ಮಂಗಳವಾರ, ಜೂನ್ 22, 2021
23 °C

ಆನೆ ಕೊಲ್ಲಲು ಅನುಮತಿ ಕೊಡಿ: ರೈತರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ನಮಗೆ ಗನ್ ಲೈಸನ್ಸ್ ಕೊಡಿ ಮತ್ತು ಒಂದು ವರ್ಷ ಕಾಲ ರೈತರ ಮೇಲೆ ಕೇಸ್ ಹಾಕಬೇಡಿ. ನೀವು ಬರಬೇಕಾಗಿಯೇ ಇಲ್ಲ, ಆನೆಗಳನ್ನು ಹೇಗೆ ಓಡಿಸಬೇಕೆಂಬುದು ನಮಗೇ ಗೊತ್ತು~...ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಬಂದ ಕೇಂದ್ರದ ಉನ್ನತ ಸಮಿತಿ ಮುಂದೆ ಆಲೂರು ತಾಲ್ಲೂಕಿನ ರೈತರು ಹೀಗೆ ಸವಾಲು ಹಾಕಿದರು.ಆಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಎಲ್ಲ ಆನೆಗಳನ್ನು (ಸುಮಾರು 28 ಆನೆಗಳು) ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ತಾಲ್ಲೂಕಿನಲ್ಲಿ ಎಲ್ಲ ಸಿದ್ಧತೆಗಳನ್ನೂ ಮಾಡಿದ್ದರು.ಕಳೆದ ಡಿಸೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸಿ ಫೆಬ್ರುವರಿ ವೇಳೆಗೆ ಎಲ್ಲ ಆನೆಗಳ ಸ್ಥಳಾಂತರ ಆಗಬೇಕಾಗಿತ್ತು. ಆದರೆ ಪರಿಸರ ವಾದಿಗಳು ನ್ಯಾಯಾಲಯದ ಮೊರೆ ಹೋದ ಪರಿಣಾಮ,ಹೈಕೋರ್ಟ್ ತಜ್ಞರ ಸಮಿತಿ ರಚಿಸಿ ಆನೆಗಳ ಸ್ಥಳಾಂತರದಿಂದ ಆಗುವ ಲಾಭ-ಹಾನಿಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿತು. ಇದರಿಂದ ಗ್ರಾಮಸ್ಥರಿಗೆ ಮತ್ತೆ ನಿರಾಸೆ, ಭ್ರಮನಿರಸನ ಉಂಟಾಗಿತು. ಅದೆಲ್ಲವನ್ನೂ ಸೋಮವಾರ ರಾಯರಕೊಪ್ಪಲು ಗ್ರಾಮಕ್ಕೆ ಬಂದಿದ್ದ ಸಮಿತಿ ಸದಸ್ಯರ ಮುಂದೆ ತೋಡಿಕೊಂಡರು.`ಪಟ್ಟಣದಲ್ಲಿ ಕುಳಿತು ಪರಿಸರವಾದಿಗಳು ಕೇಸ್ ಹಾಕುತ್ತಾರೆ. ನಾವೇನು ಇಲ್ಲಿ ಸಾಯಬೇಕೇ? ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಸಚಿವರು ಹೇಳಿದ್ದರು. ಈವರೆಗೆ ಆಗಿಲ್ಲ. ಡಿಸೆಂಬರ್‌ನಿಂದ ಈಚೆಗೆ ಆನೆ ದಾಳಿಗೆ ಮೂವರು ಪ್ರಾಣ ಬಿಟ್ಟಿದ್ದಾರೆ. ಇದನ್ನು ಕೇಳೋರು ಯಾರು? ಒಂದು ರಾತ್ರಿಯನ್ನು ಇಲ್ಲೇ ಕಳೆದರೆ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತದೆ. ನೀವಾದ್ರೂ ಆನೆಗಳನ್ನು ಸ್ಥಳಾಂತರಿಸಿ ಇಲ್ಲವೇ ನಮಗೆ ಗನ್ ಲೈಸೆನ್ಸ್ ನೀಡಿ. ನಮ್ಮ ಸಮಸ್ಯೆ ನಾವೇ ಪರಿಹಾರ ಮಾಡುತ್ತೇವೆ. ನಮ್ಮ ಸಹನೆಯ ಮಿತಿ ಮೀರಿದೆ. ಮುಂದೆ ನಾವು ಆನೆಗಳನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ~ ಎಂದು ಗ್ರಾಮದ ರೈತ ಶೇಖರಯ್ಯ ಸಮಿತಿಗೆ ಎಚ್ಚರಿಕೆ ರೂಪದ ಸಲಹೆ ನೀಡಿದರು.

