ಮಂಗಳವಾರ, ಮಾರ್ಚ್ 2, 2021
23 °C

ಆಭರಣ ಲೋಕದ ಅನಾವರಣ...

ಎಸ್‌.ಎಚ್‌. Updated:

ಅಕ್ಷರ ಗಾತ್ರ : | |

ಆಭರಣ ಲೋಕದ ಅನಾವರಣ...

ವೈದ್ಯಕೀಯ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ನಫೀಜ್‌ ಫಜಲ್‌ ಆಭರಣಗಳ ಬಗೆಗೂ ಒಲವು ಬೆಳೆಸಿಕೊಂಡವರು. ಭಾರತದಾದ್ಯಂತ ಇರುವ ವಿವಿಧ ಸ್ಥಳಗಳ, ವಿವಿಧ ಪ್ರಕಾರಗಳ ಆಭರಣಗಳನ್ನು ಅವರು ಸಂಗ್ರಹಿಸಿದ್ದಾರೆ. ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ತಮ್ಮದೇ ಆದ ಜ್ಯುವೆಲರಿ ಸ್ಟುಡಿಯೊ ಹೊಂದಿರುವ ನಫೀಜ್‌ ಜನವರಿ 21 ಹಾಗೂ 22ರಂದು ಆಭರಣಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.ಭಾರತೀಯ  ಮೂಲದ ಕರಕುಶಲ ಕರ್ಮಿಗಳು ತಯಾರಿಸುವ ಆಭರಣಗಳಷ್ಟು ಶ್ರೀಮಂತ ವಿನ್ಯಾಸ ಇನ್ನೆಲ್ಲೂ ಸಿಗುವುದಿಲ್ಲ. ಹೀಗಾಗಿ ಅಲ್ಲಿಯ ಆಭರಣಗಳಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾದ ಆಭರಣಗಳ ಸಂಗ್ರಹ ಇಲ್ಲಿದೆ.ವರ್ಷದಲ್ಲಿ ಮೂರು ಬಾರಿ ಆಭರಣಗಳ ಪ್ರದರ್ಶನ ನಡೆಸುವ ಅವರು ಈ ಬಾರಿ ಚೆನ್ನೈನಿಂದ ವಿನ್ಯಾಸಕಿ ಭಾರತಿ ರವಿಪ್ರಕಾಶ್‌ ಅವರನ್ನು ಕರೆಯಿಸಿದ್ದಾರೆ. ಚಿನ್ನ, ವಿವಿಧ ಬಗೆಯ ಹರಳುಗಳ ಸಮ್ಮಿಶ್ರಣದಲ್ಲಿ ವಿನ್ಯಾಸಗೊಂಡ ಆಭರಣಗಳು ಮನಸೆಳೆಯುವಂತಿವೆ.

