ಬುಧವಾರ, ಜೂನ್ 16, 2021
28 °C

ಆನೆ ಪಥದ ಸಮೀಪವೇ ಕಲ್ಲು ಗಣಿಗಾರಿಕೆ

ಪ್ರಜಾವಾಣಿ ವಾರ್ತೆ / ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಆನೆ ಪಥದ ಸಮೀಪವೇ ಕಲ್ಲು ಗಣಿಗಾರಿಕೆ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೆಮಹದೇಶ್ವರ ಹಾಗೂ ಎಡೆಯರಹಳ್ಳಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಆನೆ ಪಥದ (ಎಲಿಫೆಂಟ್ ಕಾರಿಡಾರ್) ಬಳಿಯೇ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಕಾಡಾನೆಗಳ ಸಂಚಾರಕ್ಕೆ ಆಪತ್ತು ಎದುರಾಗಿದೆ.

ಕರ್ನಾಟಕ ಅರಣ್ಯ ನಿಯಮಾವಳಿ 1969ರ ನಿಯಮ 41ರ ಉಪ ನಿಯಮ 2ರ ಅನ್ವಯ ಅರಣ್ಯ ಪ್ರದೇಶದಿಂದ 100 ಮೀ. ವ್ಯಾಪ್ತಿಯೊಳಗೆ ಯಾವುದೇ ಅರಣ್ಯೇತರ ಚಟುವಟಿಕೆಗೆ ಅನುಮತಿ ನೀಡುವಂತಿಲ್ಲ. ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ, ಈ ಎರಡು ಮೀಸಲು ಅರಣ್ಯ ಪ್ರದೇಶದ ಸೀಮಾರೇಖೆಯೊಳಗೆ 8 ಗಣಿ ಗುತ್ತಿಗೆಗೆ ಪರವಾನಗಿ ನೀಡಲಾಗಿದೆ.

ಜಿಲ್ಲೆಯ ಅರಣ್ಯ ಪ್ರದೇಶದ ಅಂಚಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪತ್ತೆಹಚ್ಚಲು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಡಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ನಡೆಸಿದ ಜಂಟಿ ಸಮೀಕ್ಷೆಯಿಂದ ಆನೆ ಪಥದ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿರುವುದು ಬಯಲಾಗಿದೆ. ಪ್ರಸ್ತುತ ಕರ್ನಾಟಕ ಅರಣ್ಯ ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿರುವ ಗಣಿಗಾರಿಕೆಯನ್ನು ರದ್ದುಪಡಿಸುವಂತೆಯೂ ವಿಶೇಷ ತಂಡದಿಂದ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆಯಾಗಿದೆ. ಈ ವರದಿ ~ಪ್ರಜಾವಾಣಿ~ಗೆ ಲಭ್ಯವಾಗಿದೆ.

ಕೊಳ್ಳೇಗಾಲ ಅರಣ್ಯ ಪ್ರದೇಶ ಹಾಗೂ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ನಡುವೆ ಎಡೆಯರಹಳ್ಳಿ-ದೊಡ್ಡಸಂಪಿಗೆ ಆನೆ ಪಥ ಸಂಪರ್ಕ ಕಲ್ಪಿಸುತ್ತದೆ. 2007ರಲ್ಲಿ ಸ್ವಯಂಸೇವಾ ಸಂಸ್ಥೆಯಾದ ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಈ ಆನೆ ಪಥದ ಬಳಿಯಲ್ಲಿ ಒತ್ತುವರಿಯಾಗಿದ್ದ 23 ಎಕರೆ ಜಮೀನು ಖರೀದಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿತ್ತು.

ಪ್ರಸ್ತುತ ಎಡೆಯರಹಳ್ಳಿ ಮೀಸಲು ಅರಣ್ಯದ ವ್ಯಾಪ್ತಿಯ ಮೀಣ್ಯಂ ಗ್ರಾಮದ ಪಟ್ಟಾ ಜಮೀನಿನ ಸರ್ವೇ ನಂ. 64/3ರಲ್ಲಿ 3 ಎಕರೆ, ಸರ್ವೇ ನಂ. 64/5ರಲ್ಲಿ 4.5 ಎಕರೆ ಹಾಗೂ ಹುತ್ತೂರು ಗ್ರಾಮದ ಸರ್ಕಾರಿ ಜಮೀನಿನ ಸರ್ವೇ ನಂ. 377/2ರಲ್ಲಿ 2 ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅರಣ್ಯದ ಅಂಚಿನಿಂದ 35 ಮೀ. ಅಂತರದಲ್ಲಿಯೇ ಈ ಗಣಿಗಾರಿಕೆ ನಡೆಯುತ್ತಿದೆ.

ಎಡೆಯರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಮಲೆಮಹದೇಶ್ವರ ಮೀಸಲು ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚಿದೆ. ಆದರೆ, ಈ ಮೀಸಲು ಅರಣ್ಯ ಪ್ರದೇಶದ ಸೀಮಾರೇಖೆಯೊಳಗೆ 5 ಗಣಿ ಗುತ್ತಿಗೆಗೆ ಪರವಾನಗಿ ನೀಡಲಾಗಿದೆ.

ಪೊನ್ನಾಚಿ ಗ್ರಾಮದ ಸರ್ವೇ ನಂ. 24ರಲ್ಲಿ 2 ಎಕರೆ, ಸರ್ವೇ ನಂ. 1ರಲ್ಲಿ 7.2 ಎಕರೆ, ಸರ್ವೇ ನಂ. 96ರಲ್ಲಿ 10 ಎಕರೆ (ಸೀಮಾರೇಖೆಯಿಂದ 20 ಮೀ. ದೂರ), ಸರ್ವೇ ನಂ. 96ಬಿಯಲ್ಲಿ 11.32 ಎಕರೆ ಹಾಗೂ ಸರ್ವೇ ನಂ. 86ಬಿನಲ್ಲಿ 8 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರಿ ಜಮೀನಿನಲ್ಲಿಯೇ ಈ ಐದು ಗಣಿ ಗುತ್ತಿಗೆಗೆ ಪರವಾನಗಿ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.