ಶುಕ್ರವಾರ, ಫೆಬ್ರವರಿ 26, 2021
30 °C
ನಿಗೂಢ ನೇತಾಜಿ-18

ಆಪ್ತೇಷ್ಟರೇ ಮೋಸ ಮಾಡಿದರು

ಚೂಡಿ ಶಿವರಾಂ Updated:

ಅಕ್ಷರ ಗಾತ್ರ : | |

ಆಪ್ತೇಷ್ಟರೇ ಮೋಸ ಮಾಡಿದರು

ಬ್ರಿಟಿಷರು ಐ.ಎನ್.ಎ.ಯ ನೂರಾರು ಯೋಧರನ್ನು ಕೊಂದರು. ಸಾವು ಎದುರಲ್ಲೇ ಇದ್ದ ಅಂಥ ಸಂದರ್ಭದಲ್ಲಿಯೂ ದೇಶ ಹಾಗೂ ತಮ್ಮ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಬದ್ಧತೆಯನ್ನು ಮಾತ್ರ ಅವರ‍್ಯಾರೂ ಬಿಡಲಿಲ್ಲ. ಇನ್ನೊಂದು ಕಡೆ ಕೆಲವು ಸ್ವಾರ್ಥಿಗಳು ನೇತಾಜಿ ಬೆನ್ನಿಗೆ ಚೂರಿಹಾಕಿದರು. ಐ.ಎನ್.ಎ. ಹಾಗೂ ಭಾರತದ ಜನತೆಗೆ ದ್ರೋಹ ಮಾಡಿದರು.ಹಾಗೆ ದ್ರೋಹ ಮಾಡಿದವರ ಪಟ್ಟಿಯಲ್ಲಿ ಎದ್ದುಕಾಣುವ ಹೆಸರುಗಳು ಲಕ್ಷ್ಮಿ ಸೆಹಗಲ್, ಶಾ ನವಾಜ್ ಖಾನ್. ಲಕ್ಷ್ಮಿ ಅವರು ಕಮ್ಯುನಿಸ್ಟ್ ಪಕ್ಷ ಸೇರಿದರೆ, ಶಾ ನವಾಜ್ ಖಾನ್ ನೆಹರೂ ತಾಳಕ್ಕೆ ಕುಣಿಯುತ್ತಾ ಅವರ ಸರ್ಕಾರದಲ್ಲಿಯೇ ಮಂತ್ರಿಯಾದರು. ಕೆಲವರು ಐ.ಎನ್.ಎ. ಹಾಗೂ ನೇತಾಜಿ ಅವರಿಗೆ ಯುದ್ಧದ ಸಂದರ್ಭದಲ್ಲಿಯೇ ದ್ರೋಹ ಮಾಡಿದರೆ, ಇನ್ನು ಕೆಲವರು ಸರ್ಕಾರ ತೇಲಿಬಿಟ್ಟ ‘ವಿಮಾನ ಅಪಘಾತದಲ್ಲಿ ನೇತಾಜಿ ಸತ್ತರು’ ಎಂಬ ಸಿದ್ಧಾಂತವನ್ನು ಮೌನವಾಗಿ ಒಪ್ಪಿಕೊಂಡರು. ನೇತಾಜಿ ಎಲ್ಲಿರಬಹುದು ಎಂಬ ಸತ್ಯ ಬಯಲಿಗೆಳೆಯುವ ಪ್ರಯತ್ನಕ್ಕೆ ಕಲ್ಲುಹಾಕಿದರು.ಇಂಫಾಲ ಯುದ್ಧದ ಸಂದರ್ಭದಲ್ಲಿ ಕೆಲವು ಯೋಧರು ಐ.ಎನ್.ಎ. ತೊರೆದರು. ಅಂಥವರನ್ನು ಕಂಡು ನೇತಾಜಿ ಒಂದು ವಾರದ ಗಡುವು ನೀಡಿ, ‘ಯಾರು ಯಾರು ಐ.ಎನ್.ಎ. ಬಿಡಲು ಬಯಸಿದ್ದೀರೋ ಅವರೆಲ್ಲಾ ಹೊರಡಬಹುದು’ ಎಂದರು. ಆನಂತರ ಮೋಸಗಾರರು ಕಂಡಲ್ಲಿ ಗುಂಡು ಹಾರಿಸಿ ಕೊಲ್ಲುವುದಾಗಿಯೂ ಅವರು ಎಚ್ಚರಿಸಿದ್ದರು.ನೇತಾಜಿ ಅವರ ಕುಟುಂಬ ಕೂಡ ವಿಭಜಿತವಾಯಿತು. ಬೋಸ್ ವಂಶದಲ್ಲಿಯೂ ಕೆಲವು ಮೋಸಗಾರರು ಇದ್ದರು. ಶಿಶಿರ್ ಬೋಸ್, ಅವರ ಪತ್ನಿ ಕೃಷ್ಣಾ ಬೋಸ್ ಹಾಗೂ ಅವರ ಮಗ ಸುಗತ ಬೋಸ್ ಮೂವರನ್ನೂ ನೆಹರೂ ತಮ್ಮ ತಾಳಕ್ಕೆ ಕುಣಿಯುವಂತೆ ಮಾಡಿದರು. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನೂ ಸಂದಾಯ ಮಾಡಿದರು. ವಿಮಾನ ಅಪಘಾತದಲ್ಲಿ ಸುಭಾಷ್ ಮೃತಪಟ್ಟರು ಎಂದು ಅವರ ಕುಟುಂಬದವರಲ್ಲಿ ಯಾರು ಹೇಳಿದರೂ ಇಡೀ ವಿಶ್ವ ಅದನ್ನು ನಂಬುತ್ತದೆ ಎನ್ನುವುದು ನೆಹರೂ ಆಲೋಚನೆಯಾಗಿತ್ತು.ಕೃಷ್ಣಾ ಬೋಸ್ ಅವರನ್ನು ಕಾಂಗ್ರೆಸ್ ಸಂಸದರನ್ನಾಗಿಸಿದ್ದೇ ಅಲ್ಲದೆ ದೊಡ್ಡ ಮೊತ್ತದ ಹಣವನ್ನೂ ಅವರಿಗೆ ಕೊಟ್ಟು ನೆಹರೂ ತಮ್ಮ ಆಲೋಚನೆಯನ್ನು ಈಡೇರಿಸುವಂತೆ ಮಾಡಿದರು. ‘ಐದಾರು ದಶಕಗಳ ಕಾಲ ಕೃಷ್ಣಾ ಬೋಸ್ ಕುಟುಂಬವು ಈ ಅವಕಾಶದ ಬೇಳೆ ಬೇಯಿಸಿಕೊಂಡಿತು’ ಎಂದು ಐ.ಎನ್.ಎ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆಗಿದ್ದ, ನಿವೃತ್ತ ಬ್ರಿಗೆಡಿಯರ್ ಚಿಕ್ಕಾರ ಹೇಳಿದ್ದರು. ಉಳಿದಂತೆ ಬೋಸ್ ಅವರ ಕುಟುಂಬದ ಸದಸ್ಯರೆಲ್ಲಾ ಒಗ್ಗಟ್ಟಿನಿಂದ ನೇತಾಜಿ ನಾಪತ್ತೆ ಕುರಿತ ಎಲ್ಲಾ ದಾಖಲೆಗಳನ್ನು ಅನಾವರಣಗೊಳಿಸುವಂತೆ ಸರ್ಕಾರವನ್ನು ಪದೇಪದೇ ಒತ್ತಾಯಿಸಿದರು.ಐ.ಎನ್.ಎ.ಯ ಮೋಸಗಾರರು: ಐ.ಎನ್.ಎ.ಯಲ್ಲಿ ಇದ್ದ ಮೇಜರ್ ಪ್ರಭು ದಯಾಳ್ ದೊಡ್ಡ ಮೋಸಗಾರ. ಇಂಫಾಲ ಯುದ್ಧದ ಸಂದರ್ಭದಲ್ಲಿ ಇನ್ನೇನು ಆ ಸ್ಥಳವನ್ನು ಐ.ಎನ್.ಎ. ವಶಪಡಿಸಿಕೊಳ್ಳುವುದರಲ್ಲಿತ್ತು. ಆಗ ಐ.ಎನ್.ಎ. ತೊರೆದ ಪ್ರಭು ದಯಾಳ್, ಜಪಾನ್ ಹಾಗೂ ಐ.ಎನ್.ಎ. ಏನೆಲ್ಲಾ ಕಾರ್ಯತಂತ್ರ ಹೂಡಿದ್ದವು ಎಂದು ಬ್ರಿಟಿಷರಿಗೆ ತಿಳಿಸಿಬಿಟ್ಟರು. ಆನಂತರ ಬ್ರಿಟಿಷರು ಹೆಚ್ಚು ಸೇನಾಬಲದಿಂದ ದಾಳಿ ನಡೆಸಿ, ಯುದ್ಧದಲ್ಲಿ ಮೇಲುಗೈ ಸಾಧಿಸಿದರು. ಬ್ರಿಟಿಷರ ಜೊತೆ ಭಾರತಕ್ಕೆ ಮರಳಿದ ಪ್ರಭು ದಯಾಳ್, ನೇತಾಜಿ ಹಾಗೂ ಐ.ಎನ್.ಎ. ಕುರಿತು ಇಲ್ಲಸಲ್ಲದ್ದನ್ನು ಹೇಳಿ ಗಾಂಧಿ ಹಾಗೂ ಕಾಂಗ್ರೆಸ್‌ನ ಅನುಯಾಯಿ ಆದರು.ಶಾ ನವಾಜ್ ಖಾನ್: ಜನರಲ್ ಶಾ ನವಾಜ್ ಖಾನ್ ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡಿದವರು. ಜಪಾನೀಯರು ಸೆರೆಹಿಡಿದ ನಂತರ 1943ರಲ್ಲಿ ಅವರು ಐ.ಎನ್.ಎ. ಸೇರಿದ್ದು. ಮಂಡಾಲೆಯಲ್ಲಿನ ಐ.ಎನ್.