ವಿವಿಧ ಬಗೆಯ ಮುತ್ತು, ರತ್ನಗಳು, ರೂಬಿ, ವಜ್ರ, ಬೆಳ್ಳಿ, ಚಿನ್ನ ಹೀಗೆ ಅನೇಕ ಬಗೆಯಲ್ಲಿ ಅಂದದ ವಿನ್ಯಾಸ ತಾಳಿರುವ ಆಭರಣಗಳು ಇಲ್ಲಿದ್ದು, ಬೆಲೆ ₹5000ದಿಂದ ಲಕ್ಷಾಂತರ ರೂಪಾಯಿವರೆಗೆ ಇದೆ. ‘ರಾಜಕೀಯದಲ್ಲಿ ನಾನು ಗುರುತಿಸಿಕೊಂಡವಳು. ಅದೇ ಕ್ಷೇತ್ರದಲ್ಲಿ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಆದರೆ ಸಮಾಜ ಸೇವೆಯೊಂದಿಗೆ ನನಗೆ ಹೆಚ್ಚು ಖುಷಿ ಕೊಡುವ ಹವ್ಯಾಸ ಆಭರಣಗಳ ಸಂಗ್ರಹ. ಮೊದಲಿನಿಂದಲೂ ವಿವಿಧ ಬಗೆಯ ಆಭರಣಗಳ ಬಗ್ಗೆ ನನಗೆ ವಿಶೇಷ ಒಲವಿದೆ. ಹೀಗಾಗಿ ನಾನೆಲ್ಲೇ ಹೋದರೂ ಅಲ್ಲಿಂದ ಆಭರಣಗಳನ್ನು ತರುತ್ತೇನೆ ಅಥವಾ ಅದೇ ವಿನ್ಯಾಸದಲ್ಲಿ ಏನಾದರೂ ಬದಲಾವಣೆ ಬೇಕಿದ್ದಲ್ಲಿ ಹೇಳಿ ಮಾಡಿಸುತ್ತೇನೆ. ಒಟ್ಟಿನಲ್ಲಿ ನನ್ನ ಮನಸ್ಸಿಗೆ ಖುಷಿ ನೀಡುವಂತಹ ಆಭರಣಗಳು ನನ್ನ ಸಂಗ್ರಹದಲ್ಲಿರಬೇಕು. ಜನರಿಗೂ ಅವು ಇಷ್ಟವಾದರೆ ಅದೇ ನನಗೆ ಖುಷಿ’ ಎನ್ನುತ್ತಾರೆ ನಫೀಜ್‌.ಕಿವಿಯೋಲೆಗಳು, ಬಳೆ, ಬ್ರೇಸ್‌ಲೆಟ್‌, ಮುತ್ತಿನ ಸರ, ವಿವಿಧ ಬಗೆಯ ನೆಕ್ಲೆಸ್‌, ಬೆಳ್ಳಿ, ಚಿನ್ನದಿಂದ ಮಾಡಿದ ಆಭರಣಗಳು, ತೋಳುಬಂದಿ ಹೀಗೆ ವಿವಿಧ ಬಗೆಯಲ್ಲಿ ಆಭರಣಗಳು ಲಭ್ಯವಿವೆ. ಪ್ರತಿ ಆಭರಣದ ವಿನ್ಯಾಸವೂ ವಿಭಿನ್ನವಾಗಿದ್ದು ವಿಶಿಷ್ಟವಾಗಿದೆ.ಜಾಂಬಿಯನ್‌, ಸೆಮಿ ಪ್ರೀಶಿಯಸ್‌ ಸ್ಟೋನ್‌, ವಜ್ರ, ದುಬಾರಿ ಟರ್ಮಿಲಿನ್‌ ಸ್ಟೋನ್‌ನಿಂದ ಮಾಡಿದ ಸರ, ಹರಳು ಮಿಶ್ರಿತ ಚಿನ್ನದ ಲೇಪನ ಇರುವ ಆಭರಣಗಳು, ಜಡಾವು, ಕುಂದನ್‌, ರೂಬಿ ಮಿಶ್ರಿತ ಸರ, ಇಟಾಲಿಯನ್‌ ಕೋರಲ್‌, ಜೇಡ್‌, ಆಮಥಸ್‌ ಹೀಗೆ ವಿವಿಧ ಬಗೆಯ ಹರಳುಗಳಿಗೆ ಬೆಳ್ಳಿ, ಚಿನ್ನಗಳ ಮಿಶ್ರಣದ ಮೂಲಕ ಆಭರಣಗಳನ್ನು ತಯಾರಿಸಲಾಗಿದೆ.‘ಎಲ್ಲಾ ಸಂದರ್ಭಗಳಲ್ಲೂ ಬಳಸಬಹುದಾದ ಆಭರಣಗಳು ನಮ್ಮ ಸಂಗ್ರಹದಲ್ಲಿವೆ. ಹೆಚ್ಚಿನವು ಹ್ಯಾಂಡ್‌ ಮೇಡ್‌ ಎನ್ನುವುದು ವಿಶೇಷ. ಭಾರತದ ವಿವಿಧೆಡೆಗಳ ಆಭರಣ ಶೈಲಿಯಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಂಡ ಈ ಆಭರಣಗಳು ಎಲ್ಲ ಸಾಂಪ್ರದಾಯಿಕ, ಸಭೆ, ಪಾರ್ಟಿ, ಮದುವೆ ಸಮಾರಂಭಗಳಲ್ಲಿಯೂ ಧರಿಸಬಹುದಾಗಿದೆ.

ರಾಜಸ್ತಾನ, ಉದಯ್‌ಪುರ, ತಿರುವನಂತಪುರ, ಕೋಲ್ಕತ್ತ ಹೀಗೆ ನಾನು ನಾನಾ ಪ್ರದೇಶಗಳಿಗೆ ಹೋದಾಗ ವಿಶೇಷ ಎನಿಸುವ ಆಕರ್ಷಣೀಯ ಆಭರಣಗಳನ್ನು ತರುತ್ತೇನೆ ಹಾಗೂ ಅದರಲ್ಲಿ ಕೆಲ ಬದಲಾವಣೆ ಮಾಡಿಸಿ ಅಂದದ ವಿನ್ಯಾಸದ ಕೆಲ ಆಭರಣಗಳನ್ನು ಹೇಳಿ ಮಾಡಿಸುತ್ತೇನೆ’ ಎಂದು ನಫೀಜ್‌ ಮಾಹಿತಿ ನೀಡಿದರು.ಒಟ್ಟಿನಲ್ಲಿ, ಬೆಲೆ ತುಸು ಹೆಚ್ಚೇ ಎನಿಸಿದರೂ ವಿಶೇಷ ಎನಿಸುವ ಜ್ಯುವೆಲರಿ ಸ್ಟುಡಿಯೊ ಆಭರಣ ಪ್ರಿಯರಿಗೆ ಹೆಚ್ಚು ಆಕರ್ಷಣೀಯ ಎನಿಸಲಿದೆ. ದೇಶದ ನಾನಾ ಭಾಗಗಳಲ್ಲಿ ದೊರೆಯಬಹುದಾದ ವೈವಿಧ್ಯಮಯ ಆಭರಣಗಳನ್ನು ಒಂದೇ ಸೂರಿನಲ್ಲಿ ದೊರೆಯುವಂತೆ ಮಾಡಿದ್ದಾರೆ ನಫೀಜ್‌.

ಚಿತ್ರಗಳು: ಮಂಜುನಾಥ್‌ ಎಂ.ಎಸ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.