ಶುಕ್ರವಾರ, ಫೆಬ್ರವರಿ 26, 2021
28 °C

ಆಮ್ನೆಸ್ಟಿ ವಿವಾದ: ನಿಲ್ಲದ ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮ್ನೆಸ್ಟಿ ವಿವಾದ: ನಿಲ್ಲದ ಎಬಿವಿಪಿ ಪ್ರತಿಭಟನೆ

ಬೆಂಗಳೂರು: ‘ಸೇನೆ ವಿರುದ್ಧ ಘೋಷಣೆ ಕೂಗಿದವರ ಬಂಧಿಸಬೇಕು’ ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದ ವಿವಿಧೆಡೆ ಬುಧವಾರವೂ ಪ್ರತಿಭಟನೆ  ನಡೆಸಿದರು. ನಿವೃತ್ತ ಸೈನಿಕರು  ಹಾಗೂ ವಿದ್ಯಾರ್ಥಿಗಳು ಅವರ ಹೋರಾಟಕ್ಕೆ ಬೆಂಬಲ ನೀಡಿದರು. ನಗರದ ಸೌತ್‌ ಎಂಡ್‌ ವೃತ್ತ ಹಾಗೂ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಕಾರ್ಯಕರ್ತರು, ‘ಆರೋಪಿಗಳನ್ನು ಬಂಧಿಸುವವರೆಗೂ ಹೀಗೆ ಪೊಲೀಸರಿಂದ ಅನುಮತಿ ಪಡೆಯದೆ ದಿಢೀರ್ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.ಸೌತ್‌ ಎಂಡ್‌ ವೃತ್ತದಲ್ಲಿ ಪ್ರತಿಭಟನೆ ಮುಗಿಸಿದ ಬಳಿಕ ಕಾರ್ಯಕರ್ತರು ಮಹಾರಾಣಿ ಕಾಲೇಜು ಎದುರು ಜಮಾಯಿಸಿದರು. ನಂತರ ಸ್ವಾತಂತ್ರ್ಯ ಉದ್ಯಾನದ ಮೂಲಕ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಬಂದು ಸರ್ಕಾರದ ಪ್ರತಿಕೃತಿ ದಹಿಸಿದರು.‘ಘಟನೆಗೆ ಸಂಬಂಧಿಸಿದಂತೆ ಆಮ್ನೆಸ್ಟಿ  ಸಂಸ್ಥೆ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು.  ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಕಾಲೇಜಿನ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ವೇಳೆ, ವಾಹನಗಳ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟು ಮಾಡದಂತೆ ಪೊಲೀಸರು ಮನವಿ ಮಾಡಿದರು.  ಆದರೆ, ‘ನಗರ ಪೊಲೀಸ್‌ ಕಮಿಷನರ್ ಎನ್.ಎಸ್. ಮೇಘರಿಕ್ ಅವರು ಸ್ಥಳಕ್ಕೆ ಬಂದು ಮಾತುಕತೆ ನಡೆಸುವ ತನಕ ಕದಲುವುದಿಲ್ಲ’ ಎಂದು ಪಟ್ಟುಹಿಡಿದರು.ಬಳಿಕ ಸ್ಥಳಕ್ಕೆ ಬಂದ ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ)  ಚರಣ್ ರೆಡ್ಡಿ ಅವರು ನಗರ ಪೊಲೀಸ್ ಕಮಿಷನರ್ ಪರವಾಗಿ ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿದರು.ಈ ನಡುವೆ, ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ, ‘ಆಮ್ನೆಸ್ಟಿ  ಅಂತರರಾಷ್ಟ್ರೀಯ ಸಂಸ್ಥೆ ಆಗಿರುವುದರಿಂದ ಅದರ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.‘ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸಾಕ್ಷ್ಯಗಳನ್ನು ಒದಗಿಸಿದ ಹೊರತಾಗಿಯೂ ಈ ತನಕ ಯಾರೊಬ್ಬರನ್ನೂ  ಬಂಧಿಸಲಾಗಿಲ್ಲ.   ಸರ್ಕಾರವು ದೇಶವಿರೋಧಿ ಜನರನ್ನು ರಕ್ಷಿಸಲು ಯತ್ನಿಸುತ್ತಿದೆ’ ಎಂದು ದೂರಿದರು.‘ಆರೋಪಿಗಳನ್ನು ಬಂಧಿಸುವ ತನಕ ಪ್ರತಿಭಟನೆ ಮುಂದುವರೆಯಲಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಿವಾಸಗಳ ಎದುರೂ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಹೇಳಿದರು.ಸಂಚಾರ ದಟ್ಟಣೆ: ಮುನ್ಸೂಚನೆ ನೀಡದೇ ಎಬಿವಿಪಿ ಪ್ರತಿಭಟನೆ ನಡೆಸಿದ್ದರಿಂದ ಕೆ.ಜಿ. ರಸ್ತೆ ಹಾಗೂ ಮೆಜೆಸ್ಟಿಕ್‌ ಸುತ್ತಮುತ್ತ ಸಂಚಾರ ದಟ್ಟಣೆ ಕಂಡುಬಂತು. ಆದರೆ, ದೊಡ್ಡ ಪ್ರಮಾಣದ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಮಿನರ್ವ ಜಂಕ್ಷನ್‌ನಿಂದ ಪರ್ಯಾಯ ರಸ್ತೆಗಳ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಕಾಲೇಜುಗಳಿಗೆ ನೋಟಿಸ್‌: ‘ಸರ್ಕಾರಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡು ಬಂದಿದೆ. ಅಂಥ ಕಾಲೇಜುಗಳನ್ನು ಗುರುತಿಸಿ, ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ನೀಡಲಾಗಿದೆ.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಕಂಡು ಬಂದರೆ, ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸೂಚಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.‘ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದರೆ, ಅವರ ವೃತ್ತಿ ಜೀವನಕ್ಕೆ ತೊಂದರೆ ಆಗುತ್ತದೆ. ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಜ್ಜಾಗಿರುವ ಸುಳಿವು ಸಿಕ್ಕಿತ್ತು. ಆದರೆ,   ಎಚ್ಚರಿಕೆ ನೀಡಿದ ಬಳಿಕ, ಅವರೆಲ್ಲ ಪ್ರತಿಭಟನೆಯಿಂದ ದೂರ ಉಳಿದರು’ ಎಂದು ಅವರು ಹೇಳಿದರು.