ಎ. ಮೊದಲ ಡಿವಿಷನ್‌ನ ಕಮಾಂಡರ್ ಆಗಿದ್ದ ಹಾಗೂ ಇಂಫಾಲ- ಕೊಹಿಮಾ ಯುದ್ಧಗಳಲ್ಲಿ ಹೋರಾಡಿದ ಶಾ ನವಾಜ್, ನೇತಾಜಿ ಅವರ ಬೆನ್ನಿಗೇ ಚೂರಿ ಹಾಕಿದವರು. ‘ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದರನಿಗೆ ಶಾ ನವಾಜ್ ಐ.ಎನ್.ಎ. ಕುರಿತ ಮಾಹಿತಿಯನ್ನೆಲ್ಲಾ ಕಳುಹಿಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ. ನೇತಾಜಿ ಸೇನೆಯಿಂದ ವಜಾಗೊಳಿಸುವುದರಿಂದ ಪಾರಾಗಲೆಂದೇ ಅವರು ಬ್ರಿಟಿಷರಿಗೆ ಶರಣಾದರು’ ಎಂದು ಪ್ರಿಯದರ್ಶಿ ಮುಖರ್ಜಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.ದೆಹಲಿಯ ಕೆಂಪುಕೋಟೆಯಲ್ಲಿ ವಿಚಾರಣೆಗೆ ಒಳಗಾದವರಲ್ಲಿ ಶಾ ನವಾಜ್ ಖಾನ್ ಇದ್ದರು. ಆಗ ವಿಚಾರಣೆ ನಡೆಸಿದ ಡಿಫೆನ್ಸ್ ಸಮಿತಿಯಲ್ಲಿ ನೆಹರೂ ಕೂಡ ಒಬ್ಬರು. ಆಗ ನೆಹರೂ ಅವರಿಗೆ ಹತ್ತಿರವಾದ ಶಾ ನವಾಜ್, ವಿಮಾನ ಅಪಘಾತದಲ್ಲಿ ನೇತಾಜಿ ನಿಧನರಾದರೆಂಬ ಸುದ್ದಿಯನ್ನು ಪ್ರಚಾರ ಮಾಡಿದರು. ಬ್ರಿಟಿಷರು ಶಾ ನವಾಜ್ ಖಾನ್‌ಗೆ ಮರಣದಂಡನೆ ವಿಧಿಸಿದ್ದರೂ, ಆಮೇಲೆ ದಂಡ ಕಟ್ಟುವಂತೆ ಹೇಳಿ ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸಿದರು. ಬ್ರಿಟಿಷರಿಗೆ ಬದ್ಧತೆ ತೋರಿದ ಮೇಲೆ ನೆಹರೂ ಅವರಿಂದ ಸಾಕಷ್ಟು ಅನುಕೂಲಗಳನ್ನು ಅವರು ಪಡೆದುಕೊಂಡರು. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಮೇಲೆ ಶಾ ನವಾಜ್ ಖಾನ್ ಕಾಂಗ್ರೆಸ್ ಪಕ್ಷ ಸೇರಿದರು. ರೈಲ್ವೆ ಹಾಗೂ ಸಾರಿಗೆ ಸಚಿವರ ಸ್ಥಾನಮಾನವನ್ನು ಅವರಿಗೆ ನೆಹರೂ ನೀಡಿದರು.ಮೀರತ್ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭೆಗೆ ಚುನಾಯಿತರಾದ ಶಾ ನವಾಜ್, ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕೆಲವು ಜವಾಬ್ದಾರಿಗಳನ್ನು ಪಡೆದುಕೊಂಡರು. ನೇತಾಜಿ ಅವರ ಸಾವಿನ ಕುರಿತ ಸತ್ಯಾಂಶ ಪತ್ತೆ ಮಾಡಲು ತನಿಖೆ ನಡೆಸಲು 1956ರಲ್ಲಿ ನೆಹರೂ ಸರ್ಕಾರವು ಒಂದು ಸಮಿತಿಯನ್ನು ರಚಿಸಿ, ಅದಕ್ಕೆ ಶಾ ನವಾಜ್ ಅವರನ್ನೇ ಅಧ್ಯಕ್ಷರನ್ನಾಗಿ ಆರಿಸಿತು. ನಾಲ್ಕೇ ತಿಂಗಳಲ್ಲಿ ತನಿಖೆ ಮುಗಿಯಿತು. ಬೋಸ್ ಮೃತಪಟ್ಟಿದ್ದು ವಿಮಾನ ಅಪಘಾತದಿಂದಲೇ ಎಂದು ಸಮಿತಿ ಸ್ಪಷ್ಟಪಡಿಸಿತು. ಮುಂದೆ ರಚಿತವಾಗಬಹುದಾದ ಸಮಿತಿಗಳು ನೇತಾಜಿ ಸಾವಿನ ಕುರಿತು ಬೇರೆ ಯಾವುದೇ ಆಯಾಮವನ್ನು ಅರಿಯಕೂಡದು ಎಂದು ಶಾ ನವಾಜ್ ನಿಗಾ ವಹಿಸಿದ್ದರು.ಯಾವುದೇ ತನಿಖಾ ಸಮಿತಿಗೆ ನೇತಾಜಿ ಕುಟುಂಬದ ಯಾರೊಬ್ಬರನ್ನೂ ನೇಮಿಸಕೂಡದು ಎಂದು 1970ರ ದಶಕದಲ್ಲಿ ಇಂದಿರಾ ಗಾಂಧಿ ಅವರಿಗೆ ಶಾ ನವಾಜ್ ಪತ್ರ ಬರೆದಿದ್ದರು. ಆಸಕ್ತಿಕರ ವಿಷಯವೆಂದರೆ, 1965ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಶಾ ನವಾಜ್ ಖಾನ್ ಅವರ ಮಗ ಮೆಹ್ಮೂದ್ ಪಾಕಿಸ್ತಾನದ ಸೇನಾ ಅಧಿಕಾರಿ ಆಗಿದ್ದರು. ಆಗ ಶಾ ನವಾಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ವಿರೋಧ ಪಕ್ಷದವರು ಆಗ್ರಹಿಸಿದ್ದರು. ಆಗ ಪ್ರಧಾನಿ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅದಕ್ಕೆ ಒಪ್ಪದೆ, ಐ.ಎನ್.ಎ. ಅಧಿಕಾರಿಯಾಗಿ ಶಾ ನವಾಜ್ ಖಾನ್ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ನೆನಪಿಸಿಕೊಂಡಿದ್ದರು.ಲಕ್ಷ್ಮಿ ಸೆಹಗಲ್: ಐ.ಎನ್.ಎ.ಯ ಝಾನ್ಸಿ ರೆಜಿಮೆಂಟ್‌ನ ಹೆಸರುವಾಸಿ ಕಮಾಂಡರ್ ಆಗಿದ್ದ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರಿಗೆ ಐ.ಎನ್.ಎ.ಗಿಂತ ಹೆಚ್ಚು ಜನಪ್ರಿಯತೆ ಸಂದಿತ್ತು. ನೇತಾಜಿ ಹೆಚ್ಚು ನಂಬಿದ್ದ ಲೆಫ್ಟಿನೆಂಟ್ ಅವರಾಗಿದ್ದರು. 1950ರ ಏಪ್ರಿಲ್ 22ರಂದು ಕರ್ನಲ್ ಲಕ್ಷ್ಮಿ ಸೆಹಗಲ್, ‘ಬ್ರದರ್‍ಸ್‌ ಎಗೇನ್ಸ್ಟ್ ದಿ ರಾಜ್’ ಪುಸ್ತಕ ಬರೆದ ಲಿಯೊನಾರ್ಡ್ ಗಾರ್ಡನ್ ಅವರಿಗೆ, ‘ರಷ್ಯಾದಲ್ಲಿ ಇರಬೇಕಿದ್ದ ನೇತಾಜಿ ಚೀನಾದಲ್ಲಿ ಇದ್ದಾರೆ’ ಎಂದು ಹೇಳಿದ್ದರು. ಐ.ಎನ್.