಎತ್ತರದ ಈ ಶಿಲಾಶಾಸನದಲ್ಲಿ ಕಳಸ-ಕಾರ್ಕಳ ರಾಜ್ಯವನ್ನಾಳುತ್ತಿದ್ದ ಭೈರವ ಅರಸ ವೀರ ಪಾಂಡ್ಯಪ್ಪೊಡೆಯನು ವಿಶಿಷ್ಟವಾಗಿ ಮೂರು ನೆಲೆಗಳುಳ್ಳ ಜಿನಾಲಯ ನಿರ್ಮಿಸಿ ಪೂಜಾದಿ ವಿನಿಯೋಗಗಳಿಗಾಗಿ ನಲ್ಲೂರು, ರೆಂಜಾಳ, ಮಂಜಗೋಳಿ, ಕೊಳಂಪಿಲ ಮುಂತಾದ ಕಡೆಗಳಿಂದ ಬರುವ ರಾಜಾದಾಯವನ್ನು ಈ ಬಸದಿಗೆ ಸಮರ್ಪಿಸಿದ್ದನೆಂದು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಉಮಾನಾಥ ಶೆಣೈ ತಿಳಿಸಿದ್ದಾರೆ.ಶಕವರುಷ 1467ನೆಯ ಕ್ರೋಧಿನಾಮ ಸಂವತ್ಸರದ ಮಾಘಶುದ್ಧ ಚೌತಿ, ರವಿವಾರ (1545ನೇ ಇಸವಿ, ಜನವರಿ ತಿಂಗಳ 16ರಂದು) ಈ ಶಾಸನ ಬರೆಸಲ್ಪಟ್ಟಿತ್ತೆಂಬುದು ಇದರ ಲೇಖದಿಂದ ತಿಳಿಯುತ್ತದೆ. ಈತನು ಸೋಮ ಕುಲಾಂಬರದ ಸೂರ್ಯನೆಂದೂ, ಪನಸೋಗೆ ಮಠದ ಲಲಿತಾಕೀರ್ತಾಚಾರ್ಯರಿಂದ ಉಪದೇಶಿತನೆಂದೂ, ಜಿನದತ್ತಾನ್ವಯನೆಂದೂ, ಪ್ರಸಿದ್ಧ ಧಾರಾನಗರಿಯ ಭೋಜರಾಜನಿಗೆ ಸಮನಾದವನೆಂದೂ ಈ ಶಾಸನದಲ್ಲಿ ವರ್ಣಿಸಲಾಗಿದ್ದು ಕಾರ್ಕಳವನ್ನು ಪಾಂಡ್ಯನಗರಿಯೆಂದು ಹೆಸರಿಸಿರುವ ಈ ಶಾಸನಕ್ಕೆ ಮತ್ತು ಇದರ ಆಶಯಗಳ ನಿರಂತರ ಅನುಷ್ಠಾನಕ್ಕೆ ಸೂರ್ಯಚಂದ್ರರೂ, ಗೊಮ್ಮಟನಾಥನೂ, ನೇಮಿನಾಥ, ಪಾಶ್ವನಾಥ ತೀರ್ಥಂಕರರೂ ಸಾಕ್ಷಿಯೆಂದು ಹೆಸರಿಸಲಾಗಿದೆ ಎಂದು ಬಸದಿಯ ಮೂಲಗಳು ತಿಳಿಸುತ್ತವೆ.ಡಾ. ಉಮಾನಾಥ ಶೆಣೈ ಬಸದಿಗೆ ಭೇಟಿ ನೀಡಿದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಜೈನ ಯುವಜನ ಸಂಘದ ಅಧ್ಯಕ್ಷ ನೇಮಿರಾಜ ಆರಿಗ, ಬಸದಿ ಆಡಳಿತ ಮೊಕ್ತೇಸರ ಉದಯಕುಮಾರ್ ಜೈನ್, ಪುರೋಹಿತ ಅನಂತರಾಜ್ ಇಂದ್ರ, ಜ್ಞಾನಚಂದ್ರ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.