ಕಾಶ್ಮೀರಿ ಭಾಷೆ ಬಳಕೆ...

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಚರಣ್ ರೆಡ್ಡಿ, ‘ಪ್ರಕರಣ ಸಂಬಂಧ ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವು ಜನರಿಂದ ಹೇಳಿಕೆ ಪಡೆಯುತ್ತಿದ್ದೇವೆ. ಅಂತೆಯೇ ಕಾರ್ಯಕ್ರಮದ ಸಂಘಟಕರಿಂದಲೂ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ಒಂದೂವರೆ ಗಂಟೆಯಷ್ಟು ವಿಡಿಯೊದೃಶ್ಯಾವಳಿ ಹಾಗೂ ಚಿತ್ರಗಳನ್ನು  ಸುಪರ್ದಿಗೆ ಪಡೆಲಾಗುತ್ತಿದೆ’ ಎಂದು ತಿಳಿಸಿದರು.

‘ದೃಶ್ಯಾವಳಿಯ ಕೆಲ ತುಣುಕುಗಳನ್ನು   ವಶಕ್ಕೆ ಪಡೆಯಲಾಗಿದ್ದು,  ಅವುಗಳ  ಋಜುತ್ವದ ಬಗ್ಗೆ ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಕಾರ್ಯಕ್ರಮದಲ್ಲಿ ಕಾಶ್ಮೀರಿ ಭಾಷೆ ಬಳಕೆಯಾದ ಕುರಿತು ತನಿಖೆಯಿಂದ ತಿಳಿದಿದೆ. ಅದರ ಅರ್ಥ ತಿಳಿಯಲು ಭಾಷಾ ತಜ್ಞರ ನೆರವು ಕೋರಲಾಗಿದೆ’ ಎಂದು ಹೇಳಿದರು.‘ಕಾರ್ಯಕ್ರಮದಲ್ಲಿ ಹಾಜರಿದ್ದ ದೂರುದಾರರನ್ನು ವಿಚಾರಣೆ ನಡೆಸಲಾಗುವುದು. ಅವರಿಂದ ವಿವರಣಾತ್ಮಕ ಹೇಳಿಕೆ ಪಡೆಯಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೆರವಾಗಲು ಕೆಲ ಸಂಘಟನೆಗಳು ಮುಂದೆ ಬಂದಿವೆ.  ಕಾರ್ಯಕ್ರಮ ನಡೆದ ಕಾಲೇಜು ಮಂಡಳಿಯನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

ತನಿಖೆ ಚುರುಕು...

‘ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ದೇಶದ್ರೋಹಕ್ಕೆ ಕಾರಣ ಆಗುವಂಥ ಯಾವುದೇ ಅಂಶಗಳು ಪ್ರಕರಣದಲ್ಲಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಕಾರ್ಯಕ್ರಮದ ವೇಳೆ ಕಾಲೇಜು ಆಸ್ತಿಯನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿದ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜು (ಯುಟಿಸಿ) ಎಬಿವಿಪಿ ಸದಸ್ಯರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ’ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.