ಎ. ಕಾರ್ಯಾಚರಣೆ ಸ್ಥಗಿತಗೊಂಡ ಮೇಲೆ ಲಕ್ಷ್ಮಿ ಕಮ್ಯುನಿಸ್ಟ್ ಪಕ್ಷ ಸೇರಿದರು. ಆಗ ಕಮ್ಯುನಿಸ್ಟರು ಬ್ರಿಟಿಷರ ವಿಷಯದಲ್ಲಿ ಮೃದು ಧೋರಣೆ ಇಟ್ಟುಕೊಂಡಿದ್ದರು. ಶಾ ನವಾಜ್ ಹಾಗೂ ಖೋಸ್ಲಾ ಆಯೋಗಗಳಿಗೆ ಅವರು ನೇತಾಜಿ ಕುರಿತ ಸತ್ಯವನ್ನು ಹೇಳಲೇ ಇಲ್ಲ. ವಿಮಾನ ಅಪಘಾತದ ಸಿದ್ಧಾಂತವನ್ನೇ ಅನುಮೋದಿಸುವಂತೆ ಮಾತನಾಡಿ, ನೇತಾಜಿ ಸಂಬಂಧಿ ಹಾಗೂ ಕಾಂಗ್ರೆಸ್ ಮುಖಂಡ ಶಿಶಿರ್ ಬೋಸ್ ನಡೆಸುತ್ತಿದ್ದ ನೇತಾಜಿ ಸಂಶೋಧನಾ ಕೇಂದ್ರ ಸೇರಿಕೊಂಡರು.2005ರಲ್ಲಿ ಮುಖರ್ಜಿ ಆಯೋಗದ ಎದುರು ಹಾಜರಾಗಲು ಅನಾರೋಗ್ಯದ ನೆಪ ನೀಡಿ ಮೊದಲು ಲಕ್ಷ್ಮಿ ನಿರಾಕರಿಸಿದ್ದರು. ಆಮೇಲೆ ಆಯೋಗ ಒತ್ತಡ ತಂದಾಗ, ತೈಹೋಕುವಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಶೇ 90ರಷ್ಟು ಸುಟ್ಟಗಾಯಗಳಿಂದಾಗಿ ನೇತಾಜಿ ಮೃತಪಟ್ಟರು ಎಂದು ಹೇಳಿದರು. 2001ರ ಜೂನ್ 4ರಂದು ಆಯೋಗವು ಅವರನ್ನು ಭೇಟಿ ಮಾಡಲೆಂದೇ ಕಾನ್ಪುರಕ್ಕೆ ಹೋಗಿತ್ತು. ಆಗ ಬೋಸ್ ಮಂಚೂರಿಯಾಗೆ ಹೋದ ಬಗ್ಗೆ ತನ್ನ ಬಳಿ ಯಾವ ಮಾಹಿತಿಯೂ ಇಲ್ಲ ಎಂದು ಲಕ್ಷ್ಮಿ ಸೆಹಗಲ್ ಹೇಳಿದ್ದರು. ‘ಹಿಂದಿನ ಎರಡು ಸಮಿತಿಗಳು ಪತ್ತೆ ಮಾಡಲಾಗದ ಯಾವ ಸತ್ಯವನ್ನೂ ಈ ಆಯೋಗ ಬಯಲಿಗೆ ಎಳೆಯುತ್ತದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಆಗ ಲಕ್ಷ್ಮಿ ಪ್ರಮಾಣ ಮಾಡಿ ಹೇಳಿಕೆ ನೀಡುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು.ನೇತಾಜಿ ಕುರಿತು ಸಂಶೋಧನೆ ನಡೆಸಿದ್ದ ವಿ.ಪಿ.ಸೈನಿ ಎಂಬುವವರು 1992ರ ಜುಲೈ 13ರಂದು ಲಕ್ಷ್ಮಿ ಸೆಹಗಲ್‌ ಅವರ ವಿಡಿಯೊ ಸಂದರ್ಶನವೊಂದನ್ನು ಮಾಡಿದ್ದರು. ಆಯೋಗದ ಉಪಸ್ಥಿತಿಯಲ್ಲೇ ಲಕ್ಷ್ಮಿ ಅವರ ಎದುರು ಆ ವಿಡಿಯೊವನ್ನು ಪ್ರದರ್ಶಿಸಲಾಯಿತು. ನೇತಾಜಿ ಅವರನ್ನು ಬಂಧಿಸಿ, ರಷ್ಯಾದ ಜೈಲಿಗೆ ಕಳುಹಿಸಿದ್ದನ್ನು ತಾವು ನೋಡಿದ್ದಾಗಿ ಲಕ್ಷ್ಮಿ ಆ ಸಂದರ್ಶನದಲ್ಲಿ ಹೇಳಿದ್ದರು. ಲಾರ್ಡ್‌ ಮೌಂಟ್‌ಬ್ಯಾಟನ್‌ ಅವರಿಗೆ ನೆಹರೂ ಬರೆದ ಪತ್ರವೊಂದನ್ನು ಕೂಡ ಉಲ್ಲೇಖಿಸಿದ್ದರು. ಮೌಂಟ್‌ಬ್ಯಾಟನ್‌ ಆಗ ಆಗ್ನೇಯ ಏಷ್ಯಾದಲ್ಲಿ ಜಪಾನ್‌ ಮತ್ತಿತರ ರಾಷ್ಟ್ರಗಳ ವಿರೋಧಿ ಬಣದ ಯುದ್ಧಪಡೆಗಳ ಮೇಲ್ವಿಚಾರಕರಾಗಿದ್ದರು. ಯಾವುದೇ ಕಾರಣಕ್ಕೂ ಭಾರತದ ವಿಭಜನೆ ಪ್ರಕ್ರಿಯೆ ಪೂರ್ಣವಾಗುವವರೆಗೆ ನೇತಾಜಿ ಅವರನ್ನು ದೇಶಕ್ಕೆ ಮರಳಿಸಬಾರದು ಎಂದು ನೆಹರೂ ಅವರಿಗೆ ಪತ್ರ ಬರೆದಿದ್ದರೆಂದು ಲಕ್ಷ್ಮಿ ವಿವರವಾಗಿ ತಿಳಿಸಿದ್ದರು.