ಮಾದಿಹಳ್ಳಿಯ ಬಿ.ಆರ್. ಚಂದ್ರಶೇಖರ್ ಮಾತನಾಡಿ, ಆಲೂರಿನಲ್ಲಿ ಬೇಕಾದಷ್ಟು ಅರಣ್ಯ ಇಲ್ಲ. ಕಳೆದ ಒಂದೂವರೆ ದಶಕದಿಂದ ರೈತರೇ ಇಲ್ಲಿಯ 28 ಆನೆಗಳನ್ನು ಸಾಕುತ್ತಿದ್ದಾರೆ. ಅರಣ್ಯ ಇಲಾಖೆಯವರು ಕಾಡು ಬೆಳೆಸಿಲ್ಲ, ಆನೆಗಳ ಸ್ಥಳಾಂತರವನ್ನೂ ಮಾಡಿಲ್ಲ. ನಮ್ಮ ಕಾಫಿ ತೋಟ, ಗದ್ದೆಗಳನ್ನೇ ತಿಂದು ಅವು ಬದುಕುತ್ತಿವೆ.ಆನೆಗೆ ಸಮಸ್ಯೆಯಾದಾಗ ಓಡಿ ಬರುತ್ತೀರಿ. ನಮ್ಮ ಸಮಸ್ಯೆ ಕೇಳೋರೇ ಇಲ್ಲ. ಆನೆ ದಾಳಿಯ ಭಯದಿಂದ ನಮ್ಮ ಊರಿಗೆ ಯಾರೂ ಹೆಣ್ಣು ಕೊಡಲ್ಲ, ಶಾಲೆಗೆ ಮಕ್ಕಳನ್ನು ಕಳಿಸುವಂತಿಲ್ಲ, ಸಂಜೆ ವೇಳೆಯಲ್ಲಿ ಮನೆಯಿಂದ ಆಚೆ ಬರುವಂತಿಲ್ಲ... ನಾವು ಹೇಗೆ ಬದುಕಬೇಕು? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಹಾಜರಿದ್ದ ಬಹುತೇಕ ಎಲ್ಲ ರೈತರೂ ಇಂಥ ಬೇಸರವನ್ನೇ ವ್ಯಕ್ತಪಡಿಸಿದರು.ಹಿಂದೆ ಆನೆ ಸಮಸ್ಯೆ ಕುರಿತು ಚರ್ಚಿಸಲು ಸರ್ಕಾರದವರು ಬರುತ್ತಾರೆ ಎಂದರೆ ಸಭಾಂಗಣ ಕಿಕ್ಕಿರಿದು ತುಂಬುತ್ತಿತ್ತು. ನಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದೆಂಬ ಭರವಸೆಯಿಂದ ಎಲ್ಲರೂ ಬರುತ್ತಿದ್ದರು.ಸೋಮವಾರ ಕೇಂದ್ರದ ಸಮಿತಿ ಬಂದಿದೆ ಎಂದರೂ ಬಂದಿದ್ದ ರೈತರ ಸಂಖ್ಯೆ 75ಕ್ಕಿಂತ ಕಡಿಮೆ ಇತ್ತು. ಬಂದಿದ್ದವರೂ ಸಹ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆರಂಭಿಸಿ ಜನಪ್ರತಿನಿಧಿಗಳು, ಪರಿಸರವಾದಿಗಳವರೆಗೆ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು.ಜಿಲ್ಲಾಧಿಕಾರಿ ಮೋಹನರಾಜ್, ಶಾಸಕ ಎಚ್.ಕೆ. ಕುಮಾರಸ್ವಾಮಿ ಉಪಸ್ಥಿತರಿದ್ದರು. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಬಂದಿದ್ದ ಸಮಿತಿಯಲ್ಲಿ ಪ್ರೊ. ಆರ್. ಸುಕುಮಾರ್, ಶರತ್‌ಚಂದ್ರ, ನಿವೃತ್ತ ಸಿಸಿಎಫ್ ಡಾ. ಸಿ.ಆರ್. ಬಸಪ್ಪನವರ, ವಕೀಲ ಡಾ. ಬಿ.ಆರ್. ದೀಪಕ್, ಎನ್.ಕೆ. ಮಧುಸೂದನ್, ಅಜಯ ಮಿಶ್ರಾ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.