ಭಾರತದಿಂದ ನೇತಾಜಿ ಅವರನ್ನು ಹೊರಗೇ ಇರುವಂತೆ ನೋಡಿಕೊಳ್ಳಲು ಅಂತರರಾಷ್ಟ್ರೀಯ ಹುನ್ನಾರ ನಡೆಯುತ್ತಿದೆ ಎಂದೂ ಅವರು ದೂರಿದ್ದರು. 1945ರ ಸೆಪ್ಟೆಂಬರ್‌ನಲ್ಲಿ ತನ್ನನ್ನು ಅಮೆರಿಕ ಬೇಹುಗಾರಿಕಾ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು, ರಷ್ಯಾದ ಗಡಿಯನ್ನು ನೇತಾಜಿ ತಲುಪುವವರೆಗೆ ಅವರನ್ನು ಹಿಂಬಾಲಿಸಿದ್ದಾಗಿ ಆ ಅಧಿಕಾರಿಗಳು ಆಗ ಹೇಳಿದ್ದರೆಂದೂ ವಿಡಿಯೊ ಸಂದರ್ಶನದಲ್ಲಿ ಲಕ್ಷ್ಮಿ ತಿಳಿಸಿದ್ದರು. ಪ್ರಮಾಣ ಮಾಡಿಯೂ ತಾನು ಸುಳ್ಳು ಹೇಳಿದ್ದು ಸಾಬೀತಾದದ್ದರಿಂದ ಲಕ್ಷ್ಮಿ ಮೂರ್ಛೆ ಹೋದರು. ಭಾರತದ ಜನರಿಗೆ ಅವರು ಸತ್ಯ ಏನೆಂದು ಆಗಲೇ ತಿಳಿಸಿದ್ದರೆ, ಸೈಬೀರಿಯನ್‌ ಜೈಲಿನಲ್ಲಿ ಸುಭಾಷ್‌ ಚಿತ್ರಹಿಂಸೆ ಅನುಭವಿಸಿ ಮೃತಪಟ್ಟರು ಎನ್ನಲಾಗುತ್ತಿರುವ ಘಟನೆಯೇ ಸಂಭವಿಸುತ್ತಿರಲಿಲ್ಲವೇನೋ?ನೆಹರೂ: ಐ.ಎನ್‌.ಎ. ಯೋಧರಲ್ಲಿ ಬದುಕುಳಿದವರು ಯಾರು, ಆಗ್ನೇಯ ಏಷ್ಯಾದಲ್ಲಿ ಯಾವ ಯಾವ ಭಾರತೀಯರು ಇದ್ದಾರೆ ಹಾಗೂ ಐ.ಎನ್‌.ಎ.ಗೆ ಹಣಕಾಸಿನ ನೆರವು ಸಿಕ್ಕಿದ್ದು ಹೇಗೆ ಎಂದೆಲ್ಲಾ ಮಾಹಿತಿ ಕಲೆಹಾಕಲು 1946ರಲ್ಲಿ ನೆಹರೂ ಅವರನ್ನು ಸಿಂಗಪುರಕ್ಕೆ ಕಳುಹಿಸಲಾಯಿತು. ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು ನಿಜವೇ ಎಂದು ತಿಳಿಯುವ ಯಾವ ಯತ್ನವೂ ಆಗ ನಡೆಯಲೇ ಇಲ್ಲ. ಐ.ಎನ್‌.ಎ.ಗೆ ಸಹಾಯ ಮಾಡುವುದಾಗಲೀ ಸುಭಾಷ್‌ ಕುರಿತ ಸಮಸ್ಯೆಗಳನ್ನು ಕೆದಕುವುದನ್ನಾಗಲೀ ಮಾಡಕೂಡದು ಎಂದು ಸಿಂಗಪುರದಲ್ಲಿ ನೆಹರೂ ಅವರಿಗೆ ಮೌಂಟ್‌ಬ್ಯಾಟನ್‌ ಸೂಚಿಸಿದ್ದರು. ಅಷ್ಟೇ ಅಲ್ಲ, ‘ಇಂಡಿಯನ್‌ ನ್ಯಾಷನಲ್‌ ಆರ್ಮಿ’ಯ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸುವಂತೆ ಸ್ಥಳೀಯರು ನೀಡುವ ಆಹ್ವಾನವನ್ನು ತಿರಸ್ಕರಿಸುವಂತೆಯೂ ತಾಕೀತು ಮಾಡಿದ್ದರು. ಮೌಂಟ್‌ಬ್ಯಾಟನ್‌ ಹೇಳಿದ್ದನ್ನೆಲ್ಲಾ ನೆಹರೂ ಪಾಲಿಸಿದರು. ಬ್ರಿಟಿಷ್‌ ‘ಮಾಸ್ಟರ್‌’ಗಳನ್ನು ಸಂತೋಷಪಡಿಸಲು ಸ್ವಾತಂತ್ರ್ಯ ಹೋರಾಟದಲ್ಲಿ ಐ.ಎನ್‌.ಎ.ಯ ತ್ಯಾಗ, ಬಲಿದಾನಕ್ಕೆ ನೆಹರೂ ತೋರಿದ ಅಗೌರವವಿದು.ಭಾರತದಲ್ಲಿ ಐ.ಎನ್‌.ಎ.ಗೆ ಜನರಿಂದ ಉತ್ತಮ ಸ್ವಾಗತ ದೊರೆಯಿತಾದರೂ ಸರ್ಕಾರದಿಂದ ಗೌರವ ಸಿಗಲಿಲ್ಲ. ಮೌಂಟ್‌ಬ್ಯಾಟನ್‌ ಮಾತನ್ನು ಕೇಳಿಕೊಂಡು ಭಾರತದ ಸೇನೆಗೆ ಐ.ಎನ್‌.ಎ. ಯೋಧರನ್ನು ನೆಹರೂ ಸೇರಿಸಲಿಲ್ಲ. ಮತ್ತೆ ತಮ್ಮ ಬದುಕು ಕಟ್ಟಿಕೊಟ್ಟಲು ಐ.ಎನ್‌.ಎ. ಯೋಧರು ಪರದಾಡಿದರು. ಅನೇಕರು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ತುತ್ತಿನಚೀಲ ತುಂಬಿಸಿಕೊಳ್ಳಬೇಕಾಯಿತು. ಐ.ಎನ್‌.ಎ.ಗೆ ಸೇರಿ ಆಮೇಲೆ ಬದುಕುಳಿದ ಕೆಲವರು ಇಂದಿಗೂ ಕಡುಬಡತನದ ಸ್ಥಿತಿಯಲ್ಲಿ ಇದ್ದಾರೆ. ಇವರೆಲ್ಲರಿಗೆ ನೆಹರೂ ಮಾಡಿದ್ದು ಮೋಸ ಅಲ್ಲದೆ ಮತ್ತಿನ್ನೇನು? ‘1947ರಲ್ಲಿ ಮೌಂಟ್‌ಬ್ಯಾಟನ್‌ ಜೊತೆ ನೆಹರೂ ಗುಟ್ಟಾಗಿ ಒಂದು ಒಪ್ಪಂದ ಮಾಡಿಕೊಂಡರು. ಅದರ ಪ್ರಕಾರ ಬೋಸ್‌ ಅಬ್ಬಬ್ಬಾ ಅಂದರೆ ನೂರು ವರ್ಷಕ್ಕಿಂತ ಹೆಚ್ಚು ಕಾಲ ಬದುಕಲಾರರು. ಮುಂದಿನ 50 ವರ್ಷ ಅವರಿಗಾಗಿ ಹುಡುಕಾಡಬೇಕು.ಜೀವಂತವಾಗಿ ಅಥವಾ ಮೃತ ಸ್ಥಿತಿಯಲ್ಲಿ ಅವರು ಸಿಕ್ಕರೆ ಬ್ರಿಟಿಷರಿಗೆ ಒಪ್ಪಿಸಬೇಕು. ಅವರು ಬದುಕಿದ್ದರೆ ಯುದ್ಧಾಪರಾಧಿ ಎಂದು ವಿಚಾರಣೆ ನಡೆಸಲಾಗುವುದು. ಈ ವಿಷಯ ಕುರಿತ ದಾಖಲೆಯನ್ನು ಯಾರೂ ಬಹಿರಂಗಪಡಿಸಲಿಲ್ಲ. ಈಗಲೂ ಅದು ಗುಟ್ಟಾಗಿಯೇ ಇದೆ. ಆ ದಾಖಲೆಗಾಗಿ ಶೋಧ ಮುಂದುವರಿದಿರುವುದಂತೂ ನಿಜ. ಬ್ರಿಟಿಷ್‌ ಸರ್ಕಾರ ಅದನ್ನು ಬಹಿರಂಗಪಡಿಸಬೇಕು. ಸದ್ಯಕ್ಕೆ ಅದು ಬೇಹುಗಾರಿಕಾ ದೃಷ್ಟಿಯಿಂದ ಮಹತ್ವದ ವಿಷಯವಾಗಿದ್ದು, ಅದನ್ನು ಬಹಿರಂಗಪಡಿಸಿದರೆ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಉಂಟಾಗಬಹುದು’ ಎಂದು ಪ್ರಿಯದರ್ಶಿ ಮುಖರ್ಜಿ ಬಹಳ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.1948ರಲ್ಲಿ ನಿಯೋಗವೊಂದರ ಜೊತೆ ಡಾ. ಎಸ್‌.ರಾಧಾಕೃಷ್ಣನ್‌ ರಷ್ಯಾಗೆ ಹೋದಾಗ ಅವರು ನೇತಾಜಿ ಅವರನ್ನು ಭೇಟಿ ಮಾಡಿದ್ದರೆನ್ನುವ ಸಂಗತಿ ದಟ್ಟವಾಗಿ ಹಬ್ಬಿತ್ತು. ಭಾರತಕ್ಕೆ ಮರಳಲು ಸೂಕ್ತ ಏರ್ಪಾಟು ಮಾಡುವಂತೆ ರಾಧಾಕೃಷ್ಣನ್‌ ಅವರಲ್ಲಿ ನೇತಾಜಿ ಕೇಳಿಕೊಂಡಿದ್ದರು. ಆ ಸಂಗತಿಯನ್ನು ನೆಹರೂ ಅವರಿಗೆ ರಾಧಾಕೃಷ್ಣನ್‌ ತಿಳಿಸಿದಾಗ, ಯಾರಲ್ಲಿಯೂ ಅದರ ಕುರಿತು ಹೇಳಕೂಡದು ಎಂದು ನೆಹರೂ ತಾಕೀತು ಮಾಡಿದ್ದರು. ಸ್ವಾತಂತ್ರ್ಯ ಭಾರತದ ಮೊದಲ ‘ರಷ್ಯಾ ರಾಯಭಾರಿ’ಯಾಗಿದ್ದ ವಿಜಯಲಕ್ಷ್ಮಿ ಪಂಡಿತ್‌ 1949ರಲ್ಲಿ ನೇತಾಜಿ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಲು ಹೋದಾಗ, ಅವರ ಬಾಯಿಯನ್ನೂ ನೆಹರೂ ಮುಚ್ಚಿಸಿದ್ದರು. ಇದು ಮೋಸವಲ್ಲದೆ ಮತ್ತಿನ್ನೇನು? ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ, ರಷ್ಯಾದಲ್ಲಿ ಬದುಕಿದ್ದಾರೆ ಎನ್ನುವುದು ಗಾಂಧೀಜಿ ಅವರಿಗೂ ಗೊತ್ತಿತ್ತು. ನೇತಾಜಿ ಅವರ ಅಣ್ಣ ಸತೀಶ್‌ ಚಂದ್ರ ಬೋಸ್‌ ಅವರಿಗೆ ಗಾಂಧಿ ಒಂದು ಟೆಲಿಗ್ರಾಂ ಕಳುಹಿಸಿ, ‘ಶ್ರಾದ್ಧ ಮಾಡಬೇಡಿ’ ಎಂದಷ್ಟೇ ಸೂಚಿಸಿದ್ದರಂತೆ. ಈ ವಿಷಯವನ್ನು ಕಿಂಗ್‌ಶುಕ್‌ ನಾಗ್‌ ತಮ್ಮ ‘ನೇತಾಜಿ: ಲಿವಿಂಗ್‌ ಡೇಂಜರಸ್‌ಲಿ’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಮೋಸವಲ್ಲದೆ ಮತ್ತಿನ್ನೇನು? ‘ಸತ್ಯಮೇವ ಜಯತೆ’ ಎಂದು ಜಪ ಮಾಡುವ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತನೊಬ್ಬನ ಬದುಕಿನ ಸತ್ಯಗಳನ್ನೇ ಮುಚ್ಚಿಹಾಕಿರುವುದು ದೊಡ್ಡ ವ್ಯಂಗ್ಯ. ನೇತಾಜಿ ಅವರಿಗೆ ಸಿಗಬೇಕಿದ್ದ ಮಾನ್ಯತೆ, ಗೌರವ ಹಾಗೂ ರಕ್ಷಣೆಯನ್ನು ದೇಶ ನೀಡಲಿಲ್ಲ. ಇದು ಮೋಸದ ಪರಮಾವಧಿ ಅಲ್ಲದೆ ಮತ್ತಿನ್ನೇನು?

ಮುಂದಿನ ವಾರ: ಐ.ಎನ್‌.ಎ. ನಿಧಿ, ಯುದ್ಧ ಸ್ಮಾರಕ, ಅಂಕಣದ ಮುಕ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.